ಶನಿವಾರ, ಜೂನ್ 19, 2021
27 °C

ಕ್ರೀಡಾ ಇಲಾಖೆ: ಖರ್ಚಾದ ಹಣಕ್ಕೆ ಲೆಕ್ಕಪತ್ರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಖರ್ಚು ಮಾಡಿದ ಹಣಕ್ಕೆ ಲೆಕ್ಕಪತ್ರವೇ ಇಲ್ಲ. ಯಾವ ಉದ್ದೇಶಕ್ಕೆ ಹಣ ಡ್ರಾ ಮಾಡಲಾಗಿದೆ ಎಂಬ ಮಾಹಿತಿಯೂ ಇಲ್ಲ, ಓಚರ್‌ಗಳಿಲ್ಲ...ನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದಿರುವ ಅವ್ಯವ ಹಾರ ವ್ಯಾಪ್ತಿ ಹೀಗೆ ಹರಡಿಕೊಂಡಿದೆ.

 

ಇಲಾಖೆಯ ಕೇಂದ್ರ ಕಚೇರಿಯಿಂದ ಬಂದಿದ್ದ ಜಂಟಿ ನಿರ್ದೇಶಕ  ವೈ.ಆರ್. ಕಾಂತರಾಜೇಂದ್ರ ಅವರ ನೇತೃತ್ವದ ತಂಡ ಕಳೆದ ಡಿ. 2 ಮತ್ತು 3ರಂದು ಕಚೇರಿಯ ಲೆಕ್ಕ ತಪಾಸಣೆ ಮಾಡಿ ಸಲ್ಲಿಸಿರುವ ವರದಿ ಇಂಥ ಹಲವು ವಿಷಯಗಳನ್ನು ಪತ್ತೆ ಹಚ್ಚಿದೆ.ಲೆಕ್ಕಪತ್ರವಿಲ್ಲ: 2009- 10ನೇ ಸಾಲಿನ ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಟಿಎ ಮತ್ತು ಡಿಎ ಮತ್ತು ಇತರೆ ಖರ್ಚಿಗಾಗಿ ರೂ 1,26,840ಕ್ಕೆ ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ. 2010- 11ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಖರ್ಚು ಮಾಡಿರುವ ರೂ 78,727ಕ್ಕೂ ಲೆಕ್ಕಪತ್ರ ಸಲ್ಲಿಸಿಲ್ಲ ಎಂದು ವರದಿ ತಿಳಿಸಿದೆ.ಪೈಕಾ- ಲೆಕ್ಕಪತ್ರವಿಲ್ಲ: 2010- 11ನೇ ಸಾಲಿನ ಪೈಕಾ ಅಡಿಯಲ್ಲಿ ಯೋಜನಾ ಬಾಬ್ತಿನಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ರೂ 2739 ಲಕ್ಷ ಬಿಡುಗಡೆಯಾಗಿದ್ದು, ಪೂರ್ಣ ಹಣ ವೆಚ್ಚವಾಗಿದೆ. ಆದರೆ ಈ ಸಂಬಂಧ ಲೆಕ್ಕಪತ್ರ ಮತ್ತು ಉಪಯೋಗಿತಾ ಪತ್ರಗಳನ್ನು ಸಲ್ಲಿಸಿಲ್ಲ ಎಂದು ವರದಿ ಹೇಳಿದೆ.ದಿನಾಂಕವೇ ಇಲ್ಲ: ದಾಸ್ತಾನು ಪುಸ್ತಕದಲ್ಲಿ ಬಿಲ್ ಸಂಖ್ಯೆ ಮತ್ತು ದಿನಾಂಕ ನಮೂದಿಸಿಲ್ಲ. ದಾಸ್ತಾನು ಪುಸ್ತಕದ ಅನುಸಾರ ಖರ್ಚು ಮಾಡಿರುವ ಹಣ ಯಾವ ಕಾರ್ಯಕ್ಕೆ ಖರ್ಚಾಗಿದೆ ಎಂಬ ಬಗ್ಗೆ ನಮೂದಾಗಿಲ್ಲ. ಖರೀದಿಸಿದ ಬಿಲ್ಲುಗಳಿಗೆ ದರಪಟ್ಟಿ ಪಡೆದಿಲ್ಲ ಎಂದು ವರದಿ ಹೇಳುತ್ತದೆ.