ಶನಿವಾರ, ಜನವರಿ 18, 2020
26 °C

ಕ್ರಿಕೆಟ್‌ ಪ್ರೀತಿ ಹಾಡಾದಾಗ...

-–ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಇವನ ನೋಟದಲ್ಲಿ ಎಂಥ ಪ್ರಖರತೆ

ತನ್ಮಯ ಭಾವವೇ ತುಂಬಿಹುದು

ಮುಂದೆ ಬರುತ್ತಿರುವ ಚೆಂಡನು ಬಿಟ್ಟು

ಮಿಕ್ಕ ಎಲ್ಲವನೂ ತೊರೆದಿಹುದು!!

(ದಿ ವಾಲ್‌... ರಾಹುಲ್‌ ದ್ರಾವಿಡ್‌ ಬಗ್ಗೆ...)

***

ಸೂಜಿ ಬಿದ್ದರೂ ಕೆಳಗೆ, ಶಬ್ದವು ಕೇಳಿದೆಯಲ್ಲ

ಸಾವಿರ ಸಾವಿರ ಮಂದಿ, ಏತಕೊ ಕಾದಿಹರಲ್ಲ

ಆ ಚೆಂದದ ದೃಶ್ಯವನ್ನೊಮ್ಮೆ, ನೆನೆಯಲು ನಿಮಗೂ ಕಾತರ

ಆ ದೃಶ್ಯದ ವಿವರಣೆಯನ್ನು ಹೇಳಲು ನನಗೂ ಆತುರ!!

(ದಿ ಜಂಟಲ್‌ ಮ್ಯಾನ್‌ -ಜಿ.ಆರ್‌.ವಿಶ್ವನಾಥ್‌ ಬಗ್ಗೆ)

***

ಹಿಡಿದ ಕೆಲಸವನು ನಾವು, ಕುಂಬ್ಳೆಯಂತೆ ಮಾಡಿದರೆ

ಕೆಲಸಕ್ಕಿಲ್ಲ ತೊಡಕು

ಬದುಕಿಗಿಲ್ಲ ಒಡಕು!!

ನೋಡಿರಿವನ ಚಿತ್ತ

ಅದುವೇ ಸಿದ್ಧತೆಯ ಹುತ್ತ

ಆಡುವಾಗ ಇವನೊಲವು

ಅದುವೇ ಬದ್ಧತೆಯ ಚೆಲುವು!!

(ಜಂಬೋ ಖ್ಯಾತಿಯ ಅನಿಲ್‌ ಕುಂಬ್ಳೆ ಬಗ್ಗೆ)

***

ಹೆಜ್ಜೆಯೊಂದೊಂದೆ ಇಟ್ಟು

ಬಾನಲ್ಲಿ ತೇಲಿ ಬಂದ

ಎಲ್ಲರೆದೆಯ ಬೆಳಗುತಾ

ಬೆಳದಿಂಗಳನ್ನೇ ತಂದ ಈ ಚಂದ್ರ!!

(ಬಿ.ಎಸ್‌.ಚಂದ್ರಶೇಖರ್‌ ಬಗ್ಗೆ...)

( * ಹಾಡಿನ ಕೆಲ ಸಾಲುಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ)ಇದು ಕ್ರಿಕೆಟಿಗರೊಂದಿಗೆ ಅಭಿಮಾನಿಗಳ ಸಂಗೀತದ ಪಯಣ ಎಂದಿಟ್ಟುಕೊಳ್ಳಿ...!

ಮನಗೆದ್ದ ಕನ್ನಡದ ಕ್ರಿಕೆಟಿಗರಿಗೆ ಎಂಜಿನಿಯರ್‌ಗಳ ತಂಡವೊಂದು ಹಾಡಿನ ಮೂಲಕ ಸಲ್ಲಿಸಿರುವ ಅಭಿನಂದನೆಯಿದು. ಕ್ರಿಕೆಟ್‌ ಮೇಲಿರುವ ಇವರ ಪ್ರೀತಿ ಅಕ್ಷರ ರೂಪದಲ್ಲಿ ಹರಿದಿದೆ. 40 ವರ್ಷಗಳಿಂದ ಪ್ರಮುಖವಾಗಿ ಕರ್ನಾಟಕದ ಕ್ರಿಕೆಟಿಗರ ಆಟ ನೋಡುತ್ತಾ, ಸಂಭ್ರಮಿಸುತ್ತಾ, ಮೆಚ್ಚುಗೆ ವ್ಯಕ್ತಪಡಿಸುತ್ತಾ ಬೆಳೆದ ಈ ಎಂಜಿನಿಯರ್‌ಗಳು ಆಟಗಾರರಿಗೆ ಅಭಿನಂದನೆ ಸಲ್ಲಿಸಲು ಈ ಪ್ರಯೋಗ ಮಾಡಿದ್ದಾರೆ. ರಾಜ್ಯದ ಒಂಬತ್ತು ಕ್ರಿಕೆಟ್‌ ಮುತ್ತುಗಳ ಬಗ್ಗೆ ಈ ತಂಡ ಕನ್ನಡದಲ್ಲೇ ಆಡಿಯೋ ಆಲ್ಬಂ (ಹೌಸ್ಯಾಟ್) ಹೊರತಂದಿದೆ. ವಿಶೇಷವೆಂದರೆ ಆ ಹಾಡಿನಲ್ಲಿಯೇ ಅವರ ಆಟದ ಶೈಲಿಯ ವರ್ಣನೆ ಇದೆ. ಹಾಗಾಗಿ ಆಟದೊಂದಿಗೆ ಸಂಗೀತ ಬೆರೆತಿದೆ ಎನ್ನಬಹುದು. ಹಾಡಿನ ಸಿ.ಡಿ. ಜೊತೆಗೆ ಸಾಹಿತ್ಯದ ಪುಸ್ತಕವೂ ಇದೆ. ಅದರಲ್ಲಿ ಆ ಒಂಬತ್ತು ಆಟಗಾರರ ಬಗ್ಗೆ ಮಾಹಿತಿ ಹಾಗೂ ಅವರಾಟದ ಅಂಕಿಅಂಶವಿದೆ.‘ಈ ಪ್ರಯತ್ನ ಈ ಆಟಗಾರರ ಮೇಲಿನ ಪ್ರೀತಿಗಾಗಿ, ಅವರು ರಾಜ್ಯ ಹಾಗೂ ರಾಷ್ಟ್ರದ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ. ಬರೀ ಆಟೊಗ್ರಾಫ್‌ ಪಡೆಯುವುದು, ಅವರೊಂದಿಗೆ ಫೋಟೊ ತೆಗೆಸಿಕೊಳ್ಳುವುದಕ್ಕಷ್ಟೇ ನಾವು ಸೀಮಿತವಾಗಿರುತ್ತೇವೆ. ಅವರ ಸಾಧನೆಗಳನ್ನೇ ಮರೆತುಬಿಡುತ್ತೇವೆ’ ಎನ್ನುತ್ತಾರೆ ಈ ಯೋಜನೆಯ ನಿರ್ಮಾಪಕ ಹಾಗೂ ಎಂಜಿನಿಯರ್‌ ಎ.ಸುರೇಶ್‌.ಖ್ಯಾತ ಕ್ರಿಕೆಟಿಗರಾದ ಇ.ಎ.ಎಸ್‌. ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌, ಜಿ.ಆರ್‌.ವಿಶ್ವನಾಥ್‌, ರೋಜರ್‌ ಬಿನ್ನಿ, ಬ್ರಿಜೇಶ್‌ ಪಟೇಲ್‌, ಸೈಯದ್‌ ಕಿರ್ಮಾನಿ, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರಾಟ ಹಾಗೂ ವ್ಯಕ್ತಿತ್ವವನ್ನು ಹಾಡಿನ ಮೂಲಕ ಇಲ್ಲಿ ಮತ್ತೊಮ್ಮೆ ಸ್ಮರಿಸಲಾಗಿದೆ.

