ಬುಧವಾರ, ಮೇ 12, 2021
18 °C

ಕೋಟೆಯ ಕಲಾಜ್ಯೋತಿಗೆ 35ರ ಸಂಭ್ರಮ

ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಅಂದು ರಂಗಾಸಕ್ತಿಯ ನಾಲ್ಕಾರು ಯುವಕರು ಆರಂಭಿಸಿದ `ಕಲಾಜ್ಯೋತಿ~ಗೆ ಇಂದು 35 ವರ್ಷದ ಹೆಗ್ಗಳಿಕೆ. ನಾಟಕದ ಹುಚ್ಚು ಹಚ್ಚಿಸಿಕೊಂಡಿದ್ದ ಈ ಯುವಕರು ಹೀಗೆ ಒಮ್ಮೆ ಕೋಟೆಬೀದಿಯ ಕಟ್ಟೆ ಮೇಲೆ ಕುಳಿತು ಆಲೋಚಿಸುತ್ತಿದ್ದಾಗ ಹೊಳೆದಿದ್ದೇ `ಕಲಾಜ್ಯೋತಿ~. 1976ರ ನವೆಂಬರ್ 1ರಂದು `ಕಲಾಜ್ಯೋತಿ~ ಹವ್ಯಾಸಿ ನಾಟಕ ಸಂಸ್ಥೆ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಉದ್ಘಾಟನೆಗೊಂಡಿತು. ರಮೇಶ್ ಜೋಯಿಸ್, ಬಾಲಚಂದ್ರ, ಗೋಪಾಲಕೃಷ್ಣ, ವೈದ್ಯ ಹೀಗೆ ನಾಲ್ಕೈದು ಜನ ಯುವಕರ ತಂಡ ಅಂದು `ಕಲಾಜ್ಯೋತಿ~ಯ ಕನಸು ಕಂಡಿತ್ತು.ನಟನೆ, ನಿರ್ದೇಶನ, ಬೆಳಕು, ರಂಗಸಜ್ಜಿಕೆ, ಪ್ರಸಾಧನ, ವಸ್ತ್ರವಿನ್ಯಾಸ ಹೀಗೆ ರಂಗಭೂಮಿಯ ಸರ್ವ ವಿಭಾಗದಲ್ಲೂ ತರಬೇತಿ ಪಡೆದ ಸಂಘದ ಸದಸ್ಯರು ನೂರಾರು ನಾಟಕಗಳನ್ನು ರಂಗದ ಮೇಲೆ ತಂದರು; ನಾಟಕೋತ್ಸವ ನಡೆಸಿದರು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದರು.     ಅಂದು ಸಂಘದಲ್ಲಿದ್ದ ಆನೇಕ ರಂಗಾಸಕ್ತ ಯುವಕರು ಕಳೆದ 35 ವರ್ಷಗಳಿಂದ ಎಲೆಮರೆಯ ಕಾಯಿಯಂತೆ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ಉತ್ತಮ ಹೊಸ, ಹೊಸ ಪ್ರಯೋಗಗಳಿಂದ ರಂಗಚಟುವಟಿಕೆಯಲ್ಲಿ ಯಶಸ್ಸು ಪಡೆದಿದ್ದಾರೆ. ಶಿವಮೊಗ್ಗದ ಹಲವಾರು ಕಲಾತಂಡಗಳ ರಂಗಪ್ರಯೋಗದೊಂದಿಗೆ ತಮ್ಮ ಕಲಾಸೇವೆಯನ್ನು ನೀಡಿ ಅವರ ಯಶಸ್ಸಿನ ರಂಗಚಟುವಟಿಕೆಗಳಿಗೆ ಸಹಕಾರಿಯಾಗಿರುತ್ತಾರೆ.ಮಕ್ಕಳ ಮಾನಸಿಕ ಅಭಿವೃದ್ಧಿ ರಂಗತಾಲೀಮಿನಿಂದ ಮಾತ್ರ ಸಾಧ್ಯ ಎನ್ನುವುದನ್ನು 35 ವರ್ಷಗಳ ಹಿಂದೆಯೇ ಅರಿತ `ಕಲಾಜ್ಯೋತಿ~, 1979ರಿಂದ ಉಚಿತವಾಗಿ ರಂಗತರಬೇತಿ ಶಿಬಿರ ಆರಂಭಿಸಿತು. ಹಾಗೆಯೇ ಸತತ 5 ವರ್ಷ ಮಕ್ಕಳ ನಾಟಕೋತ್ಸವ ನಡೆಸಿ ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತು.ಬೆಂಗಳೂರಿನ ಬಾಲಭವನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಮಕ್ಕಳ ಹಾಗೂ ಹಿರಿಯರ ನಾಟಕಗಳನ್ನು ಪ್ರದರ್ಶಿಸಿದ ಹೆಮ್ಮೆ `ಕಲಾಜ್ಯೋತಿ~ಯದ್ದು. ಹೆಗ್ಗೋಡಿನ ನೀನಾಸಂನಲ್ಲಿ ಕಲಾಜ್ಯೋತಿಯ ಸದಸ್ಯರು ರಂಗತರಬೇತಿ ಪಡೆದು ಉತ್ತಮ ಕಲಾವಿದರಾಗಿದ್ದಾರೆ.ಆನೇಕ ಪ್ರತಿಭಾವಂತ ಕಲಾವಿದರಿಗೆ ನಟನೆ, ನಿರ್ದೇಶನದ ಅವಕಾಶಗಳನ್ನು ನೀಡಿ, ತನ್ಮೂಲಕ ಅವರ ಪ್ರತಿಭೆಯನ್ನು ಹೊರತರಲು ಶ್ರಮಿಸಿದ `ಕಲಾಜ್ಯೋತಿ~ ಉಡುಪಿ, ಬೈಂದೂರು, ಜೋಗ, ಗಂಗೊಳ್ಳಿ ಹಾಗೂ ಶಿವಮೊಗ್ಗದಲ್ಲಿ ರಂಗಸಂಸ್ಥೆಗಳು ನಡೆಸಿದ ರಾಜ್ಯಮಟ್ಟದ, ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತೀ ಹೆಚ್ಚು ಬಹುಮಾನಗಳನ್ನು ತನ್ನ ಮಡಿಲಿಗೆ ಏರಿಸಿಕೊಂಡು ಜಿಲ್ಲೆಯ ಗರಿಯನ್ನು ರಾಜ್ಯಮಟ್ಟದಲ್ಲಿಯೂ ಕೂಡ ಬಿಂಬಿಸಿದೆ.1981ರಲ್ಲಿ ಹೆಗ್ಗೋಡಿನ ನೀನಾಸಂ ನಡೆಸಿದ ನಾಟಕ ಸ್ಪರ್ಧೆಯಲ್ಲಿ `ಮಿತ್ರಲಾಭ~ ಮಕ್ಕಳ ನಾಟಕ ದ್ವಿತೀಯ ಬಹುಮಾನ ಪಡೆಯಿತು. 1990ರಲ್ಲಿ ಜೋಗ್‌ಫಾಲ್ಸ್‌ನಲ್ಲಿ ನಡೆದ `ಒಂದು ಆಕಸ್ಮಿಕ ಸಾವು~ ನಾಟಕಕ್ಕೆ ತೃತೀಯ, 1995ರಲ್ಲಿ ಶಿವಮೊಗ್ಗದ ಕಲಾಕಿರಣ ನಡೆಸಿದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ `ಆದ್ರೇಶಿ ಪರದೇಶಿ ಆದ~ ಪ್ರಥಮ ಬಹುಮಾನ ಪಡೆಯಿತು.1997ರ ಬೈಂದೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ `ಆದ್ರೇಶಿ ಪರದೇಶಿ ಆದ~ಗೆ ದ್ವಿತೀಯ, 1997ರಲ್ಲಿ ಶಿವಮೊಗ್ಗದ ಕಲಾಕಿರಣ ನಡೆಸಿದ ಸ್ಪರ್ಧೆಯಲ್ಲಿ `ಶ್ರೀಕೃಷ್ಣ ಸಂಧಾನ~ ಪ್ರಥಮ, 1997ರಲ್ಲೂ ಸಾಗರ ಆನಂದಪುರಂನಲ್ಲಿ ಸ್ಪರ್ಧೆಯಲ್ಲಿ `ಶ್ರೀಕೃಷ್ಣ ಸಂಧಾನ~ ನಾಟಕಕ್ಕೆ ಪ್ರಥಮ, 2005ರಲ್ಲಿ `ರಾವಿ ನದಿಯ ದಂಡೆಯಲ್ಲಿ~ ನಾಟಕ ಗಂಗೊಳ್ಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, 2006ರಲ್ಲಿ `ಡೂಬಾಯಿ ಪಾದ್ರಿಯ ಒಂದು ಪತ್ರ~ ನಾಟಕಕ್ಕೆ ಉಡುಪಿಯಲ್ಲಿ ಪ್ರಥಮ, 2009ರಲ್ಲಿ `ಶಾಲಾ ಭಂಜಿಕೆ~ ನಾಟಕಕ್ಕೆ ಉಡುಪಿಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ.

