ಸೋಮವಾರ, ಮೇ 10, 2021
28 °C

ಕೊನೆಗೂ ಸಿಕ್ಕಿತು, ಬಜೆಟ್‌ಗೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಹಗ್ಗ ಜಗ್ಗಾಟದಿಂದಾಗಿ ಕಳೆದ ಐದು ತಿಂಗಳಿಂದ ಅನುಮೋದನೆಯಾಗದೇ ಇದ್ದ ನಗರಸಭೆ ಬಜೆಟ್‌ಗೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯಿತು.ಪರಿಷ್ಕೃತ ಬಜೆಟ್‌ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕು ಎಂದು ವಿರೋಧ ಪಕ್ಷವಾದ ಬಿಜೆಪಿ ಉಪಸೂಚನೆ ನೀಡಿತು. ಆದ್ದರಿಂದ ಅನುಮೋದನೆ ವಿಚಾರವನ್ನು ಮತಕ್ಕೆ ಹಾಕಲಾಯಿತು. ಉಪಸೂಚನೆ ಪರವಾಗಿ 17 ಹಾಗೂ ವಿರುದ್ಧವಾಗಿ 13 ಮತ ಲಭಿಸಿತು. ಇದರಿಂದಾಗಿ ಬಜೆಟ್‌ನ ಕೆಲವೊಂದು ವಿಷಯಗಳಲ್ಲಿ ಮಾರ್ಪಾಡು ಮಾಡಲು ನಗರಸಭಾಧ್ಯಕ್ಷ ಶಿವಣ್ಣ ಮುಳಗುಂದ ಒಪ್ಪಿದರು.ಇದಕ್ಕೂ ಮೊದಲು ಸಾಮಾನ್ಯ ಸಭೆಯಲ್ಲಿ ಬಜೆಟ್ ವಿಚಾರದಲ್ಲಿ ಸದಸ್ಯರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಕಾಂಗ್ರೆಸ್‌ನ ಸಿ.ಕೆ. ಮಾಳಶೆಟ್ಟಿ, ಅನಿಲ ಗರಗ ಹಾಗೂ ಬಿಜೆಪಿ ದಶರಥ ಕೊಳ್ಳಿ, ವಾಣಿಶ್ರೀ ಮಾದಗುಂಡಿ ಒಳಗೊಂಡ ನಾಲ್ಕು ಸದಸ್ಯರ ಉಪ ಸಮಿತಿಯು ಬಜೆಟ್‌ಗೆ ಸಂಬಂಧಿಸಿದಂತೆ ಮೂರು ವರದಿಯನ್ನು ನೀಡಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ನೀಡಿರುವ ವರದಿಯನ್ನು ಅನುಮೋದನೆ ಮಾಡಬೇಕು ಎಂದು ಎಲ್.ಡಿ. ಚಂದಾವರಿ ವಿಷಯ ಪ್ರಸ್ತಾಪಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಡಿಸಿದ ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ   ನಿಮಗೆ ಬೇಕಾದ ರೀತಿಯಲ್ಲಿ ಬಜೆಟ್ ಸಿದ್ಧಪಡಿಸಿಕೊಳ್ಳಬಾರದು. ಬಜೆಟ್ ವಿಷಯದಲ್ಲಿ ಸ್ಪಷ್ಟತೆ ಇಲ್ಲ. ಕೆಲವೊಂದು ವಿಷಯ ಮಾರ್ಪಾಡು ಮಾಡಬೇಕು ಎಂದು ಉಪಸೂಚನೆ ನೀಡಿದರು.ನಂತರ ಬಜೆಟ್ ಚರ್ಚೆ ಆರಂಭವಾಯಿತು. ಎಂ.ಸಿ. ಶೇಖ್, ಅನಿಲ ಗರಗ, ಪರಶುರಾಮ ಹೆಬಸೂರ, ಮಾಧವ ಗಣಾಚಾರಿ, ಲಕ್ಷ್ಮಿದೇವಿ ಕಟ್ಟಿಮನಿ, ಲಕ್ಷ್ಮಣ ದೊಡ್ಮನಿ ಮಾತನಾಡಿದರು.ನಗರಸಭೆಯ ಹಿರಿಯ ನಾಯಕ ಸದಾನಂದ ಪಿಳ್ಳಿ ಮಾತನಾಡಿ, ಅಭಿವೃದ್ಧಿ ಪರ ಬಜೆಟ್‌ಗೆ ನಮ್ಮ ವಿರೋಧವಿಲ್ಲ. ಬಜೆಟ್‌ನಲ್ಲಿ ನಮೂದಿಸಿರುವ ಅಂಕಿ-ಅಂಶಗಳ ಒಂದಕ್ಕೊಂದು ತಾಳೆಯಾಗುವುದಿಲ್ಲ. ಆದ್ದರಿಂದ ನಗರದ ಸರ್ವೊತೋಮುಖವಾದ ಅಭಿವೃದ್ಧಿ ದೃಷ್ಟಿಯಿಂದ ಜನಪರ ಬಜೆಟ್ ರೂಪಿಸಬೇಕಾಗಿರುವುದರಿಂದ ಕೆಲವು ಬದಲಾವಣೆ ಮಾಡಿಕೊಳ್ಳಬೇಕು ಎಂದರು.ಕೊನೆಗೆ ಮತಕ್ಕೆ ಹಾಕಲಾಯಿತು. ಪರ-ವಿರೋಧದವರು ಕೈ ಎತ್ತಿ ಬೆಂಬಲ ಸೂಚಿಸಿದರು. ಪೌರಾಯುಕ್ತ ಎಸ್. ಶೇಖರಪ್ಪ ಮತ ಲೆಕ್ಕ ಹಾಕಿದರು. ಉಪಸೂಚನೆಗೆ ಬಹುಮತ ದೊರತಿದೆ ಎಂದು ಘೋಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.