ವಿವರ ಹೀಗಿದೆ: ಸಾಯಿ ಸ್ಪೋರ್ಟ್‌ನಿಂದ ಮೆಡಲ್ ಖರೀದಿ- ರೂ 18,055, ಹಾಬಿ ಸ್ಟುಡಿಯೋ ವಿಡಿಯೋ ಕವರೇಜ್ ಫೋಟೋ- ರೂ 7,100, ಶಂಕರ್ ಆರ್ಟ್ಸ್‌ನಿಂದ ಬ್ಯಾನರ್ ಬರೆಸಿದ ಬಾಬ್ತು- ರೂ 2,700, ಹಾಬಿ ಸ್ಟುಡಿಯೋ ವಿಡಿಯೋ ಕವರೇಜ್ ಫೋಟೋ- ರೂ 6,500, ಸಾಯಿ ಸ್ಪೋರ್ಟ್ಸ್‌ನಿಂದ ಡಿಸ್ಕಸ್ ಥ್ರೋ ಖರೀದಿ- ರೂ 1,390, ತಾಲ್ಲೂಕು ಮಟ್ಟದ ಪೈಕಾ ಕ್ರೀಡಾಕೂಟಕ್ಕೆ ಮೆಡಲ್ಸ್ ಖರೀದಿ- ರೂ 44,919, ಜಿಲ್ಲಾಮಟ್ಟದ ಗ್ರಾಮೀಣ ಪೈಕಾ ಕ್ರೀಡಾಕೂಟಕ್ಕೆ ರೂ 18,055, ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಕ್ರೀಡಾ ಸಾಮಗ್ರಿ ಖರೀದಿ- ರೂ 22,339, ಹಾಬಿ ಸ್ಟುಡಿಯೂ ಫೋಟೋ ಕವರೇಜ್- ರೂ 7,200, ಶಿವಗ್ರಾಫಿಕ್ಸ್‌ನಿಂದ ಪ್ರಮಾಣಪತ್ರಗಳ ಮುದ್ರಣ ಮತ್ತು ಬ್ಯಾಡ್ಜ್‌ಗಳ ಖರೀದಿ- ರೂ 8,400, ಪರ್ವತ್ ಸ್ಪೋರ್ಟ್ಸ್‌ನಿಂದ ಬ್ಲಾಕ್ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಸಾಮಗ್ರಿ ಖರೀದಿ- ರೂ 14,355. ನಗದು ಪುಸ್ತಕ; ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಗದು ಪುಸ್ತಕವನ್ನೂ ಸಮರ್ಪಕವಾಗಿ ನಿರ್ವಹಿಸಿಲ್ಲ. ಜನರಲ್ ನಗದು ಪುಸ್ತಕ ಮತ್ತು ಬ್ಯಾಂಕ್ ನಗದು ಪುಸ್ತಕ ಪ್ರತ್ಯೇಕವಾಗಿ ನಿರ್ವಹಣೆಯಾಗಿಲ್ಲ.ನಗದು ಪುಸ್ತಕದಲ್ಲಿ ಡ್ರಾ ಮಾಡಿರುವ ಹಣಕ್ಕೆ ಚೆಕ್ ಸಂಖ್ಯೆ ಮತ್ತು ದಿನಾಂಕ, ಯಾವ ಉದ್ದೇಶಕ್ಕೆ ಹಣ ಡ್ರಾ ಮಾಡಲಾಗಿದೆ ಮತ್ತು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಹಾಗಾಗಿ ನಗದು ಪುಸ್ತಕವನ್ನು ಪರಿಶೀಲಿಸಿದಾಗ ಯಾವುದೇ ಪೂರ್ಣ ಮಾಹಿತಿ ಅದರಿಂದ ದೊರಕಲಿಲ್ಲ ಎಂದು ವರದಿ ತಿಳಿಸಿದೆ.ಕಾರ್ಯಕ್ರಮಗಳನ್ನು ನಡೆಸಲು ಡಿ.ಸಿ.ಬಿಲ್ಲಿನ ಮೇಲೆ ಹಣ ಡ್ರಾ ಮಾಡಲಾಗಿದ್ದು, ಯಾವ ಉದ್ದೇಶಕ್ಕೆ ಡ್ರಾ ಮಾಡಲಾಗಿದೆ ಮತ್ತು ಡಿ.ಸಿ.ಬಿಲ್ಲಿನಲ್ಲಿ ಆದಾಯ ತೆರಿಗೆ ಕಡಿತವಾಗಿರುವ ಬಗ್ಗೆ ಮಾಹಿತಿ ಇಲ್ಲ. ಡಿ.ಸಿ ಬಿಲ್ ರಿಜಿಸ್ಟರ್ ನಿರ್ವಹಣೆಯಾಗಲೀ ಅಥವಾ ಡಿ.ಸಿ.ಬಿಲ್ ಪ್ರತಿಗಳಾಗಲೀ ಲಭ್ಯವಿರಲಿಲ್ಲ. ಡಿ.ಸಿ.ಬಿಲ್‌ನಲ್ಲಿ ಡ್ರಾ ಮಾಡಿರುವ ಹಣಕ್ಕೆ ಸಂಬಂಧಿಸಿದಂತೆ ಪೂರ್ಣ ಓಚರ್‌ಗಳೂ ಲಭ್ಯವಿಲ್ಲ ಎಂದು ವರದಿ ಹೇಳುತ್ತದೆ.ಮುಂಗಡ ರಿಜಿಸ್ಟರ್: ಮುಂಗಡ ರಿಜಿಸ್ಟರ್ ಅನ್ನೂ ಸರಿಯಾಗಿ ನಿರ್ವಹಿಸಿಲ್ಲ. ಕ್ರೀಡಾ ಸಾಮಗ್ರಿಗಳ ಖರೀದಿ ಬಗ್ಗೆ ಚೆಕ್ ಪಾವತಿಸಿ ರುವ ವಿಷಯದಲ್ಲಿ ಚೆಕ್ ಸಂಖ್ಯೆ ಮತ್ತು ದಿನಾಂಕ, ಯಾವುದೇ ದಾಖಲಾತಿಗಳು ಈ ರಿಜಿಸ್ಟರ್‌ನಲ್ಲಿ ನಮೂದಾಗಿಲ್ಲ ಎಂದು ವರದಿಯಲ್ಲಿ ಆಕ್ಷೇಪಿಸಲಾಗಿದೆ. ದಾಸ್ತಾನು ಪುಸ್ತಕದ ಕತೆಯೂ ಇದೇ ಆಗಿದೆ.

