ಕ್ವಾರ್ಟರ್ ಗೆ ಕಶ್ಯಪ್ ಶ್ರೀಕಾಂತ್

ಲಖನೌ (ಪಿಟಿಐ): ಹಾಲಿ ಚಾಂಪಿಯನ್, ಭಾರತದ ಪರುಪಳ್ಳಿ ಕಶ್ಯಪ್ ಮತ್ತು ಕಿದಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. ಆದರೆ, ಮಹಿಳೆಯರ ವಿಭಾಗದಲ್ಲಿ ಪಿ.ವಿ. ಸಿಂಧು ನಿರಾಸೆ ಅನುಭವಿಸಿದರು.
ಗುರುವಾರ ನಡೆದ ಪುರುಷರ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಕಶ್ಯಪ್ 21–19, 21–10ರಿಂದ ಚೀನಾದ ಝು ಸಿಯುವಾನ್ ಅವರ ಸವಾಲನ್ನು ಮೆಟ್ಟಿ ನಿಂತರು. ಮೊದಲ ಸೆಟ್ನಲ್ಲಿ ಎದುರಾಳಿ ಯಿಂದ ಕಠಿಣ ಸವಾಲು ಎದುರಿಸಿದ ಕಶ್ಯಪ್ ಕೊನೆಯ ಹಂತದಲ್ಲಿ ತಿರುಗೇಟು ನೀಡಿದರು.
ಆರಂಭದಿಂದಲೂ ತುರುಸಿನ ಹೋರಾಟ ಕಂಡ ಪಂದ್ಯದಲ್ಲಿ ಚೀನಾದ ಆಟಗಾರನ್ನನು 19 ಅಂಕಗಳಿಗೆ ಸೀಮಿತಗೊಳಿಸಿ ತಾವು ಸೆಟ್ ಗೆದ್ದ ಕಶ್ಯಪ್ ಸಂಭ್ರಮಿಸಿದರು. ಆದರೆ, ಅದಕ್ಕಾಗಿ ಅವರು ಬಹಳಷ್ಟು ಬೆವರು ಹರಿಸಬೇಕಾಯಿತು. ಆದರೆ, ಎರಡನೇ ಸೆಟ್ನಲ್ಲಿ ಚೀನಾದ ಆಟಗಾರನನ್ನು ಬಹುಬೇಗನೆ ಕಟ್ಟಿ ಹಾಕಿದರು. 21–10ರಿಂದ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಕ್ವಾರ್ಟರ್ಫೈನಲ್ನತ್ತ ಹೆಜ್ಜೆ ಹಾಕಿದರು.
ಶುಕ್ರವಾರ ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಕಶ್ಯಪ್ ಚೀನಾದ ಹುಯಾಂಗ್ ಯುಕ್ಸಿಯಾಂಗ್ ಅವರನ್ನು ಎದುರಿಸಲಿದ್ದಾರೆ.
ಮುಯ್ಯಿ ತೀರಿಸಿಕೊಂಡ ಶ್ರೀಕಾಂತ್ ಪುರುಷರ ವಿಭಾಗದ ಇನ್ನೊಂದು ಪ್ರಿ ಕ್ವಾರ್ಟರ್ಫೈನಲ್ನಲ್ಲ ಕೆ. ಶ್ರೀಕಾಂತ್ 21–9, 21–12 ರಿಂದ ಮಲೇಷ್ಯಾದ ಜುಲ್ಕನೈನ್ ಜೈನುದ್ದೀನ್ ವಿರುದ್ಧ ಗೆದ್ದರು.
ಐದು ದಿವಸಗಳ ಹಿಂದೆ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಜೈನುದ್ದೀನ್ ಎದುರು ಸೋಲನುಭವಿಸಿದ್ದ ಶ್ರೀಕಾಂತ್ ಈ ಪಂದ್ಯದಲ್ಲಿ ತಮ್ಮ ಛಲದ ಆಟದ ಮೂಲಕ ಸೇಡು ತೀರಿಸಿಕೊಂಡರು. ವಿಶ್ವ ಶ್ರೇಯಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಶ್ರೀಕಾಂತ್ ಶುಕ್ರವಾರ ನಡೆಯುವ ಕ್ವಾರ್ಟರ್ಫೈನಲ್ ಪಂದ್ಯ ದಲ್ಲಿ ಮಲೇಷ್ಯಾದ ಗೋಹ್ ಸೂನ್ ಹೌಟ್ ಅವರನ್ನು ಎದುರಿಸುವರು.
32 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಮೊದಲ ಸೆಟ್ನಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಎರಡನೇ ಸೆಟ್ನಲ್ಲಿಯೂ ಮಿಂಚಿನ ವೇಗದ ಸ್ಮ್ಯಾಷ್ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಸುಲಭವಾಗಿ ದಕ್ಕಿದ ಪಾಯಿಂಟ್ಗಳಿಂದ ಜಯಿಸಿದರು.
