ಕೇದಾರನಾಥ ಕ್ಷೇತ್ರ ವಿಕಾಸ ಸಮಿತಿ ರಚನೆ
ಬೆಂಗಳೂರು: ಉತ್ತರಾಖಂಡ ರಾಜ್ಯದ ಕೇದಾರನಾಥ ಮಂದಿರದ ವೈಭವ ಮರುಸ್ಥಾಪನೆಯ ಉದ್ದೇಶದಿಂದ ರಾಜ್ಯದಲ್ಲಿ `ಕೇದಾರನಾಥ ಕ್ಷೇತ್ರ ವಿಕಾಸ ಸಮಿತಿ' ರಚಿಸಲಾಗಿದೆ. ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಒಟ್ಟು 56 ಜನ ಸದಸ್ಯರಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇದಾರ ಪೀಠದ ಊಖೀಮಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಬಾಳೆಹೊನ್ನೂರಿನ ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಈ ವಿಷಯ ಪ್ರಕಟಿಸಿದರು. ಇತ್ತೀಚೆಗೆ ಅಪ್ಪಳಿಸಿದ ಮಹಾಮಳೆಯಿಂದ ಹಾನಿಗೊಳಗಾಗಿರುವ ಕೇದಾರನಾಥ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಸಂಪೂರ್ಣ ಸಹಕಾರ ನೀಡುತ್ತಾರೆ ಎಂದು ವಿಶ್ವಾಸವನ್ನು ಉಭಯ ಶ್ರೀಗಳು ವ್ಯಕ್ತಪಡಿಸಿದರು.
ರಾಜ್ಯದಿಂದ ಬರುವ ಯಾತ್ರಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಋಷಿಕೇಶದಲ್ಲಿ ಯಾತ್ರಿ ನಿವಾಸ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಬೇಡಿಕೆಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರ ರೂ.10 ಕೋಟಿಗಳ ನೆರವು ಪ್ರಕಟಿಸಿದೆ ಎಂದು ಭೀಮಾಶಂಕರಲಿಂಗ ಸ್ವಾಮೀಜಿ ತಿಳಿಸಿದರು. ಕೇದಾರದಲ್ಲಿ 20 ಸಾವಿರದಷ್ಟು ಮೃತದೇಹಗಳು ಮಣ್ಣಿನಡಿ ಸಿಲುಕಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಗುರುಪೀಠಗಳಿಗೆ ಸರ್ಕಾರ ಮತ್ತು ಜನರಿಂದ ಸೂಕ್ತ ಸಹಕಾರ ಲಭಿಸುತ್ತಿಲ್ಲ. ಕೆಲವು ಮಠಾಧೀಶರಿಗೆ ಮಾಧ್ಯಮಗಳು ದೊಡ್ಡ ಮಟ್ಟದ ಪ್ರಚಾರ ನೀಡುತ್ತವೆ. ಆದರೆ, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ವೀರಶೈವ ಪಂಚಪೀಠಗಳ ಸ್ವಾಮೀಜಿಗಳಿಗೆ ಮಾಧ್ಯಮಗಳಿಂದ ತಕ್ಕ ಪ್ರಚಾರ ದೊರೆಯುತ್ತಿಲ್ಲ ಎಂದು ವೀರಸೋಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಕೇದಾರ ಪೀಠದಲ್ಲಿ ವೀರಶೈವರು ಹೊಂದಿರುವ ಅಧಿಕಾರಕ್ಕೆ ಕುತ್ತು ತರುವ ಸಂಚು ನಡೆಯುತ್ತಿದೆ ಎಂದೂ ಅವರು ದೂರಿದರು. ಆದರೆ ಈ ಕುರಿತು ಹೆಚ್ಚಿನ ವಿವರ ನೀಡಲು ಅವರು ಒಪ್ಪಲಿಲ್ಲ. ಕೇದಾರನಾಥ ಕ್ಷೇತ್ರದ ಪುನರುಜ್ಜೀವನಕ್ಕೆ ರಂಭಾಪುರಿ ಮಠದ ವತಿಯಿಂದ ರೂ.1 ಲಕ್ಷ ನೀಡಲಾಗುವುದು ಎಂದು ಪ್ರಕಟಿಸಿದರು.
ಕೇದಾರನಾಥ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ ಮಾದರಿಯ ರಸ್ತೆಯನ್ನು ಕೇಂದ್ರ ಸರ್ಕಾರ ನಿರ್ಮಿಸಬೇಕು. ಅಲ್ಲಿ ಬಿದ್ದಿರುವ ಮೃತ ದೇಹಗಳ ರಾಶಿಯನ್ನು ಹೊರತೆಗೆದು, ಅವುಗಳನ್ನು ಸಂಪ್ರದಾಯದ ಪ್ರಕಾರ ಸಂಸ್ಕಾರ ಮಾಡಿ ಕ್ಷೇತ್ರವನ್ನು ಶುದ್ಧೀಕರಿಸಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಒತ್ತಾಯಿಸಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.