ಸೋಮವಾರ, ಜೂನ್ 21, 2021
29 °C

ಕೋಲಾರಕ್ಕೆ ಬಂದೀತೆ ಎಕ್ಸ್‌ಪ್ರೆಸ್ ರೈಲು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮೂಲ ಸೌಕರ್ಯ ವಿಚಾರದಲ್ಲಿ ಎಂದಿಗೂ ತಡವಾಗಿ ಕಣ್ಣಿಗೆ ಬೀಳುವ ಜಿಲ್ಲೆಯಾಗಿರುವ ಕೋಲಾರಕ್ಕೆ ಇನ್ನೂ ಎಕ್ಸ್‌ಪ್ರೆಸ್ ರೈಲು ಬಂದಿಲ್ಲ. ಕೋಲಾರ-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ರೈಲು ಸೌಕರ್ಯ ಕೊಡುವ ಬಗ್ಗೆ ಕಳೆದ ವರ್ಷದ ರೈಲ್ವೆ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು. ಆದರೆ ಅದಾಗಿ ಮತ್ತೊಂದು ಬಜೆಟ್ ಮಂಡನೆಯಾಗಿದೆ. ಎಕ್ಸ್‌ಪ್ರೆಸ್ ರೈಲು ಮಾತ್ರ ಬಂದಿಲ್ಲ.ರೈಲ್ವೆ ಪ್ರಯಾಣಿಕರ ಕೋರಿಕೆ ಮೇರೆಗೆ ಕೋಲಾರ-ಬೆಂಗಳೂರು ನಡುವೆ ರೈಲು ಸಂಪರ್ಕ ಕಲ್ಪಿಸುವ ಭರವಸೆ ಭಾಗಶಃ ಈಡೇರಿದೆ ಅಷ್ಟೆ. ಬೆಳಿಗ್ಗೆ ಕೋಲಾರದಿಂದ ಹೊರಡುವ ಡೆಮೋ ಪುಷ್‌ಪುಲ್ ರೈಲು ಮತ್ತೆ 11ಗಂಟೆಗೆ ಕಂಟೋನ್ಮೆಂಟ್‌ನಿಂದ ಹೊರಟು ಬಂಗಾರಪೇಟೆವರೆಗೂ ಬಂದು ನಿಲ್ಲುತ್ತದೆ. ಕೋಲಾರಕ್ಕೆ ಮಾತ್ರ ಬರುವುದಿಲ್ಲ. ಹೀಗಾಗಿ ಕೋಲಾರ-ಬೆಂಗಳೂರು ನಡುವೆ ರೈಲು ಇರುವುದು ಒಂದೇ. ಸಂಚರಿಸುವುದು ಕೂಡ ಒಂದೇ ಬಾರಿ. ಅದೂ ಬೆಳಿಗ್ಗೆ ಮಾತ್ರ. ಆ ರೈಲನ್ನು ಹೊರತುಪಡಿಸಿದರೆ ಬೇರೆ ರೈಲು ಇಲ್ಲ.ಇರುವ ರೈಲನ್ನೆ ಎರಡು ಬಾರಿ ಕೋಲಾರ-ಬೆಂಗಳೂರು ನಡುವೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಅದು, ಇನ್ನೊಂದು ಬಜೆಟ್ ಮಂಡನೆಯಾಗುವ ವೇಳೆಯಲ್ಲೂ ಜಾರಿಯಾಗಿಲ್ಲ ಎಂದರೆ ಜಿಲ್ಲೆಯ ರೈಲ್ವೆ ಪ್ರಯಾಣಿಕರು ದುರದೃಷ್ಟವಂತರೇ ನಿಜ ಎಂಬುದು ನಿತ್ಯ ರೈಲು ಪ್ರಯಾಣಿಕರ ಸಂಘದ ಪ್ರಮುಖರಾದ ರುಕ್ಮಾಂಗದ ಅವರ ವಿಷಾದ ನುಡಿ.ಇನ್ನೊಂದು ಹೊಸ ರೈಲು ಕೋಲಾರಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗಂತೂ ನಿರಾಶೆಯಾಗಿದೆ. ಡೆಮೋ ರೈಲೇ ಇನ್ನೊಮ್ಮೆ ಬರುತ್ತದೆ ಎಂಬ ಭರವಸೆಯೂ ಈಡೇರಿಲ್ಲ. ಏಕೆಂದರೆ ಆ ರೈಲು ಬೆಂಗಳೂರು-ಬಂಗಾರಪೇಟೆ ನಡುವೆ ಮಾತ್ರ ಸಂಚರಿಸುತ್ತಿದೆ. ಆ ರೈಲು ಕೆಟ್ಟರೆ ಅದನ್ನು ತುರ್ತಾಗಿ ರಿಪೇರಿ ಮಾಡುವ ಕೆಲಸವೂ ಸಮರ್ಪಕವಾಗಿ ನಡೆಯದಿರುವುದು ಪ್ರಯಾಣಿಕರಿಗೆ ನಿರಾಶೆ ಮೂಡಿಸಿದೆ ಎಂಬುದು ಅವರ ಅಸಮಾಧಾನ.ಬೆಳಿಗ್ಗೆ 7.15ಕ್ಕೆ ಹೊರಡುವ ಡೆಮೋ ರೈಲು 9.