ಭಾನುವಾರ, ಜನವರಿ 19, 2020
25 °C
ದೀಪಾವಳಿ ವಿಶೇಷಾಂಕ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ

ಕೊರಬಾಡು

ಸಂತೋಷ ಗುಡ್ಡಿಯಂಗಡಿ Updated:

ಅಕ್ಷರ ಗಾತ್ರ : | |

ಮುಕ್ತಾಯ: ರಾತ್ರಿ ಅಂಬುದು ಆ ಊರ ಮ್ಯಾಲೆ ಬಿದ್ದು ಕಪ್ಪಗಾಗುತ್ತಾ ಅದು ದಟ್ಟವಾದಂತೆ ಊರು ನಿದ್ದೆಯೊಳಗೆ ತೂರಿಕೊಳ್ಳುತ್ತಿರಲು, ರಾತ್ರಿಯ ಗೆಣೆಕಾತಿ ಸಳಿ ಅಂಬೋಳು ಮಯ್ತೆರೆದುಕೊಂಡು ಹಾದರಕ್ಕೆ ತೊಡಗಿದಳು. ಈ ಅನಾಚಾರವ ಕಂಡು ಸಬುದವು ಸಿಕ್ಕ ಸಿಕ್ಕ ಕಂಬಳಿ ರಗ್ಗು ಸ್ಯಾಲಗಳೊಳುಗ ತೂರ್ಕಂಡು ನಡುನಡುಗಿ ಹಾಗೆ ನಿದ್ದೆಯಾಗಿಬಿಟ್ಟಿತು. ಇಂಥದ್ದೊಂದು ದೈನಿಕಾಚರಣೆಯ ಆ ಊರು ಅನುಭವಿಸುತ್ತಿರುವಾಗಲೆ ಅಳ್ಳೀಕಟ್ಟೆಯ ಮ್ಯಾಲೊಂದು ಹೆಂಗಸು ತನ್ನ ಬಸುರಾದ ಹೊಟ್ಟೆಯ ನೋವಿಗ ಚೀರಿಕೊಳ್ಳುವುದು ಆ ಗೌಗತ್ತಲ ಸೀಳಿದರೂ ಅಲ್ಲ್ಯಾವ ಹೊಸ ಚಲನೆಗಳು ಕಂಡುಬರದೆ ಮುಂದೆ ಆ ಚೀರಾಟಕ್ಕ ನಾಯಿಗಳು ಕೂಡಿಕೊಂಡವು. ರಾಮಕ್ಕಗ ಆ ಚೀರಾಟವು ಕೇಳಿ ಅವುಳು ನಡೆಯಲು ಆಗದ ದೇಹವ ಹೊರಳಿಸಿ ನರಳಿದಳು. ನಾಯಿಗಳ ರಂಪಾಟವು ರಾತ್ರಿಯ ಕಲುಕುತ್ತಲೆ ಆ ಹೆಂಗಸು ತಾಯಿಯಾಗಿ ಈ ಲೋಕಕ್ಕ ಹೊಸದೊಂದು ದನಿ ಸೇರಿಕೊಂಡಿತು.***

ರಾಮಕ್ಕ ಊರೊಳಗ ಪಾಪದ ಹೆಂಗಸು. ಊರಾಗಿನ ಎಲ್ಲರ ಕಷ್ಟಕ್ಕ ತನ್ನಿಂದಾದ ಸಹಾಯ ಮಾಡ್ಕಂಡು ಎಲ್ಲರಿಗೂ ಬೇಕಾಗಿದ್ದಳು. ಇಂತವುಳ ಗಂಡ ಅಂಬೋ ಒಂದೇ ಕಾರಣಕ್ಕ ಸೋಮಣ್ಣನೆಂಬೋ ಪೆಚ್ಚ್‌ಬಡ್ಡೆತ್ತದ್ಕ ಊರ ಅಳ್ಳೀಕಟ್ಟೆಯ ಮ್ಯಾಗ ವಸಿ ಜಾಗ ಆಗಾಗ ಒಂದ್ಪೀಸ್ ಟೀನೂ ಸಿಕ್ಕು ಅವನ ಕಾಲ ಸಾಗಿತ್ತು. ಅಂವ ಕೆಲ್ಸಕ್ಕಂತ ಹೋಗಿದ್ದನ್ನ ಈಗೀಗ ಹುಟ್ಟಿದ ಐಕಳು ಕಂಡೇ ಇಲ್ಲ. ಆಗಾಗ ನಂಜನಗೂಡಿಗೆ ಹೋಗಿ ಬರ್ತಾ ಬಸ್ಸಿನವರ ಜೊತ್ಗ ಜಗಳನಾರೂ ಆಡ್ಕಂಡು ಫ್ರೀಯಾಗಿ ಜರ್ನೀಯ ಮಾಡ್ಕಂಡು ಆ ದೌಲತ್ತನ್ನ ಕಟ್ಟೇಮ್ಯಾಲ ಹೇಳ್ಕಂಡು ಹೀರೋ ಆಗಿ ಬೀಡಿನೋ ಟೀನೋ ಗಿಟ್ಟಿಸ್ತಿದ್ದ. ಇಂತಾ ಸೋಮಣ್ಣನ ಹೆಂಡ್ತಿ ರಾಮಕ್ಕ ಊರವರ ಒತ್ತಾಯಕ್ಕ ಸೋತು ಪಂಚಾಯ್ತಿ ಇಲೆಕ್ಸಾನಾಗೆ ನಿಂತು ಗೆದ್ದು ಬಂದಳು. ಇದು ಅಳ್ಳೀಕಟ್ಟೆಯ ಸುತ್ತ ಅಡ್ಡಾಡಿಕೊಂಡಿದ್ದ ಗಂಡ ಸೋಮಣ್ಣಗ ಲಾಟರಿ ಹೊಡೆಸಿತ್ತು. ತುಂಡು ಬೀಡಿ, ಒಂದ್ಪೀಸ್ ಟೀಗೂ ಇನ್ನೊಬ್ಬರ ಕೈಬಾಯಿ ನೋಡುತ್ತಿದ್ದ ಅವಗ ಹೆಂಡ್ತಿ ರಾಮಕ್ಕನ ರಾಜಕಾರಣವು ಬೆಳ್ಳಗಂದು ಶಲ್ಟು ತೊಡಿಸಿ ಪಂಚಾಯ್ತಿತಕ್ಕೆ ತಳ್ಳಿತ್ತು. ತೊಪ್ಪಹುಳದಂತಿದ್ದ ಸೋಮಣ್ಣ ಊರೊಳಗ ಒಂದು ಜನ ಆಗಲಿಕ್ಕೆ ಪಂಚಾಯ್ತಿ ರಾಜಕಾರಣವು ಕಾರಣವಾಗಿದ್ದರೂ ಹೆಂಡ್ತಿ ರಾಮಕ್ಕನ ಅಡುಗೆ ಮನೆ ಮಾತ್ರ ತಪ್ನಿಲ್ಲ.ಕಾಲ ಕಳ್ದದ. ಈಗ ಸೋಮಣ್ಣನ ಹಟ್ಟಿ ತೊಟ್ಟಿಮನಿಯಾಗಿ ಊರವರ ಕಣ್ಣೂಗ ಎದ್ದು ಹೊಡೆಯುತ್ತಿತ್ತು. ‘ನಸೀಬು ಅಂದ್ರ ಹಾಗಿರ್ಬೇಕಯ್ಯ ಯಾನೂ ಗೇಯ್ಮ ಮಾಡ್ದೀಯ ರಾಜನ ತರ ಮೆರಿತವ್ನಲ್ಲ!’ ಅಂಬೋರು ಕೂಡ ಅಂವ ಮುಂದ್ಕ ಬಂದ್ರ ‘ನಂಸ್ಕಾರಅಳಿ’ ಅಂತರ! ಒಂದ್ಕಾಲಕ್ಕ ಅವನ ಅಳ್ಳೀಕಟ್ಟೆಯ ಒಡನಾಡಿಗಳಾಗಿದ್ದವರು ಇಂದು ಸೋಮಣ್ಣನ ತೊಟ್ಟಿಮನಿ ಮುಂದ್ಕ ನಿಂತ್ಗಂಡು ಬೀಡಿನೋ ಟೀನೋ ಕೇಳ್ತಿಲ್ಲ, ಬದಲು ನಂ ಹಟ್ಟಿ ಬಿದ್ದೋಗಂಗೆ ಆಗದ ನಮ್ಗೊಂದ್ ಸರ್ಕಾರಿಮನ ಕೊಡ್ಸಿಕಾ ಸ್ವಾಮಿ ಅಂದ್ಕಂಡು ಅಲಿತಾರ. ಹೀಗ ಮನಿಯ ಕೇಳ್ಕಂಡು ಬಂದವರೂಗ ಸೋಮಣ್ಣ ಸರ್ಕಾರಿಮನಿ ತನ್ನಪ್ಪನ ಮನೀದು ಅಂಬಂಗ ಒಂದೊಂದ್ ಮನೀಗ ಹತ್ತ್ ಹತ್ತ್ ಸಾವುರ ಕಿತ್ಕತ್ತಿದ್ದ. ಆಗಲ್ಲ ಅಂದವ್ರುಗ ಮನೀನೇ ಬಂದಿಲ್ಲ ಅಂದು ಬ್ಯಾರೆದವ್ರಿಗ ಕೊಡ್ಸಿ ಹಣ ಮಾಡ್ತಿದ್ದ. ಈಗೀಗ ಸರ್ಕಾರಿಮನಿ ರೇಟು ಲಕ್ಷಕ್ಕ ಮುಟ್ಟಿ ಸೋಮಣ್ಣನ ರೇಟು ಹದಿನೈದು ಸಾವುರಕ್ಕ ಏರ್ಕಂತು.ತೊಪ್ಪಹುಳ ಸೋಮಣ್ಣಗ ಊರವರು ವೋಟಾಕಿ ಗೆಲ್ಲಿಸ್ನಿಲ್ಲ. ರಾಮಕ್ಕ ಬ್ಯಾಡಾಂತಂದ್ರೂವಿ ಹಟ ಮಾಡ್ಸಿ ಗೆಲ್ಲಿಸಿದ್ಕ ಈಗ ಪಾಡು ಪಡ್ತಾರ ಜನ. ಗೆದ್ದಮ್ಯಾಗ ರಾಮಕ್ಕ ಪಂಚಾಯ್ತಿತಕ್ಕೆ ಹೋಗ್ನಿಲ್ಲ. ಅಲ್ಲಿ ಎಲ್ಲಾವಿ ಸೋಮಣ್ಣಂದೆ. ಮೆಂಬರಾಗಿದ್ದ ರಾಮಕ್ಕಗ ಒಂದ್ಸಲ ಅಧ್ಯಕ್ಷರಾಗೋ ಯೋಗವು ಬಂದು ಅದು ಅವುಳ ಗಂಡ ಸೋಮಣ್ಣನ ಒಂತರಾ ಎಮ್ಮೆಲ್ಲೆನೇ ಮಾಡ್ಬುಡ್ತು. ತನ್ನ ತೊಟ್ಟಿಮನಿ ಮುಂದ್ಕ ಎಮ್ಮೆಲ್ಲೆ ಜೊತ್ಗ ತಾನು ನಿಂತ್ಗಂಡಂಗೆ ಕಂಪ್ಯೂಟರ್ನಾಗೆ ಪೋಟಾವ ಮಾಡ್ಸಿ ದೊಡ್ಡಕೆ ಹಾಕಿಸ್ಕಂಡು ಊರ ಬಾಯ್ಕಾರರ ಬಾಯ್ಕಟ್ಟಿಸಿದ್ದ.***