‘ನಾವು ಈ ಕ್ರಿಕೆಟಿಗರ ಆಟ ವೀಕ್ಷಿಸಿ ಸಂಭ್ರಮಿಸಿರುವುದು ಮಾತ್ರವಲ್ಲ, ಅವರಿಂದ ಸ್ಫೂರ್ತಿಗೊಂಡಿದ್ದೇವೆ. ನಮ್ಮ ಅದೆಷ್ಟೊ ನೋವುಗಳು ಇಲ್ಲದಂತಾಗಿವೆ. ಅವರಾಟ ನಮ್ಮ ಕೆಲಸದ ಒತ್ತಡವನ್ನೂ ಕಡಿಮೆ ಮಾಡಿದೆ’ ಎಂದು ಸುರೇಶ್‌ ಹೇಳುತ್ತಾರೆ. ಸಾಹಿತ್ಯ ಹಾಗೂ ನಿರೂಪಣೆ ಮಾಡಿರುವುದು ಸತ್ಯೇಶ್‌ ಎನ್‌.ಬೆಳ್ಳೂರ್‌. ಡಿ.ಎಸ್‌.ರೇಷ್ಮಾಶ್ರೀ, ನಮ್ರತಾ, ಭವ್ಯಾ ಹೆಬ್ಬಾಳೆ, ಅರ್ಚಿತ್‌ ನರಸಿಂಹನ್ ಹಾಡಿದ್ದಾರೆ. ಬಿ.ವಿ.ಪ್ರದೀಪ್‌ ಹಾಗೂ ಬಿ.ವಿ.ಪ್ರವೀಣ್‌ ಸಂಗೀತ ಸಂಯೋಜಿಸಿದ್ದಾರೆ. ಸೊಲೊಮನ್‌ ಅವರ ಸಂಗೀತ ವಾದ್ಯ ಸಂಯೋಜನೆ ಇದೆ.

‘ಚಿಕ್ಕವನಿದ್ದಾಗ ನನ್ನನ್ನು ತಂದೆ ಸೆಂಟ್ರಲ್‌ ಕಾಲೇಜಿನ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಗ ಪ್ರಸನ್ನ, ಚಂದ್ರ, ವಿಶಿ ಆಟ ಸವಿಯಲು ನನಗೆ ಸಾಧ್ಯವಾಯಿತು. ಆ ಸಂದರ್ಭದಲ್ಲಿ ನನಗಾದ ಅನುಭವವನ್ನು ಇಟ್ಟುಕೊಂಡು ಹಾಡು ಬರೆದಿದ್ದೇನೆ. ಈ ಆಟಗಾರರೆಲ್ಲಾ ಕನ್ನಡವನ್ನು ಮೆರೆಸಿದ ರಾಯಭಾರಿಗಳು’ ಎನ್ನುತ್ತಾರೆ ಸತ್ಯೇಶ್‌.ಸಾಹಿತ್ಯದ ಪುಸ್ತಕಕ್ಕೆ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಮುನ್ನುಡಿ ಬರೆದಿದ್ದಾರೆ. ಖ್ಯಾತ ಅಂಕಿಅಂಶ ತಜ್ಞ ಎಚ್‌.ಆರ್‌.ಗೋಪಾಲಕೃಷ್ಣ ಅಂಕಿಅಂಶ ಒದಗಿಸಿದ್ದಾರೆ. ಕ್ರಿಕೆಟಿಗರ ಕುರಿತಾದ ಇಂಥ ಸಂಗೀತದ ಸಿ.ಡಿ. ಹೊರಬಂದಿರುವುದು ಭಾರತದಲ್ಲಿ ಇದೇ ಮೊದಲು.ಕರ್ನಾಟಕದ ಮಾಜಿ ಕ್ರಿಕೆಟಿಗರ ಕುರಿತು ರಚಿಸಿರುವ ಸಂಗೀತದ ಸೀಡಿಯನ್ನು ಮಹಿಳಾ ಸೇವಾ ಸಮಾಜದಲ್ಲಿ ಶನಿವಾರ ಅನಾವರಣಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ಮಾಜಿ ರಣಜಿ ಆಟಗಾರ ಕೆ.ಎಸ್‌.ವಿಶ್ವನಾಥ್‌ ಹಾಗೂ ಎಸಿಟಿ ಬೆಂಗಳೂರಿನ ಮುಖ್ಯಸ್ಥ ಡಾ.ಗುರುರಾಜ ಕರ್ಜಗಿ ಇರುತ್ತಾರೆ.ಸ್ಥಳ: ಮಹಿಳಾ ಸೇವಾ ಸಮಾಜ, ನ್ಯಾಷನಲ್‌ ಕಾಲೇಜು ಹತ್ತಿರ, ಬಸವನಗುಡಿ. ಸಂಜೆ 5.30

ಪ್ರತಿಕ್ರಿಯಿಸಿ (+)