ಭಾನುವಾರ, ಮೇ 22, 2022
27 °C

ಕೇಂದ್ರ ಸಚಿವ ವೀರಭದ್ರ ಸಿಂಗ್ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಚಿವ ವೀರಭದ್ರ ಸಿಂಗ್ ರಾಜೀನಾಮೆ

ನವದೆಹಲಿ (ಐಎಎನ್‌ಎಸ್): ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ವೀರಭದ್ರ ಸಿಂಗ್ ಹಾಗೂ ಅವರ ಪತ್ನಿ ವಿರುದ್ಧ  ಹಿಮಾಚಲ ಪ್ರದೇಶ ಕೋರ್ಟ್‌ವೊಂದು ಭ್ರಷ್ಟಾಚಾರ ಆರೋಪ ಮಾಡಿದ ಕಾರಣ ವೀರಭದ್ರ ಸಿಂಗ್ ಅವರು ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಶಿಮ್ಲಾ ಕೋರ್ಟ್‌ವೊಂದು ಸೋಮವಾರ ವೀರಭದ್ರ ಸಿಂಗ್ ಹಾಗೂ ಅವರ ಪತ್ನಿ ಪ್ರತಿಭಾ ಸಿಂಗ್ ಅವರ ವಿರುದ್ದ 23 ವರ್ಷಗಳಷ್ಟು ಹಳೆದಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿತ್ತು. ಇದರಿಂದ ಸಿಂಗ್ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.ರಾಜೀನಾಮೆ ಸುದ್ದಿ ತಿಳಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ವೀರಭದ್ರ ಸಿಂಗ್ ಅವರನ್ನು ತಮ್ಮ ಗೃಹಕಚೇರಿಗೆ ಆಹ್ವಾನಿಸಿದ್ದಾರೆ. ಪ್ರಧಾನಿಯವರ ಆಹ್ವಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಭದ್ರ ಸಿಂಗ್ ಅವರು `ನಾನು ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿಯವರಿಗೆ ಕಳುಹಿಸಿದ್ದೇನೆ~ ಎಂದು ಹೇಳಿದರು.`ಮುಂಬರುವ (ವಿಧಾನಸಭೆ) ಚುನಾವಣೆಗಳಲ್ಲಿ ಪಕ್ಷ ಬಲಪಡಿಸಲು ತವರು ರಾಜ್ಯವಾದ ಹಿಮಾಚಲ ಪ್ರದೇಶಕ್ಕೆ ಹಿಂತಿರುಗುವುದಾಗಿ ಹೇಳಿದ ಸಿಂಗ್ ಅವರು `ಕೋರ್ಟ್ ತಮ್ಮ ವಿರುದ್ಧ ಮಾಡಿರುವ ಆರೋಪದ ವಿರುದ್ಧ ಹೋರಾಡಿ ಆರೋಪಮುಕ್ತನಾಗುವೆ~ ಎಂದು ಹೇಳಿದರು.ವೀರಭದ್ರ ಸಿಂಗ್ ಅವರ ರಾಜೀನಾಮೆಯನ್ನು ಪ್ರಧಾನಿಯವರು ಅಂಗೀಕರಿಸಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.1989ರಲ್ಲಿ ವೀರಭದ್ರ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಿಂಗ್ ಹಾಗೂ ಅವರ ಪತ್ನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಉದ್ಯಮಿಗಳಿಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ವೇಳೆ ನಡೆದಿದೆ ಎನ್ನಲಾದ ಸಂಭಾಷಣೆಯ ಸಿಡಿಯೊಂದನ್ನು 2007ರಲ್ಲಿ ಮಾಜಿ ಸಚಿವರೊಬ್ಬರು ಹೊರತಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.