ಬುಧವಾರ, ಮೇ 12, 2021
26 °C

ಕೊಳೆಗೇರಿಯಲ್ಲಿ `ಚಿಣ್ಣರ ಲೋಕ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳೆಗೇರಿಯಲ್ಲಿ `ಚಿಣ್ಣರ ಲೋಕ'

ಬೀದಿ ಬದಿಗಳಲ್ಲಿ ಸಿಗ್ನಲ್‌ನ ಕೆಂಪು ದೀಪ ಬೀಳುವುದನ್ನೇ ಕಾಯುತ್ತ ಸಿಗ್ನಲ್ ಬಿದ್ದೊಡನೆ ಭಿಕ್ಷೆ ಬೇಡಲು ವಾಹನಗಳತ್ತ ಓಡಿ ಬರುವ ಎಷ್ಟೋ ಮಕ್ಕಳು ನಗರದಲ್ಲಿದ್ದಾರೆ. ಅಪ್ಪ-ಅಮ್ಮ ಕೆಲಸಕ್ಕೆ ಹೋದಾಗ ತಮ್ಮ ಅಥವಾ ತಂಗಿಯನ್ನು ನೋಡಿಕೊಂಡು ಮನೆಗೆಲಸ ಮಾಡುವ ಮಕ್ಕಳೂ ಇದ್ದಾರೆ. ಇಂಥ ಮಕ್ಕಳಿಗೆ ಶಿಕ್ಷಣದ ಜೊತೆಗೆ ಬಾಲ್ಯದ ಜೀವನವೂ ಮರೀಚಿಕೆಯೇ!ಇಂತಹ ಅವಕಾಶ ವಂಚಿತರ ಮಕ್ಕಳು, ಕೊಳೆಗೇರಿ ಮಕ್ಕಳಿಗಾಗಿ ಬ್ರಿಜ್ ನೆಟ್‌ವರ್ಕ್ (11ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ) ಆ್ಯಕ್ಷನ್ ಏಯ್ಡ ಸಂಸ್ಥೆಯ ಸಹಯೋಗದಲ್ಲಿ ಚಿಣ್ಣರ ಲೋಕ ಸಂಚಾರಿ ಶಿಬಿರ ಆಯೋಜಿಸಿತ್ತು.ಆರ್ಥಿಕವಾಗಿ ಸಬಲರಾಗಿರುವ ಮಕ್ಕಳಷ್ಟೇ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದ ಬೇಸಿಗೆ ಶಿಬಿರಗಳಿಂದ ಬೀದಿ, ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳು ವಂಚಿತರಾಗುತ್ತಾರೆ.ಇಂತಹ ಮಕ್ಕಳಿಗಾಗಿ ಸಂಸ್ಥೆಯು ನಗರದ ಯಾರಬ್ ನಗರ, ಗಂಗಗೊಂಡನಹಳ್ಳಿ, ಜಾಲಿ ಮೊಹಲ್ಲಾ, ಉಲ್ಲಾಳ ಉಪನಗರ, ದೊಡ್ಡಣ್ಣ ನಗರ, ವಿಜಯನಗರ, ಚಾಮುಂಡಿನಗರ, ಸನ್ಯಾಸಿಕುಂಟೆ, ಬಯ್ಯಪ್ಪನಹಳ್ಳಿ, ಎಂ.ಸಿ.ಟಿ.ಸಿ, ಹೊಸ ಬಾಗಲೂರು ಬಡಾವಣೆ ಸೇರಿದಂತೆ 12 ಕಡೆಗಳಲ್ಲಿ ಸಂಚಾರಿ ಬೇಸಿಗೆ ಶಿಬಿರ ನಡೆಸಿತ್ತು.ಶಿಬಿರದಲ್ಲಿ 600ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸುವುದರ ಜೊತೆಗೆ ಮಕ್ಕಳ ಹಕ್ಕುಗಳು, ಸಹಾಯವಾಣಿ, ಮಕ್ಕಳ ಜವಾಬ್ದಾರಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು. ಜೊತೆಗೆ ಚಿತ್ರಕಲೆಯ ಬಗ್ಗೆಯೂ ತರಬೇತಿ ನೀಡಲಾಯಿತು. ಮನೆ, ಶಾಲೆ, ಆಸ್ಪತ್ರೆ, ಮೈದಾನ ಸೇರಿದಂತೆ ವಿವಿಧ ಚಿತ್ರಗಳನ್ನು ಮಕ್ಕಳು ರಚಿಸಿದರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೂಕಾಭಿನಯ ಪ್ರದರ್ಶನ ಆಯೋಜಿಸಲಾಗಿತ್ತು.ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳು ಕಿರು ನಾಟಕವನ್ನು ಪ್ರದರ್ಶಿಸಿದರು. ಜೊತೆಗೆ ಆಕರ್ಷಕವಾಗಿ ಮುಖಕ್ಕೆ ಬಣ್ಣ ಹಚ್ಚಿಕೊಂಡು ಸಂತಸ ಹಂಚಿಕೊಂಡರು.ರಂಗಭೂಮಿ ಕಲಾವಿದರಾದ ಆನಂದ್, ಮಾರಪ್ಪ ನಾಯಕ, ಬ್ರಿಜ್ ನೆಟ್‌ವರ್ಕ್‌ನ ಕಾರ್ಯಕ್ರಮ ಸಂಯೋಜಕಿ ರೋಹಿಣಿ, ಅನಂತ್, ಹರೀಶ್ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.