ಊರಂಬುದು ಆಗಾಗ ಮಯ್ನೆಲ್ಲಾ ಕೊಳ ಮಾಡಿಕೊಂಡು ಅದನ್ನ ಎತ್ತಾಕಲು ಚನ್ನಿ ಮತ್ತವುಳ ಗಂಡ ಚಂದಪ್ಪಗ ಊರಾಚ್ಗೊಂದು ಗುಡ್ಲು ಕಟ್ಟಸಿಕೊಟ್ಟು ಮಡಿಕಂಡದ. ಆ ಹಟ್ಟಿಯೋ, ಅದರ ಒಡೆಯರಾದ ಚನ್ನಿ–ಚಂದಪ್ಪ ಬದುಕಾಕ ಪಡೋ ಪಾಡನ್ನ ನೋಡಲಾರದೆ ಒಂಜಿನ ಸುಸೈಡ್ ಮಾಡಿಕೊಳ್ಳಲು ತಯಾರಿ ನಡೆಸಿತ್ತು. ಅದಕ್ಕಾಗಿ ಗಾಳಿಮಳ ಬರ್ಲಿ ಅಂದ್ಕಂಡು ಕಾಯ್ಕಂಡದ. ಅದಕ್ಕ ಏನೋ ನಂಜನಗೂಡ ದಿಕ್ಕುಗ ನೋಡದೆಯೆ ಮಳ ಓಡ್ಕೊಂಡೊಯ್ತದ. ಆ ಅರೆಜೀವದ ನೆಳ್ಳಿನಾಗ ಆ ಗಂಡ–ಹೆಂಡ್ತೀರು ಆಗಾಗ ಹಸ್ಕಂಡು ಆಗಾಗ ಉಂಡ್ಕಂದು ಬದುಕನ್ನ ದಬ್ಬಾಕಕ ಬಿಡದೆ ದಬ್ಬಿಸಿಕೊಂಡೋಯ್ತರ.ಹೀಗಿರುವಾಗೊಮ್ಮೆ ಸೋಮಣ್ಣನೋರ ಹಟ್ಟಿಯಲ್ಲೊಂದು ಹಸು ತೀರ್ಕಂಡು ಅದು ಚಂದಪ್ಪನ ಗುಡ್ಲಿಗೂ ಸುದ್ದಿಯಾಯಿತು. ಅಂದ್ರ ಇನ್ನೊಂದ್ ತಿಂಗ್ಳುಗಂಟ ಬಾಡು ತಿನ್ಬೌದು ಅಂದ್ಕಂಡು ಚನ್ನಿ ಅತ್ತಗ ನಡದಳು. ಅವುಳಿಗೇ ಕಾದಿದ್ದಂಗೆ ಆ ಹೆಣವು ಬಿದ್ಕಂಡಿತ್ತು. ಚನ್ನಿನ ನೋಡ್ದಂತ ಸೋಮಣ್ಣ ಚನ್ನಿ ನಂ ಮುಂದ ಇದ್ನ ಕುಯ್ಬ್ಯಾಡ. ಎಲ್ಡಾಳು ತಿಪ್ಗ ತಂದಾಕ್ತಾರ. ಆಮ್ಯಾಕ ಬಾಡು ಬುಡಿಸ್ಕವೋಗು ಅಂದ್ರ, ಚನ್ನಿ ಆಯ್ತಳಿ ನಿಮ್ಮೆಸ್ರು ಹೇಳ್ಕಂಡು ಬದುಕ್ತೀವಿ ಅಂದು ಚಂದಪ್ಪನ್ನ ಕರಿಯಾಕಂತೇಳಿ ಗುಡ್ಲಿಗ ಬಂದ್ರ ಅಂವ ಬಾಡು ಬುಡ್ಸಾಕ ತಯಾರಾಗಿದ್ದ.ತಿಪ್ಪೆ ಅಂಬೋ ಆ ಹೇಲುಗೇರಿಯ ಅತ್ತತ್ತಗ ಎಸೆದು ಹೋಗಿದ್ದಂತ ಹಸೂನ ಹೆಣದ ಮ್ಯಾಲೆ ಇವರಿಗಿಂತ ಮುಂಚೆ ನೊಣಗಳು ತಲುಪಿಯಾಗಿತ್ತು. ಚಂದಪ್ಪ ಬೇಲಿಮ್ಯಾಗಣ ಕಡ್ಡಿಗಳ ಕಡದು ನಾಕ ಮೂಲಿಗೆ ನಾಕ ನೆಟ್ಟು ನಾಕ ಅದರಮ್ಯಾಗ ಅಡ್ಡಾಕಿ ಹಗ್ಗ ಬಿಗಿದನು. ಹೆಣದ ಕತ್ತ ಕೂದರ ರಕ್ತಾವು ಬೋರ್ ಕೊರೆವತ್ತಿಗೆ ಮಿಷಿನ್ನ್ ಆಳಕ್ಕೊದ್ರ ನೀರು ಮ್ಯಾಲಕ್ಕ ಚಿಮ್ಕಂಡು ಬತ್ತದಲ್ಲ ಹಾಂಗ ಕುಡುಗೋಲನ್ನ ತೊಯ್ಯಿಸ್ಗಂಡು ಹರಿದು ಮಣ್ಣಾಗತೊಡಗಿತ್ತು. ಹಸ ಮಯ್ಯಿಂದ ತೊಗಲ ಬುಡಿಸಿ ರಕ್ತದೊಳಗ ಅವುಸ್ಕಂಡಿದ್ದ ಬಾಡ ಮಾಲೆ ಮಾಲೆಯಾಗಿ ಬುಡಿಸ್ತಿದ್ರ ಗಂಡ–ಹೆಂಡ್ತೀರ ಮಯ್ಕಯ್ಗ ರಕ್ತಾವು ಮೆತ್ಗಂಡು ಅವರಿಬ್ಬರೂವಿ ರಣರಂಗದಲ್ಲಿ ಕುಡುಗೋಲ ಹಿಡಿದು ಹೋರಾಡುವ ಯಾವುದೋ ಬುಡುಕಟ್ಟು ಯೋಧರ ತರವಾಗಿ ಕಾಣುತ್ತಿದ್ದರು. ಹಸ ಮೈಮ್ಯಾಗ ಹಾರಾಡ್ಕೊಂಡಿದ್ದ ನೊಣಗಳೀಗ ಅವರಿಬ್ಬರ ಮ್ಯಾಲ ದಾಳಿಯಿಟ್ಟವು. ಅವುಗಳ ಓಡಿಸುತ್ತಾ ಬಾಡ ಮಾಲೆ ಬುಡಿಸುತ್ತ ಅದ ನಾಕ ಮೂಲಿಯ ಗರ್ಭಗುಡಿಯಂತಿದ್ದ ಪೌಳಿಯ ಮೇಲಾಕಿ ಒಣಗಿಸುತ್ತಿದ್ದರ, ಆ  ಮಾಲೆಗಳೋ ಜಾತ್ರೆಯಲ್ಲಿ ಅಲಂಕಾರಕ್ಕಂತ ಬುಟ್ಟಿರೋ ಲೈಟಿನ ಮಾಲೆಗಳ ತರವಾಗಿ, ಕುಡುಗೋಲು ಹಿಡಿದಂತ ಚನ್ನಿ–ಚಂದಪ್ಪ ನಾಕ ಮೂಲಿಗಳ ಗರ್ಭಗುಡಿಯ ಕಾವಲಿಗೆ ಬಾಗಿಲಾಚೆ ನಿಂತು ರಕ್ತ ಹರಿಸುವ ನಂಬಿಕಸ್ತ ಬಂಟರಂತೆ ಕಾಣಿಸುತ್ತಿದ್ದರು. ಹೆಣದ ಮೂಳೆಗೆ ಅಂಟ್ಕಂಡಿದ್ದಂತ ಬಾಡನ್ನೆಲ್ಲ ಬುಡಿಸ್ಗಂಡು ಮೂಳೆನೆಲ್ಲ ಅದೇ ತಿಪ್ಯಾಗ ಹೂತಾಕ್ಬುಟ್ಟು ಬಾಡಿನ ರಕ್ತವು ಭೂಮಿಗ ಇಳಿಯೋಗಂಟ ಕಾದು ಸಂಜಿ ಮಾಡಿಕೊಂಡು ಹಟ್ಟಿಗ ಬಂದರು.ದಿನವೂ ಬರುವ ಬಿರು ಬಿಸಿಲಿಗ ಕಾದು ಬಾಡೆಲ್ಲ ಒಣಗಿದವು. ಒಣಗಿ ಒಣಗಿ ಬಾಡು ಗಟ್ಟಿಯಾದ ಮೇಲೆ ಡಬ್ಬದೊಳಗ ತುಂಬಿಟ್ಟು ಅದನ್ನೇ ಉಣ್ತ ಆಗಾಗ ಬೇಜಾರನಿಸಿದರೂ ಹಸಿದ ಹೊಟ್ಟೆಗ ಆ ಬೇಜಾರು ಒಂದು ಇದಾಗದೆ ಕೊರಬಾಡನ್ನೇ ಉಣ್ತಿರುವಾಗೊಮ್ಮೆ ಚನ್ನಿ ಆಗಾಗ ಹೀಗೊಂದು ಹಸ ತೀರ್ಕಂಡ್ರ ಹೆಂಗಿರ್ತದಲ್ಲ! ಅಂದ ಚಂದಪ್ಪಗ ಚನ್ನಿ, ಥೂ ಮೂದೇವಿ ಏನಾದ್ರೂವಿ ಗೆಯ್ಯದ್ನ ನೋಡು ಅಂದಳು. ಈ ಊರ್ಜನ ಹೇಲ್ಬಾಚೋದನ್ನ ಬುಟ್ಟು ಇನ್ನ್‌ಯಾನಾ ಗೇಯ್ಮ ಕೊಟ್ಟಾರು ನಮ್ಗ? ಅಂತ ಚಂದಪ್ಪ ಹೆಂಡ್ತಿಗ ಮಾತಲ್ಲೆ ಹೊಡೆವಾಗ ಅವ್ವಾ... ಕುಡಿಯಾಕ ನೀರ್ ಕೊಡವ್ವಾ... ಅನ್ನುವ ಜೀವದ ಕಡೇ ಮಾತಂತ ಸಂಕಟವ ಕೇಳ್ಬುಟ್ಟು ಗಂಡ–ಹೆಂಡ್ತಿ ಹೊರಕ್ಕ ಬಂದ್ರು.