ಸಿಂಧುಗೆ ಆಘಾತ
ಪ್ರಶಸ್ತಿ ನಿರೀಕ್ಷೆ ಮೂಡಿಸಿದ್ದ ಭಾರತದ ಮೂರನೇ ಶ್ರೇಯಾಂಕದ ಆಟಗಾರ್ತಿ ಪಿ.ವಿ. ಸಿಂಧು ಸೋಲನುಭವಿಸಿದರು.
ಕಳೆದ ವಾರವಷ್ಟೇ ಮಲೆಷ್ಯಾ ಮಾಸ್ಟರ್ಸ್ ಚಿನ್ನದ ಪದಕ ಗೆದ್ದಿದ್ದ ಸಿಂಧು 21–18, 24–26, 17–21ರಿಂದ ವಿಶ್ವ ದ 27ನೇ ಶ್ರೇಯಾಂಕದ ಅಟಗಾರ್ತಿ ಥಾಯ್ಲೆಂಡ್ನ ನಿಚಾಯೊನ್ ಜಿಂದಾಪಾಲ್ ವಿರುದ್ಧ ಜಯಿಸಿದರು.
ಒಂದು ತಾಸು, 28 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಸಿಂಧು ಮೊದಲ ಸೆಟ್ನಲ್ಲಿ 21–18ರಿಂದ ಎದುರಾಳಿಯನ್ನು ಸೋಲಿಸಿ ದರು. ಆದರೆ, ನಂತರದ ಸೆಟ್ನಲ್ಲಿ ಬಿಸಿಯೇರಿದ ಹೋರಾಟ ನಡೆಯಿತು. ಪ್ರತಿಯೊಂದು ಹಂತದಲ್ಲಿಯೂ ಸಿಂಧುಗೆ ಥಾಯ್ಲೆಂಡ್ ಆಟಗಾರ್ತಿಯು ಕಠಿಣ ಸವಾಲು ಒಡ್ಡಿದರು. ಕೊನೆಗೂ ಜಿಂದಾಪೋಲ್ 26–24ರಿಂದ ಸೆಟ್ ತಮ್ಮದಾಗಿಸಿಕೊಂಡರು.
ನಂತರದ ನಿರ್ಣಾಯಕ ಸೆಟ್ನಲ್ಲಿ ಸಿಂಧು ಸಂಪೂರ್ಣ ಮಂಕಾದರು. ಕೇವಲ 10 ಪಾಯಿಂಟ್ಗಳನ್ನು ಗಳಿಸಲು ಮಾತ್ರ ಅವರಿಗೆ ಸಾಧ್ಯವಾಯಿತು. ಇದರ ಲಾಭ ಪಡೆದ ಜಿಂದಾಪೋಲ್ 21–10ರಿಂದ ಗೆಲುವು ಪಡೆದರು.
ಜ್ವಾಲಾ–ಅಶ್ವಿನಿಗೆ ಜಯ
ಮಹಿಳೆಯರ ಡಬಲ್ಸ್ನಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯು ಗೆಲುವು ಸಾಧಿಸಿತು.
ಜ್ವಾಲಾ ಮತ್ತು ಅಶ್ವಿನಿ ಜೋಡಿಯು 21–9, 21–10ರಿಂದ ನಿಂಗ್ಶಿ ಬ್ಲಾಕ್ ಹಜಾರಿಕಾ ಮತ್ತು ಹರಿಕಾ ವೆಲುಧ್ರುತಿ ಅವರ ವಿರುದ್ಧ ಜಯಿಸಿತು.
ಇನ್ನೊಂದು ಪಂದ್ಯದಲ್ಲಿ ಕೆ. ಮನೀಶಾ ಮತ್ತು ಎನ್. ಸಿಕ್ಕಿ ರೆಡ್ಡಿ 11–21, 17–21ರಿಂದ ಥಾಯ್ಲೆಂಡ್ನ ಪುಟ್ಟಿತಾ ಸುಪಾಜಿರಾಕುಲ್ ಮತ್ತು ಸಪಾಸಿರಿ ತಾಯಿರ್ತಾನಂಚೈ ಅವರ ಎದುರು ಸೋಲನುಭವಿಸಿದರು. ಪುರುಷರ ವಿಭಾಗದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಅಕ್ಷಯ್ ದೇವಳ ಕರ್ 21–13, 21–14ರಿಂದ ಇಂಡೊನೇಷ್ಯಾದ ಅನಗ್ಗಾ ಪ್ರಥಮ ಮತ್ತು ರಿಕಿ ಕರಂದಾ ಸುವಾರ್ದಿ ವಿರುದ್ಧ ಗೆದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.