ಶನಿವಾರ, ಫೆಬ್ರವರಿ 27, 2021
22 °C
ಯೋಜನೆ ಪೂರ್ಣಗೊಳ್ಳಲು ರೂ.110ಕೋಟಿ ವೆಚ್ಚ ಅಂದಾಜು

ಕೊಳಚೆ ನೀರು ಶುದ್ಧೀಕರಿಸಿ ಕೃಷಿಗೆ ಬಳಕೆ

ಟಿ.ಬಸವರಾಜ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳಚೆ ನೀರು ಶುದ್ಧೀಕರಿಸಿ ಕೃಷಿಗೆ ಬಳಕೆ

ಶಿವಮೊಗ್ಗ:  ನಗರದ ಕೊಳಚೆ ನೀರನ್ನು ನದಿಗೆ ಬಿಡುವ ಬದಲಾಗಿ, ಅದನ್ನು ಶುದ್ಧೀಕರಣ ಮಾಡಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ವಿನಿಯೋಗಿಸುವ ಮಹತ್ವದ ಯೋಜನೆಯೊಂದನ್ನು ಸರ್ಕಾರ ಕೈಗೆತ್ತಿಗೊಂಡಿದೆ.ಈ ಯೋಜನೆಗಾಗಿ 2005–2006ರಲ್ಲಿ ರೂ.60ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಯೋಜನೆ ಪೂರ್ಣಗೊಳ್ಳಲು ಸುಮಾರು ರೂ.110ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.ಈ ಯೋಜನೆಯಿಂದ ಪ್ರತಿಯೊಂದು ವಾರ್ಡ್ ನಿಂದ ಬರುವ ಕೊಳಚೆ ನೀರನ್ನು ಮೂರು ವಿಧಗಳಲ್ಲಿ ಬೇರ್ಪಡಿಸಲಾಗುತ್ತದೆ. ನಂತರ ಬೇರ್ಪಟ್ಟ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಬಹು ದಾಗಿದೆ. ಇದರ ಕಾರ್ಯಾಚರಣೆಗಾಗಿ ನಗರದ ಐದು ಕಡೆಗಳಲ್ಲಿ ಅಂದರೆ, ದೇವಂಗಿ ತೋಟದ ಬಳಿ, ತ್ಯಾವರೆಚಟ್ನಳ್ಳಿ, ಸೀಗೆಹಟ್ಟಿ, ಆಟೊ ಕಾಂಪ್ಲೆಕ್ಸ್ ಹಾಗೂ ಪುರಲೆ ಬಳಿ ಚರಂಡಿ ನೀರು ಶುದ್ಧೀಕರಣಕ್ಕಾಗಿ ಸುಮಾರು ಸುಮಾರು 30ಅಡಿ ಪಂಪ್ ಹೌಸ್ ಬಾವಿಗಳನ್ನು ನಿರ್ಮಿಸಲಾಗುತ್ತಿದೆ.ಮೊದಲನೆಯದಾಗಿ ಅರಣ್ಯ ಇಲಾಖೆ ಕಚೇರಿ ಹಿಂಭಾಗದ ದೇವಂಗಿ ತೋಟದ ಬಳಿ ಯೋಜನೆಯ ಕಾಮಗಾರಿ ಪ್ರಾರಂಭವಾಗಿದ್ದು, ಕೊಳಚೆ ನೀರು ಸಂಗ್ರಹಗಾರ, ಕಸ ಬೇರ್ಪಡಿಸುವ ಕಟ್ಟಡಗಳು ಸೇರಿದಂದೆ ಹಲವು ಕಾಮಗಾರಿಗಳು ಚಾಲ್ತಿಯಲ್ಲಿವೆ.ಅಮೀರ್ ಅಹ್ಮದ್ ವೃತ್ತ, ಬಸವೇಶ್ವರ ನಗರ, ಅಶ್ವತ್ಥ್ ನಗರ, ಕೃಷಿನಗರ, ವಿನೋಬನಗರ, ಪಿಎನ್ ಟಿ ಕಾಲೊನಿ, ವಿವೇಕಾನಂದ ಬಡಾವಣೆ, ಗಾಡಿಕೊಪ್ಪ, ಆರ್ಎಂಎಲ್ ನಗರ, ಟಿಪ್ಪುನಗರ ಹಾಗೂ ಹಳೇ ಶಿವಮೊಗ್ಗ ಭಾಗದ ಚರಂಡಿ ನೀರು ಅರಣ್ಯ ಇಲಾಖೆ ಕಚೇರಿ ಹಿಂಭಾಗದಲ್ಲಿರುವ ದೇವಂಗಿ ತೋಟದ ಬಳಿ ನಿರ್ಮಾಣಗೊಳ್ಳುತ್ತಿರುವ ಶುದ್ಧೀಕರಣ ಘಟಕದಲ್ಲಿ ಶೇಖರಣೆಗೊಳ್ಳುತ್ತದೆ.