ಮಂಗಳವಾರ, ಮಾರ್ಚ್ 2, 2021
26 °C

ಕೇರಳದ ಸ್ಟೀಫನ್‌ ಗುಲ್ಬರ್ಗದಲ್ಲಿ ತಿಪ್ಪಣ್ಣ!

ಸುದೇಶ ದೊಡ್ಡಪಾಳ್ಯ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದ ಸ್ಟೀಫನ್‌ ಗುಲ್ಬರ್ಗದಲ್ಲಿ ತಿಪ್ಪಣ್ಣ!

ಗುಲ್ಬರ್ಗ: ಇದು 1980ರ ಕಥೆ. ಕೇರಳದ ಪ್ರಭಾವಿ ರಾಜಕಾರಣಿ ಹಾಗೂ ಇಂದಿರಾಗಾಂಧಿ ಅವರ ಪರಮಾಪ್ತ ಸಿ.ಎಂ.ಸ್ಟೀಫನ್‌ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಇದು ಇಂದಿರಾಗಾಂಧಿ ಅವರಿಗೆ ತೀವ್ರ ನೋವು ಉಂಟು­ಮಾಡಿತ್ತು. ಏನಾದರೂ ಸರಿ, ಸ್ಟೀಫನ್‌ ಲೋಕಸಭೆಯಲ್ಲಿ ಇರಲೇ­­­ಬೇಕು ಎನ್ನುವ ಹಟಕ್ಕೆ ಬಿದ್ದರು. ಸುರಕ್ಷಿತ ಕ್ಷೇತ್ರವನ್ನು ಹುಡುಕಾಡಿದರು. ಆಗ ಇಂದಿರಾ ಕಣ್ಣಿಗೆ ಬಿದ್ದಿದ್ದು ಕರ್ನಾಟಕದ ಉತ್ತರದ ತುದಿಯಲ್ಲಿರುವ ಗುಲ್ಬರ್ಗ.ಅಂದು ಆರ್‌.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ಪಕ್ಷದ ಅಧಿನಾಯಕಿ ಇಂದಿರಾ ಅವರ ಸೂಚನೆಯನ್ನು ಪಾಲಿಸು­ವುದೇ ಗುಂಡೂರಾವ್‌ ಅವರಿಗೆ ಸಂಭ್ರಮವಾಗಿತ್ತು. ಗುಲ್ಬರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಧರ್ಮಸಿಂಗ್‌ (ಆಗ ಅವರು ಜೇವರ್ಗಿ ಶಾಸಕರೂ ಆಗಿದ್ದರು) ಅವರನ್ನು ಕರೆಸಿ­ಕೊಂಡು ಅಧಿನಾಯಕಿಯ ಸೂಚನೆಯನ್ನು ತಿಳಿಸಿದರು. ಇಂಥ ಸೂಚನೆಯಿಂದ ಧರ್ಮಸಿಂಗ್ ಗಲಿಬಿಲಿಗೊಂಡರು.ಏಕೆಂದರೆ ಧರ್ಮಸಿಂಗ್‌ ಸಂಸದರಾಗಿ ಆಯ್ಕೆಯಾಗಿ ಇನ್ನೂ ಒಂದು ವಾರ ಕೂಡ ಕಳೆದಿರಲಿಲ್ಲ.

