ಶನಿವಾರ, ಮೇ 15, 2021
25 °C

ಕ್ರಯೊಜೆನಿಕ್‌ಗೆ ಮುನ್ನುಡಿ ಬರೆದ ನಂಬಿ ನಾರಾಯಣನ್‌

ಮಾಲತಿ ಭಟ್‌ Updated:

ಅಕ್ಷರ ಗಾತ್ರ : | |

ಕಳೆದ ಭಾನುವಾರ  ಕ್ರಯೊಜೆನಿಕ್‌ ತಂತ್ರಜ್ಞಾನದ ‘ಜಿಎಸ್‌ಎಲ್‌ವಿ–ಡಿ5’ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿದಾಗ ತಿರುವನಂತಪುರದ ಟಿವಿ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧರೊಬ್ಬರ  (71) ಕಣ್ಣಲ್ಲಿ ನೀರು ಜಿನುಗಿತ್ತು.  ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಅಳವಡಿಸಿದ್ದ ಈ ರಾಕೆಟ್‌ ‘ಜಿ ಸ್ಯಾಟ್‌–14’ ಸಂವಹನ ಉಪಗ್ರಹವನ್ನು ಭೂಸ್ಥಿರ ಕಕ್ಷೆಯಲ್ಲಿ ಯಶಸ್ವಿಯಾಗಿ ಕೂರಿಸಿದಾಗ ಆ ಹಿರಿಯರು ದೀರ್ಘ ನಿಟ್ಟುಸಿರುಬಿಟ್ಟರು.ಆ ಹಿರಿಯರ ಹೆಸರು ನಂಬಿ ನಾರಾಯಣನ್‌. ಭಾರತದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿಗಳ ಸಾಲಿನಲ್ಲಿ ನಿಸ್ಸಂದೇಹವಾಗಿ ಸೇರಬೇಕಾದವರು. ಇಪ್ಪತ್ತು ವರ್ಷಗಳ ಹಿಂದೆ ಭಾರತ ಕ್ರಯೊಜೆನಿಕ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಿದಾಗ, ಆ ಅತಿ ಮಹತ್ವದ ಯೋಜನೆಯ ನೇತೃತ್ವ ವಹಿಸಿದ್ದವರು. ರಾಕೆಟ್‌ಗಳಲ್ಲಿ ದ್ರವ ಇಂಧನ ಹಾಗೂ  ಕ್ರಯೊಜೆನಿಕ್‌ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಆಗುವ ಲಾಭವನ್ನು 70ರ ದಶಕದಲ್ಲೇ ಅರಿತಿದ್ದವರು. ಪಿಎಸ್‌ಎಲ್‌ವಿ (ಧ್ರುವಗಾಮಿ) ರಾಕೆಟ್‌ನಲ್ಲಿ ಬಳಸುವ ‘ವಿಕಾಸ್‌ ಎಂಜಿನ್‌’ ನಂಬಿಯವರೇ ವಿನ್ಯಾಸಗೊಳಿಸಿದ್ದು.ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಂಬಿ ಅವರ ನೇತೃತ್ವದಲ್ಲಿ 13 ವರ್ಷಗಳ ಹಿಂದೆಯೇ ಕ್ರಯೊಜೆನಿಕ್‌ ತಂತ್ರಜ್ಞಾನ ಭಾರತಕ್ಕೆ  ಲಭ್ಯವಾಗುತ್ತಿತ್ತು. ಯಾವ ತಂತ್ರಜ್ಞಾನ ಭಾರತಕ್ಕೆ ಲಭ್ಯವಾಗಬೇಕು, ತನ್ಮೂಲಕ ಭಾರತ ಬಾಹ್ಯಾಕಾಶದ ಸೂಪರ್‌ ಪವರ್‌ ಆಗಬೇಕು ಎಂದು ನಂಬಿ ನಾರಾಯಣ್‌ ಹಂಬಲಿಸಿದ್ದರೋ ಅದೇ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಲು ಹೊರಟಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು.1994ರಲ್ಲಿ ಸುದ್ದಿ ಮಾಡಿದ್ದ ‘ಇಸ್ರೊ ಬೇಹುಗಾರಿಕೆ ಪ್ರಕರಣ’ದಲ್ಲಿ ಪ್ರಮುಖ ಆರೋಪಿಯೆಂದು ಹೆಸರಿಸಲಾಯಿತು.

