ಶುಕ್ರವಾರ, ಏಪ್ರಿಲ್ 23, 2021
24 °C

ಕ್ರೀಡಾ ಸಚಿವಾಲಯದ ವಿರುದ್ಧ ರವಿಶಾಸ್ತ್ರಿ ಕಿಡಿಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕ್ರೀಡಾ ಸಚಿವಾಲಯದ ವಿರುದ್ಧ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರು ಕಿಡಿಕಿಡಿಯಾಗಿದ್ದಾರೆ.

ರಾಜೀವ್‌ಗಾಂಧಿ ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಸಭೆಯಲ್ಲಿ ರವಿಶಾಸ್ತ್ರಿಯವರು ಪಾಲ್ಗೊಂಡಿಲ್ಲ ಎಂಬುದಾಗಿ ಕ್ರೀಡಾ ಇಲಾಖೆಯ ಮೂಲಗಳು ಹೇಳಿರುವುದರ ಬಗ್ಗೆ ರವಿಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲು ರಚಿಸಲಾದ 15 ಮಂದಿ ಸದಸ್ಯರ ಸಮಿತಿಯಲ್ಲಿ ರವಿಶಾಸ್ತ್ರಿಯವರೂ ಇದ್ದಾರೆಂದು ಕ್ರೀಡಾ ಸಚಿವಾಲಯ ಪ್ರಕಟಿಸಿತ್ತು.`ಆದರೆ ರವಿಶಾಸ್ತ್ರಿಯವರಿಗೆ ಈ ವಿಷಯ ತಿಳಿಸಲು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು, ಅವರನ್ನು ಸಂಪರ್ಕಿಸಲು ಸಾಧ್ಯವಾಗಲೇ ಇಲ್ಲ~ ಎಂದು ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿರುವುದು ಸೋಮವಾರ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿರುವ ರವಿಶಾಸ್ತ್ರಿ `ನಾವು ಪ್ರಸಕ್ತ ಸಂಪರ್ಕ ಕ್ರಾಂತಿಯ ಯುಗದಲ್ಲಿದ್ದೇವೆ. ನನ್ನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂಬ ಕ್ರೀಡಾ ಸಚಿವಾಲಯದ ಹೇಳಿಕೆಗೆ ಅಳುವುದೋ, ನಗುವುದೋ ಗೊತ್ತಾಗುತ್ತಿಲ್ಲ. ನನ್ನ ಮೊಬೈಲ್ ಫೋನ್‌ಗೆ ಇಲಾಖೆಯಿಂದ ಯಾವುದೇ ಕರೆ ಅಥವಾ ಎಸ್‌ಎಂಎಸ್ ಬಂದಿಲ್ಲ. ನನ್ನ ಇಮೇಲ್‌ಗೂ ಯಾವುದೇ `ಮೇಲ್~ ಬಂದಿಲ್ಲ. ಅಂಚೆ ಮೂಲಕ ಅಥವಾ  ಕೊರಿಯರ್ ಸೇವೆಗಳ ಮೂಲಕವೂ ನನಗೆ ಯಾವುದೇ ಪತ್ರ ಬಂದಿಲ್ಲ. ಪರಿಸ್ಥಿತಿ ಈ ರೀತಿ ಇರುವಾಗ ನಾನು ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ~ ಎಂದೂ ಅವರು ಪ್ರಶ್ನಿಸಿದ್ದಾರೆ.`ಅಂತಹದ್ದೊಂದು ಸಮಿತಿಗೆ ನನ್ನನ್ನು ಸದಸ್ಯನನ್ನಾಗಿ ನೇಮಕ ಮಾಡಿದ್ದಾರೆಂಬುದೇ ಅತ್ಯಂತ ಗೌರವದ ಸಂಗತಿ ಎಂದು ನಾನು ಭಾವಿಸುತ್ತೇನೆ. ಆದರೆ ಅಂತಹ ವಿಷಯಗಳನ್ನು ಮಾಧ್ಯಮಗಳಲ್ಲಿ ಓದಿ ಸಭೆಗಳಲ್ಲಿ ಪಾಲ್ಗೊಳ್ಳಲಾಗುವುದಿಲ್ಲ~ ಎಂದೂ ಅವರು ನುಡಿದಿದ್ದಾರೆ.ರಾಜ್ಯವರ್ಧನ್ ಸಿಂಗ್ ರಾಥೋಡ್ ಸಾರಥ್ಯದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಬೈಚುಂಗ್ ಭುಟಿಯಾ, ಅಪರ್ಣಾ ಪೋಪಟ್, ಅಖಿಲ್ ಕುಮಾರ್, ರಾಜೇಶ್ ಕುಮಾರ್ ಸೇರಿದಂತೆ 15 ಮಂದಿ ಇದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.