ಶನಿವಾರ, ಮಾರ್ಚ್ 6, 2021
32 °C
ಐಬಿಎಲ್: ಹರಾಜಿನಲ್ಲಿ ಮೂಲಬೆಲೆ ಕಡಿಮೆ

ಕೋಚ್ ಗೋಪಿಚಂದ್ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಚ್ ಗೋಪಿಚಂದ್ ಸಮರ್ಥನೆ

ನವದೆಹಲಿ (ಐಎಎನ್‌ಎಸ್): ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರ ಮೂಲಬೆಲೆಯನ್ನು ಕಡಿಮೆ ಮಾಡಿದ ಸಂಘಟಕರ ಕ್ರಮವನ್ನು ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಸಮರ್ಥಿಸಿಕೊಂಡಿದ್ದಾರೆ.`ಈ ವಿವಾದಕ್ಕೆ ಬೇಗನೇ ತೆರೆ ಬೀಳಲಿದೆ ಎಂಬುದು ನನ್ನ ವಿಶ್ವಾಸ. ಅಶ್ವಿನಿ ಹಾಗೂ ಜ್ವಾಲಾ ಅವರ ಮೂಲಬೆಲೆಯನ್ನು ಕಡಿಮೆ ಮಾಡಿರುವ ಹಿಂದೆ ಸ್ಪಷ್ಟ ಉದ್ದೇಶವಿದೆ. ಆ ರೀತಿ ಮಾಡದಿದ್ದರೆ ಈ ಆಟಗಾರ್ತಿಯರಿಗೆ ಈಗ ಸಿಕ್ಕಿರುವಷ್ಟು ಹಣವೂ ಲಭಿಸುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ.ಅಶ್ವಿನಿ ಹಾಗೂ ಜ್ವಾಲಾ ಅವರ ಮೂಲಬೆಲೆಯನ್ನು ಸುಮಾರು 30 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆದರೆ ಈ ಆಟಗಾರ್ತಿಯರನ್ನು ಯಾರೂ ಖರೀದಿಸದ ಕಾರಣ ಕೊನೆಕ್ಷಣದಲ್ಲಿ ಇವರ ಮೂಲಬೆಲೆಯಲ್ಲಿ ಬದಲಾವಣೆ ಮಾಡಲು ಸಂಘಟಕರು ತೀರ್ಮಾನಿಸಿದರು. ಇದಕ್ಕೆ ಕಾರಣ ಈ ಲೀಗ್‌ನಲ್ಲಿ ಮಹಿಳೆಯರ ಡಬಲ್ಸ್ ಪಂದ್ಯಗಳು ಇಲ್ಲದಿರುವುದು. ಆದರೆ ಈ ಬಗ್ಗೆ ಅಶ್ವಿನಿ ಹಾಗೂ ಜ್ವಾಲಾ ಆಕ್ರೋಶ ವ್ಯಕ್ತಪಡಿಸಿದ್ದರು. ಮೂಲಬೆಲೆ ಕಡಿಮೆ ಮಾಡಿದ ಮೇಲೆ ಅಶ್ವಿನಿ 15 ಲಕ್ಷ ರೂಪಾಯಿಗೆ ಪುಣೆ ಪಿಸ್ಟನ್ಸ್ ತಂಡದ ಪಾಲಾದರು. ಜ್ವಾಲಾ ಅವರಿಗೆ 18.6 ಲಕ್ಷ ರೂಪಾಯಿ ನೀಡಿ ದೆಹಲಿ ಸ್ಮ್ಯಾಷರ್ಸ್ ತಂಡದವರು ಖರೀದಿಸಿದರು.`ಹರಾಜಿನಲ್ಲಿ ಲಭಿಸಿರುವ ಹಣದ ಬಗ್ಗೆ ಕೆಲ ಆಟಗಾರರು ತುಂಬಾ ಖುಷಿಯಾಗಿದ್ದಾರೆ. ಭಾರತ ಅಥವಾ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಈ ರೀತಿ ಹಣ ಕನಸಿನ ಮಾತಾಗಿತ್ತು. ಈ ಲೀಗ್‌ನಿಂದ ಬ್ಯಾಡ್ಮಿಂಟನ್ ಹಾಗೂ ಆಟಗಾರರಿಗೆ ತುಂಬಾ ಸಹಾಯವಾಗಿದೆ. ಇದನ್ನು ನಾವು ತುಂಬು ಹೃದಯದಿಂದ ಸ್ವಾಗತಿಸಬೇಕು. ಉತ್ತಮ ದಿಕ್ಕಿನಲ್ಲಿ ಮುನ್ನಡೆಯಲು ಪ್ರಯತ್ನಿಸಬೇಕು' ಎಂದು ಆಲ್ ಇಂಗ್ಲೆಂಡ್ ಮಾಜಿ ಚಾಂಪಿಯನ್ ಗೋಪಿಚಂದ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.