‘ನೀವು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುಂದೆ ನನ್ನ ಸಂಪುಟದಲ್ಲಿ ಸ್ಥಾನ ನೀಡುತ್ತೇನೆ’ ಎಂದು ಗುಂಡೂರಾವ್‌ ಮಾತುಕೊಟ್ಟರು. ಅದಕ್ಕೆ ಮಣಿದು ಧರ್ಮಸಿಂಗ್‌ ಲೋಕಸಭೆ­ಯಲ್ಲಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.ತಿಪ್ಪಣ್ಣ ಬಂದ್ರು...!: ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಸಿ.ಎಂ.ಸ್ಟೀಫನ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಜನತಾ ಪಕ್ಷದಿಂದ ಬಾಪುಗೌಡ ದರ್ಶನಾಪುರ ಎದುರಾಳಿ. ಇವರ ಜತೆ ಇನ್ನೂ ನಾಲ್ಕು ಮಂದಿ ಪಕ್ಷೇತರರು ಕಣದಲ್ಲಿದ್ದರು. ಚುನಾವಣಾ ಕಣ ರಂಗೇರಿತ್ತು.ಸ್ಟೀಫನ್‌ ಮಲಯಾಳಿ. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳನ್ನು ಚೆನ್ನಾಗಿ ಬಲ್ಲ ಅನುವಾದಕ­ರನ್ನು ಜೊತೆಯಲ್ಲಿ ಇಟ್ಟುಕೊಂಡಿರುತ್ತಿದ್ದರು. ಚುನಾವಣಾ ಪ್ರಚಾರ ಹೀಗೆಯೇ ನಡೆದಿತ್ತು.

ಹಳ್ಳಿಯ ಜನರಿಗೆ ಸ್ಟೀಫನ್‌ ಹೆಸರನ್ನು ಉಚ್ಚರಿಸಲು ಬರುತ್ತಿರ­ಲಿಲ್ಲ. ‘ಸ್ಟೀಫನ್‌’ ಹಳ್ಳಿಗರ ಬಾಯಲ್ಲಿ ‘ತಿಪ್ಪಣ್ಣ’ ಆಗಿಬಿಟ್ಟರು! ಸ್ಟೀಫನ್‌ ಹಳ್ಳಿಗಳಿಗೆ ಪ್ರಚಾರಕ್ಕೆ ಹೋದರೆ ಜನರು ‘ತಿಪ್ಪಣ್ಣ ಬಂದ್ರು, ತಿಪ್ಪಣ್ಣ ಬಂದ್ರು...’ ಎಂದು ಮಾತನಾಡಿಕೊಳ್ಳುತ್ತಿದ್ದರು. ನಿರೀಕ್ಷೆಯಂತೆ ಕೇರಳದ ‘ಸಿ.ಎಂ.­ಸ್ಟೀಫನ್‌’ ಗುಲ್ಬರ್ಗದ ‘ತಿಪ್ಪಣ್ಣ’ನಾಗಿ ದರ್ಶನಾಪುರ ಅವರನ್ನು 73,680 ಮತಗಳ ಅಂತರದಿಂದ ಸೋಲಿಸಿದರು.80ರ ದಶಕದಲ್ಲಿ ಕಾಂಗ್ರೆಸ್‌ಗೆ ಎದುರಾಳಿಯೇ ಇರಲಿಲ್ಲ. ಆ ಪಕ್ಷದಿಂದ ಯಾರಿಗೇ ಟಿಕೆಟ್‌ ಕೊಟ್ಟರೂ ಗೆಲ್ಲುತ್ತಾರೆ ಎನ್ನುವ ವಾತಾವರಣವಿತ್ತು. ಈ ಕಾರಣದಿಂದಾಗಿಯೇ ಸ್ಟೀಫನ್‌ ಗುಲ್ಬರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಇಂದಿರಾ ಗಾಂಧಿ ಸಂಪುಟದಲ್ಲಿ ದೂರಸಂಪರ್ಕ ಸಚಿವರಾದರು.ಇತ್ತ ಗುಂಡೂರಾವ್‌ ಅವರು ಕೊಟ್ಟ ಮಾತಿನಂತೆ ಧರ್ಮಸಿಂಗ್‌ರನ್ನು ಮಂತ್ರಿ ಮಾಡಿ ವಸತಿ ಮತ್ತು ನಗರಾ­ಭಿವೃದ್ಧಿ ಖಾತೆ ನೀಡಿದರು. ಧರ್ಮಸಿಂಗ್‌ ಸಚಿವ­ರಾಗಿದ್ದು ಅದೇ ಮೊದಲು. ಮುಂದೆ ಮುಖ್ಯಮಂತ್ರಿಯೂ ಆದರು.

