ಸೋಮವಾರ, ಮಾರ್ಚ್ 8, 2021
29 °C

ಕೈಮಗ್ಗ ಸೀರೆಗಳ ಹಿತಾನುಭವ

ಸಂದರ್ಶನ: ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಕೈಮಗ್ಗ ಸೀರೆಗಳ ಹಿತಾನುಭವ

‘ಮೂಲ ಪರಂಪರೆ ಹಾಗೂ ಸಂಪ್ರದಾಯವನ್ನು ಉಳಿಸಿಕೊಂಡೇ ಅದಕ್ಕೆ ಹೊಸ ರೂಪ ನೀಡುವಲ್ಲಿ ನಿಜವಾದ ಸೃಜನಶೀಲತೆ ಅಡಗಿದೆ’ ಎನ್ನುವ ಮೂಲ ಮಂತ್ರದ ಆಧಾರದ ಮೇಲೆಯೇ ಕನಸ ಕೋಟೆ ಕಟ್ಟಿ ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟವರು ವಿನ್ಯಾಸಕಿ ಗುಂಜನ್‌ ಜೈನ್‌.

ದೆಹಲಿಯಲ್ಲಿಯೇ ಹುಟ್ಟಿ ಬೆಳೆದು, ಕೈಮಗ್ಗ ಜಗತ್ತಿನ ವಿಸ್ಮಯ ನಗರಿ ಎಂದೇ ಖ್ಯಾತಿಯಾದ ಒಡಿಶಾಕ್ಕೆ ಒಲಸೆ ಹೋಗಿ ಅಲ್ಲಿನ ಹ್ಯಾಂಡ್‌ಲೂಮ್‌ ಸಂಸ್ಕೃತಿಗೆ ಮರುಜೀವ ನೀಡುವಲ್ಲಿ ಅವರು ಶ್ರಮಿಸಿದ ರೀತಿ ಸೋಜಿಗ ಹುಟ್ಟಿಸುವಂಥದ್ದು. ಹ್ಯಾಂಡ್‌ಲೂಮ್‌ ಎಂದೊಡನೆ ಕಣ್ಣರಳಿಸುವ ಈ ವಿನ್ಯಾಸಕಿ ಕೈಮಗ್ಗ ಕ್ಷೇತ್ರದ ಒಳ–ಹೊರಗನ್ನು ವಿಶ್ಲೇಷಿಸುವ ಬಗೆಯೂ ವಿನೂತನ-*ಒಡಿಶಾದ ಕೈಮಗ್ಗ ಕ್ಷೇತ್ರದತ್ತ ನಿಮ್ಮನ್ನು ಸೆಳೆದ ಅಂಶ ಯಾವುದು?

ಒಂದು ಭಾಗದ ಕಲೆ–ಸಂಸ್ಕೃತಿಯನ್ನು ಇನ್ನೊಂದು ಭಾಗಕ್ಕೆ ಹೊತ್ತು ತರಲು ಸಾಧ್ಯವಾಗದು. ಅದನ್ನು ಅದರ ಮೂಲದಲ್ಲಿಯೇ ತಲುಪಬೇಕು. ಒಡಿಶಾದ ಮೂಲ ಹ್ಯಾಂಡ್‌ಲೂಮ್‌ ಸಂಸ್ಕೃತಿಯ ಬಗ್ಗೆ ಒಲವು ಮೂಡಿದಾಗ  ಅದನ್ನು ಅದರ ನೆಲದಲ್ಲಿಯೇ ಹೋಗಿ ಅರಿಯಬೇಕು ಎಂದು ಅತ್ತ ಪಯಣ ಬೆಳೆಸಿದೆ.*ಕೈಮಗ್ಗ ವಸ್ತ್ರಗಳ ಬಗ್ಗೆ ಆಕರ್ಷಣೆ ಮೂಡಿದ್ದು ಯಾವಾಗ?

ದೆಹಲಿಯಂತಹ ಮೆಟ್ರೊ ನಗರದಲ್ಲಿಯೇ ಹುಟ್ಟಿ, ಬೆಳೆದರೂ ಯಾವಾಗಲೂ ನನ್ನನ್ನು ಆಕರ್ಷಿಸಿದ್ದು ಅಮ್ಮ ತೊಡುತ್ತಿದ್ದ ಸರಳವೂ, ಆರಾಮದಾಯಕವೂ ಆದ ಕಾಟನ್‌ ಸೀರೆಗಳೇ. ಪಾಶ್ಚಾತ್ಯ ಸಂಸ್ಕೃತಿ ಎಷ್ಟೇ ಪ್ರಭಾವಶಾಲಿಯಾದರೂ ಕೈಮಗ್ಗ ವಸ್ತ್ರಗಳು ನೀಡುವ ಹಿತಾನುಭವವೇ ಅಪ್ಯಾಯಮಾನ. ಹೀಗಾಗಿ ಚಿಕ್ಕಂದಿನಿಂದಲೂ ನನಗೆ ಅಂತಹ ಸೀರೆಗಳ ಬಗ್ಗೆಯೇ ಮೋಹ ಹೆಚ್ಚು. ಈ ಆಕರ್ಷಣೆ ಮುಂದುವರಿದ ಭಾಗವೇ ನಾನು ಫ್ಯಾಷನ್‌ ಡಿಸೈನಿಂಗ್‌ ಅಧ್ಯಯನ ಕೈಗೊಳ್ಳುವಂತೆ ಪ್ರೇರೇಪಿಸಿದ್ದು.*ಒಡಿಶಾ ತಲುಪುವ ಮುಂಚಿನ ಪಯಣ?