ಆ ಬೆಳ್ದಿಂಗಳ ರಾತ್ರಿಯೊಳಗ ಅಲ್ಲೊಬ್ಬ ಹುಣ್ಣಿಮೆಯಂತ ಹೆಣ್ಮಗಳು ತೇಲುಗಣ್ಣು ಮಾಡುತ್ತ ಇವರತ್ತ ನೋಡಿದ್ರ ಚಂದಪ್ಪ ಸರಕ್ಕನೆ ಒಳಕ್ಕ ನುಗ್ಗಿ ನೀರ್ತಂದು ಹೆಣ್ಮಗಳ ಬಾಯಿಗಿಟ್ರ ಚನ್ನಿ ತಡದು ಎಂತೋರ್ಮನಿ ಮಗಳೋ ಏನೋ ನಮ್ಮಟ್ಟಿ ನೀರಾ? ಅನ್ನೊ ಹೊತ್ಗ ಅವುಳು ನೀರು ಕುಡಿದಾಗಿತ್ತು. ಆ ಜೀವ ಸುದಾರಿಸ್ಗಂಡಿತು. ಚನ್ನಿಗ ಆ ಹೆಣ್ಮಗಳನ್ನ ನೋಡಿ ಕಣ್ಣಿಗ ಹಬ್ಬ ಆದಂಗಿತ್ತು. ನೋಡುತ್ತಲೇ ನಿಂತಳು. ಅವಳೇ ಒಳಬಂದ ಮೇಲೆ ಗಂಡ–ಹೆಂಡ್ತಿ ಒಳಕ್ಕ ಬಂದರು. ಏನಾರೂವಿ ತಿನ್ನಾಕ್ಕಿದ್ರ ಕೊಡವ್ವ ಮದ್ಯಾನ ಓದ್ಗಾಕ ಸುರುಮಾಡ್ದೋಳು ನಿಮ್ಮಟ್ಟಿ ಮುಂದ್ಕ ನಿಂತಿರೋದುಕವ್ವ ಅನ್ನೋ ಮಾತಿಗ ಚನ್ನಿ, ತಿನ್ನಾಕ ಕೊಡ್ಲೋ ಬ್ಯಾಡ್ವೋ ಅನ್ನುವ ಇಕ್ಕಟ್ಟಿಲ್ಲಿದ್ರ ಚಂದಪ್ಪ ‘ಕೊರಬಾಡು ಗಂಜಿ ಅದ ಮಗಳೆ’ ಅಂದನು. ‘ತಿನ್ನೋದು ಏನಾರೂವಿ ಕೊಡಪ್ಪ ಇಲ್ಲಂದ್ರ ಸತ್ತೋಯ್ತಿನಿ’ ಗೋಗರೆದಳು. ಬಾಯ ಮುಂದ ಮೊದಲ ಬಾರಿಗೆ ಬಂದಂತ ಬಾಡಿಗೆ ಮೈಜಾಡಿಸಿದರೂ ಹಸ್ಗಂಡಿದ್ದ ಹೊಟ್ಟ ಎಂತಕ್ಕೂ ತಯಾರಾಗಿತ್ತು. ಕೊರಬಾಡು ಹೊಟ್ಟ ಸೇರಿ ಮಗಳು ನಿದ್ದೆಯಾದಳು. ಚನ್ನಿ–ಚಂದಪ್ಪ ತಮ್ಮ ಮುಂದ ಇಷ್ಟೊತ್ತು ನಡ್ದದ್ದ ಅರಗಿಸಿಕೊಳ್ಳಲು ನಿದ್ದೆಯ ಮರೆತು ಕುಳಿತಿದ್ದರು.ಚನ್ನಿ: ಯಾನ ಈ ಮಗೀಗ ಎಷ್ಟ್ ವರ್ಸಾದ್ದು?

ಚಂದಪ್ಪ: ಅದ್ನೈದು ಅದ್ನಾರು ಆಗಿರ್ಬೋದಕಾ ಚನ್ನಿ.

