ಗುರುವಾರ , ಜುಲೈ 29, 2021
27 °C

ಕೊಲೆಗೆ ಹಣದ ಉದ್ದೇಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆ.ಪಿ.ನಗರದ ಲಕ್ಷ್ಮಿ ಲೇಔಟ್‌ನಲ್ಲಿ ಕೊಲೆಯಾಗಿದ್ದ ಡೆಲ್ ಬಿಪಿಓ ಕಂಪೆನಿ ಉದ್ಯೋಗಿ ಪಾಯಲ್ ಸುರೇಖಾ (29) ಅವರ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಕೊಲೆಯ ಹಿಂದಿನ ಉದ್ದೇಶ ಹಣವಲ್ಲ ಎಂದು ಖಚಿತವಾಗಿದೆ.ಹಣ- ಚಿನ್ನಾಭರಣ ದೋಚುವ ಉದ್ದೇಶದಿಂದ ಈ ಕೊಲೆ ಮಾಡಿರಬಹುದು ಎಂದು ಮೊದಲು ಶಂಕಿಸಲಾಗಿತ್ತು. ಆದರೆ ಸುರೇಖಾ ಪೋಷಕರು ಮತ್ತು ಪತಿ ಮನೆಗೆ ಬಂದು ನೋಡಿದ ನಂತರ ಆಭರಣ ಹಾಗೂ ಹಣ ದೋಚಿಲ್ಲ ಎಂದು ಗೊತ್ತಾಗಿದೆ.ಆರೋಪಿ ಮೊದಲೇ ಸಂಚು ರೂಪಿಸಿ ಚಾಕು ಹಾಗೂ ಹಗ್ಗವನ್ನು ಜತೆಯಲ್ಲೇ ತೆಗೆದುಕೊಂಡು ಬಂದು ಈ ಕೃತ್ಯ ಎಸಗಿದ್ದಾನೆ. ಆತ ಹಗ್ಗದಿಂದ ಅವರ ಎರಡೂ ಕೈಗಳನ್ನು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿಯು ಅವರ ಎಡ ಸ್ತನದ ಸುತ್ತ 11ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಚಾಕು ಮತ್ತು ಹಗ್ಗವನ್ನು ಆರೋಪಿ ಮನೆಯಲ್ಲೇ ಬಿಟ್ಟು ಹೋಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.ಸುರೇಖಾ ಈ ಹಿಂದೆ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಬ್ಯಾಂಕ್‌ನಲ್ಲೇ ಉದ್ಯೋಗದಲ್ಲಿದ್ದ ಯುವಕನೊಬ್ಬ ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸುರೇಖಾ ತಂದೆ ದೀನ್ ದಯಾಳ್ ಮತ್ತು ತಾಯಿ ಕಾಂತಾ ದೇವಿ ಅವರು ಅಳಿಯನ ಮೇಲೆ ಅನುಮಾನ ಬರುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದರಿಂದ ಪೊಲೀಸರು ಆ ಹಿನ್ನೆಲೆಯಲ್ಲೂ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಸಂಭಾಷಣೆಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸುರೇಖಾ ಪತಿ ಮಿಶ್ರಾ ಅವರು ಕೊಲೆ ನಡೆದ ವೇಳೆ ಒಡಿಶಾದಲ್ಲಿದ್ದರಿಂದ ಅವರ ಫೋನ್ ಕರೆಗಳ ಮಾಹಿತಿ ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಡೆಲ್ ಕಂಪೆನಿಯ ಹತ್ತಾರು ಉದ್ಯೋಗಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ಅವರ ಭಾವಚಿತ್ರಗಳನ್ನು ಪಡೆದುಕೊಂಡಿದ್ದಾರೆ. ಕೊಲೆಯಾದ ದಿನ ಸುರೇಖಾ ಅವರ ಮನೆಗೆ ಬಂದಿದ್ದ ವ್ಯಕ್ತಿಗಳನ್ನು ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಸಹೋದ್ಯೋಗಿಗಳು ಯಾರಾದರೂ ಬಂದು ಈ ಕೃತ್ಯ ಎಸಗಿರುವ ಸಾಧ್ಯತೆ ಇರುವುದರಿಂದ ಈ ರೀತಿ ಭಾವಚಿತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಡಿ.17ರಂದು ದುಷ್ಕರ್ಮಿಗಳು ಸುರೇಖಾ ಅವರ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.