ಹೈದರಾಬಾದ್‌ ರಾಜ್ಯದ ಶಿಲ್ಪಿ: 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ವಾಮಿ ರಾಮಾನಂದ ತೀರ್ಥರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ಇವರನ್ನು ಹೈದರಾಬಾದ್‌ ರಾಜ್ಯ ವಿಮೋಚನೆ ಹೋರಾಟದ ಶಿಲ್ಪಿ ಎಂದೇ ಕರೆಯಲಾಗುತ್ತದೆ. ಇವರು ಸನ್ಯಾಸ ಸ್ವೀಕರಿಸಿದ್ದರು. ಇವರು ಈ ಕ್ಷೇತ್ರದಿಂದ ಆಯ್ಕೆಯಾದ ಏಕೈಕ ಬ್ರಾಹ್ಮಣ.ಹ್ಯಾಟ್ರಿಕ್‌ ಮಹಾದೇವಪ್ಪ: ಹೈದರಾಬಾದ್‌–ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಈ ಭಾಗದಲ್ಲಿ ಅಕ್ಷರ ದಾಸೋಹಕ್ಕೆ ಕಾರಣರಾದ ಮಹಾದೇವಪ್ಪ ಯಶವಂತಪ್ಪ ರಾಂಪುರೆ ಸತತವಾಗಿ 1957, 62, 67ರಲ್ಲಿ ಕಾಂಗ್ರೆಸ್‌ನಿಂದ ಗೆಲ್ಲುವ ಮೂಲಕ ‘ಹ್ಯಾಟ್ರಿಕ್’ ಸಾಧಿಸಿದರು. ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಕಂಡ ಏಕೈಕ ಅಭ್ಯರ್ಥಿ ಇವರು.ವೀರೇಂದ್ರ ಪಾಟೀಲರ ಪ್ರವೇಶ: 1968ರಲ್ಲಿ ಮುಖ್ಯಮಂತ್ರಿ­ಯಾಗಿದ್ದ ವೀರೇಂದ್ರ ಪಾಟೀಲರು 1984ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ವಿದ್ಯಾಧರ ಗುರೂಜಿ­ಯವರನ್ನು 95,490 ಮತಗಳ ಅಂತರದಿಂದ ಸೋಲಿಸಿದರು.ಇಲ್ಲೊಂದು ಸ್ವಾರಸ್ಯವಿದೆ. 1978 ರಲ್ಲಿ ಚಿಕ್ಕಮಗಳೂರಿ­ನಲ್ಲಿ ನಡೆದ ಉಪ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರು ಇಂದಿರಾ ವಿರುದ್ಧವೇ ಜನತಾ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ, 1984ರ ಚುನಾವಣೆ ಹೊತ್ತಿಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ ವೀರೇಂದ್ರ ಪಾಟೀಲರಿಗೆ ಇಂದಿರಾಗಾಂಧಿ ತಮ್ಮ ಸಂಪುಟದಲ್ಲಿ ಪೆಟ್ರೋಲಿಯಂ ಖಾತೆಯನ್ನು ನೀಡಿದ್ದರು.ಅಳಿಯನಿಗೆ ಕ್ಷೇತ್ರ ಬಳುವಳಿ: 1989ರ ಚುನಾವಣೆ ಹೊತ್ತಿಗೆ ವೀರೇಂದ್ರ ಪಾಟೀಲರು ತಮ್ಮ ಕ್ಷೇತ್ರವನ್ನು ಅಳಿಯ  ಬಿ.ಜಿ.ಜವಳಿ ಅವರಿಗೆ ‘ಬಳುವಳಿ’ಯಾಗಿ ನೀಡಿದರು. ಜವಳಿ ಸತತ ಎರಡು ಬಾರಿ ಸಂಸತ್‌ಗೆ ಆಯ್ಕೆಯಾದರು. ಆದರೆ ಮಾವನ ‘ಬಳುವಳಿ’ಯನ್ನು ಮುಂದಿನ ದಿನಗಳಲ್ಲಿ ಉಳಿಸಿ­ಕೊಳ್ಳಲು ವಿಫಲರಾದರು.