ಚನ್ನಿ: ಬೆಳ್ದಿಂಗ್ಳ ತರಾ ಅವ್ಳೆ ಯಾವ್ದೋ ಅಯ್ನೋರಟ್ಟಿ ಕೂಸಿರ್ಬೇಕು

ಚಂದಪ್ಪ: ಯಾಕೀ ಕೂಸು ಓದಿಕಂಡ್ಬಂತು? ಊರ್ಬಿಟ್ಟು ನಮ್ಮಟ್ಟಿಗೇ ಬಂತ್ತಲ್ಲ!

ಅಂಬೋ ಸೋಜಿಗಕ್ಕ ಅವರಿಬ್ಬರು ಮೂಕರಾಗಿ ನಿದ್ದೆಯ ಮರೆತರೂ ಸೂರ್ಯ ಬೆಳಕ ಮಾಡಿ ಊರುಗ ಅಲ್ಲಿ ನಡೆದುದನ್ನು ತೆರೆದಿಟ್ಟು ಚನ್ನಿ ಗುಡ್ಲ ಮುಂದುಕ್ಕೆ ಊರೇ ಆ ಹೊಸ ಮಗಳ ನೋಡಾಕ ನೆರೆದಿತ್ತು. ಬಂದವರೂಗ ದೂರದಾಗೆ ತನ್ನ ತಂಗಿ ಹಟ್ಟೀಲಿ ಇಸ್ಕೂಲಿಗಂತ ಬಿಟ್ಟಿದ್ದ ತನ್ಮಗ ಅಂತೇಳೀ ಚನ್ನಿ ಕಳಿಸಿದ್ರೂನು ಅದನ್ನು ಊರು ನಂಬಾಕ ತಯಾರಿಲ್ಲ. ತಾನು ಈ ಹಟ್ಟಿಗ ಬಂದುದ್ಕ ಚನ್ನಿ–ಚಂದಪ್ಪ ಊರ ಜನಕ್ಕೆಲ್ಲ ಸುಳ್ಳು ಹೇಳಬೇಕಾಗಿ ಬಂದದ ಅಂದ್ಕಂಡು ಆ ಹೆಣ್ಮಗಿಗ ಬ್ಯಾಸರಾಗೇದ. ಆದರ ತಾನು ಬದುಕಾಕೆ ಗಂಡ–ಹೆಂಡ್ತೀರು ಹೇಳೋ ಸುಳ್ಳು ಸಹಾಯ ಆಗ್ತಿರೋದು ಅವುಳಿಗ ವಸಿ ಧೈರ್ಯ ತಂದಿತ್ತು. ನಾಕಾರು ದಿನ ವಾರ ಹುಡುಗಿಯ ಬಗ್ಗೆ ಕುತೂಹಲವ ಉಳ್ಸಕಂಡಿದ್ದ ಊರು ಬರಬರುತ್ತ ಸಹಜವಾಯಿತು.ಆ ಕೂಸು ತನ್ನ ಹಟ್ಟಿಗ ಹೊಂದಿಕೊಂಡದ್ದು ದುಡ ಮಾಡಿಕೊಂಡ ಚನ್ನಿ ‘ಕೂಸ ನಿನ್ನ್ ಹೆಸ್ರೇನು?’ ಅಂದ್ರ, ‘ನೀನೇ ಇಟ್ಬುಡು ಅವ್ವಾ’ ಎಂದಳು. ‘ಹಾಂಗಲ್ಲ ನನ್ಕಂದ, ನಾ ಯಾನೋ ಮಡುಗ್ತೀನಿ. ಇಷ್ಟಜಿನ ನಿಂಗೂ ಒಂದು ಹೆಸ್ರು ಇದ್ದದಲ್ಲ ಅದ್ನ ಕೇಳ್ದಿಕಾ ಕೂಸೆ’ ಎಂಬ ಚನ್ನಿಯ ದನಿಯ ಬೇಡಿಕೆಯಿಂದ ಅವಳಿಗ ತಪ್ಪಿಸಿಕೊಳ್ಳಲು ಆಗದೆ, ‘ಶಿವ ಮೊದ್ಲು ಬಂದಾನ ಆಮೇಲೆ ಕಣ್ಣಿದ್ದಾವ ಹೆಣ್ಣಾದ ಆ ನನ್ನ ಹೆಸ್ರೇಳಿದ್ರ ಜಾತಿ ತಿಳಿದವ್ವಾ! ಇಷ್ಟ’ ಅಂದು ಚನ್ನಿಯ ಮಡಿಲಾಗೆ ತಲಿಯಿಟ್ಟು ಅಳ್ತಾಳ. ‘ಒಗ್ಟು ಹೇಳ್ದೀಯಾ ನನ್ಕಂದ? ಚನ್ನಿಗೂ ಚಂದಪ್ಪಗೂ ಬಾಳಾಟದ ಒಗ್ಟ ಬುಡ್ಸೋದಾಗ್ನಿಲ್ಲ ಮಗಳೆ, ಇನ್ನ ಈ ನಿನ್ನ ಚಂದದ ಒಗ್ಟು ಬುಡ್ಸಾಕ್ಕಾದ್ದೆ? ಬುಡತ್ತಗೆ’ ಅಂದ್ಕಂಡು ಚನ್ನಿ ಮಗೀನ ತಲೆಯ ನೇವರುಸ್ತಾ ಇರ್ಬೇಕಾರ ‘ಹಂಗರ ನನ್ನ ಹೆಸ್ರೇನವ್ವಾ?’ ಮಗ ಕೇಳ್ತಾಳ. ‘ಹ್ಯಾಂಗೂ ಬೆಳ್ದಿಂಗ್ಳು ಇದ್ದಂಗಿದ್ದೀಯ ಮಗಳಾ ಬೆಳ್ಳಿ ಅಂತಿರ್ಲಿ’ ಅನ್ನೋ ಚಂದಪ್ಪನ ವಾಕ್ಷಕ್ಕ ಅಡ್ಬಂದು ಚನ್ನಿ, ‘ನೀ ಚಂದಪ್ಪ ನಾ ಚನ್ನಿ ನಂ ಮಗ ಚಂದ್ರಮ್ಮ ಅಷ್ಟೀಯಾ’ ಅಂದುದ್ಕ ಎಲ್ಲರ ತಲೆನೂ ಆಡಿ ಚಂದ್ರಮ್ಮ ಆಮ್ಯಾಕ ಚಂದ್ರಿ ಆದಳು.***

ಅಧಿಕಾರದ ಮದವೇರಿದ ಸೋಮಣ್ಣ ಊರ ಬೀಜದ ಹೋರಿಯಂತಾದ. ಅವನ ಕಾಮದಾಟವು ರಾಜಕೀಯದ ಬಿಳಿಯಂಗಿಯ ಮೇಲೆ ಒಂದಿಂಕ್ರ ಕಲೇನೂ ಮಾಡದೆ ಉಳಿಯಿತು. ಕೆಲವರಿಗದು ಕಂಡರೂ ಕಾಣದಾಯಿತು. ಹುಡುಕಿದ ಕೆಲವರಿಗ ಸಾಕ್ಷಿಗಳು ಸಿಗದಾಗಿ ಸೋಮಣ್ಣಗ ಸಲೀಸಾಯಿತು. ಸ್ವತಃ ಹೆಂಡ್ತಿ ರಾಮಕ್ಕಗ ತಾನು ಯಾಕಾರ ಗೆದ್ದೆನೋ ಅನ್ನಿಸಿ ಸಂಸಾರವೇ ಬೇಸರ ತಂದಿತ್ತು. ಪಂಚಾಯ್ತಿ ಇಲೆಕ್ಸಾನ್ನಾಗೆ ಗೆದ್ದು ಅಧಿಕಾರವ ಗಂಡನ್ಕಯ್ಗ ಧಾರೆಯೆರೆದು ಕೊಡುವಾಗಲೇ ಸಂಸಾರವನ್ನೂ ಜೊತ್ಗ ಎರೆದಂತಾಗಿತ್ತು. ಸೋಮಣ್ಣ ಪಂಚಾಯ್ತಿ ಮೆಂಬರು ಚಿಕ್ಕೀರವ್ವನ್ನ ಮಡಿಕಂಡದ್ದ ಊರು ಮಾತಾಡಿಕೊಂಡು ರಾಮಕ್ಕನ ಅಡುಗೆ ಮನೆಗೂ ತಲುಪಿಸಿತು. ಒಂಜಿನ ಅವುಳ ಮನೆಗ ಹೊಸದಾಗಿ ಬಂದಿದ್ದ ಗ್ಯಾಸು ಸಿಡಿದು ರಾಮಕ್ಕ ಅರೆಸುಟ್ಟು ಆಸ್ಪತ್ರೆ ಪಾಲಾದಳು.***

ಒಂದೆ ಸಮಗ ಬಾಡು ತಿಂದದ್ಕ ಎನೋ ಚಂದ್ರಿಗ ಹೊಟ್ಟಕಳ್ತ ಬಂದು ಬಿಸಿಲೊತ್ತಿನಾಗ ಬಳ್ಳಾರಿಗಿಡದತ್ತಗ ತಿಪ್ಗ ಅಂತ ಹೋದಾಗ ಅಲ್ಲಿ ಸೋಮಣ್ಣನ್ನೂ ಊರ ಹೆಂಗಸೊಬ್ಬಳನ್ನ ಕಾಣಬಾರದ ಸ್ಥಿತೀನಲ್ಲಿ ಕಂಡು ಬೆಚ್ಗಂಡು ಓಡ್ಬರಬೇಕಾರ ಅಂವ ಚಂದ್ರೀನ ಕಂಡ್ಬುಟ್ಟ!

