ಶುಕ್ರವಾರ, ಜೂನ್ 18, 2021
22 °C

ಕ್ರಿಕೆಟಿಗ ಕೈಫ್‌ಗೆ ಬಂಡಾಯದ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದಲ್ಲಿ ಹಲವು ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕಾಂಗ್ರೆಸ್‌ ಕಾರ್ಯಕರ್ತರ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರು ಟಿಕೆಟ್‌ ಹಂಚಿಕೆ ಪ್ರತಿಭಟಿಸಿ ಪ್ರತಿ­ಭ­ಟನಾ ಪ್ರದರ್ಶನಗಳನ್ನೂ ನಡೆಸಿದ್ದಾರೆ.ಕ್ರಿಕೆಟ್‌ ಆಟಗಾರ ಮೊಹಮ್ಮದ್‌ ಕೈಫ್‌ ಮತ್ತು ಭೋಜ್‌ಪುರಿ ಸಿನಿಮಾ ತಾರೆ ರವಿ ಕಿಶನ್‌ ಅವರಿಗೆ ಟಿಕೆಟ್‌ ನೀಡಿರುವುದು ಕಾರ್ಯ­ಕರ್ತರಲ್ಲಿ ಅತಿ ಹೆಚ್ಚಿನ ಅತೃಪ್ತಿ ಉಂಟು ಮಾಡಿದೆ ಎಂದು ಮೂಲಗಳು ಹೇಳಿವೆ.ಮೋಹನ್‌ಲಾಲ್‌ ಗಂಜ್‌ ಮತ್ತು ಸೀತಾಪುರ ಲೋಕಸಭಾ ಕ್ಷೇತ್ರಗಳ  ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ಹಿರಿಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.ಅಲಹಾಬಾದ್‌ನಲ್ಲಿರುವ ಕೈಫ್‌ ಮನೆಯ ಮುಂದೆ ಕಾಂಗ್ರೆಸ್‌ ಕಾರ್ಯ­ಕರ್ತರು ಕಪ್ಪು ಬಾವುಟ ಪ್ರದರ್ಶಿಸಿ­ದ್ದಾರೆ.

‘ನಾವು ಕೈಫ್‌ ಅವರ ವಿರೋಧಿ­ಗಳಲ್ಲ, ಆದರೆ ಕ್ಷೇತ್ರವನ್ನು ನೋಡಿ­ಕೊಳ್ಳುವ ಸಾಮರ್ಥ್ಯವಿರುವ ಅಭ್ಯರ್ಥಿ­ಗಳು ನಮಗೆ ಬೇಕು. ಕೈಫ್‌ ಒಬ್ಬ ತಾರೆ ಆಗಿರಬಹುದು. ಆದರೆ ಕ್ಷೇತ್ರಕ್ಕೆ ಅವರು ಏನಾದರೂ ಮಾಡ­ಬಹುದು ಎಂಬ ನಂಬಿಕೆ ಇಲ್ಲ’ ಎಂದು ಕಾಂಗ್ರೆಸ್‌ ಕಾರ್ಯಕರ್ತ­ರೊಬ್ಬರು ಅಭಿಪ್ರಾಯ­ಪಟ್ಟಿದ್ದಾರೆ.ಹಾಗೆಯೇ ಜೌನ್‌ಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರವಿ ಕಿಶನ್‌ ವಿರುದ್ಧವೂ ಪ್ರತಿಭಟನೆ ನಡೆದಿದೆ. ‘ಪ್ಯಾರಾಚೂಟ್‌ನಿಂದ ಇಳಿಸುವ ಅಭ್ಯರ್ಥಿಗಳಿಗೆ ನಮ್ಮ ವಿರೋಧ ಇದೆ. ರವಿ ಕಿಶನ್‌ ಅವರಿಗೆ ನೀಡಲಾದ ಟಿಕೆಟನ್ನು ಹಿಂದಕ್ಕೆ ಪಡೆಯಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ನಾಯಕ­ರೊಬ್ಬರು ಹೇಳಿದ್ದಾರೆ.ಸೀತಾಪುರದಿಂದ ಟಿಕೆಟ್‌ ನೀಡ­ಲಾಗಿರುವ ವೈಶಾಲಿ ಅಲಿ ಅವರ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ಅಮರ್‌ ರಿಜ್ವಿ ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದಾರೆ. ‘ನಾನು ಟಿಕೆಟ್‌ ಆಕಾಂಕ್ಷಿ ಅಲ್ಲ. ಆದರೆ ಸೀತಾಪುರದಿಂದ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಿತ್ತು’ ಎಂದು ಹೇಳಿದ್ದಾರೆ.ಪಕ್ಷದ ನಿಷ್ಠಾವಂತರನ್ನು ಕಾಂಗ್ರೆಸ್‌ ಹೈಕಮಾಂಡ್‌ ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷದ ಕಚೇರಿಯ ಮುಂದೆ ಧರಣಿ ನಡೆಸಿದ್ದ ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶ್ಯಾಮಲಾಲ್‌ ಪೂಜಾರಿ ಅವರನ್ನು ಉಚ್ಚಾಟಿಸ­ಲಾಗಿದೆ. ಕೇಂದ್ರ ಸಚಿವ ವೇಣಿ ಪ್ರಸಾದ್ ವರ್ಮಾ ಕೂಡ ಅಭ್ಯರ್ಥಿ ಆಯ್ಕೆ ವಿಧಾನವನ್ನು ಟೀಕಿಸಿದ್ದಾರೆ.ಭಿನ್ನಮತ ಸಹಜ, ಆದರೂ ಒಗ್ಗಟ್ಟಿದೆ: ಆದರೆ, ಕಾರ್ಯಕರ್ತರ ಮನವೊಲಿಸಿ, ಅಧಿಕೃತ ಅಭ್ಯರ್ಥಿಗಳ ಪರ ಕೆಲಸ ಮಾಡಿಸುವ ವಿಶ್ವಾಸವನ್ನು ಪಕ್ಷದ ನಾಯಕರು ಹೊಂದಿದ್ದಾರೆ. ‘ಸ್ವಲ್ಪ ಮಟ್ಟಿನ ಭಿನ್ನಮತ ಇರುವುದು ಸಹಜ. ಆದರೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ನಾಯಕರು ಹೇಳಿದ್ದಾರೆ.ಪ್ರಚಾರಕ್ಕೆ ಸಚಿನ್‌, ಗಂಗೂಲಿ, ದ್ರಾವಿಡ್‌?

