ಗುರುವಾರ , ಮಾರ್ಚ್ 4, 2021
26 °C
ಮಹಾರಥಕ್ಕೆ ಕಾಯಕಲ್ಪ, ಸ್ವಚ್ಛತೆ, ಸಿಂಗಾರಕ್ಕೆ ಸಿದ್ಧತೆ; ಸಾಂಸ್ಕೃತಿಕ ವೈಭವ

ಕೊಪ್ಪಳ: ಅಜ್ಜನ ಜಾತ್ರೆ; ಏರಿದ ಬಸವಪಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಅಜ್ಜನ ಜಾತ್ರೆ; ಏರಿದ ಬಸವಪಟ

ಕೊಪ್ಪಳ: ಅಜ್ಜನ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಶುಕ್ರವಾರ ಬಸವಪಟ ಏರಿಸಲಾಗಿದೆ. ಮಠದ ಮೇಲಿರುವ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ನಡೆದಿದೆ.ಜಾತ್ರೆಯ ಪ್ರಧಾನ ಕಾರ್ಯಕ್ರಮ ಹಾಗೂ ಆಕರ್ಷಣೆಯ ಕೇಂದ್ರ ಬಿಂದು ರಥೋತ್ಸವ. ಅದಕ್ಕಾಗಿ ರಥವನ್ನು ಷೆಡ್‌ನಿಂದ ಹೊರಗಿರಿಸಿ ಕಾಯಕಲ್ಪ ನೀಡಲಾಗುತ್ತಿದೆ. ಸುಮಾರು ಮೂರು ದಿನಗಳಿಂದ ಕಾರ್ಮಿಕರು ರಥವನ್ನು ಸ್ವಚ್ಛಗೊಳಿಸಿ ಪಾಲಿಷ್‌ ಬಳಿಯುವ ಕಾರ್ಯ ನಡೆಸುತ್ತಿದ್ದಾರೆ. ಮೇಲ್ಭಾಗಕ್ಕೆ ಬೇಕಾದ ಅಟ್ಟಣಿಗೆ.

ಗವಿಸಿದ್ದೇಶ್ವರ ಸ್ವಾಮಿಯ ಮೂರ್ತಿ ಕೂರುವ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಸಣ್ಣಪುಟ್ಟ ದುರಸ್ತಿ ನಡೆದಿವೆ. ತೇರು ಎಳೆಯುವ ಗವಿಮಠದ ಮೈದಾನವನ್ನು ಯಂತ್ರದ ಮೂಲಕ ಸಮತಟ್ಟುಗೊಳಿಸಲಾಗಿದೆ.ರಥ ವಿಶೇಷ ಹೀಗಿದೆ: ರಥ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಾಗ 90 ಅಡಿ ಎತ್ತರವಾಗುತ್ತದೆ. 1992ರಲ್ಲಿ ನೂತನ ರಥ ನಿರ್ಮಾಣಗೊಂಡಿದೆ. ಮಲ್ಲಪ್ಪ ಬಡಿಗೇರ ಇದರ ಶಿಲ್ಪಿ. ರಥದ 6 ಆಯಾಮಗಳು ವೀರಶೈವ ಧರ್ವಮದ 6 ತತ್ವಗಳನ್ನು ಸೂಚಿಸುತ್ತವೆ.ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ ಈ ಆಯಾಮಗಳು. ರಥವನ್ನು ಗಜ– ಕೇಸರಿಗಳು ಎಳೆಯುವಂತೆ ಶಿಲ್ಪವಿದೆ. ಶಕ್ತಿ ಮತ್ತು ಚುರುಕುತನ ಸಾಮರ್ಥ್ಯವನ್ನು ತೋರಿಸುವ ಸಂಕೇತವಿದು. ಆನೆಯ ಸೊಂಡಿಲು ಸಿಂಹದ ಬಾಯಿ ಸೇರಿದಂಥ ರಚನೆಯಿದೆ. ಅಲ್ಲಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಯ ಬಾಲ್ಯ, ಪವಾಡಗಳ ಸನ್ನಿವೇಶವನ್ನು ಚಿತ್ರಿಸಲಾಗಿದೆ. ಭೂಮಿ, ಅಪ್‌, ಅಗ್ನಿ, ವಾಯು ಮತ್ತು ಜಲ ಎಂಬ ಪಂಚಭೂತ ತತ್ವಗಳನ್ನೂ ಬಿಂಬಿಸಲಾಗಿದೆ.ಶರಣರು, ಶಿವಭಕ್ತ ಸಿದ್ದರಾಮ, ರೇಣುಕರು ಹಾಗೂ ಗಜಲಕ್ಷ್ಮೀ, ಬಸವಣ್ಣನ ಅನುಭವ ಮಂಟಪ, ಗಜಕೇಸರಿ ಶಿಲ್ಪದ ಚಿತ್ರಗಳೂ ಇವೆ. ದುರ್ಗೆ, ಗಣೇಶ, ನಟರಾಜನ ಕೆತ್ತನೆಗಳನ್ನೂ ಮಾಡಲಾಗಿದೆ. ಬಳಕುವ ಬಳ್ಳಿಗಳು ಮನೋಹರವಾದ ಹೂಗೊಂಚಗಳು, ಆಕರ್ಷಕ ಹಣ್ಣಿನ ಗೊನೆಗಳು ರಥದ ಕೆತ್ತನೆಯಲ್ಲಿವೆ. ಈ ಮಾಹಿತಿ ನೀಡಿದವರು ಮಠದ ಭಕ್ತ, ನಿವೃತ್ತ ಶಿಕ್ಷಕ ಎಸ್‌.ಎಂ. ಕಂಬಾಳಿಮಠ.ದೀರ್ಘದಂಢ ನಮಸ್ಕಾರ: ಮುಂಜಾಗ್ರತೆ ಸೂಚನೆ

