ಗುರುವಾರ , ಏಪ್ರಿಲ್ 22, 2021
30 °C

ಕೈಗೆಟುಕದ ಹಣ್ಣಿನತ್ತ ಐರ್ಲೆಂಡ್ ಚಿತ್ತ

ಪ್ರಜಾವಾಣಿ ವಾರ್ತೆ / ಡಿ.ಗರುಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎತ್ತರದ ಹಂದರದಲ್ಲಿ ಬೆಳೆದ ದ್ರಾಕ್ಷಿ ಬಳ್ಳಿಯಲ್ಲಿನ ಹಣ್ಣಿನ ಮೇಲೆ ಕಣ್ಣಿದೆ. ಸಿಹಿಯಾದ ಫಲ ಅದೆಂದು ಕೂಡ ಗೊತ್ತು. ಆದ್ದರಿಂದಲೇ ಅದರತ್ತ ಚಿತ್ತ ಕೇಂದ್ರೀಕರಿಸಿದ್ದು. ಆದರೂ ಕೈಗೆಟುಕುವುದಿಲ್ಲವಲ್ಲ ಎನ್ನುವ ವೇದನೆ. ಕಷ್ಟಗಳು ಏನೇ ಇರಲಿ; ಒಮ್ಮೆಯಾದರೂ ಬಲವನ್ನೆಲ್ಲಾ ಪ್ರಯೋಗಿಸಿ ಗೆಲುವಿನ ಹಣ್ಣು ಪಡೆಯುವ ತವಕ ಐರ್ಲೆಂಡ್ ತಂಡದ್ದು.ಇಂಗ್ಲೆಂಡ್ ವಿರುದ್ಧ ಜಯ ಪಡೆಯಬೇಕು; ಇದು ಆಶಯ! ಆದರೆ ಕಂಡ ಕನಸೆಲ್ಲಾ ನನಸಾಗಲು ಸಾಧ್ಯವೆ? ಆದರೂ ಅಚ್ಚರಿ ಹಾಗೂ ಅನಿರೀಕ್ಷಿತಗಳ ಆಟ ಕ್ರಿಕೆಟ್‌ನಲ್ಲಿ ಅಂಥದೊಂದು ಆಸೆ ಈಡೇರುವುದೂ ಸಾಧ್ಯ. ಇಂಥದೊಂದು ಮಹತ್ವಾಕಾಂಕ್ಷೆಯ ಗುರಿಯ ಕಡೆಗೆ ಗಮನ ಹರಿಸಿರುವ ಐರ್ಲೆಂಡ್ ತಂಡದವರು ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನಲ್ಲಿ ಬುಧವಾರ ಇಂಗ್ಲೆಂಡ್‌ಗೆ ಸವಾಲಾಗುವಂಥ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಭಾರತದ ವಿರುದ್ಧ ಕೈಗೆ ಬಂದಿದ್ದ ಗೆಲುವಿನ ತುತ್ತನ್ನು ಬಾಯಿಗಿಟ್ಟುಕೊಳ್ಳುವ ಅದೃಷ್ಟವಿಲ್ಲದೇ ಮರುಗಿದ ಇಂಗ್ಲೆಂಡ್ ಈಗ ಚಡಪಡಿಸುತ್ತಿದೆ. ಆದರೂ ದುರ್ಬಲ ಎನಿಸಿರುವ ವಿಲಿಯಮ್ ಪೋರ್ಟರ್‌ಫೀಲ್ಡ್ ನೇತೃತ್ವದ ಐರ್ಲೆಂಡ್ ಎದುರು ಸುಲಭ ಗೆಲುವು ಪಡೆಯುವ ಕನಸನ್ನಂತೂ ಕಂಡಿದೆ. ಲೀಗ್ ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಇಂಥದೊಂದು ಪಂದ್ಯದಲ್ಲಿ ಆಘಾತಕ್ಕೆ ಅವಕಾಶ ಸಿಗದಂತೆ ಆಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಆದ್ದರಿಂದಲೇ ಎರಡು ಪಾಯಿಂಟು ಗಳಿಸುವುದೇ ಆ್ಯಂಡ್ರ್ಯೂ ಸ್ಟ್ರಾಸ್ ಬಳಗದ ಗುರಿ. ಅದರ ಹೊರತಾಗಿ ಬೇರೆ ಏನೂ ಯೋಚನೆ ಮಾಡುತ್ತಿಲ್ಲ.