 

ಕ್ರೀಡಾ ಸಾಮಗ್ರಿಗಳನ್ನು ಖರೀದಿಸಿದ ಬಗ್ಗೆ  ಮತ್ತು ಕಾರ್ಯಕ್ರಮಕ್ಕೆ ಇತರೆ ಸಾಮಗ್ರಿಗಳನ್ನು ಖರೀದಿಸಿರುವ ಬಗ್ಗೆ ವಿವರಗಳನ್ನು ನಮೂದಿಸದಿರುವುದು, ಖರೀದಿಸಿದ ಒಟ್ಟಿ ಮೊತ್ತ, ದಿನಾಂಕ ಮತ್ತು ಉದ್ದೇಶವೂ ನಮೂದಾಗಿಲ್ಲ.ಕಡತವಿಲ್ಲ:
ತನಿಖೆಯ ಸಮಯದಲ್ಲಿ ಯಾವುದೇ ಕಡತಗಳನ್ನು ತಪಾಸಣೆಗೆ ಒದಗಿಸಿಲ್ಲ ಎಂಬುದು ವರದಿಯ ಪ್ರಮುಖ ಆಕ್ಷೇಪಣೆ. ಕಚೇರಿಯ ಯಾವುದೇ ಕಡತಕ್ಕೂ ನೋಟ್‌ಶೀಟ್ ಇಲ್ಲ. ಬಿಡುಗಡೆಯಾದ ಹಣದ ವೆಚ್ಚದ ಕುರಿತು ಕಡತದಲ್ಲಿ ಮಂಡಿಸುವಾಗ, ಸಂಬಂಧಿಸಿದ ಅಧಿಕಾರಿಗಳಿಂದ ಒಪ್ಪಿಗೆ, ಅನುಮೋದನೆ ಪಡೆದ ದಾಖಲಾತಿಗಳನ್ನು ಕಡತದಲ್ಲಿ ಹಾಕಿಲ್ಲ. ಡಿ.ಸಿ.ಬಿಲ್ಲನ್ನು ಕಡತದಲ್ಲಿ ಮಂಡಿಸಿಲ್ಲ. ನಿರ್ವಹಣೆ ಮಾಡಿಲ್ಲ. ಇದು ಕಡತ ನಿರ್ವಹಣೆ ಲೋಪದೋಷ ಎಂದು ವರದಿ ಹೇಳುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.