ಬುಧವಾರ, ಮೇ 25, 2022
22 °C

ಕ್ರಿಕೆಟ್ ಬೆಟ್ಟಿಂಗ್: ನಿಗಾ ಇಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ದಂಧೆ ನಡೆಸುವ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡುವಂತೆ ನಗರದ ಎಲ್ಲಾ ಠಾಣೆಗಳ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ನಗರ ಪೊಲೀಸ್ ಶಂಕರ್ ಬಿದರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕ್ರಿಕೆಟ್ ಬೆಟ್ಟಿಂಗ್ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ಮಾಹಿತಿ ಕಲೆ ಹಾಕುವಂತೆ ಮತ್ತು ಬೆಟ್ಟಿಂಗ್‌ನಲ್ಲಿ ತೊಡಗಿಕೊಳ್ಳುವ ವ್ಯಕ್ತಿಗಳನ್ನು ಬಂಧಿಸುವಂತೆ ಸಿಬ್ಬಂದಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಬೆಟ್ಟಿಂಗ್ ದಂಧೆ ನಡೆಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ, ಅವರು ಸಮೀಪದ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರು ನೀಡಬಹುದು. ಬೆಟ್ಟಿಂಗ್ ದಂಧೆಯ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಬಿದರಿ ತಿಳಿಸಿದ್ದಾರೆ.ಈ ನಡುವೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಕುಮಾರಸ್ವಾಮಿ ಲೇಔಟ್‌ನ ರಾಜ್ಯೋತ್ಸವನಗರದ ಗೌರವ್‌ರಾಯ್ (22), ಸಂಜೀವ್ ರಂಜನ್ (23), ಮಾನವ್ (21), ಅಮೃಂದರ್ ಸಿಂಗ್ (25), ಜೆ.ಪಿ.ನಗರದ ಸುಮಂತ್ (23) ಮತ್ತು ಅವಿಸಿಂಗ್ (25) ಬಂಧಿತರು.ಆರೋಪಿಗಳು ಮನೆಯೊಂದರಲ್ಲಿ ಪಾಕಿಸ್ತಾನ ಮತ್ತು ಕೀನ್ಯಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅವರೆಲ್ಲರನ್ನು ಬಂಧಿಸಿ ಲ್ಯಾಪ್‌ಟಾಪ್, ಟಿ.ವಿ, ಏಳು ಮೊಬೈಲ್ ಫೋನ್‌ಗಳು ಮತ್ತು 1,800 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾಫ್ಟ್‌ವೇರ್ ಎಂಜಿನಿಯರ್ ಪತ್ನಿ ಅತ್ಮಹತ್ಯೆ

ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರ ಪತ್ನಿ ವರದಕ್ಷಿಣೆ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪುರದ ಶಕ್ತಿನಗರದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಾಮಕೃಷ್ಣ ಎಂಬುವರ ಪತ್ನಿ ಅನೂಷಾ (25) ಆತ್ಮಹತ್ಯೆ ಮಾಡಿಕೊಂಡವರು. ಆಂಧ್ರಪ್ರದೇಶ ಮೂಲದ ಅವರು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ವೈದ್ಯರಾಗಿದ್ದ ಅನೂಷಾ ಮದುವೆಯ ನಂತರ ಕೆಲಸ ಬಿಟ್ಟಿದ್ದರು. ಅವರಿಗೆ 10 ತಿಂಗಳ ಹೆಣ್ಣು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರು ಬೆಳಿಗ್ಗೆ 12 ಗಂಟೆ ಸುಮಾರಿಗೆ ಮಗುವಿಗೆ ಊಟ ಮಾಡಿಸಿ, ನಂತರ ಮಗುವನ್ನು ಅತ್ತೆಯ ಬಳಿ ಬಿಟ್ಟು ಸ್ನಾನದ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರಾಮಕೃಷ್ಣ ಅವರ ಸಹೋದರಿ ಮತ್ತು ಸಹೋದರ ಅನೂಷಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸರಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.