ಭಾನುವಾರ, ಮಾರ್ಚ್ 7, 2021
32 °C

ಕೊಡಗಿನಲ್ಲಿ ಬಿರುಸಿನ ಮಳೆ: ತಗ್ಗಿದ ಕೃಷ್ಣಾ ಪ್ರವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡಗಿನಲ್ಲಿ ಬಿರುಸಿನ ಮಳೆ: ತಗ್ಗಿದ ಕೃಷ್ಣಾ ಪ್ರವಾಹ

ಬೆಂಗಳೂರು: ಕೊಡಗಿನಲ್ಲಿ ವರುಣ ಶನಿವಾರ ಆರ್ಭಟಿಸಿದ್ದಾನೆ. ಕರಾವಳಿಯ ಕೆಲವೆಡೆ ಬಿರುಸಾಗಿ, ಮಲೆನಾಡಿನ ಕೆಲವು ತಾಲ್ಲೂಕುಗಳಲ್ಲಿ ಸಾಧಾರಣ ಮಳೆ ಸುರಿಸಿದ್ದಾನೆ.ಅಲ್ಲದೆ, ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ಹರಿದುಬರುತ್ತಿರುವ ನೀರಿನಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ.



ಕೃಷ್ಣಾ ನದಿಯ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಹಟ್ಟಿ–ಕೊಕಟನೂರ ಹಾಗೂ ಉಗಾರ–ಕುಡಚಿ, ರಾಯಬಾಗದ ಚಿಂಚಲಿ– ಕುಡಚಿ ಸೇತುವೆ ಮುಳುಗಡೆಯಾಗಿವೆ. ಮಲಪ್ರಭಾ ಪ್ರವಾಹದಲ್ಲಿ ಖಾನಾಪುರ ತಾಲ್ಲೂಕಿನ ಅಸೋಗಾ–ಘೋಸಗಾಳಿ, ಘಟಪ್ರಭಾ ಪ್ರವಾಹದಲ್ಲಿ ಗೋಕಾಕ ತಾಲ್ಲೂಕಿನ ಅವರಾದಿ ಸೇತುವೆ ಮುಳುಗಡೆಯಾಗಿದೆ. ಜಿಲ್ಲೆಯ 13 ಸೇತುವೆಗಳು ಮುಳುಗಡೆಯಾಗಿವೆ.



ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವು ಇನ್ನು 30 ಸಾವಿರ ಕ್ಯುಸೆಕ್‌ನಷ್ಟು ಹೆಚ್ಚಾದರೆ ಸದಲಗಾ–ಬೋರಗಾಂವ ಮತ್ತು ಯಕ್ಸಂಬಾ–ದಾನವಾಡ ಸೇತುವೆಗಳೂ ಜಲಾವೃತಗೊಳ್ಳುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಜಿಟಿಜಿಟಿ ಮಳೆ ಸುರಿದಿದೆ.



ಧಾರವಾಡ ಜಿಲ್ಲೆಯ ಬಹುತೇಕ ಕಡೆ ಶನಿವಾರ ಬಿರುಸಿನ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಕೆಲ ಹೊತ್ತು ಬಿರುಸಿನ ಮಳೆ ಸುರಿದಿದೆ. ಮುಂಡಗೋಡ, ಯಲ್ಲಾ ಪುರ, ಶಿರಸಿ, ಸಿದ್ದಾಪುರದಲ್ಲಿ ಸಾಧಾರಣ ಮಳೆಯಾಗಿದೆ.



ಕಡಲಿಗಿಳಿಯದ ದೋಣಿಗಳು:  ಅರಬ್ಬಿ ಸಮುದ್ರದಲ್ಲಿ ಗಾಳಿಯು ಜೋರಾಗಿ ಬೀಸುತ್ತಿರುವುದರಿಂದ ಭಾರಿ ಗಾತ್ರದ ತೆರೆಗಳು ಏಳುತ್ತಿವೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಬಹುತೇಕ ದೋಣಿಗಳು ಕಡಲಿಗಿಳಿದಿಲ್ಲ.



ಕೊಡಗಿನಲ್ಲಿ ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬಿರುಸಿನ ಮಳೆಯಾಗಿದ್ದು, ಕಾವೇರಿ ನದಿ ಹರಿವು ಮತ್ತಷ್ಟು ಏರಿಕೆಯಾಗಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಮಡಿಕೇರಿ, ಕೆ.ನಿಡುಗಣಿ, ಮಾಂದಲ್‌ಪಟ್ಟಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ.



ಕೆಆರ್‌ಎಸ್ ನೀರಿನ ಮಟ್ಟ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಶನಿವಾರ ಸಾಧಾರಣ ಮಳೆಯಾಗಿದೆ. ಸಾಗರ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರದಲ್ಲಿ ಮಳೆ ಸುರಿದಿದೆ. ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕೆಲವೆಡೆ ಶನಿವಾರ ಬಿಟ್ಟುಬಿಟ್ಟು ಜಿಟಿಜಿಟಿ ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.