ಸೋಮಣ್ಣನ ಹಟ್ಟಿ ದಿಕ್ಕಿಂದ ಬಂದ ಕರೆಗ ಭಯಗೊಂಡ ಚನ್ನಿ ಅನುಮಾನದ ಹೆಜ್ಜೆಯಲ್ಲೇ ಅತ್ತಗ ನಡೆದಳು. ಚನ್ನಿಗೇ ಕಾಯ್ಕಂಡಿದ್ದ ಸೋಮಣ್ಣ ‘ಇದ್ಯಾಕ ಚನ್ನಿ ಕೂಸ್ನೂ ಕರ್ಕಂಬರದಲ್ವೆ?’ ಅಂದ್ರ, ಚನ್ನಿ ‘ಯಾಕಳಿ ನನ್ಮಗ ಯಾನಾರೂವಿ ತಪ್ಪ ಮಾಡಿದ್ದ?’ ಅಂತ ಭಯಗೊಂಡಳು. ಅಂವ ಅದಕ್ಕ ಜೋರಾಗಿ ನೆಂಗ್ನಾಡಿ ‘ಚನ್ನಿ ನಿಂಗೊಂದು ಒಳ್ಳೆ ಸುದ್ದಿಯ ಕೊಡಾವ ಅಂದ್ಕಂಡು ಕರಿಸ್ಗಂಡಿ. ನಿಂಗ ಹೊಸ್ಮನಿ ಕೊಡುಸ್ತೀನಿ’ ಅಂದಂತ ಮಾತಿಗ ಚನ್ನಿ ಅವಗ ಕಾಲ್ಮುಗುದು ಮಾತ ಮರೆತ್ಗಂಡಳು. ನಾಳಕ ಪಂಚಾಯ್ತಿತಕ್ಕೆ ನೀನು ಚಂದಪ್ಪ ಬಂದ್ಬುಡಿ ಅಂದ್ಬುಟ್ಟು ಸೋಮಣ್ಣ ಒಳಕ್ಕ ಹೋಗ್ಬೇಕು ಅನ್ನೋವಾಗ ಚನ್ನಿ ‘ಅವ್ವಾರು ಹೆಂಗವ್ರಳಿ?’ ಅಂದುದ್ಕ ಅಂವ ಕಣ್ಣ ಮೆಡರಿಸಿಕೊಂಡು, ‘ಅವ್ಳೆ ಇನ್ನೂವಿ’ ಅಂದು ಒಳಕ್ಕ ನಡೆದನು. ತಾನು ಯಾಕಾರ ಅವ್ವಾರ ಸುದ್ದಿ ಕೇಳಿದ್ನೋ ಅಂದ್ಕೊಂಡು ಬ್ಯಾಜಾರಿಂದ ಹಟ್ಟಿದಿಕ್ಕುಕ ಹೆಜ್ಜೆ ಕಿತ್ತಿಟ್ಟಳು.ಚನ್ನಿ–ಚಂದಪ್ಪಗ ನಾಳ ಅಂಬೋ ಬೆಳಕು ಮೂಡುವ ಗಳುಗ್ಗ ತಮ್ಮಟ್ಟಿ ಇದ್ದ ಜಾಗುದಾಗೆ ಅರ್ಮನ ಮೂಡಿರ್ತದ. ತಾವು ರಾಜ–ರಾಣಿ ತರ, ತಮ್ಮಗಳು ಚಂದ್ರಿ ರಾಜರ್ಮಗಳ ತರಾವಿ ಆ ಅರ್ಮನಾಲಿ ಓಡಾಡಿಕೊಂಡ ಚಿತ್ರಗಳು ಬ್ಯಾಡಂದ್ರೂವಿ ಕಣ್ಮುಂದಕ್ಕ ಬಂದೂ ಬಂದು ನಿದ್ದೆಯ ಅಪಹರಿಸಿದವು. ಇಲ್ಲಿ ಚಂದ್ರಿಗ ಸೋಮಣ್ಣ ಮತ್ತ ಆ ಹೆಂಗಸ್ನೂವಿ ಕಂಡ ಚಿತ್ರ ಕಣ್ಮುಂದದ. ಆ ಚಿತ್ರಗಳು ತನ್ನಟ್ಟಿಯ ನೆನಪುಗಳ ಕೆದಕಿ ಅವಳ ಕಣ್ಮುಂದಿಟ್ಟವು. ಇಂದು ತನ್ಕತಾನ ಅವ್ವನ ಜೊತ್ಗ ಹೇಳ್ಕೋಬೇಕು ಅನ್ನಿಸಿದರೂ ಗಂಡ–ಹೆಂಡ್ತೀರ ಹೊಸಮನಿ ಸಂಬ್ರಮವ ನನ್ಕತಾ ಉಂಡಿಸಿಬಿಡ್ತದ ಅಂದ್ಕಂಡು ಸುಮ್ಮಗಾದಳು.ನಾಳ ಅಂಬೋದು ಹುಟ್ಟಿ ತಮ್ಮಟ್ಟಿ ಹಾಗೇ ಇದ್ದೂ ಅರ್ಮನ ಹುಡೀಕಂಡು ಗಂಡ-ಹೆಂಡ್ತಿ ಪಂಚಾಯ್ತಿ ದಿಕ್ಕ ನಡೆದರು. ಚಂದ್ರಿ ಮನೆತಕ್ಕೆ ನೀರಿಡಕಂಡು ಬಟ್ಟ ತೊಳದು ಸ್ನಾನ ಮಾಡ್ಕಂಡು ಬಿಸಿಲಿಗ ಕೂದಲ ಒಣಗಿಸ್ತ ಕೂತಿರ್ಬೇಕಾರ ಸೋಮಣ್ಣ ಅಲ್ಲುಗ ಬಂದನು. ದಿಗಿಲಾಗಿ ಗುಡ್ಲ ಸೇರ್ಕಂಡಳು. ಸೋಮಣ್ಣ ‘ಇದ್ಯಾಕಮ್ಮಿ ಅವುಸ್ಕಂಡಿ? ನಾ ಏನೂ ಮಾಡಂಗಿಲ್ಲ ಬಾಯಿಲ್ಲಿ’ ಅಂದರೂ ಚಂದ್ರಿ ಮಾತಾಡ್ನಿಲ್ಲ. ‘ಅಲ್ಲಕಣಮ್ಮಿ ನೆನ್ನೆ ನೀ ಕಂಡಿದ್ಕ ಬೆಚ್ಗಂಡಾ? ನನ್ನೆಂಡ್ರು ಹಾಸ್ಗೆ ಹಿಡ್ದವ್ಳೆ ಅವುಳ್ಗಂಡ ಕೊಡಗ್ಗೋಯ್ತನ. ಕೇಳ್ದಿ. ಕಾಸ್ಕೊಟ್ಟಿ. ಮುಗಿತು’ ಅಂದು ಭಂಡತನವನ್ನು ತೋರಿಸಿಕೊಂಡರೆ ಇತ್ತ ಚಂದ್ರಿ ‘ಮಗಳ ಸಮಕ್ಕಿರುವ ನಂಗ ಹೆಂಡ್ತಿತರ ಕರಿತವ್ನಲ್ಲ!’ ಅಂದು ಭಯಗೊಂಡಳು. ಆ ಕಡಾಲಿಂದ ಯಾವ ಉತ್ತರವೂ ಬಾರದೆ ಸೋಮಣ್ಣಗ ಕ್ವಾಪತ್ಗಂಡು ‘ಏ ಲೌಡಿ ನಾ ಊರಿಗೆ ಯಜಮಾನ. ಚನ್ನಿ–ಚಂದಪ್ಪ ನನ್ಕಂಡ್ರ ನಡುಗ್ತವ್ರ. ಊರಾಗ ಯಾರೂವಿ ನಾ ಹಾಕಿದ ಗೆರ ದಾಟೂದಿಲ್ಲ. ನೀ ನೋಡಿದ್ರ ಹೊರಕ್ಕ ಬತ್ತಿಲ್ಲ ಅಂದ್ರ ನಿಂಗೆಷ್ಟ್ ಕೊಬ್ಬಿರ್ಬೇಕು. ಬರ್ತೀಯೋ ಇಲ್ಲ ನಿಮ್ಮೂರ್ಗ ತಿಳಿಸ್ಲೋ?’ ಅಂದು ಬುಸುಗುಟ್ಟಿದನು. ಅದಕ್ಕ ಹೊರಗ ಓಡ್ಬಂದ ಚಂದ್ರಿ ‘ಅದೊಂದ ಮಾಡ್ಬ್ಯಾಡಿಕಾ ಸ್ವಾಮಿ’ ಅಂದು ಬೇಡಿದಳು. ಸೋಮಣ್ಣಗ ತನ್ನ ತಂತ್ರದಿಂದಾಗಿ ಚಂದ್ರಿ ಅನ್ನೋ ಸುಂದರಿಯ ಜುಟ್ಟು ಕಯ್ಗ ಸಿಕ್ಕಿ ಹಿಗ್ಗಿದನು.ಅರ್ಮನದ ಕನಸೇ ಚನ್ನಿ–ಚಂದಪ್ಪನ್ನ ಪಂಚಾಯ್ತಿತಕ್ಕೆ ತಂದು ಎಸೆದುಬಿಟ್ಟಿತ್ತು. ದಿನದ ಬಿಸಿಲಿಗ ಮುಪ್ಪಾದರೂ ಸೋಮಣ್ಣನೆಂಬ ಅರ್ಮನದ ಕನಸಕೊಟ್ಟವನು ಮಾತ್ರ ಅತ್ತಗ ಬಾರದಾದ. ಗಂಡ–ಹೆಂಡ್ತಿ ತಳಾರಕ್ಕೆದ್ದು ಹಟ್ಟಿದಿಕ್ಕ ಕಾಲೆಳೆದರು. ಬಂದೆಲ್ಡು ವರ್ಸಾದ್ರೂವಿ ಚಂದ್ರಿ ಮೊಕ ಬಾಡಿದನ್ನ ಅವರಿಬ್ಬರು ಕಂಡೇ ಇಲ್ಲ. ಆದ್ರ ಇಂದು ಬೆಳದಿಂಗಳು ಬಾಡಿ ಕಣ್ಣೀರು ಧಾರೆಯಾಗಿತ್ತು. ಇದ್ಯಾಕ ನನ್ಕೂಸೆ ಯಾನಾಯ್ತೂ ನನ್ಕಂದ? ಇಬ್ಬರೂ ಗಾಬರಿಯಾದರು. ಯಾರಾದ್ರೂ ಏನಾದ್ರೂ ಅಂದ್ರ ಚಂದವ್ವ? ಚಂದಪ್ಪ ಮತ್ತೆ ಕೇಳಿದ. ಕೂಸು ಅಳ್ತಾನೇ ಇತ್ತು. ಒಳಕ್ಕಿದ್ದ ಅಕ್ಕಿ ಸಾಮಾನ ಕಂಡ್ಬುಟ್ಟು ಬೆಚ್ಕಂಡು ಯಾರ್ಬಂದಿದ್ರು ಕೂಸೆ? ಅಂತಾರ. ಚಂದ್ರಿ ಅವ್ವನ ಮಡಿಲಾಗೆ ತಲವ ಇಟ್ಟು ಸೋಮಣ್ಣ ಅಂದು ಗೋಳೆಂದಳು. ತಮ್ಮ ಕಂದನ ಮ್ಯಾಲ ಪಾಪಿಯ ಕಣ್ಣು ಬಿದ್ದದ್ಕ ಆ ಗಂಡ–ಹೆಡ್ತೀರು ನಡುಗಿ ಹೋದರು. ಏನೂ ಮಾಡಲಾಗದೆ ಅತ್ತರು. ಮೂರ್ಜನವಿ ಅತ್ತರು. ‘ಯಾರಿಗೂ ಕಾಸಿಲ್ದೀಯಾ ಮನ ಕೊಡದಿದ್ದೋನು ನಾವು ಕೇಳ್ದೀಯಾ ಮನ ಕೊಡ್ತೀನಿ ಅಂದವ್ನಲ್ಲ ಆ ಪಾಪಿ, ಆಗ್ಲೀಯಾ ಯೇಚಿಸ್ಬೇಕಿತ್ತು ಚನ್ನಿ’ ಅಂದು ಚಂದಪ್ಪ ಸಂಕಟವ ತೋಡಿಕೊಂಡರೆ, ಚನ್ನಿ ಮಗೀನ ತಬ್ಬಿಕೊಂಡು ಮಾತಿಲ್ಲದವಳಾಗಿದ್ದಳು. ಊರಿಗೇ ಆವರಿಸ್ಕಂಡಿದ್ದ ಕತ್ತಲು ಚನ್ನಿ–ಚಂದಪ್ಪರ ಹಟ್ಟಿಯ ಕಣ್ಣೀರ ಯಾರಿಗೂ ಕಾಣಿಸದೆ ಭೂಮ್ತಾಯಿಗ ಉಣಿಸುತ್ತಿತ್ತು.ಬಾಡಿಂದ ರಕ್ತ ಇಳಿದೂ ಭೂಮ್ತಾಯ ಸೇರ್ಕಂಡಂಗೆ ಅವರ ಕಣ್ಣಿಂದಿಳಿದ ನೀರು ಆ ಮಣ್ಣ ಸೇರ್ಕಂಡು ತ್ಯಾವಾಗಿ ಆರ್ತಿರೋ ಆ ಗೌಗತ್ತಲ ಕಡ್ದು ಚಂದಪ್ಪ ಅಕ್ಕಿ ಸಾಮಾನುಗಳ ಹೊತ್ಕೊಂಡು ಊರಾಚ್ಗ ನಡೆದನು. ಎಲ್ಲವನ್ನೂ ಎಸೆದ ಚಂದಪ್ಪಗ ಅಕ್ಕಿಯ ಎಸೆಯಲು ಕಯ್ಬಾರದೆ ಹಿಂದ್ಕ ಬತ್ತಿರ್ಬೇಕಾರ ಕತ್ತಲಿನಾಗೆ ಯಾರೋ ಓದ್ಗಿದ್ಕಂಡು ಅಕ್ಕಿಯನಲ್ಲೇ ಬುಟ್ಬುಟ್ಟು ಹಿಂದ್ಕ ಓದಿಕೊಂಡೋಗಿ ನೋಡುದ್ರ ಚಂದ್ರಿ ಹಾಳುಬಾವಿ ತಕ್ಕೆ ನಿಂತ್ಗಂಡಿದ್ದಳು. ಎಂತಾ ಕೆಲ್ಸ ಮಾಡಾಕೋಗಿದ್ದೆ ಮಗಳಾ! ಚಂದಪ್ಪ ಮಗಳ ತಿರ್ಗ ಕರ್ಕಂಬಂದು ಅವಳ ಕಾಯ್ತಾ ಕಾಯ್ತಾ ನಿದ್ದೆಗೂ ತೂಕಡಿಕೆ ಬಂದು ಚಾಪೆಗ ವಾಲಿಕೊಂಡಿತು. ಚನ್ನಿ ಅತ್ತೂ ಅತ್ತು ನಿದ್ದೆಯಾಗಿದ್ದರ ಚಂದ್ರಿಗ ನಿದ್ದೆ ಬಾರದು. ಗಂಡ–ಹೆಂಡ್ತೀರು ಏನೂ ಕೇಳ್ದೀಯ ತಮ್ಮ ಮಡಿಲಾಗೆ ಮನದಾಗೆ ಜಾಗ ಕೊಟ್ರು. ಅದೇ ನಮ್ಮವ್ವ ಚಿಗಪ್ಪನ ಕಟ್ಕಂಡಳು. ಅಪ್ಪ ಕೊಡಗಿನಾಗೆ ಯಾರನ್ನೋ ಕಟ್ಕಂಡ. ನನ್ನ? ನಾ ಅವತ್ತೇಯ ಸಾಯ್ಬೇಕಾಗಿತ್ತು. ಇಲ್ಲ. ಸತ್ತಿದ್ರ ಈ ಅಪ್ಪ–ಅವ್ವ ಸಿಗತಿದ್ರಾ? ‘ಸೋಮಣ್ಣ ನಿನ್ನ ಕೊಂದ್ಬುಡ್ತೀನಿ, ಮುಂಡೆಮಗನ ನನ್ಕೂಸ ಬುಟ್ಬುಡು’ ಚೀರಿಕೊಂಡು ಚನ್ನಿ ಕನಸೊಡೆದೆದ್ದಳು. ಚಂದ್ರಿ ಚಂದಪ್ಪನೂ ಎದ್ದರು. ‘ಅವ್ವಾ ಅವ್ವಾ ನಂಗೇನೂ ಆಗಿಲ್ಲಕವ್ವ ನೋಡು’ ಎಂದು ಅವ್ವನ್ನ ತಬ್ಕಂಡು ಅತ್ತಳು.ಚನ್ನಿ: ಏನೂ ಆಗಿಲ್ವಾ ಕೂಸೆ?

