ತಿಪಟೂರು: ಪ್ರೋತ್ಸಾಹ ಧನದೊಂದಿಗೆ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲು ನಫೆಡ್ ತೆರೆಯುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆ ಧಾರಣೆಯಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ. ಕೊಬ್ಬರಿ ರವಾನೆದಾರರ ತಾಳಕ್ಕೆ ತಕ್ಕಂತೆ ಧಾರಣೆ ಕುಣಿಯುತ್ತದೆ ಎಂಬುದಕ್ಕೆ ಇದು ಪುಷ್ಟಿ ನೀಡಿದೆ.

ಕೊಬ್ಬರಿ ಧಾರಣೆ ಚಿಂತಾಜನಕ ಸ್ಥಿತಿಗೆ ಕುಸಿದು ನಾಲ್ಕೈದು ತಿಂಗಳು ಕಳೆದಿತ್ತು. ರೈತರು ಕಂಗೆಟ್ಟಿದ್ದರು. ಕಳೆದ ವರ್ಷ ಬೆಂಬಲ ಬೆಲೆ ಖರೀದಿ ವ್ಯವಸ್ಥೆ ಸ್ಥಗಿತಗೊಳ್ಳುತ್ತಿದ್ದಂತೆ ಕುಸಿಯಲು ಆರಂಭವಾದ ಮಾರುಕಟ್ಟೆ ಧಾರಣೆ ಕ್ವಿಂಟಲ್ಗೆ 4450 ರೂಪಾಯಿ ಆಸುಪಾಸಿಗೆ ಬಂದು ನಿಂತಿತ್ತು. ಮಾರುಕಟ್ಟೆಗೆ ಮಾಲು ಬರುವುದು ಕಡಿಮೆಯಾದರೂ ಧಾರಣೆ ಚೇತರಿಕೆ ಕಂಡಿರಲಿಲ್ಲ. ಹೊಸ ಮಾಲಿನ ಆವಕ ಶುರುವಾದರೂ ಆಶಾದಾಯಕ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಕೆಲ ರೈತರು ವಿಧಿಯಿಲ್ಲದೆ ಹೋದಷ್ಟಕ್ಕೆ ಕೊಬ್ಬರಿ ಮಾರಿ ನಷ್ಟ ಅನುಭವಿಸಿದರು.

ಕೊಬ್ಬರಿಗೆ ಸೂಕ್ತ ಧಾರಣೆ ಸಿಗದಿರಲು ರವಾನೆದಾರರ ಲಾಬಿಯೇ ಕಾರಣವೆಂಬ ಬಲವಾದ ಆರೋಪ ಕೇಳಿಬಂದಿದ್ದವು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ, ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಪ್ರಕಟವಾಗುತ್ತಿದ್ದಂತೆ ಧಾರಣೆ ಏರಿಕೆ ಶುರುವಾಯಿತು. ರವಾನೆದಾರರು ಮತ್ತು ಕೆಲ ದಲ್ಲಾಳಿಗಳ ಕೈಚಳಕವೇ ಧಾರಣೆ ನಿಯಂತ್ರಿಸುತ್ತಾ ಬಂದಿದೆ ಎಂಬ ಆಕ್ಷೇಪಗಳನ್ನು ಈಚಿನ ಬೆಳವಣಿಗೆ ಬೆಂಬಲಿಸಿದಂತಿದೆ.