ಕೋರ್ಸ್‌ ಮುಗಿದ ಮೇಲೆ ಕೆಲ ವರ್ಷ ದೆಹಲಿ ಹಾಗೂ ಬೆಂಗಳೂರಿನಲ್ಲಿ ಗಾರ್ಮೆಂಟ್‌ ಕಂಪೆನಿಗಳ ವಿಭಾಗದಲ್ಲಿ ಕೆಲಸ ಮಾಡಿದೆ. ಆದರೆ ಇದು ನನ್ನ ಜಾಗ ಅಲ್ಲ ಎನ್ನುವ ಭಾವನೆ ತೀವ್ರವಾಯಿತು. ಒಡಿಶಾ ಕಡೆಗೆ ಹೆಜ್ಜೆ ಹಾಕಿದೆ.*ಒಡಿಶಾದಲ್ಲಿ ಎದುರಿಸಿದ ಸವಾಲುಗಳೇನು?

ಅಲ್ಲಿ ಎಲ್ಲವೂ ಸುಲಭವಾಗಿರಲಿಲ್ಲ. ನೇಕಾರರು ತಮ್ಮದೇ ಆದ ಪ್ರತ್ಯೇಕ ಜಗತ್ತಿನಲ್ಲಿ ಬದುಕುತ್ತಿದ್ದರು. ಹೊರಗಿನವರನ ಅಷ್ಟು ಸುಲಭವಾಗಿ ನಂಬುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಅವರ ನಡುವೆ ನನ್ನದೂ ಅಂತ ಒಂದು ಜಾಗ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು. ಶ್ರೀಮಂತ ಕಲೆ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಒಡಿಶಾದ ಕೈಮಗ್ಗ ಕ್ಷೇತ್ರದಲ್ಲಿ ತೊಡಗಬೇಕು ಮತ್ತು ಅದಕ್ಕೆ ಹೊಸದೊಂದು ಆಯಾಮ ಒದಗಿಸಬೇಕು ಎನ್ನುವ ಹಂಬಲ ಬಲವಾಗಿದ್ದರಿಂದ ಹಿಂದೆ ಸರಿಯುವ ಪ್ರಶ್ನೆ ಬರಲಿಲ್ಲ.*ಅಲ್ಲಿನ ನೇಕಾರರ ಪ್ರತಿಕ್ರಿಯೆ ಹೇಗಿತ್ತು?

ಎಲ್ಲಾ ನೇಕಾರರು ಹೊಸತನಕ್ಕೆ ಮುಕ್ತವಾಗಿರಲಿಲ್ಲ. ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ನನ್ನದೇ ಆದ ಸಮಾನಮನಸ್ಕ ಗುಂಪೊಂದನ್ನು ಕಟ್ಟಿಕೊಳ್ಳುವುದು ಸವಾಲಾಗಿತ್ತು. ಆದರೆ ಅನಂತರ ಒಬ್ಬೊಬ್ಬರೇ ನನ್ನ ಪರಿಶ್ರಮವನ್ನು ಅರಿತು ಹೊಸ ಹೆಜ್ಜೆಯಲ್ಲಿ ನನ್ನೊಂದಿಗೆ ಕಾಲೂರಲು ಮನಸ್ಸು ಮಾಡಿದರು. ಅದರ ಫಲವೇ ನನ್ನ ಸ್ಟುಡಿಯೊದಲ್ಲಿ ಈಗ ಒಡಿಶಾದ ಐದು ಜಿಲ್ಲೆಗಳ ಸುಮಾರು 40 ಜನ ಸೃಜನಶೀಲ ನೇಕಾರರು ಕೆಲಸ ಮಾಡುತ್ತಿದ್ದಾರೆ.*ನಿಮ್ಮದಲ್ಲದ ಊರಿನಲ್ಲಿ ‘ವೃಕ್ಷ’ ಎನ್ನುವ ಸ್ಟುಡಿಯೊ ಕಟ್ಟಿದ ಅನುಭವದ ಬಗ್ಗೆ ತಿಳಿಸಿ.