ಜಾತ್ರಾ ಮಹೋತ್ಸವದಲ್ಲಿ ದೀರ್ಘದಂಡ ನಮಸ್ಕಾರ ಹಾಕಲು ಸಂಕಲ್ಪಮಾಡಿಕೊಂಡ ಭಕ್ತರು ಚಿಕ್ಕಮಕ್ಕಳನ್ನು ಮಹಾದ್ವಾರದಿಂದ ಗದ್ದುಗೆಯವರೆಗೆ ನಮಸ್ಕಾರ ಹಾಕಿಸುವ ಬದಲು ಕೇವಲ ಗವಿಸಿದ್ದೇಶ್ವರ ಗದ್ದುಗೆಯ ಸುತ್ತ ದೀರ್ಘದಂಡ ನಮಸ್ಕಾರ ಹಾಕಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.ರಿಕ್ಷಾ ಚಾಲಕನ ಪ್ರಾಮಾಣಿಕತೆ

ನಗರದ ಶ್ರೀಮತಿ ಸುಮಂಗಲಾ ಸೋಮಲಾಪುರ ಎಂಬುವರು ಗವಿಮಠದ ಸಮೀಪ ಶಾರದಮ್ಮ ಕೊತಬಾಳ (ಬಿಬಿಎಂ) ಕಾಲೇಜಿನಿಂದ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್‌ವರೆಗೆ ಆಟೋರಿಕ್ಷಾದಲ್ಲಿ ತೆರಳುತ್ತಿರುವಾಗ ಕಳೆದುಕೊಂಡ ದುಬಾರಿ ಬೆಲೆಯ ಕೈಗಡಿಯಾರವನ್ನು ಆಟೋಚಾಲಕ ಮೃತ್ಯೂಜಾ ಶರಡಿ ಅವರು ವಾಪಸ್‌ ನೀಡಿ ಪ್ರಾಮಾಣಿಕತೆ ತೋರಿದ್ದಾರೆ. ಕೈಗಡಿಯಾರ ಆಟೋರಿಕ್ಷಾದ ಒಳಗೆ ಬಿದ್ದಿತ್ತು ಎಂದು ಮಠದ ಪ್ರಕಟಣೆ ತಿಳಿಸಿದೆ.***

ಗವಿಮಠದ ಮಹಾದ್ವಾರದ ಬದಲು ಗದ್ದುಗೆಯ ಸಮೀಪ ಮಾತ್ರ ಚಿಕ್ಕಮಕ್ಕಳಿಗೆ ದೀರ್ಘದಂಡ ನಮಸ್ಕಾರ ಹಾಕಿಸಬಹುದು.

-ಡಾ. ಪ್ರಕಾಶ ಬಳ್ಳಾರಿ,
ವಕ್ತಾರ, ಗವಿಮಠ ಕೊಪ್ಪಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.