ಚಂದ್ರಿ: ಹೂಂಕವ್ವ, ನಂಗಿದು ಹೊಸ್ದಲ್ಲ. ನಾ ಹುಟ್ಟಿದ್ದೇ ಇದ್ಕೇನೋ?

ಚಂದಪ್ಪ: ಅಂದ್ರ ಮಗಳ?

ಚಂದ್ರಿ: ನನ್ನಪ್ಪ ಕೊಡಗ್ಗೋಯ್ತನ. ಆರ್ತಿಂಗ ಊರ್ಗ ಬರಲ್ಲ. ಅವ್ವಾ, ಊರಾಗಿದ್ದು ಗೇಯ್ತಾಳ. ನಂ ಚಿಗಪ್ಪ ಹಟ್ಟಿಗ ಬರ್ತಿದ್ದ. ನಂಗೂ ತಿಂಡಿ ತಕ್ಕೋಡ್ತಿದ್ದ. ಆವಾಗಾವಾಗ ಬರ್ತಿದ್ದ ಚಿಗಪ್ಪ ಹಟ್ಟೀಲೆ ಉಳ್ಕತಿದ್ದ. ರಾತ್ರಿನಾಗೆ ಅವ್ವ ಚಿಗಪ್ಪ ಒಟ್ಗ ಮಲಿಕತ್ತಿದ್ರು. ಅಪ್ಪ ಬಂದ್ಮೇಲ ಹೇಳ್ಬೇಕು ಅಂತ ಕಾಯ್ತಿದ್ದೆ. ಒಂಜಿನ ಅಪ್ಪ ಬಂದ. ಬರ್ತ ಯಾವಳೋ ಹೆಂಗಸನ್ನೂ ಕರ್ಕಂಬಂದ. ಅವ್ವಂಗೂ ಅಪ್ಪಂಗೂ ಜಗಳ ಆಗಿ ಅಪ್ಪ ವಾಪಾಸ್ಸು ಕೊಡಗ್ಗೋದ. ನನ್ನೂ ಮಾತಾಡಿಸ್ನಿಲ್ಲ. ಅಪ್ಪ ಹೋಗಿದ್ದೆ ಅವ್ವ ಚಿಗಪ್ಪ ಮದ್ವ ಮಾಡ್ಕೊಂಡ್ರು. ನಾ ಹೈಸ್ಕೂಲಿಗ ಬಂದೆ. ಅವ್ವ ಕೆಲ್ಸಕ್ಕೋದ್ರ ಚಿಗಪ್ಪ ಹಟ್ಟೀಲೆ ಉಳ್ಕಂಡು ನನ್ನ ಮಯ್ಯೆಲ್ಲಾ ಮುಟ್ತಿದ್ದ. ಹೇಳಿದ್ರ ಕೊಂದಾಕ್ತೀನಿ ಅಂತಿದ್ದ. ಒಂಜಿನ ನನ್ನ ಕೆಡಿಸ್ಬುಟ್ಟ. ಆಮ್ಯಾಲ ಅವ್ವ ಇಲ್ದಾಗೆಲ್ಲ ಮಾಡಾಕ ಬರ್ತಿದ್ದ. ನಾ ಅತ್ರ ಅವ್ವ ಯಾಕ ಅಂತ ಕೇಳ್ತಿರ್ನಿಲ್ಲ. ಒಂಜಿನ ಧೈರ್ಯ ಮಾಡ್ಕೊಂಡೆ. ಚಿಗಪ್ಪ ಬಂದು ಬಟ್ಟ ತೆಗದು ನನ್ನ ಮೈಮ್ಯಾಗ ಬರೋತ್ಗ ಅವುಸಿಟ್ಗಂಡ ಚಾಕಿಂದ ಅವನ ಸಾಮಾನ ಕುಯ್ದು ಓದ್ಗಾಕ ಸುರುಮಾಡ್ದೋಳು ನಿಮ್ಮಟ್ಟಿ ಮುಂದ್ಕ ನಿಂತ್ಗಂಡಿದ್ದೆ.

.........?***

ಚನ್ನಿ–ಚಂದಪ್ಪನ ಹೆಬ್ಬೆಟ್ಟು ಒತ್ತಿಸಿಕೊಂಡ ಸೋಮಣ್ಣ ಯಾನೂ ಕೇಳ್ದೀಯಾ ತಳಪಾಯ ಹಾಕಿಸಿಯೇಬಿಟ್ಟ. ಮನಸ್ಸು ಚೂರಾದ ಚನ್ನಿ–ಚಂದಪ್ಪಗ ಅರ್ಮನ ಬೇಕಿರ್ನಿಲ್ಲ. ಹೊಸ್ಮನ ತಮ್ಮಗಳ ಜೀವ ಹೀರ್ತಾ ಮೇಲೆಕ್ಕೇಳ್ತಿರಾದ ನೋಡ್ದಾಗೆಲ್ಲ ಕಣ್ಣಾಗ ರಕ್ತ ಹನಿತಿತ್ತು. ‘ಆ ಕೂಸು ನಮ್ಮಟ್ಟಿಗ್ಬಂದು ಇಂತಾ ಪಾಡು ಪಡಂಗಾಯ್ತಲ್ಲ ಚನ್ನಿ’ ಎಂದು ಚಂದಪ್ಪ ಹೊಸ್ಮನ ಕಡೀಗ ಉಗದಿದ್ದ. ತಾನ್ಬಂದು ಅವರಿಬ್ಬರ ಕುಷಿಯನ್ನ ತೀರಿಸ್ಬುಟ್ಟೆನಲ್ಲಾ ಎಂದು ಚಂದ್ರಿ ಬ್ಯಾಜಾರಾಗಿರ್ತಿದ್ಲು. ಊರ ಕೊಳೆ ಎತ್ತಾಕ ಹೋದ್ರ ಜನ ಚನ್ನಿ–ಚಂದಪ್ಪರನ್ನ ಕಂಡು ಮುಸಿ ಮುಸಿ ನೆಗ್ತ ಘಾಸಿಗೊಳಿಸುತ್ತಿದ್ದರು. ಚಂದ್ರಿಗ ಇದನೆಲ್ಲಾ ಕಂಡು ಚನ್ನಿ–ಚಂದಪ್ಪರ ಬದುಕಿನಾಗ ತಾನು ಬರ­ಬಾರದಿತ್ತು ಅನಿಸಿ ಊಟ ನೀರು ಸೇರದ ಕುಂತ್ರ ಅವರಿಬ್ರೂವಿ ಉಣ್ಣದೆ ಉಳಿಯುತ್ತಿದ್ದರು. ಆ ಹಟ್ಟಿಯಾಗೆ ಮಾತು ಉಪವಾಸ ಹಿಡಿದವರಂಗ ಸುಮ್ಮಗಿತ್ತು. ಹೊಸ್ಮನಿ ವಿಚಾರಕ್ಕ ಚನ್ನಿ–ಚಂದಪ್ಪರನ್ನ ಎಲ್ಲೆಲ್ಲಿಗೋ ಕಳುಸ್ತ ಸೋಮಣ್ಣ ತನ್ನ ತಂತ್ರವ ಹಿಡ್ಕಂಡು ಚಂದ್ರಿಯ ಮೈಮುಟ್ಟತ್ತಿದ್ದ.

