ಬುಧವಾರ, ಮಾರ್ಚ್ 3, 2021
30 °C

ಕೊರತೆಗಳೆ ಎಲ್ಲ, ಸೌಲಭ್ಯಗಳೆ ಇಲ್ಲ

ಪ್ರಜಾವಾಣಿ ವಾರ್ತೆ, ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

ಕೊರತೆಗಳೆ ಎಲ್ಲ, ಸೌಲಭ್ಯಗಳೆ ಇಲ್ಲ

ಲಿಂಗಸುಗೂರ: ತಾಲ್ಲೂಕಿನ 192 ಗ್ರಾಮಗಳು, ನೂರಾರು ದೊಡ್ಡಿ, ತಾಂಡಾಗಳಲ್ಲಿ ಎಲ್ಲೆಂದರಲ್ಲಿ ಶಿಕ್ಷಣ ಇಲಾಖೆ ಶಾಲೆಗಳನ್ನೆನೂ ಮಂಜೂರ ಮಾಡಿದೆ. ಆದರೆ, ಸರ್ಕಾರದ ನೀತಿ ನಿಯಮಗಳಡಿ ಅಗತ್ಯ ಸೌಲಭ್ಯಗಳು ಮಾತ್ರ ಗಗನ ಕುಸುಮವಾಗಿವೆ. ಮಕ್ಕಳ ಸಂಖ್ಯೆ ಇದ್ದರೆ, ಶಿಕ್ಷಕರಿಲ್ಲ. ಶಿಕ್ಷರಿದ್ದೆಡೆ ಮಕ್ಕಳಿಲ್ಲ. ಈ ಎರಡು ಸೌಲಭ್ಯಗಳಿರುವ ಕಡೆಗಳಲ್ಲಿ ಕೊಠಡಿಗಳ ಕೊರತೆ ಸಾಮಾನ್ಯ. ಆದಾಗ್ಯೂ ಶೈಕ್ಷಣಿಕ ಪ್ರಗತಿಯಲ್ಲಿ ಜಿಲ್ಲೆಯಲ್ಲಿ ಮೇಲ್ಪಂಕ್ತಿಯಲ್ಲಿರುವುದು ವಿಶೇಷ.ರಾಜ್ಯದಲ್ಲಿಯೆ ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಯ ಹೆಸರಿನಲ್ಲಿ ಬಂದಿರುವ ವಿಶೇಷ ಯೋಜನೆಗಳು ತಾಲ್ಲೂಕಿಗೆ ಸಾಕಷ್ಟು ಬಂದಿವೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಆದರೆ, ಚುನಾಯಿತ ಪ್ರತಿನಿಧಿಗಳ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.ತಾಲ್ಲೂಕಿನಲ್ಲಿ 317 ಪ್ರಾಥಮಿಕ ಶಾಲೆ, 39 ಪ್ರೌಢಶಾಲೆಗಳು ಅಸ್ತಿತ್ವದಲ್ಲಿವೆ. ಪ್ರಾಥಮಿಕ ಶಾಲೆಗಳಿಗೆ 1718 ಶಿಕ್ಷಕ ಹುದ್ದೆಗಳ ಮಂಜೂರಾತಿ ದೊರೆತಿದೆ. ಕರ್ತವ್ಯದಲ್ಲಿರುವವರು ಮಾತ್ರ 1554. ಇನ್ನೂ 164 ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ.ಪ್ರೌಢಶಾಲೆಗಳಿಗೆ 369 ಹುದ್ದೆಗಳ ಮಂಜೂರಾತಿ ದೊರೆತಿದೆ. 306 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. 63 ಶಿಕ್ಷಕರ ಕೊರತೆ ಇದೆ. ತಾಲ್ಲೂಕಿನಾದ್ಯಂತ 80ಕ್ಕೂ ಹೆಚ್ಚು ಕೊಠಡಿಗಳ ಕೊರತೆ ಇರುವುದನ್ನು ಶಿಕ್ಷಣ ಇಲಾಖೆ ಮೂಲಗಳು ಒಪ್ಪಿಕೊಳ್ಳುತ್ತವೆ.2001-02ರ ನಂತರದಲ್ಲಿ ತಾಲ್ಲೂಕಿನ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ವಿವಿಧ ಯೋಜನೆಗಳಡಿ ಕೋಟ್ಯಂತರ ಹಣ ಹರಿದು ಬಂದಿದೆ. ಸದರಿ ಹಣ ಸದುಪಯೋಗವಾಗದೆ ದುರುಪಯೋಗವಾಗಿದ್ದೆ ಹೆಚ್ಚು. ತಾಲ್ಲೂಕಿನಾದ್ಯಂತ ನಿರ್ಮಿಸಿರುವ ಶೇ. 90ರಷ್ಟು ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ಉದ್ಯಾನವನಗಳು ಮಾಯವಾಗಿವೆ. ಮಳೆ ನೀರು ಸಂಗ್ರಹ, ಪರಿಸರ ಸಂರಕ್ಷಣೆ, ಆಟಿಕೆ ಸಾಮಗ್ರಿಗಳು ಕಾಗದಪತ್ರದಲ್ಲಿ ಮಾತ್ರ ಪ್ರಗತಿ ಹೊಂದಿವೆ.

ಕೆಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳು ಕಳೆದ ನಾಲ್ಕು ವರ್ಷಗಳ ಹಿಂದೆ ಮಂಜೂರಾಗಿದ್ದರು ಕೂಡ ಇಂದಿಗೂ ಪೂರ್ಣಗೊಂಡಿಲ್ಲ. ಶಾಲಾ ಸುಧಾರಣ ಸಮಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಪ್ರತಿಷ್ಠೆಗಳು ಅಡ್ಡಿಯಾಗಿವೆ.ನಿರ್ಮಿತಿ ಕೇಂದ್ರಕ್ಕೆ ನೀಡಿರುವ ಕೊಠಡಿಗಳಂತು ಕಳೆದ ಆರೇಳು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಶಿಕ್ಷಣ ಇಲಾಖೆ ಮುಂಗಡ ಹಣ ಪಾವತಿಸಿದ್ದರು ಕೂಡ ನಿರ್ಮಿತಿ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಿಸದೆ ಹೋಗಿರುವುದು ಈ ತಾಲ್ಲೂಕಿನ ದೌರ್ಭಾಗ್ಯವೇ ಸರಿ.ಈ ಎಲ್ಲಾ ಪ್ರಕರಣಗಳಿಗೆ ಉದಾಹರಣೆ ಎನ್ನುವಂತೆ ಪಟ್ಟಣದ ಸಮೀಪವಿರುವ ಯರಡೋಣಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸ್ಥಿತಿಗತಿ ಜೀವಂತ ನಿದರ್ಶನವಾಗಿವೆ. ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿವೆ. ಕೊಠಡಿಗಳ ಮೇಲ್ಛಾವಣಿ ಕುಸಿದು ಹಲವು ವರ್ಷಗಳೆ ಗತಿಸಿದರು ದುರಸ್ತಿ ಭಾಗ್ಯ ಕಂಡಿಲ್ಲ. ಹೆಸರಿಗೊಂದು ಶೌಚಾಲಯ ನಿರ್ಮಿಸಿ ಕೈತೊಳೆದುಕೊಳ್ಳಲಾಗಿದೆ. ಮಕ್ಕಳು ಭಯಾನಕ ವಾತಾವರಣದಲ್ಲಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ.ಇದೇ ಗ್ರಾಮಕ್ಕೆ 2007-08ರಲ್ಲಿ ಪ್ರೌಢಶಾಲೆ ಮಂಜೂರ ಆಗಿದೆ. ಇಂಗ್ಲೀಷ ಶಿಕ್ಷಕರ ಹೊರತು ಪಡಿಸಿ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಾತಿ ಆಗಿದೆ. ಪ್ರಯೋಗಾಲಯ, ಗ್ರಂಥಾಲಯ, ಸಾಕಷ್ಟು ಕ್ರೀಡಾ ಸಾಮಗ್ರಿ ಪೂರೈಸಿದ್ದರು ಕೂಡ ಅವುಗಳನ್ನು ಸಂಗ್ರಹಿಸಲು ಕೊಠಡಿ ಇಲ್ಲದೆ ಹಾಳಾಗಿ ಹೋಗಿವೆ.

 

2008-09ರಲ್ಲಿ ಕೇವಲ ಎರಡು ಕೊಠಡಿ ಮಂಜೂರ ಆಗಿದ್ದರು ಕೂಡ ನಿರ್ಮಿತಿ ಕೇಂದ್ರದ ಬೇಜವಾಬ್ದಾರಿತನದಿಂದ ಇಂದಿಗೂ ಪೂರ್ಣಗೊಳ್ಳದೆ ಹೋಗಿರುವುದು ಶಿಕ್ಷಕ ಸಮೂಹದ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.  

-

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.