ಫಲಿತಾಂಶ, ಬಂಗಾರದಂತಿದ್ದ ಅವರ ವೃತ್ತಿಜೀವನ ಅರ್ಧದಲ್ಲೇ ಮೊಟಕುಗೊಂಡಿತು. ಕ್ರಯೊಜೆನಿಕ್‌ ಯೋಜನೆ, ಜಿಎಸ್ಎಲ್‌ವಿ, ಪಿಎಸ್‌ಎಲ್‌ವಿ ರಾಕೆಟ್‌ ಅಭಿವೃದ್ಧಿ ಸೇರಿದಂತೆ ಇಸ್ರೊದ (ಭಾರತೀಯ ಬಾಹ್ಯಾಕಾಶ ಸಂಸ್ಥೆ) ಹತ್ತಾರು ಯೋಜನೆಗಳ ಭಾಗವಾಗಿದ್ದ ಈ ವಿಜ್ಞಾನಿಯ ಬಂಧನದಿಂದ  ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯ ಉಡುಗಿಬಿಟ್ಟಿತು. ಕ್ರಯೊಜೆನಿಕ್‌ ಯೋಜನೆಯನ್ನು ಅರ್ಧದಲ್ಲೇ ಕೈಬಿಡಲಾಯಿತು.  ಅಷ್ಟಕ್ಕೂ ಈ ಬೇಹುಗಾರಿಕೆ ಪ್ರಕರಣದ ಮೂಲ ಕೆದಕಿದರೆ ಆಸಕ್ತಿದಾಯಕ ವಿಚಾರಗಳು ಹೊರಬೀಳುತ್ತವೆ.ಕ್ರಯೊಜೆನಿಕ್ ತಂತ್ರಜ್ಞಾನದಲ್ಲಿ ರಾಕೆಟ್‌ಗಳಿಗೆ ಅತಿ ಶೀತಲ ದ್ರವ ಇಂಧನ ಬಳಸಲಾಗುತ್ತದೆ. ಈ ತಂತ್ರಜ್ಞಾನ ಬಳಸಿಕೊಂಡು ಅತಿ ತೂಕದ (2000–4000 ಕೆ.ಜಿ) ಉಪಗ್ರಹಗಳನ್ನು ಅತಿ ಎತ್ತರದ ಭೂಸ್ಥಿರ ಕಕ್ಷೆಗೆ ಕಳುಹಿಸಬಹುದು. ಸಂವಹನ, ಶೈಕ್ಷಣಿಕ, ವೈದ್ಯಕೀಯ ಉದ್ದೇಶಗಳಿಗೆ ಬಳಸುವ ಉಪಗ್ರಹಗಳು ಈ ಮಾದರಿಯವು. ಭೂಸ್ಥಿರ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳು ಭೂಮಿಯ ಪರಿಭ್ರಮಣೆಯ ವೇಗವನ್ನೇ ಹೊಂದಿರುತ್ತವೆ. ಹಾಗಾಗಿ ಬೇಹುಗಾರಿಕಾ ಉದ್ದೇಶಕ್ಕೂ ಈ ಉಪಗ್ರಹಗಳನ್ನು ಬಳಸಬಹುದು.80ರ ದಶಕದ ಹೊತ್ತಿಗೆ ಯುಎಸ್‌ಎಸ್‌ಆರ್‌ (ಸೋವಿಯತ್‌ ಒಕ್ಕೂಟ), ಫ್ರಾನ್ಸ್, ಅಮೆರಿಕ ಮಾತ್ರ ಕ್ರಯೊಜೆನಿಕ್‌ ತಂತ್ರಜ್ಞಾನ ಹೊಂದಿದ್ದವು. ಈ ತಂತ್ರಜ್ಞಾನ ಹೊಂದಿದ ದೇಶ ಉಪಗ್ರಹ ಉಡಾವಣೆಯಿಂದಲೇ ಕೋಟ್ಯಂತರ ಡಾಲರ್ ಹಣ ಗಳಿಸಬಹುದು.  ಡಾ. ಯು. ಆರ್‌. ರಾವ್‌ ಇಸ್ರೊ ಅಧ್ಯಕ್ಷರಾಗಿದ್ದಾಗ ದೇಶೀಯ ಕ್ರಯೊಜೆನಿಕ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಅಂದಿನ ಸೋವಿಯತ್ ಒಕ್ಕೂಟದ ಜತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 1991ರಲ್ಲಿ ಯುಎಸ್‌ಎಸ್‌ಆರ್‌ ಪತನಗೊಂಡಾಗ ಭಾರತಕ್ಕೆ ಈ ತಂತ್ರಜ್ಞಾನ ಹಸ್ತಾಂತರಿಸದಂತೆ ಅಮೆರಿಕ ರಷ್ಯಾದ ಮೇಲೆ ಒತ್ತಡ ಹಾಕಿತು. ‘ಭಾರತಕ್ಕೆ ತಂತ್ರಜ್ಞಾನ ನೀಡಿದಲ್ಲಿ ಅದು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಪ್ಪಂದದ ಉಲ್ಲಂಘನೆಯಾಗುತ್ತದೆ, ನೀವು ದಿಗ್ಬಂಧನ ಎದುರಿಸಬೇಕಾಗ­ಬಹುದು’ ಎಂಬ ಬೆದರಿಕೆ ಹಾಕಿತು. ಸಂಪೂರ್ಣ ತಂತ್ರಜ್ಞಾನ ಹಸ್ತಾಂತರಕ್ಕೆ ಹಿಂದೇಟು ಹಾಕಿದ ರಷ್ಯಾ, ಭಾರತಕ್ಕೆ ಏಳು ಕ್ರಯೊಜೆನಿಕ್‌ ಎಂಜಿನ್‌ಗಳನ್ನು ನೀಡಲು ಸಿದ್ಧವಾಯಿತು.ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬೇಕಾಗಬಹುದೆಂಬ ಕಾರಣಕ್ಕೆ ಏರ್‌ ಇಂಡಿಯಾ ಈ ಎಂಜಿನ್‌ನ ಭಾಗಗಳನ್ನು ರಷ್ಯಾದಿಂದ ತರಲು ಹಿಂದೇಟು ಹಾಕಿತ್ತು. ನಂಬಿ ನಾರಾಯಣನ್‌ ನೇತೃತ್ವದ ತಂಡ ರಷ್ಯಾದ ಯುರಲ್‌ ಏರ್‌ಲೈನ್ಸ್‌ನಲ್ಲಿ ಗುಪ್ತವಾಗಿ ಈ ಎಂಜಿನ್‌ಗಳನ್ನು ಭಾರತಕ್ಕೆ ಸಾಗಿಸಿತು.ಹೀಗೆ 1993ರಲ್ಲಿ ನಂಬಿ ನಾರಾಯಣನ್‌ ತಂಡ ಏಳು ವರ್ಷಗಳ ಗುರಿ ಇರಿಸಿಕೊಂಡು ದೇಶೀಯ ಕ್ರಯೊಜೆನಿಕ್‌ ತಂತ್ರಜ್ಞಾನ ಅಭಿವೃದ್ಧಿಗಾಗಿ ಕೆಲಸ ಆರಂಭಿಸಿತ್ತು.1994ರ ನವೆಂಬರ್‌ನಲ್ಲಿ ಏಕಾಏಕಿ ನಂಬಿ ನಾರಾಯಣನ್‌, ಇಸ್ರೊದ ಮತ್ತೊಬ್ಬ ವಿಜ್ಞಾನಿ ಶಶಿಕುಮಾರ್‌ ಹಾಗೂ ಮತ್ತಿಬ್ಬರು ನೌಕರರನ್ನು ಶತ್ರುದೇಶಕ್ಕೆ ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪ ಹೊರಿಸಿ ಬಂಧಿಸಲಾಯಿತು.  ಇಸ್ರೊ ವಿಜ್ಞಾನಿಗಳ ಜತೆ ಸಂಬಂಧ ಬೆಳೆಸಿ ಈ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮರಿಯಂ ರಷಿದಾ ಮತ್ತು ಫೌಜಿಯಾ ಹಸನ್‌ ಎಂಬ ಮಾಲ್ಡಿವ್ಸ್‌ನ ಇಬ್ಬರು ಮಹಿಳೆಯರನ್ನು ಸಹ ಬಂಧಿಸಲಾಯಿತು.ಬೇಹುಗಾರಿಕಾ ದಳ ಹಾಗೂ ಕೇರಳ ಪೊಲೀಸರು ಪ್ರಕರಣದ ತನಿಖೆ ನಡೆಸಿದರು. ನಂಬಿ ಅವರನ್ನು 50 ದಿನಗಳ ಕಾಲ ಬಂಧಿಸಿ ಬಾಯಿ ಬಿಡಿಸಲು ಹಿಂಸೆ ನೀಡಲಾಗಿತ್ತು.ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲಿ ಇದ್ದ  ಮರಿಯಂ ರಷಿದಾ ಮತ್ತು ಫೌಜಿಯಾ ಹಸನ್‌ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅವರ ಬಳಿ ಇದ್ದ ಡೈರಿಯಲ್ಲಿ ನಂಬಿ ಅವರ ದೂರವಾಣಿ ಸಂಖ್ಯೆಯಿತ್ತು. ಇಸ್ರೊಗೆ ಸಂಬಂಧಿಸಿದ ಕೆಲ ಮಾಹಿತಿಗಳಿದ್ದವು ಎಂಬ ಏಕೈಕ ಕಾರಣಕ್ಕೆ ತನಿಖೆ ಆರಂಭಿಸಲಾಗಿತ್ತು.ಬೇಹುಗಾರಿಕಾ ದಳದ ತನಿಖೆಯಲ್ಲಿ ಲೋಪಗಳಿವೆ ಎಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಈ ಪ್ರಕರಣ ಸಂಪೂರ್ಣ ಕಪೋಲಕಲ್ಪಿತ ಎಂದು ಸಿಬಿಐ ಹೇಳಿತು. 1998ರಲ್ಲಿ ಸುಪ್ರೀಂಕೋರ್ಟ್‌ ಪ್ರಕರಣವನ್ನೇ ವಜಾಗೊಳಿಸಿತು.ನಾರಾಯಣನ್‌ ಅವರ ವೃತ್ತಿಜೀವನಕ್ಕೆ ಕಲ್ಲುಹಾಕಿದ್ದಕ್ಕಾಗಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿ ಪರಿಹಾರ ನೀಡುವಂತೆ ಆದೇಶಿಸಿತು. ಕೇರಳ ಹೈಕೋರ್ಟ್‌ ಅವರಿಗೆ ₨ 10 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು. ಐಬಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆಯೂ ಹೇಳಿತ್ತು.ಭಾರತ ಕ್ರಯೊಜೆನಿಕ್‌ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಬಾರದು ಎಂಬ ಕಾರಣಕ್ಕಾಗಿ ಈ ಪ್ರಕರಣ ಹುಟ್ಟುಹಾಕಲಾಯಿತೇ? ಆ ದಿನಗಳಲ್ಲಿ ಭಾರತ ಎಂದರೆ ಮೂಗು ಮುರಿಯುತ್ತಿದ್ದ ಅಮೆರಿಕದ ಕೈವಾಡ ಈ ಪ್ರಕರಣದ ಹಿಂದೆ ಇತ್ತೆ? ಸತೀಶ್‌ ಧವನ್‌ ಅವರ ಶಿಷ್ಯ, ಇಸ್ರೊದ ಅತ್ಯುತ್ತಮ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದ ದೇಶಭಕ್ತ ನಂಬಿ ನಾರಾಯಣನ್‌ ಅವರನ್ನು ಗುರಿಯಾಗಿಸಿಕೊಂಡು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಈ ಆಟ ಆಡಿತ್ತೆ? ಈವರೆಗೂ ಉತ್ತರ ಸಿಗದ ಪ್ರಶ್ನೆಗಳು ಇವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.