2007ರಲ್ಲಿ ನಾನು ಒಡಿಶಾಕ್ಕೆ ತೆರಳಿದೆ. 2008ರಲ್ಲಿ ‘ವೃಕ್ಷ’ ಎನ್ನುವ ಡಿಸೈನ್‌ ಸ್ಟುಡಿಯೊ ಆರಂಭಿಸಿದೆ. ಹಣ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅಲ್ಲಿನ ಶ್ರೀಮಂತ ಕಲೆ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವುದು, ನನ್ನ ಸೃಜನಶೀಲತೆಯನ್ನು ಒರೆಗೆ ಹಚ್ಚುವುದು, ಅಲ್ಲಿನ ಕೈಮಗ್ಗ ನೇಕಾರರ ನೈಸರ್ಗಿಕ ಕಲೆಯನ್ನು ಬಳಸಿಕೊಳ್ಳುವುದು, ಒಡಿಶಾದ ಸಮೃದ್ಧ ಜವಳಿ ಸಂಪ್ರದಾಯವನ್ನು ಅನ್ವೇಷಿಸುವುದು ನನಗೆ ಮುಖ್ಯವಾಗಿತ್ತು. ಸವಾಲುಗಳೇ ಯಶಸ್ಸಿನ ಮೆಟ್ಟಿಲುಗಳಾದವು.*ಕಾಲಕಾಲಕ್ಕೆ ನಿಮ್ಮ ವಿನ್ಯಾಸದ ಶೈಲಿಗೆ ಹೇಗೆ ಹೊಸತನ ತುಂಬುವಿರಿ?

‘ಹೊಸತು’ ಎಂದರೆ ‘ಹಳೆಯ’ದರ ವಿನಾಶ ಎಂದು ಅರ್ಥವಲ್ಲ. ಹಳೆಯ ಕಲೆಗೆ ಹೊಸ ರೂಪ ನೀಡುವ ಪ್ರಯತ್ನವದು. ಅಂತೆಯೇ ಈಗ ಕೈಮಗ್ಗ ಸೀರೆಗಳಿಗೆ ಹೆಚ್ಚಿನ ಮನ್ನಣೆ ಬಂದಿದೆ. ಸೆಲೆಬ್ರಿಟಿಗಳ ಆಪ್ತ ಸಂಗ್ರಹದಲ್ಲಿಯೂ ಈ ಸೀರೆಗಳಿಗೆ ಸ್ಥಾನವಿದೆ. ಸೋನಿಯಾ ಗಾಂಧಿ, ಜಯಾ ಬಚ್ಚನ್‌, ನಂದಿತಾ ದಾಸ್‌, ಕಿರಣ್‌ ಕೇರ್‌, ಶೀಲಾ ಧಿಕ್ಷಿತ್‌ ಸೇರಿದಂತೆ ಅನೇಕರು ನಮ್ಮ ಖ್ಯಾತ ಗ್ರಾಹಕರಾಗಿದ್ದಾರೆ.

*

‘ಕೈಮಗ್ಗ ವಸ್ತ್ರಗಳಿಗೆ ಸಂಬಂಧಿಸಿದ ನೀತಿ–ನಿಯಮ ರೂಪಿಸುವವರು ನೇಕಾರರಿಂದ ಬಹಳ ದೂರ ನಿಂತು ನಿರ್ಧಾರ ಕೈಗೊಳ್ಳುತ್ತಾರೆ. ನಿಯಮ ರೂಪಿಸುವವರು ಹಾಗೂ ನೇಕಾರರ ನಡುವೆ ಸಂವಹನದ ಅಂತರವಿದೆ. ತಮ್ಮ ಪರವಾಗಿ ಬೇರೆ ಯಾರೊ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಅರಿವೂ ನೇಕಾರರಿಗೆ ಇಲ್ಲ. ಈ ಕ್ರಮ ಬದಲಾಗಬೇಕು. ಅದಕ್ಕೆ ಸರ್ಕಾರ ಮನಸ್ಸು ಮಾಡಬೇಕು. ಯಂತ್ರಗಳು ಮಾಡುವ ಹಾಗೂ ಮನುಷ್ಯರು ಕೈಯಿಂದ ನೇಯುವ ವಸ್ತ್ರಗಳ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಬೇಕು’ ಎನ್ನುವುದು ಗುಂಜನ್‌ ಜೈನ್‌ ಅವರ ಆಶಯ.

*

ಹ್ಯಾಂಡ್‌ಲೂಮ್‌ ವಿನಾಶದ ಅಂಚಿನಲ್ಲಿದೆ ಎನ್ನುವುದನ್ನು ನಾನಂತೂ ನಂಬುವುದಿಲ್ಲ. ಅದರ ದಾರಿಯಲ್ಲಿ ಎಡರು–ತೊಡರುಗಳಿವೆಯಷ್ಟೇ. ಅವನ್ನು ಸರಿಪಡಿಸಿದರೆ ಕೈಮಗ್ಗ ಎನ್ನುವ ಮೋಹಕ ಜಗತ್ತನ್ನು ಸೋಲಿಸುವವರಿಲ್ಲ.

–ಗುಂಜನ್‌ ಜೈನ್‌(ಪ್ರದರ್ಶನ ಮೇಳ ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ7 ಗಂಟೆಯವರೆಗೆ ತೆರೆದಿರುತ್ತದೆ. ) 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.