ಜ್ಯೋತಿನಗರ, ಎಂಆರ್ಎಸ್, ವಾದಿ ಎ ಹುದಾ, ಗುರುಪುರ, ಚಿಕ್ಕಲ್ ಭಾಗದ ಚರಂಡಿ ನೀರು ಪುರಲೆ ಗ್ರಾಮದ ಹೊರಭಾಗದಲ್ಲಿ ನಿರ್ಮಿಸಲಾಗುತ್ತಿರುವ ಪಂಪ್ ಹೌಸ್ ಬಾವಿಯಲ್ಲಿ ಶೇಖರಣೆ ಗೊಳ್ಳುತ್ತದೆ. ‘ಈಗಾಗಲೇ ಯೋಜನೆಯ ಯಶಸ್ವಿಗಾಗಿ ನಗರದ ಪ್ರತಿಯೊಂದು ವಾರ್ಡ್ ನಲ್ಲಿಯೂ ಚರಂಡಿ ನೀರಿನ ಸುಗಮ ಹರಿಯುವಿಕೆಗೆ ಬಹುತೇಕ ಕಡೆಗಳಲ್ಲಿ ಯುಜಿಡಿ ಕೆಲಸ ನಡೆಯುತ್ತಿದ್ದು, ಶೇ 70 ಕೆಲಸ ಮುಗಿದಿದೆ. ಯೋಜನೆಯನ್ನು ತ್ವರಿತವಾಗಿ ಮುಗಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ನಗರಪಾಲಿಕೆ ಆಯುಕ್ತ ಮೂಕಪ್ಪ ಕರಭೀಮಣ್ಣನವರ್ ಹೇಳುತ್ತಾರೆ.‘ದೇವಂಗಿ ತೋಟದ ಬಳಿ 40ಎಕರೆಯಲ್ಲಿ ವಿಸ್ತೀರ್ಣದಲ್ಲಿ ಪ್ರಥಮವಾಗಿ ಯೋಜನೆ ರೂಪಿಸಲಾಗಿದೆ. ಒಟ್ಟು 222 ಕಿ.ಮೀ. ವಿಸ್ತೀರ್ಣದಲ್ಲಿ,167ಕಿ.ಮೀ.ಕಾಮಗಾರಿ ಮುಗಿದಿದೆ. ತ್ಯಾವರೆಚಟ್ನಳ್ಳಿ ಬಳಿ ರೂಫ್ ಲೆವೆಲ್, ಸಿಗೆಹಟ್ಟಿಯಲ್ಲಿ ಗ್ರೌಂಡ್ ಲೆವೆಲ್, ಆಟೊ ಕಾಂಪ್ಲೆಕ್ಸ್ ಬಳಿಯ ಗೋಶಾಲೆಯಲ್ಲಿ ಕಾಮಗಾರಿಯ ಫೌಂಡೇಷನ್ ಆಗಿದೆ’ ಎಂದು ಜಲಮಂಡಳಿಯ ಅಧಿಕಾರಿ ಸುರೇಂದ್ರ ತಿಳಿಸುತ್ತಾರೆ.‘ಬಳ್ಳಾರಿಯಲ್ಲಿ ಪ್ರಥಮವಾಗಿ ಇಂತಹ ಯೋಜನೆ ಜಾರಿಗೆ ತರಲಾಗಿತ್ತು. ಈಗ ಶಿವಮೊಗ್ಗದಲ್ಲಿ ಜಾರಿಗೆ ತರಲಾಗುತ್ತಿದೆ. ಸಂಗ್ರಹವಾದ ನಗರದ ಕೊಳಚೆ ನೀರನ್ನು 50ಅಡಿಯ ಪಂಪ್ ಹೌಸ್ ತೊಟ್ಟಿಯಲ್ಲಿ ಸಂಗ್ರಹಿಸಲಾಗುತ್ತದೆ. ಮುಂದೆ ಮೂರು ಕಟ್ಟಡಗಳಲ್ಲಿ ಶೇಖರಿಸಿ, ವಿದ್ಯುತ್ ಚಾಲಿತ ಜೆಟ್ ಯಂತ್ರಗಳ ಮೂಲಕ ನೀರು ಹಾಗೂ ಕಸವನ್ನು ಬೇರ್ಪಡಿಸಲಾಗುತ್ತದೆ. ಬೇರ್ಪಟ್ಟ ಕಸವನ್ನು ಗೊಬ್ಬರವಾಗಿ ಉಪಯೋಗಿಸುವ ರೈತರಿಗೆ ನೀಡಲಾಗುವುದು’ ಎಂದು ಅವರು ಮಾಹಿತಿ ನೀಡುತ್ತಾರೆ. ‘ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಈ ನೀರನ್ನು ಬಳಸಬಹುದಾಗಿದ್ದು, ಬಳ್ಳಾರಿಯಲ್ಲಿ ಇಂಥ ನೀರನ್ನು ಕಡಿಮೆ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಯೋಜನೆಯ ಟೆಂಡರ್ ನ್ನು ಆಂಧ್ರಪ್ರದೇಶದ ವಿಜಯವಾಡದ ಕಂಪೆನಿ ಪಡೆದುಕೊಂಡಿದೆ’ ಎಂದು ಸುರೇಂದ್ರ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.