ಮೂರು ಬಾರಿ ಮುಸ್ಲಿಮರು: ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ­ಬ್ಯಾಂಕ್‌ನಂತಿದ್ದ ಮುಸ್ಲಿಮರು ಬಾಬರಿ ಮಸೀದಿ ಧ್ವಂಸ­ಗೊಂಡ ನಂತರದಲ್ಲಿ ‘ಕೈ’ಬಿಟ್ಟರು. 1996ರಲ್ಲಿ ನಡೆದ ಚುನಾ­ವಣೆಯಲ್ಲಿ ಖಮರುಲ್‌ ಇಸ್ಲಾಂ ಜನತಾದಳದಿಂದ ಕಣಕ್ಕಿಳಿದ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಅವರನ್ನು ಭಾರಿ ಅಂತರದಿಂದ ಮಣಿಸಿದರು. 1999, 2004ರಲ್ಲಿ ನಡೆದ ಚುನಾವಣೆಯಲ್ಲಿ  ಖರ್ಗೆ ಮತ್ತು ಧರ್ಮಸಿಂಗ್ ಆಪ್ತ ಇಕ್ಬಾಲ್‌ ಅಹ್ಮದ್ ಸರಡಗಿ  ಕಾಂಗ್ರೆಸ್‌­­ನಿಂದ ಆಯ್ಕೆ­ಯಾದರು.1998ರಲ್ಲಿ ಮಾತ್ರ ಈ ಕ್ಷೇತ್ರದಲ್ಲಿ ಬಸವರಾಜ ಪಾಟೀಲ್‌ ಸೇಡಂ ಗೆಲ್ಲುವ ಮೂಲಕ ‘ಕಮಲ’ ಅರಳಿತು.

ಮೀಸಲು ಕ್ಷೇತ್ರ: ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. 2009 ರಲ್ಲಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಯಾಸದ ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರೂ ಆದರು. 2014 ರ ಚುನಾವಣೆ­ಯಲ್ಲಿ ಮತ್ತೆ ಕಣಕ್ಕೆ ಇಳಿಯುತ್ತಿದ್ದಾರೆ. ಇವರ ವಿರುದ್ಧ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಬಿಜೆಪಿ­ಯಿಂದ ತೊಡೆ ತಟ್ಟುತ್ತಿದ್ದಾರೆ.17 (ಎರಡು ಉಪ ಚುನಾವಣೆ ಸೇರಿ) ಲೋಕಸಭಾ ಚುನಾವಣೆಗಳಲ್ಲಿ 10 ಬಾರಿ ಲಿಂಗಾಯತರು, ಮೂರು ಬಾರಿ ಮುಸ್ಲಿಮರು, ಒಂದೊಂದು ಅವಧಿಗೆ ಬ್ರಾಹ್ಮಣ, ರಜಪೂತ, ಕ್ರಿಶ್ಚಿಯನ್‌, ದಲಿತರು ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌–ಈ ಮೂರೂ ಧರ್ಮೀಯರು ಆಯ್ಕೆಯಾಗಿದ್ದು ಮತ್ತೊಂದು ವಿಶೇಷ.

ಏಕೈಕ ಮಹಿಳಾ ಅಭ್ಯರ್ಥಿ: ಇಲ್ಲಿಯವರೆಗೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ 124 ಮಂದಿ ಸ್ಪರ್ಧಿಸಿದ್ದಾರೆ. 1991 ರಲ್ಲಿ ಸುಜಾತಾ ಪರಮೇಶ್ವರ ಜಾನೆ ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದಿಂದ ಸ್ಪರ್ಧಿ­ಸಿ­ದ್ದರು. ಇವರನ್ನು ಬಿಟ್ಟರೆ ಮತ್ತೊಬ್ಬ ಮಹಿಳೆ ಕಣಕ್ಕೆ ಇಳಿದ ಉದಾಹರಣೆ ಇಲ್ಲ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.