ಶುಕ್ರವಾರ, ಫೆಬ್ರವರಿ 26, 2021
28 °C
ಎಪಿಎಲ್ ‘ಅನ್ನಭಾಗ್ಯ’ಕ್ಕೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ

ಕೇವಲ 3,022 ಮಂದಿ ಹೆಸರು ನೋಂದಣಿ

ಪ್ರದೀಶ್‌ ಎಚ್‌. Updated:

ಅಕ್ಷರ ಗಾತ್ರ : | |

ಕೇವಲ 3,022 ಮಂದಿ ಹೆಸರು ನೋಂದಣಿ

ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾ­ಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಗೆ ಜಿಲ್ಲೆಯಲ್ಲಿ ಎಪಿಎಲ್ ಕಾರ್ಡುದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕೇವಲ ಶೇ 1.41 ರಷ್ಟು ಎಪಿಎಲ್ ಕುಟುಂಬಗಳು ಪಡಿತರಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2.13 ಲಕ್ಷ ಬಿಪಿಎಲ್ ಪಡಿತರ ಕಾರ್ಡುಗಳಿದ್ದರೂ, ‘ಅನ್ನಭಾಗ್ಯ’ ಯೋಜನೆಯ ಪಡಿತರಕ್ಕೆ ಹೆಸರು ನೋಂದಣಿ ಮಾಡಿದ ಕುಟುಂಬಗಳ ಸಂಖ್ಯೆ ಕೇವಲ 3,022. ಆದರೆ, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲೇ ಅತಿ ಹೆಚ್ಚು ನೋಂದಣಿಯಾಗಿದೆ. ರಾಜ್ಯದಲ್ಲಿ ಸುಮಾರು 10 ಸಾವಿರ ಹೆಸರು ನೋಂದಣಿಯಾಗಿದ್ದರೆ, ಈ ಪೈಕಿ ಜಿಲ್ಲೆಯ ಕೊಡುಗೆ ಶೇ 35ರಷ್ಟಿದೆ.‘ಅನ್ನಭಾಗ್ಯ’ ಯೋಜನೆಯನ್ನು ಜೂನ್ 1ರಿಂದ ಎಪಿಎಲ್ ಕುಟುಂಬ­ಗಳಿಗೂ ರಾಜ್ಯ ಸರ್ಕಾರ ವಿಸ್ತರಿಸಿದೆ. ಮುಂಚಿತವಾಗಿ ನೋಂದಣಿ ಮಾಡಿದ­ವರಿಗೆ ಮಾತ್ರ ಪಡಿತರ ನೀಡಲಾಗುತ್ತದೆ. ಹೀಗಾಗಿ, ಮೇ 1ರಿಂದಲೇ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಗ್ರಾಮಾಂತರ ಪ್ರದೇಶದವರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ನಗರ ಪ್ರದೇಶದವರು ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.ಆದರೆ, ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ನೋಂ­ದಣಿ ಮಾಡಿಕೊಂಡಿದ್ದಾರೆ. ಜೂನ್ ತಿಂಗಳಲ್ಲಿ ಅವರು ಮಾತ್ರ ರಿಯಾಯಿತಿ ದರದಲ್ಲಿ ಪಡಿತರ ಪಡೆಯಬಹುದು. ಉಳಿದ ಆಕಾಂಕ್ಷಿಗಳು ತಕ್ಷಣ ಹೆಸರು ನೋಂದಾಯಿಸಿಕೊಂಡರೆ ಜುಲೈ ತಿಂಗಳಿನಿಂದ ಪಡಿತರ ಪಡೆಯಲು ಅವಕಾಶವಿದೆ.ತಾಲ್ಲೂಕುವಾರು ನೋಂದಣಿ

ಮಂಗಳೂರು ತಾಲ್ಲೂಕಿನಲ್ಲಿ 1,17,010 ಎಪಿಎಲ್ ಕಾರ್ಡುಗಳ ಪೈಕಿ 2,471, ಬಂಟ್ವಾಳದಲ್ಲಿ 31,541  ಕಾರ್ಡುಗಳ ಪೈಕಿ 252, ಪುತ್ತೂರಿನಲ್ಲಿ 26,786 ಕಾರ್ಡುಗಳ ಪೈಕಿ 186, ಬೆಳ್ತಂಗಡಿಯಲ್ಲಿ 22,969 ಕಾರ್ಡುಗಳ ಪೈಕಿ 65, ಸುಳ್ಯದಲ್ಲಿ 14,697 ಕಾರ್ಡುಗಳ ಪೈಕಿ 48 ಕುಟುಂಬಗಳು ಮಾತ್ರ ಪಡಿತರ ಬಯಸಿ ನೋಂದಣಿ ಮಾಡಿಕೊಂಡಿವೆ.ಪಡಿತರ ಎಷ್ಟು? 

‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಪಡಿತರ ವಿತರಿಸಿದರೆ, ಎಪಿಎಲ್ ಕುಟುಂಬಕ್ಕೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಕೆ.ಜಿ ಅಕ್ಕಿಗೆ ₨ 15, ಕೆ.ಜಿ ಗೋಧಿಗೆ ₨ 10ರಂತೆ ನೀಡಲಾಗುತ್ತದೆ. ಒಬ್ಬ ಸದಸ್ಯ ಇರುವ ಎಪಿಎಲ್ ಕುಟುಂಬಕ್ಕೆ 3 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ವಿತರಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ಗರಿಷ್ಠ 5 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿ ವಿತರಣೆ ಮಾಡಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.