ಶನಿವಾರ, ಜನವರಿ 18, 2020
21 °C

ಕ್ವಾರ್ಟರ್‌ಫೈನಲ್‌ಗೆ ಫೆಡರರ್, ನಡಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬನ್ (ಎಎಫ್‌ಪಿ): ಆತಿಥೇಯ ದೇಶದ ಬೆರ್ನಾರ್ಡ್ ಟಾಮಿಕ್ ಅವರನ್ನು ಸೋಲಿಸಿದ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.ಭಾನುವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೆಡರರ್ 6-4, 6-2, 6-2ರಲ್ಲಿ ಆಸ್ಟ್ರೇಲಿಯಾದ ಟಾಮಿಕ್ ಎದುರು ಜಯಿಸಿದರು. 35 ನಿಮಿಷ ನಡೆದ ಮೊದಲ ಸೆಟ್‌ನಲ್ಲಿ ಮೂರನೇ ಶ್ರೇಯಾಂಕದ ಫೆಡರರ್‌ಗೆ ಅಲ್ಪ ಪ್ರತಿರೋಧ ಎದುರಾಯಿತು. ಒಟ್ಟು ಒಂದು ಗಂಟೆ 44 ನಿಮಿಷ ನಡೆದ ಪಂದ್ಯದಲ್ಲಿ ಸ್ವಿಸ್ ಆಟಗಾರ 13 ಏಸ್‌ಗಳನ್ನು ಸಿಡಿಸಿದರು.ಇದೇ ವಿಭಾಗದ ಇತರ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ    ಸ್ಪೇನ್‌ನ ಎರಡನೇ ಶ್ರೇಯಾಂಕದ ರಫೆಲ್ ನಡಾಲ್ 6-4, 6-4, 6-2ರಲ್ಲಿ ತಮ್ಮ ದೇಶದವರೇ ಆದ ಫೆಲಿಸಿನೋ ಲೊಪೆಜ್ ಮೇಲೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 4-6, 7-6, 7-6, 7-6ರಲ್ಲಿ ಸ್ಪೇನ್‌ನ ನಿಕೊಲಸ್ ಅಲ್ಮಾರ್ಗೊ ವಿರುದ್ಧವೂ, ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಪೊಟ್ರೊ 6-4, 6-2, 6-1ರಲ್ಲಿ ಜರ್ಮನಿಯ ಫಿಲಿಪ್ ಕೊಲ್‌ಶ್ರೈಬರ್ ಮೇಲೂ ಗೆಲುವು ಸಾಧಿಸಿ ಎಂಟರಘಟ್ಟಕ್ಕೆ ಪ್ರವೇಶಿಸಿದರು.ನಾ ಲೀ ಗೆ ನಿರಾಸೆ: ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಚೀನಾದ ನಾ ಲೀ ಮಹಿಳೆಯರ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹೋರಾಟ ಅಂತ್ಯಗೊಳಿಸಿದರು. ಕಳೆದ ವರ್ಷದ ಚಾಂಪಿಯನ್ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 4-6, 7-6, 6-4ರಲ್ಲಿ ನಾ ಅವರನ್ನು ಸೋಲಿಸಿದರು.ಮೊದಲ ಸೆಟ್‌ನಲ್ಲಿ ಗೆಲುವು ಪಡೆದು ಮುನ್ನಡೆ ಸಾಧಿಸಿದ ಚೀನಾದ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಪ್ರಬಲ ಹೋರಾಟ ತೋರಿದರು. ಒಟ್ಟು ನಾಲ್ಕು ಏಸ್‌ಗಳನ್ನು ಸಿಡಿಸಿದರು. ಆದರೂ, ಪಂದ್ಯ ಗೆದ್ದುಕೊಳ್ಳಲು ಆಗಲಿಲ್ಲ. 2011ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಈ ಇಬ್ಬರೂ ಆಟಗಾರ್ತಿಯರು ಫೈನಲ್ ಪ್ರವೇಶಿಸಿದ್ದರು. ಅಲ್ಲಿ ಲೀ ಅವರನ್ನು ಮಣಿಸಿ ಕ್ಲೈಸ್ಟರ್ಸ್ ಚಾಂಪಿಯನ್ ಆಗಿದ್ದರು.ಚೀನಾದ ಆಟಗಾರ್ತಿ ಹಿಮ್ಮಡಿ ನೋವಿನಿಂದ ಬಳಲಿದರು. `ಈ ಪಂದ್ಯದಲ್ಲಿ ಗೆಲುವು ಪಡೆಯುತ್ತೇನೆ ಎನ್ನುವ ನಿರೀಕ್ಷೆ ಇರಲಿಲ್ಲ. ಈ ಪಂದ್ಯ ಸವಾಲಿನಿಂದ ಕೂಡಿತ್ತು~ ಎಂದು ಕ್ಲೈಸ್ಟರ್ಸ್    ಪ್ರತಿಕ್ರಿಯಿಸಿದರು.ಇದೇ ವಿಭಾಗದ ಇತರ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 6-2, 6-2ರಲ್ಲಿ ಜೆಕ್ ಗಣರಾಜ್ಯದ ಇವೆಟಾ ಬೆನೆಸೋವಾ ಮೇಲೆ ಗೆಲುವು ಸಾಧಿಸಿ ಎಂಟರ ಘಟ್ಟಕ್ಕೆ ರಹದಾರಿ ಪಡೆದರು.

ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಡೆನ್ಮಾರ್ಕ್‌ನ ಕ್ಯಾರೊಲಿನ್ ವೊಜ್‌ನಿಯಾಕಿ 6-0, 7-5ನೇರ ಸೆಟ್‌ಗಳಿಂದ ಸರ್ಬಿಯಾದ ಜೆಲೆನಾ ಜಾಂಕೊವಿಚ್ ಎದುರು ಗೆಲುವು ಸಾಧಿಸಿದರು. 103 ನಿಮಿಷ ನಡೆದ ಪಂದ್ಯದ ಎರಡನೇ ಸೆಟ್‌ನಲ್ಲಿ ಕ್ಯಾರೊಲಿನ್ ಪ್ರಬಲ ಪೈಪೋಟಿ ಎದುರಿಸಿದರು.ಡಬಲ್ಸ್ ವಿಭಾಗ: ಪ್ರಶಸ್ತಿ ಜಯಿಸುವ ನೆಚ್ಚಿನ ಜೋಡಿ ಎನಿಸಿರುವ ಅಗ್ರ ಶ್ರೇಯಾಂಕದ ಅಮೆರಿಕದ ಮೈಕ್-ಬಾಬ್ ಅವರು 6-4, 0-6, 6-2ರಲ್ಲಿ ಇಂಗ್ಲೆಂಡ್‌ನ ಕಾಲಿನ್ ಫ್ಲೆಮಿಂಗ್-ರಾಸ್ ಎದುರು ಗೆಲುವು ಸಾಧಿಸಿದರು.ಇನ್ನೊಂದು ಪಂದ್ಯದಲ್ಲಿ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ-ಕೆನಡಾದ ಡೇನಿಯಲ್ ನೆಸ್ಟರ್ ಜೋಡಿ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆಯಿತು. ಈ ಜೋಡಿ 7-6, 6-2ರಲ್ಲಿ ಇಟಲಿಯ ಡೇನಿಯೆಲ್ ಬ್ರಾಸಿಯಿಲಾ- ಪೊಟಿಟೊ ಸ್ಟಾರೇಸ್ ಅವರನ್ನು ಸೋಲಿಸಿತು.

ಪ್ರತಿಕ್ರಿಯಿಸಿ (+)