ನಫೆಡ್ ಕೇಂದ್ರಗಳು ಆರಂಭವಾಗುವ ಮೊದಲೇ ಒಂದೇ ವಾರದಲ್ಲಿ ಮಾರುಕಟ್ಟೆ ಧಾರಣೆ ಕ್ವಿಂಟಲ್ಗೆ 1100 ರೂಪಾಯಿ ಹೆಚ್ಚಳ ಕಂಡಿದೆ. ಕಳೆದ ಶನಿವಾರ 5600 ರೂಪಾಯಿ ಮುಟ್ಟಿದೆ. ನಫೆಡ್ ಆರಂಭವಾದರೆ ಅಲ್ಲಿಗೆ ರೈತರ ಹೆಚ್ಚು ಮಾಲು ಹೋಗಿ ವರ್ತಕರ ಮೂಲಕ ನಿರೀಕ್ಷಿತ ಪ್ರಮಾಣದ ಕೊಬ್ಬರಿ ಟೆಂಡರ್ಗೆ ಬರದಿರುವ ಸಾಧ್ಯತೆಯಿಂದ ರವಾನೆದಾರರು ದಿಢೀರ್ ಧಾರಣೆ ಹೆಚ್ಚಿಸಿದ್ದಾರೆ ಎನ್ನುವುದು ಪ್ರಾಥಮಿಕ ವಿಶ್ಲೇಷಣೆ. ಆದರೆ ಒಂದು ಸಾವಿರ ರೂಪಾಯಿ ದಿಢೀರ್ ಹೆಚ್ಚಿಸಿದ ನಂತರವೂ ವ್ಯವಹಾರದಲ್ಲಿ ನಷ್ಟವಿಲ್ಲ ಅಥವಾ ಆ ಬೆಲೆಗೂ ಗ್ರಾಹಕರ ಖರೀದಿ ಬೇಡಿಕೆ ಇದೆ ಎಂಬ ಖಚಿತ ಅರ್ಥ ಬರುತ್ತದೆ. ಹೀಗಿದ್ದರೂ ಮೊದಲೆಲ್ಲ ಧಾರಣೆ ಏಕೆ ಕುಸಿದಿತ್ತು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.

ಹುನ್ನಾರ ಶಂಕೆ
ಧಾರಣೆ ದಿಢೀರ್ ಚೇತರಿಸಿಕೊಂಡಿರುವ ಹಿಂದೆ ಹುನ್ನಾರ ಅಡಗಿದೆ ಎಂಬ ಶಂಕೆ ಕೇಳಿ ಬಂದಿದೆ. ಕೇಂದ್ರ ಸರ್ಕಾರದ 5500 ರೂಪಾಯಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ನಫೆಡ್ ತೆರೆಯಲಾಗುತ್ತದೆ. ಆದರೆ ತೆಂಗು ಬೆಳೆಗಾರರ ಸಂಕಷ್ಟ ಅರಿತ ರಾಜ್ಯ ಸರ್ಕಾರ ಪ್ರೋತ್ಸಾಹ ಧನವಾಗಿ ಕ್ವಿಂಟಲ್ಗೆ 1 ಸಾವಿರ ರೂಪಾಯಿ ನೀಡುತ್ತಿದೆ. ರೈತರಿಗೆ ಒಟ್ಟು ಕ್ವಿಂಟಲ್ಗೆ 6500 ರೂಪಾಯಿ ದೊರೆತಂತಾಗುತ್ತದೆ.

ನಫೆಡ್ ಅಧಿಕೃತವಾಗಿ ಪರಿಗಣಿಸುವುದು ಬೆಂಬಲ ಬೆಲೆ ಮಾತ್ರ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಧಾರಣೆ ಇದ್ದಾಗ ಮಾತ್ರ ಖರೀದಿ ಮಾಡುತ್ತದೆ. ಅಂದರೆ ಮಾರುಕಟ್ಟೆ ಧಾರಣೆ 5500 ರೂಪಾಯಿ ದಾಟಿದರೆ ನಫೆಡ್ ಖರೀದಿ ನಿಲ್ಲಿಸುತ್ತದೆ. ಅಂಥ ಸಂದರ್ಭ ರವಾನೆದಾರರು ಮತ್ತೆ ತಮಗೆ ಬೇಕಾದಂತೆ ಮಾರುಕಟ್ಟೆ ನಿಯಂತ್ರಿಸುವ ಹುನ್ನಾರ ಹೊಂದಿದ್ದಾರೆ ಎಂಬ ಶಂಕೆ ಕೇಳಿ ಬಂದಿದೆ.

5500 ರೂಪಾಯಿ ದಾಟಿದ ತಕ್ಷಣ ನಫೆಡ್ ಮುಚ್ಚಿದರೆ ರೈತರಿಗೆ ರಾಜ್ಯ ಸರ್ಕಾರದಿಂದ ಬರುವ 1000 ರೂಪಾಯಿ ಪ್ರೋತ್ಸಾಹ ಧನ ಕೈತಪ್ಪುತ್ತದೆ. ಧಾರಣೆಯೂ ನಿಯಂತ್ರಣ ಕಳೆದುಕೊಂಡು ಮತ್ತೆ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಈ ನ್ಯೂನತೆ ಸರಿಪಡಿಸುವ ಅಗತ್ಯವಿದೆ ಎಂಬ ಒತ್ತಾಯ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.