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ನಂತರ ಸಂಜೆ 5,55ಕ್ಕೆ ಕಂಟೋನ್ಮೆಂಟ್‌ನಿಂದ ಹೊರಟು ಬಂಗಾರಪೇಟೆಗೆ 7.25ಕ್ಕೆ ಬರುತ್ತದೆ. ಅಲ್ಲಿ ಅರ್ಧ ತಾಸು ನಿಂತಿದ್ದು, 8 ಗಂಟೆಗೆ ಹೊರಟು ಕೋಲಾರಕ್ಕೆ 8.25ಕ್ಕೆ ಬರುತ್ತದೆ. ಅದೇ ರೈಲು ಬೆಳಿಗ್ಗೆ 11ಕ್ಕೆ ಕಂಟೋನ್ಮೆಂಟ್‌ನಿಂದ ಹೊರಟು ಬಂಗಾರಪೇಟೆಗೆ 1 ಗಂಟೆಗೆ ಬಂದು ನಿಲ್ಲುತ್ತದೆ. 3 ಗಂಟೆಗೆ ಹೊರಟು ಮತ್ತೆ ಕಂಟೋನ್ಮೆಂಟ್‌ಗೆ ಬರುತ್ತದೆ.ಕಳೆದ ಬಜೆಟ್‌ನಲ್ಲಿ ಘೋಷಿಸಿರುವ ವಿಷಯವೇ ಜಾರಿಯಾಗಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗುವ ಅಂಶಗಳು ಮೊಣಕೈಗೆ ಜೇನುತುಪ್ಪ ಸವರಿದಂತೆ. ಹತ್ತಿರವಿದ್ದರೂ ಸುಲಭವಾಗಿ ಸವಿಯಲು ಸಾಧ್ಯವಿಲ್ಲದಂಥ ಸಂದಿಗ್ಧ ಸ್ಥಿತಿ. ಪದೇಪದೇ ಭರವಸೆ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುತ್ತಾರೆ ಅವರು.ಕೋಲಾರ -ವೈಟ್‌ಫೀಲ್ಡ್ ನಡುವೆ ರೈಲು ಸಂಪರ್ಕ ಏರ್ಪಡಿಸಲು ಹಣ ಮಂಜೂರಾಗಿದೆ ಎನ್ನಲಾಗುತ್ತದೆ. ಆದರೆ ಕೆಲಸ ಎಷ್ಟಾಗಿದೆ ಎಂದು ಹುಡುಕಿದರೆ ನಿರಾಶೆಯಾಗುತ್ತದೆ. ಸರ್ವೆ ಕಾರ್ಯ ಮುಗಿಸಿ ಕೆಂಪು ಕಲ್ಲು ನೆಟ್ಟಿರುವುದನ್ನು ಹೊರತುಪಡಿಸಿದರೆ ಹೆಚ್ಚು ಕೆಲಸ ನಡೆದಿಲ್ಲ. ಒಂದು ವರ್ಷದ ಅವಧಿಯಲ್ಲಿ ಆಗಬೇಕಾದಷ್ಟು ಕೆಲಸ ಆಗಿಲ್ಲ ಎಂಬುದು ಅವರ ಅಸಮಾಧಾನ.ಕೋಲಾರ-ಬೆಂಗಳೂರು ನಡುವೆ ಪ್ರಸ್ತುತ ಸಂಚರಿಸುತ್ತಿರುವ ಡೆಮೋ ರೈಲು ಬೆಳಿಗ್ಗೆ 7.15ಕ್ಕೆ ಕೋಲಾರದಿಂದ ಹೊರಡುತ್ತದೆ. ಆ ಸಮಯವನ್ನು ಇನ್ನಷ್ಟು ವಿಸ್ತರಿಸಿ 7.30ಕ್ಕೆ ಹೊರಡುವಂತೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬ ಪ್ರಯಾಣಿಕರ ಬೇಡಿಕೆ ಇದುವರೆಗೂ ಈಡೇರಿಲ್ಲ. ನಮ್ಮ ಜಿಲ್ಲೆಯವರೇ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರೂ ಪ್ರಯಾಣಿಕ ಸ್ನೇಹಿಯಲ್ಲದ ವೇಳಾಪಟ್ಟಿ ಬದಲಿಸಲು ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ ಸಂಗತಿ ಎನ್ನುತ್ತಾರೆ ಮತ್ತೊಬ್ಬ ಪ್ರಯಾಣಿಕ ವೆಂಕಟೇಶ್.ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ವೇಳಾಪಟ್ಟಿ ಬದಲಿಸಬೇಕು. ಕೋಲಾರ-ಬೆಂಗಳೂರು ಮಧ್ಯೆ ರೈಲು ಎರಡು ಬಾರಿ ಸಂಚರಿಸಬೇಕು. ಅನಗತ್ಯವಾಗಿ ಬಂಗಾರಪೇಟೆಯಲ್ಲಿ ಹೆಚ್ಚು ಹೊತ್ತು ನಿಲುಗಡೆ ಮಾಡಬಾರದು. ಇವಿಷ್ಟಾದರೆ ಪ್ರಯಾಣಿಕರಿಗೆ ಅನುಕೂಲ. ಎಕ್ಸ್‌ಪ್ರೆಸ್ ರೈಲು ಬಂದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂಬುದು ಪ್ರಯಾಣಿಕರ ಆಶಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.