‘ಈ ಗಂಡಸರ ತೆವಲಿಗ ಜಾತೀನೆ ಇಲ್ವಾ ಅವ್ವಾ?’ ಚಂದ್ರಿ ಚನ್ನಿನ ಕೆದಕಿದಳು. ಚನ್ನಿಗೂ ಮಾತು ಬೇಕಾಗಿದ್ದವು. ‘ಇಲ್ಲ ನನ್ಕಂದ. ತಾಯಿಕರುಳು ಹೆಣ್ಣಿನೊಳಗದ ಮಗಳ’ ಅಂದು ಚನ್ನಿ ಮಗೀನ ತಬ್ಕಂಡು ಅತ್ತಳು. ಚಂದಪ್ಪ ಚನ್ನಿ ನಾವೀವೂರ ಬುಟ್ಟೋಗಾವ ಅಂದ್ರ ಬ್ಯಾಡಪ್ಪ ಸೂರ್ಯನಂತಾ ಸೂರ್ಯನೂ ಮುಳುಗೋಗ್ತಾನ ಅಂಬ ಚಂದ್ರಿಯ ಮಾತಿಗ ಗಂಡ–ಹೆಂಡ್ತಿ ಗೆಲುವಾದರು. ಒಂಜಿನ ಒಳ್ಳೆದಾಗ್ತದ ಮಗಳ ಅಂದ್ಕೊಂಡು ಮೊದಲಿನ ನಗುವ ಹಟ್ಟಿಯೊಳಗ ಚಲ್ಕಂಡು ಕತ್ತಲೂಗ ಕುಷಿಯಾಗೋವಷ್ಟು ಮಾತಾಡಿದರು. ‘ಅಪ್ಪಾ ಬಾಡು ತೀರ್ಸೋಗ್ತದ ನೋಡು’, ‘ನಾಳಕ ಯಾವ್ದಾರೂ ಹಸ ತೀರ್ಕಂಡ್ರ ಬುಡಿಸ್ಕ ಬತ್ತಿನಿ ತಗ’.***

ಚನ್ನಿ–ಚಂದಪ್ಪರನ್ನ ನಂಜನಗೂಡಿಗ ಪೋಟಾಕ್ಕಂತ ಕಳಿಸಿದ ಸೋಮಣ್ಣ ಚಂದ್ರಿತಕ್ಕೆ ಬಂದ. ಅವ ಬರ್ತಾನಂಬೋದು ಅವುಳಿಗ ತಿಳಿದಿತ್ತು. ಇಡೀ ಊರು ಸೋಮಣ್ಣನ ಈ ಕಳ್ಳಾಟವ ಮಾತಾಡಿಕೊಂಡರೂ ಅವಗ ಅದು ಗೊತ್ತಿದ್ದರೂ ಅದ್ನ ಬುಡ್ನಿಲ್ಲ. ತನ್ನೊಳಗಿದ್ದ ಎಲ್ಲಾ ಧೈರ್ಯವ ಕಯ್ಗ ತಂದುಕೊಂಡ ಚಂದ್ರಿ ತನ್ನ ಚಿಗಪ್ಪಗ ಮಾಡ್ದಂಗ ಮಾಡಿದಳು. ಆದರ ಈ ಸಲ ಚಂದ್ರಿ ಓಡ್ನಿಲ್ಲ. ನೋವಿಂದ ಚೀರಿಕೊಂಡು  ಸೋಮಣ್ಣ ಓಡಿದ್ದ. ಏನು? ಅಂತ ಕೇಳಿದರೂ ಹೇಳದೆ ಓಡಿ ಓಡಿ ದಾರೀಲಿ ಬಿದ್ದು ಹೋದನು. ಅವ್ನಿಗ ಬೇಕಾದ­ವ­ರ್ಯಾರೋ ಓಡಾಡಿ ನಂಜನಗೂಡ್ಗ ಕರ್ಕಂಡೋಗಿ ಅಲ್ಲಿಂದ ಮಯ್ಸೂರಿಗ ಹೋದರಂತೆ. ಸೋಮಣ್ಣ ಬದುಕೋದು ಕಷ್ಟ ಎಂದು ಊರೇ ಮಾತಾಡಿಕೊಂಡರೂ ಚಂದ್ರಿಯ ಬಗ್ಗ ಪೊಲೀಸರಿಗೆ ಯಾರೂ ದೂರು ನೀಡಲಿಲ್ಲ. ರಾಮಕ್ಕಗೂ ಇದು ತಲುಪಿ ‘ಆಗಲಿ ಬುಡಿ’ ಎಂಬಂತೆ ತಲೆಯಾಡಿಸಿದಳು. ನಂಜನಗೂಡಿಗ ಹೋದಂತ ಚನ್ನಿ–ಚಂದಪ್ಪಗ ಇದು ತಲುಪಿ ಅವರು ಊರೂಗ ಬಾರದೆ ಉಳಿದರು. ಎರಡು ದಿನ ಕಳೆದು ಸೋಮಣ್ಣನ ಹೆಣ ಊರಿಗ ಬಂತು. ಸತ್ತ ಮ್ಯಾಗ ಎಲ್ಲರೂ ಒಳ್ಳೆಯವರು. ಅವನ ಬಗ್ಗ ನಾಕು ಒಳ್ಳೆಯ ಮಾತಾಡಿ ಕಳಿಸಿಕೊಟ್ಟರೂ ಎಲ್ಲರಿಗೂ ತಿಳಿದಿದ್ದ ಈ ಸಾವಿನ ಮರ್ಮವ ಯಾರೂ ಬಿಡಿಸದೆ ಉಳಿದರು. ರಾಮಕ್ಕನ ದಿಕ್ಕಿಂದ ಚಂದ್ರಿಗ ಕರೆ ಬಂದರೂ ಹೋಗ್ನಿಲ್ಲ.ತಾನು ಮಾಡಿದ್ದು ತಪ್ಪು ಎಂದು ಅವಳಿಗೆ ಅನಿಸಲೇ ಇಲ್ಲ. ಅದಾದಮ್ಯಾಲ ಮನ ಕೆಲ್ಸಕ್ಕ ಯಾರೂ ಬರ್ನಿಲ್ಲ. ಚನ್ನಿ–ಚಂದಪ್ಪನೂ ತಿರ್ಗಬಾರದ್ದು ಚಂದ್ರಿಗ ಭಯತರಿಸಿತ್ತು. ಅಪ್ಪ–ಅವ್ವನಿಗಾಗಿ ಜೀವ ಹಿಡ್ಕೊಂಡಿದ್ದ ಚಂದ್ರಿ ಅವರನ್ನ ವಾಪಾಸ್ಸು ತರುವ ದಾರಿಗಾಗಿ ಕಾದಳು. ಬರ್ನಿಲ್ಲ. ಒಂಜಿನ ಡಬ್ಬದೊಳಗಿಂದ ಬಾಡು ತೆಗದು ಬೇಯಿಸ್ತಿರ್ಬೇಕಾದ್ರ ಬೆಂಕಿ ಬೆಳಕಲ್ಲಿ ದಿಗಿಲಾದ್ದು ತಾನು ಸೋಮಣ್ಣಗ ಸೋತದ್ದಕ್ಕಾಗಿ. ಅವಳೊಳಗೊಂದು ಜೀವ ಬೆಳೆಯತೊಡಗಿತ್ತು. ಒಂಜಿನ ಅದು ಈ ಲೋಕಕ್ಕ ಬತ್ತದ. ತನ್ಮುಂದ ಕೂತ್ಗಂಡು ಹೊಟ್ಟ ಹಸ್ಗಂಡು ಅಳ್ತದ ಅಂಬೋದು ನೆನದು ಚಂದ್ರಿ ಬೆವರಿದಳು. ಕೆಲ್ಸ ಹುಡಿಕಂಡು ನಂಜನಗೂಡ ದಿಕ್ಕುಗ ಹೋಗಿ ಬರತೊಡಗಿ ದಿನಗಳು ಬೆಳೆದರೂ ಚನ್ನಿ–ಚಂದಪ್ಪ ಬರ್ನೇ ಇಲ್ಲ. ಚಂದ್ರಿಗ ತಾನು ಅನಾಥೆ ಅನಿಸಿದ ದಿನ ರಾತ್ರನಗ ಹೊಟ್ಟ ಒಳ್ಗ ನೋವು ಕಾಣಿಸ್ಗಂಡು ತಡಿಯಾಕಾಗದೆ ರಾಮಕ್ಕನ ನೆನಸ್ಗಂಡು ಊರೊಳಗ ಓಡಿದಳು. ಅಳ್ಳೀಕಟ್ಟೆತಕ್ಕೆ ಬರ್ತಿದ್ದಂಗೆ ನೋವು ಹೆಚ್ಕಂಡು ಅಲ್ಲೆ ಮಲಿಕಂಡು ಚೀರಿದಳು.ರಾತ್ರಿ ಅಂಬೊದು ಆ ಊರ ಮೇಲೆ ಬಿದ್ದು ಕಪ್ಪಗಾಗುತ್ತಾ...

.... ಆ ಹೆಂಗಸು ತಾಯಿಯಾಗಿ ಈ ಲೋಕಕ್ಕ ಹೊಸದೊಂದು ದನಿ ಸೇರಿಕೊಂಡಿತು. 

ಪ್ರತಿಕ್ರಿಯಿಸಿ (+)