ಸೋಮವಾರ, ಜನವರಿ 20, 2020
29 °C

ಕೊಳೆಗೇರಿಯಲ್ಲಿ ಕಾಮನಬಿಲ್ಲು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಲಂ ಖಾಲಿ ಮಾಡಿಸಲು ಸಜ್ಜಾಗಿ ಬಂದ ಮಾಲೀಕನಿಗೆ ನಾಯಕ ಸವಾಲು ಎಸೆಯುವ ದೃಶ್ಯದ ಚಿತ್ರೀಕರಣ   ಸಾಗಿತ್ತು. ಖಳನ ಪಾತ್ರಧಾರಿ ರಮೇಶ್ ಪಂಡಿತ್‌ಗೆ ನಾಯಕ ಶ್ರೀನಗರ ಕಿಟ್ಟಿ ಸ್ಲಂ ಖರೀದಿ ಮಾಡಲು ಬೇಕಾದ ಹಣವನ್ನು ಸಂಪಾದಿಸಿ ತಂದುಕೊಡುವುದಾಗಿ ಸವಾಲು ಎಸೆದು ಹೋಗುವ ಮತ್ತು ಹಣವನ್ನು ತಂದು ನೀಡುವ ಸಿನಿಮಾದ ಆರಂಭ ಮತ್ತು ಅಂತ್ಯದ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಆ ಎರಡು ದೃಶ್ಯಗಳ ನಡುವೆ ಸಾಗುತ್ತದೆ `ಕಿಲಾಡಿ ಕಿಟ್ಟಿ~ ಚಿತ್ರದ ಕತೆ.ನಾಯಕ ಕಿಟ್ಟಿ, ಗೆಳೆಯರಾದ ದಿಲೀಪ್, ಆನಂದ್, ನಾಯಕಿಯರಾದ ಹರಿಪ್ರಿಯಾ, ನಿವೇದಿತಾ ಅಲ್ಲಿದ್ದರು. ಅವರ ಜೊತೆಗೆ ನೂರಾರು ಸಹ ಕಲಾವಿದರು ನೆರೆದಿದ್ದರು. ಸುಡು ಬಿಸಿಲಿನಲ್ಲಿ ಅಬ್ಬರಿಸುವ ಖಳನ ಎದುರು ನಟಿಸಲು ನಿಂತಿದ್ದ ಅಷ್ಟೂ ಕಲಾವಿದರೂ ಬೆವರಿ ಬೆಂಡಾಗಿದ್ದರು. ನಿರ್ದೇಶಕರು `ಬ್ರೇಕ್~ ಎಂದಾಕ್ಷಣ ನೆರಳಿದ್ದ ಕಡೆ ಚಿತ್ರತಂಡ ಸ್ಥಳಾಂತರವಾಯಿತು.ನಿರ್ಮಾಪಕ ಯೋಗೀಶ್ ನಾರಾಯಣ್, `ಸಿನಿಮಾ ಮೊದಲ ಹಂತ ಮುಗಿಸಿ ಎರಡನೇ ಹಂತ ಆರಂಭಿಸಿದೆ. ಇನ್ನು 20 ದಿನಗಳ ಚಿತ್ರೀಕರಣ ಮುಗಿದರೆ ಶೇ 60ರಷ್ಟು ಮಾತಿನ ಭಾಗ ಮುಗಿದಂತೆ. ಉಡುಪಿಯಲ್ಲೂ ಸಾಕಷ್ಟು ಸನ್ನಿವೇಶಗಳ ಚಿತ್ರೀಕರಣವಾಯಿತು~ ಎಂದರು. ಇಂಥ ದೃಶ್ಯಕ್ಕೆ ಇಂಥ ಬಣ್ಣದ ಬಟ್ಟೆಯೇ ಬೇಕು ಎಂದು ಹೇಳುತ್ತಾ ಕಾಸ್ಟ್ಯೂಮ್ ಖರೀದಿಸುವಲ್ಲೂ ಆಸಕ್ತಿ ತೋರಿದ ಛಾಯಾಗ್ರಾಹಕರ ಬಗ್ಗೆ ಅವರು  ಮೆಚ್ಚುಗೆಯ ಮಾತನಾಡಿದರು.