ಮಂಗಳವಾರ, ಏಪ್ರಿಲ್ 13, 2021
23 °C

ಕ್ರಿಕೆಟ್ ಬೆಟ್ಟಿಂಗ್: ನಾಲ್ಕು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ  ತೊಡಗಿದ್ದ ನಾಲ್ಕು ಮಂದಿಯನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶಾಂಪುರ ಮುಖ್ಯರಸ್ತೆ ನಿವಾಸಿ ಮಹಮ್ಮದ್ ಮುಸ್ತಫಾ (24), ಆರೋಗ್ಯಮ್ಮ ಲೇಔಟ್‌ನ ಅಮ್ಜದ್ ಖಾನ್ (40), ವೆಂಕಟೇಶಪುರ    ಮುಖ್ಯರಸ್ತೆಯ ಅಕ್ಬರ್ ಅಲಿ (28) ಮತ್ತು ಬಿಸ್ಮಿಲ್ಲಾ ನಗರದ ರಂಜಿತ್ ಕುಮಾರ್ (22) ಬಂಧಿತರು.

ಅವರು ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದರು. ಮುಸ್ಲಿಂ ಕಾಲೊನಿಯಲ್ಲಿ ಅವರು ಈ ದಂಧೆ  ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಎಲ್ಲರನ್ನೂ ಬಂಧಿಸಲಾಯಿತು. ಆರೋಪಿಗಳಿಂದ 14,500 ರೂಪಾಯಿ ಹಣ ಮತ್ತು 30 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ ಅಪಹರಣ:  ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗುತ್ತಿದ್ದ    ಮಹಿಳೆಯೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿಗಳು ದೋಚಿದ ಘಟನೆ ಕಾಮಾಕ್ಷಿಪಾಳ್ಯ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್‌ನ ಶ್ರೀಕಂಠೇಶ್ವರನಗರ ನಿವಾಸಿ ಪುಷ್ಪಲತಾ ಸರ ಕಳೆದುಕೊಂಡವರು. ಅವರು ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ವಿವಾಹ   ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 ಅಲ್ಲಿಂದ ಮನೆಗೆ ಹೋಗಲು ಆಟೊ ನಿಲ್ದಾಣದ ಸಮೀಪ ನಿಂತಿದ್ದ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನೆಕ್ಲೆಸ್ ಮತ್ತು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.  ದರೋಡೆಯಾದ ಆಭರಣಗಳ ಮೊತ್ತ 1.25 ಲಕ್ಷ ರೂಪಾಯಿ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಕಳವು: ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ದಂಪತಿಯ ಸುಮಾರು 3.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ರಾಜಾಜಿನಗರ  ಎರಡನೇ ಬ್ಲಾಕ್‌ನ ರಾಜರಾಜೇಶ್ವರಿ ಕಲ್ಯಾಣ    ಮಂಟಪದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಈ ಬಗ್ಗೆ ನಗರದ ಮರಿಯಪ್ಪನಪಾಳ್ಯ ನಿವಾಸಿ ಶ್ರೀನಿವಾಸನ್ ಎಂಬುವರು ದೂರು ನೀಡಿದ್ದಾರೆ. ಕಲ್ಯಾಣ ಮಂಟಪದ ಮೊದಲನೇ ಮಹಡಿಯಲ್ಲಿರುವ ಕೊಠಡಿಯೊಂದನ್ನು ನಮಗೆ ನೀಡಲಾಗಿತ್ತು. ಸುಮಾರು ಇನ್ನೂರು ಗ್ರಾಂ ಚಿನ್ನಾಭರಣ ಮತ್ತು ಬಟ್ಟೆಗಳಿದ್ದ ಸೂಟ್‌ಕೇಸ್ ಅನ್ನು ಕೊಠಡಿಯಲ್ಲಿಟ್ಟು ಬೀಗ ಹಾಕಿಕೊಂಡು ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗಿದ್ದಾಗ ದುಷ್ಕರ್ಮಿಗಳು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.   ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಿಲು ಮುರಿದು ಕಳವು: ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು 20 ಸಾವಿರ ನಗದು ಮತ್ತು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಕಳವು ಮಾಡಿದ ಘಟನೆ ಕೊತ್ತನೂರು ಸಮೀಪದ  ಕೆ.ನಾರಾಯಣಪುರದಲ್ಲಿ ನಡೆದಿದೆ.

ಮನೆಯ ಮಾಲೀಕ ಡಾ.ಶ್ರೀನಿವಾಸಲು  ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಕುಟುಂಬ ಸಮೇತರಾಗಿ ಹೊರಗೆ ಹೋಗಿದ್ದಾಗ ಕಳವು  ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೊತ್ತನೂರು   ಪೊಲೀಸರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.