ಅಲಹಾಬಾದ್‌ (ಪಿಟಿಐ):
ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ, ವಿರೇಂದ್ರ ಸೆಹ್ವಾಗ್‌ ಅವರ ‘ಆಶೀರ್ವಾದ ದೊರಕಿದೆ’ ಎಂದು ಕಾಂಗ್ರೆಸ್‌ ಪಕ್ಷದಿಂದ ಚುನಾವಣೆ ಅಖಾಡಕ್ಕಿಳಿದಿರುವ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಹೇಳಿದ್ದಾರೆ.ಈ ಕ್ರಿಕೆಟ್‌ ತಾರೆಯರು ಚುನಾವಣಾ ಪ್ರಚಾರ­ದಲ್ಲಿ ತಮಗೆ ನೆರವು ನೀಡಲಿದ್ದಾರೆ ಎಂಬ ನಿರೀಕ್ಷೆ­ ಉತ್ತರ ಪ್ರದೇಶದ ಫುಲ್ಪುರ ಲೋಕ­ಸಭಾ ಕ್ಷೇತ್ರ­ದ ಅಭ್ಯರ್ಥಿ ಕೈಫ್‌ ಅವರದ್ದು.ತಮ್ಮ ಬ್ಯಾಟಿಂಗ್‌ ಶೈಲಿಯಲ್ಲೇ (ಅಬ್ಬರದ ಆಟವನ್ನು ಹೊರತಾದ, ಒಂಟಿ, ಎರಡು ರನ್‌ಗಳ ಮೂಲಕ ಇನಿಂಗ್ಸ್ ಕಟ್ಟುವ) ರಾಜಕೀಯ ಮಾಡುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.‘ಸಚಿನ್‌, ದ್ರಾವಿಡ್‌, ಸೌರವ್‌ ಗಂಗೂಲಿ, ಸೆಹ್ವಾಗ್‌, ಹರಭಜನ್‌ ಸಿಂಗ್‌ ಸೇರಿದಂತೆ ನನ್ನ ಹಲವು ಹಿರಿಯ ಸ್ನೇಹಿತರೊಂದಿಗೆ ಮಾತನಾಡಿದ್ದೇನೆ. ಅವರ ಹಾರೈಕೆಯೂ ನನಗೆ ಲಭಿಸಿದೆ. ಬಿಡುವಿದ್ದಾಗ ಬಂದು ನನ್ನ ಪರವಾಗಿ ಪ್ರಚಾರ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.