`ಕಲಾಜ್ಯೋತಿ~ ತನ್ನ 35ರ ನೆನಪಿಗಾಗಿ ಇದೇ ಸೆ. 16ರಿಂದ 25ರವರೆಗೆ 10ದಿನಗಳ ನಾಟಕೋತ್ಸವ `ರಂಗಸಂಭ್ರಮ~ ಹಮ್ಮಿಕೊಂಡಿದೆ. ಪ್ರತಿ ದಿವಸ ಸಂಜೆ 6.30ಕ್ಕೆ ಕೋಟೆ ಬಯಲು ರಂಗಮಂದಿರದಲ್ಲಿ ನಾಟಕಗಳ ಪ್ರದರ್ಶನವಿದೆ. `ಕಲಾಜ್ಯೋತಿ~ಯ ರಂಗಸಂಭ್ರಮದ ಹಿನ್ನೆಲೆಯಲ್ಲಿ ಕೋಟೆ ಯುವಕ ಸಂಘ, ಸೆ. 18ರಂದು `ಸ್ನೇಹಮಿಲನ~ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ರಂಗಕರ್ಮಿಗಳಾದ ಕೆ.ವಿ. ಅಕ್ಷರ, ಕೆ.ಜಿ. ಕೃಷ್ಣಮೂರ್ತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.