ಸೋಮವಾರ, ಮಾರ್ಚ್ 8, 2021
29 °C
ಸೋಲಾರ್‌ ಹಗರಣ: ಆರೋಪಿ ಸರಿತಾರಿಂದ ಆಯೋಗಕ್ಕೆ ಹೇಳಿಕೆ

ಕೇರಳ ಸಿ.ಎಂ ಚಾಂಡಿಗೆ ಲಂಚ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳ ಸಿ.ಎಂ ಚಾಂಡಿಗೆ ಲಂಚ: ಆರೋಪ

ಕೊಚ್ಚಿ/ತಿರುವನಂತಪುರ (ಪಿಟಿಐ): ಕೇರಳ ರಾಜಕೀಯದಲ್ಲಿ ಸಂಚಲನ  ಉಂಟು ಮಾಡಿರುವ ಸೋಲಾರ್‌ ಫಲಕ ಹಗರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್‌ ಅವರು ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ಸಚಿವ ಆರ್ಯಾಡನ್‌ ಮೊಹಮ್ಮದ್‌ ಅವರಿಗೆ ಲಂಚ ನೀಡಿರುವುದಾಗಿ ಆರೋಪ ಮಾಡಿದ್ದಾರೆ. ಆದರೆ ಈ ಇಬ್ಬರೂ ಆರೋಪವನ್ನು ನಿರಾಕರಿಸಿದ್ದಾರೆ.ನ್ಯಾಯಮೂರ್ತಿ ಶಿವರಾಜನ್‌ ಆಯೋಗದ ಮುಂದೆ ಹಾಜರಾದ ಸರಿತಾ, ರಾಜ್ಯದಲ್ಲಿ ಬೃಹತ್‌ ಸೋಲಾರ್‌ ಯೋಜನೆಗಳನ್ನು ಸ್ಥಾಪಿಸಲು ನೆರವಾಗುವುದಕ್ಕೆ ಚಾಂಡಿ ಅವರ ಸಹಾಯಕರ ಮೂಲಕ ₹1.90 ಕೋಟಿ ಲಂಚ ನೀಡಿರುವುದಾಗಿ ಹೇಳಿದ್ದಾರೆ. ವಿದ್ಯುತ್‌ ಸಚಿವ ಆರ್ಯಾಡನ್‌ ಮೊಹಮ್ಮದ್‌ ಅವರ ಆಪ್ತ ಕಾರ್ಯದರ್ಶಿಗೆ ₹ 40 ಲಕ್ಷ ಲಂಚ ನೀಡಿರುವುದಾಗಿಯೂ ಅವರು ಆರೋಪಿಸಿದ್ದಾರೆ.ಪ್ರಕರಣದಿಂದ ನುಣುಚಿಕೊಳ್ಳುವುದಕ್ಕಾಗಿ ಸರಿತಾ ನಡೆಸುತ್ತಿರುವ ಪ್ರಯತ್ನ ಇದು ಎಂದು ಉಮ್ಮನ್‌ ಚಾಂಡಿ ಹೇಳಿದ್ದಾರೆ. ತಮಗೆ ಲಂಚ ನೀಡುವ ಮೂಲಕ  ಪಡೆದುಕೊಂಡಿರುವ ಪ್ರಯೋಜನಗಳು ಏನು ಎಂಬುದನ್ನು ಸರಿತಾ ಬಹಿರಂಗಪಡಿಸಲಿ ಎಂದು ಚಾಂಡಿ ಸವಾಲೆಸೆದಿದ್ದಾರೆ. ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಸರಿತಾ ನೀಡಿರುವ ದೇಣಿಗೆ ಚೆಕ್‌ಗಳು ಕೂಡ ನಗದಾಗಿಲ್ಲ. ಅವರ ಖಾತೆಯಲ್ಲಿ ಅದಕ್ಕೆ ಹಣ ಇರಲಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಜ. 25ರಂದು ಆಯೋಗದ ಮುಂದೆ ಚಾಂಡಿ ಅವರು ಹಾಜರಾಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಚಾಂಡಿ ಅವರ ಮಾಜಿ ಆಪ್ತ ಕಾರ್ಯದರ್ಶಿ ಜಿಕ್ಕುಮೊನ್‌ ಅವರು ₹7 ಕೋಟಿಗೆ ಬೇಡಿಕೆ ಇರಿಸಿದ್ದರು. ಚಾಂಡಿ ಅವರಿಗೆ ತಲುಪಿಸಬೇಕಿರುವ ಹಣವನ್ನು ನವದೆಹಲಿಯಲ್ಲಿರುವ ಥಾಮಸ್‌ ಕುರುವಿಲ್ಲಾ ಎಂಬವರಿಗೆ ನೀಡಲು ಹೇಳಲಾಗಿತ್ತು. ಕುರುವಿಲ್ಲಾ ಅವರು ಚಾಂಡಿ ಅವರ ಅನಧಿಕೃತ ಸಹಾಯಕರಾಗಿ ಕೆಲಸ ಮಾಡುತ್ತಾರೆ ಎಂದು ಸರಿತಾ ಹೇಳಿದ್ದಾರೆ.‘ಕುರುವಿಲ್ಲಾ ಅವರಿಗೆ ದೆಹಲಿಯ ಚಾಂದಿನಿ ಚೌಕದಲ್ಲಿರುವ ಮಾಲ್‌ವೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ₹1.10 ಕೋಟಿ ನೀಡಿದ್ದೇನೆ’ ಎಂದು ಆಯೋಗದ ಮುಂದೆ ಸರಿತಾ ಹೇಳಿದ್ದಾರೆ. 2012ರ ಡಿಸೆಂಬರ್‌ 12ರಂದು ಚಾಂಡಿ ಅವರನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಭೇಟಿಯಾಗಿರುವುದಾಗಿ ಸರಿತಾ ತಿಳಿಸಿದ್ದಾರೆ.ವಿಜ್ಞಾನ ಭವನದ ಹೊರಗೆ ಮುಖ್ಯಮಂತ್ರಿ ಅವರ ಜತೆಗಿನ ಭೇಟಿಯನ್ನು ಕುರುವಿಲ್ಲಾ ಅವರೇ ವ್ಯವಸ್ಥೆ ಮಾಡಿದ್ದರು ಎಂದು ಸರಿತಾ ಆರೋಪಿಸಿದ್ದಾರೆ. ‘ಕೆಲಸ ಹೇಗೆ ನಡೆಯುತ್ತಿದೆ ಎಂದು ಚಾಂಡಿ ಕೇಳಿದರು. ಹಣ ನನ್ನ ಬಳಿ ಇದೆ ಎಂದು ಅವರಿಗೆ ಹೇಳಿದೆ. ಕುರುವಿಲ್ಲಾ ಅವರನ್ನು ಸಂಪರ್ಕಿಸುವಂತೆ ಚಾಂಡಿ ಹೇಳಿದರು’ ಎಂದು ಸರಿತಾ ವಿವರಿಸಿದ್ದಾರೆ.

*

ನಾನು ಯಾವ ರೀತಿಯಲ್ಲಿಯೂ ಸರಿತಾ ಅವರಿಗೆ ನೆರವು ನೀಡಿಲ್ಲ. ಆಯೋಗದ ವಿಚಾರಣೆಯಲ್ಲಿ ಸತ್ಯ ಹೊರಬರಲಿದೆ.

-ಉಮ್ಮನ್‌ ಚಾಂಡಿ, ಕೇರಳ ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.