ಹಾಲೆಂಡ್ ವಿರುದ್ಧ ರೋಚಕ ಘಟ್ಟದಲ್ಲಿ ಆರು ವಿಕೆಟ್‌ಗಳ ಗೆಲುವು ಪಡೆದು ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಇಂಗ್ಲೆಂಡ್ ಲೆಕ್ಕಾಚಾರ ತಪ್ಪಿದ್ದು ಭಾರತದ ಎದುರು. ಇನ್ನೇನು ಜಯದತ್ತ ಎನ್ನುವಾಗಲೇ ಪಂದ್ಯ ‘ಟೈ’ ಆಗಿದ್ದರಿಂದ ಖಾತೆಯಲ್ಲಿನ ಒಟ್ಟು ಪಾಯಿಂಟುಗಳನ್ನು ನಾಲ್ಕಾಗಿಸುವುದು ಆಗಲಿಲ್ಲ. ಸದ್ಯಕ್ಕೆ ಮೂರೆಂದು ಸಮಾಧಾನ! ಆದ್ದರಿಂದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿ, ಪರಿಸ್ಥಿತಿ ಸುಧಾರಿಸಿಕೊಳ್ಳಲೇಬೇಕು.ಐರ್ಲೆಂಡ್ ಎದುರು ಇಂಗ್ಲೆಂಡ್‌ಗೆ ಜಯ ಕಷ್ಟವಾಗದೆಂದು ಕಾಗದದ ಮೇಲೆ ಖಂಡಿತ ಲೆಕ್ಕಾಚಾರ ಮಾಡಬಹುದು. 2007ರಲ್ಲಿ ಸೂಪರ್ ಏಯ್ಟಾ ಹಂತವನ್ನು ತಲುಪಿದ್ದ ಐರ್ಲೆಂಡ್ ಈ ಬಾರಿಯ ವಿಶ್ವಕಪ್‌ನಲ್ಲಿ ಅಷ್ಟೇನು ಉತ್ಸಾಹದಾಯಕ ಪ್ರದರ್ಶನವನ್ನು ಇದುವರೆಗೆ ನೀಡಿಲ್ಲ. ಮೀರ್‌ಪುರದ ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 27 ರನ್‌ಗಳ ಅಂತರದಿಂದ ಶರಣಾಯಿತು.ಬೌಲಿಂಗ್ ವಿಭಾಗದಲ್ಲಿ ಆ್ಯಂಡ್ರೆ ಬೊಥಾ, ಟ್ರೆಂಟ್ ಜಾನ್‌ಸ್ಟನ್ ಹಾಗೂ ಜಾರ್ಜ್ ಡಾಕ್ರೆಲ್ ಅವರು ತಕ್ಕ ಮಟ್ಟಿಗೆ ಪರಿಣಾಮಕಾರಿ ಏನಿಸಿದರು. ಆದರೆ ಸಮಸ್ಯೆ ಕಾಡಿದ್ದು ಬ್ಯಾಟಿಂಗ್‌ನಲ್ಲಿ. ಇನಿಂಗ್ಸ್‌ಗೆ ಬಲ ನೀಡುವಂಥ ಜೊತೆಯಾಟಗಳನ್ನು ಬೆಳೆಸಲು ಐರ್ಲೆಂಡ್‌ನವರು ಬಾಂಗ್ಲಾ ವಿರುದ್ಧ ಪ್ರಯತ್ನ ಮಾಡಲೇ ಇಲ್ಲ. ಈ ತಂಡದ ಯಾರೊಬ್ಬರೂ ಬಾಂಗ್ಲಾ ಎದುರು ಅರ್ಧ ಶತಕದ ತೀರ ಹತ್ತಿರಕ್ಕೆ ಹೋಗಲಿಲ್ಲ. ನೀಲ್ ಓಬ್ರಿಯನ್ ಹಾಗೂ ಕೆವಿನ್ ಓಬ್ರಿಯನ್ ಹೊರತಾಗಿ ಬಾಕಿ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನೀರಸ. ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್ ಹಾಗೂ ಇನ್ನೊಬ್ಬ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ ಬಹು ಬೇಗ ನಿರ್ಗಮಿಸಿದ್ದರಿಂದ ಹೊಸ ಚೆಂಡನ್ನು ಎದುರಿಸುವ ಹೊಣೆಯು ಮಧ್ಯಮ ಕ್ರಮಾಂಕದವರ ಮೇಲೆ ಬಿತ್ತು. ಇಂಥ ಸ್ಥಿತಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎದುರಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಬೇಗ ಸಂಕಷ್ಟದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.ಜೊತೆಗೆ ಇಂಗ್ಲೆಂಡ್ ವಿರುದ್ಧ ತಮಗೆಂದೂ ಜಯ ಸಿಕ್ಕಿಲ್ಲ ಎನ್ನುವ ಅಂಶವನ್ನೂ ಐರ್ಲೆಂಡ್‌ನವರು ಮರೆಯಕೂಡದು. ಇಂಗ್ಲೆಂಡ್‌ನವರು ಐರ್ಲೆಂಡ್ ಎದುರು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೋಲನುಭವಿಸಿದ್ದೇ ಇಲ್ಲ. ಐರ್ಲೆಂಡ್ ವಿರುದ್ಧ ಆಡತೊಡಗಿದ್ದೇ ತೀರ ಇತ್ತೀಚೆಗೆ. ಮೂರು ಪಂದ್ಯಗಳಲ್ಲಿ ಈ ಎರಡು ತಂಡಗಳ ಮುಖಾಮುಖಿ ಆಗಿದ್ದು 2006ರಿಂದ 2009 ನಡುವಣ ಅವಧಿಯಲ್ಲಿ. ನೆರೆಯ ಐರ್ಲೆಂಡ್‌ನಲ್ಲಿ ಎರಡು ಪಂದ್ಯ ಆಡಿದ್ದರೆ, ಇನ್ನೊಂದು ಬಾರಿ ಇದೇ ತಂಡವನ್ನು ಎದುರಿಸಿದ್ದು ವೆಸ್ಟ್ ಇಂಡೀಸ್‌ನಲ್ಲಿ. ಅದು 2007ರಲ್ಲಿ ನಡೆದಿದ್ದ ವಿಶ್ವಕಪ್ ಸಂದರ್ಭದಲ್ಲಿ.ವಿಶೇಷವೆಂದರೆ ಐರ್ಲೆಂಡ್ ತಂಡದ ವಿರುದ್ಧ ಆಡಿದಾಗಲೆಲ್ಲ ಇಂಗ್ಲೆಂಡ್ ಟಾಸ್ ಗೆದ್ದಿದೆ. ಅಷ್ಟೇ ಅಲ್ಲ ಈ ಮೂರು ಬಾರಿಯೂ ಮೊದಲು ಬ್ಯಾಟಿಂಗ್ ಮಾಡಿದ್ದು ಇಂಗ್ಲೆಂಡ್. 2009ರ ಆಗಸ್ಟ್ 27ರಂದು ಪಾಲ್ ಕಾಲಿಂಗ್‌ವುಡ್ ನೇತೃತ್ವದಲ್ಲಿ ಇಂಗ್ಲೆಂಡ್ ಡಕ್ವರ್ಥ್-ಲೂಯಿಸ್ ನಿಯಮದ ಅನ್ವಯ ಮೂರು ರನ್‌ಗಳಿಂದ ನೀಲ್ ಓಬ್ರಿಯನ್ ನಾಯಕತ್ವದ ಐರ್ಲೆಂಡ್ ಅನ್ನು ಬೆಲ್‌ಫಾಸ್ಟ್‌ನಲ್ಲಿ ಸೋಲಿಸಿತ್ತು.2006ರ ಜೂನ್ 13ರಂದು ಬೆಲ್‌ಫಾಸ್ಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿಯೇ ಇಂಗ್ಲೆಂಡ್‌ಗೆ ಐರ್ಲೆಂಡ್ ಒಂದಿಷ್ಟು ಪೈಪೋಟಿ ನೀಡಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಆ್ಯಂಡ್ರ್ಯೂ ಸ್ಟ್ರಾಸ್ ನಾಯಕರಾಗಿದ್ದ ಇಂಗ್ಲೆಂಡ್‌ಗೆ ಟ್ರೆಂಟ್ ಜಾನ್‌ಸ್ಟನ್ ನೇತೃತ್ವದ ಐರ್ಲೆಂಡ್ 38 ರನ್‌ಗಳಿಂದ ಶರಣಾಗಿತ್ತು. ಏಳು ವಿಕೆಟ್ ಕಳೆದುಕೊಂಡು 301 ರನ್ ಸೇರಿಸಿದ್ದ ವಿಜಯಿ ತಂಡದವರು ಎದುರಾಳಿಯನ್ನು ನಿಯಂತ್ರಿಸಲು ಕಷ್ಟಪಟ್ಟಿದ್ದರು. ಐರ್ಲೆಂಡ್ ತನ್ನ ಪಾಲಿನ ಐವತ್ತು ಓವರುಗಳನ್ನು ಆಡಿ ಒಂಬತ್ತು ವಿಕೆಟ್ ನಷ್ಟಕ್ಕೆ 263 ರನ್‌ಗಳನ್ನು ಗಳಿಸಿದ್ದು ಮೆಚ್ಚುವ ಅಂಶ. ದುರ್ಬಲ ತಂಡವೊಂದು ಬಲಾಢ್ಯ ಇಂಗ್ಲೆಂಡ್‌ಗೆ ಅಷ್ಟೊಂದು ಪೈಪೋಟಿ ನೀಡುವ ಮಟ್ಟದ ಪ್ರದರ್ಶನ ನೀಡಿದ್ದು ಗಮನ ಸೆಳೆಯುವಂಥದು.ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಮೊಟ್ಟ ಮೊದಲ ಬಾರಿಗೆ ಎದುರಾಗಿದ್ದು ಮಾತ್ರ 2007ರಲ್ಲಿ. ಮೈಕಲ್ ವಾನ್ ನಾಯಕತ್ವದಲ್ಲಿ ಆಡಿದ್ದ ಇಂಗ್ಲೆಂಡ್‌ಗೆ ಸೂಪರ್-8 ಹಂತದಲ್ಲಿ ಐರ್ಲೆಂಡ್ ಸವಾಲಿನ ಎದುರಾಳಿ ಆಗಿರಲಿಲ್ಲ. ಏಳು ವಿಕೆಟ್ ನಷ್ಟಕ್ಕೆ ವಾನ್ ಪಡೆಯು 266 ರನ್ ಗಳಿಸಿದ್ದ ಆ ಪಂದ್ಯದಲ್ಲಿ ಜಾನ್‌ಸ್ಟನ್ ಬಳಗವು 48.1 ಓವರುಗಳಲ್ಲಿ 218 ರನ್‌ಗಳಿಗೆ ಕುಸಿದಿತ್ತು. ವಿಶೇಷವೆಂದರೆ ಆ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನದಂಥ ಬಲಾಢ್ಯ ತಂಡಗಳು ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದವು. ಆದರೆ ಐರ್ಲೆಂಡ್ ಸೂಪರ್ ಏಯ್ಟಿಗೆ ಅರ್ಹತೆ ಪಡೆದುಕೊಂಡು ಅಚ್ಚರಿ ಮೂಡಿಸಿದ್ದನ್ನು ಮರೆಯುವಂತಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.