`ಕಿಲಾಟಿ ಕಿಟ್ಟಿ~ಯ ನಿರ್ದೇಶನ ಅನಂತ ರಾಜು ಅವರದು. `ತೆಲುಗಿನ `ಬ್ಲೇಡ್ ಬಾಬ್‌ಜಿ~ ಚಿತ್ರದ ರೀಮೇಕ್ ಇದಾದರೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿತ್ರದ ಸಂಭಾಷಣೆಗಳು ಲಾಜಿಕ್ಕಾಗಿ ನಗಿಸಲಿವೆ. ಇದರ ನಡುವೆ ನಾಯಕಿಯರು, ಹಾಸ್ಯ, ಕಳ್ಳತನ, ಗೆಳೆಯರ ಪುಂಡಾಟ ಎಲ್ಲಾ ಸೇರಿ ಚಿತ್ರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆ~ ಎನ್ನುವ ವಿಶ್ವಾಸ ಅವರದು.ನಾಯಕ ಶ್ರೀನಗರ ಕಿಟ್ಟಿ ತಮ್ಮ ಪಾತ್ರದ ಬಗ್ಗೆ ಖುಷಿಯಿಂದಿದ್ದರು. `ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ನಮ್ಮ ತಂಡ, ಸ್ಲಂ ಖರೀದಿಗಾಗಿ  ಕಿಲಾಡಿತನದಿಂದ ಹಣ ಸಂಪಾದಿಸುತ್ತದೆ. ಆರಂಭದಲ್ಲಿ ನಿವೇದಿತಾ, ದಿಲೀಪ್, ಆನಂದ್ ನನ್ನೊಂದಿಗಿರುತ್ತಾರೆ ನಂತರ ಹರಿಪ್ರಿಯಾ ಜೊತೆಯಾಗುತ್ತಾರೆ. ಇದೊಂದು ಸೆನ್ಸಿಬಲ್ ಕಾಮಿಡಿ ಸಿನಿಮಾ. ಜೆಸ್ಸಿಗಿಫ್ಟ್ ಸಂಗೀತದಲ್ಲಿ `ಸಂಜು ವೆಡ್ಸ್ ಗೀತಾ~ ಚಿತ್ರದ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನ ನಡೆದಿದೆ~ ಎಂದರು.ನಾಯಕಿ ಹರಿಪ್ರಿಯಾಗೆ ಮೊದಲ ಬಾರಿಗೆ ಸಂಪೂರ್ಣ ನಗಿಸುವ ಸಿನಿಮಾದಲ್ಲಿ ನಟಿಸಿದ ಖುಷಿ. ಆದರೆ, ಮಲ್ಪೆಯಲ್ಲಿ ನಡೆದ ಚಿತ್ರೀಕರಣದ ಸಮಯದಲ್ಲಿ ಬಿಸಿಲಿನಿಂದಾಗಿ ಚರ್ಮ ಕಪ್ಪಗಾದ ಬೇಜಾರೂ ಅವರ ಮಾತಿನಲ್ಲಿತ್ತು. ನಟ ದಿಲೀಪ್ ಅವರಿಗೆ ಅನಂತರಾಜು ಕೂಲಾಗಿ ತಮ್ಮಿಂದ ನಟನೆ ತೆಗೆಯುತ್ತಿರುವುದಕ್ಕೆ ಖುಷಿ ಇದೆ. `ಆರಂಭದಲ್ಲಿ ಓವರ್ ಆಕ್ಟ್ ಮಾಡುವ ಭಯ ಇತ್ತು. ಅದನ್ನು ನಿರ್ದೇಶಕರು ನಿಭಾಯಿಸಿದರು~ ಎಂದರವರು. ಮತ್ತೊಬ್ಬ ನಾಯಕಿ ನಿವೇದಿತಾ ಅವರಿಗೆ ಪ್ರತೀ ದೃಶ್ಯ ಮುಗಿದಾಕ್ಷಣ ನಗುವುದೇ ಕೆಲಸಆಗಿದೆಯಂತೆ.  ನಟ ಆನಂದ ತಮ್ಮ ತರಲೆ ಮಾತುಗಳಿಂದ ಸಿನಿಮಾ ಪೂರ್ಣ ನಗಿಸುವುದಾಗಿ ಗಂಭೀರವಾಗಿ ಹೇಳಿ ಕುಳಿತರು. 

ಪ್ರತಿಕ್ರಿಯಿಸಿ (+)