ಬುಧವಾರ, ಜುಲೈ 6, 2022
22 °C
ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಮುಗ್ಗರಿಸಿದ ಅಶ್ವಿನಿ , ಜ್ವಾಲಾ

ಕ್ವಾರ್ಟರ್‌ ಫೈನಲ್‌ ತಲುಪಿದ ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾರ್ಟರ್‌ ಫೈನಲ್‌ ತಲುಪಿದ ಸೈನಾ

ಜಕಾರ್ತ (ಪಿಟಿಐ): ಇಂಡೊನೇಷ್ಯಾ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತದ ಸೈನಾ ನೆಹ್ವಾಲ್‌ ಅವರ ಗೆಲುವಿನ ಓಟ ಮುಂದುವರಿದಿದೆ.ಆದರೆ  ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅವರು ಎರಡನೇ ಸುತ್ತಿನಲ್ಲಿ ಮುಗ್ಗರಿಸಿ ಟೂರ್ನಿಯಿಂದ  ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–11, 21–10ರ ನೇರ ಗೇಮ್‌ಗಳಿಂದ ಸ್ಥಳೀಯ ಆಟಗಾರ್ತಿ ಫಿತ್ರಿಯಾನಿ ಅವರನ್ನು ಪರಾಭವಗೊಳಿಸಿದರು.2009, 2010 ಮತ್ತು 2012ರ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿರುವ ಸೈನಾ ಎರಡನೇ ಸುತ್ತಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು.

ಈಗಾಗಲೇ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಆಟಗಾರ್ತಿ ಶುರುವಿನಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು. ಆಕರ್ಷಕ ಸರ್ವ್‌ ಮತ್ತು ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಹೈದರಾಬಾದ್‌ನ ಆಟಗಾರ್ತಿ 9–7ರ ಮುನ್ನಡೆ ಗಳಿಸಿದರು.  ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎಂಟನೇ ಸ್ಥಾನ ಹೊಂದಿರುವ ಸೈನಾ ಆ ಬಳಿಕವೂ ಮಿಂಚಿನ ಆಟ ಆಡಿದರು. ತಮ್ಮ ಸರ್ವ್‌ ಕಾಪಾಡಿಕೊಳ್ಳುವ ಜತೆಗೆ ಎದುರಾಳಿಯ ಸರ್ವ್‌ ಮುರಿದ ಅವರು ಸತತ ಐದು ಪಾಯಿಂಟ್ಸ್‌ ಸಂಗ್ರಹಿಸಿ ಮುನ್ನಡೆಯನ್ನು 14–7ಕ್ಕೆ ಹಿಗ್ಗಿಸಿಕೊಂಡರು.ಭಾರತದ ಆಟಗಾರ್ತಿ ಬೇಗನೆ ಮುನ್ನಡೆ ಕಂಡುಕೊಂಡಿದ್ದರಿಂದ ಫಿತ್ರಿ ಯಾನಿ ಒತ್ತಡಕ್ಕೆ ಒಳಗಾದಂತೆ ಕಂಡರು. ಚುರುಕಾಗಿ ಪಾಯಿಂಟ್‌ ಗಳಿಸುವ ಭರದಲ್ಲಿ ಆತಿಥೇಯ ಆಟಗಾರ್ತಿ ಪದೇ ಪದೇ ಷಟಲ್‌ ಅನ್ನು ನೆಟ್‌ಗೆ ಬಾರಿಸಿ ಪಾಯಿಂಟ್‌ ಕೈಚೆಲ್ಲಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ಸೈನಾ ಸತತ ಆರು ಪಾಯಿಂಟ್‌ ಕಲೆಹಾಕಿ ದರಲ್ಲದೆ ಗೇಮ್‌ ಗೆದ್ದು ಸಂಭ್ರಮಿಸಿದರು.ಎರಡನೇ ಗೇಮ್‌ನಲ್ಲಿ  ಫಿತ್ರಿಯಾನಿ  ತಿರುಗೇಟು ನೀಡಬಹುದೆಂದು ಅಂದಾಜಿಸಲಾಗಿತ್ತು. ತವರಿನ ಅಭಿಮಾನಿಗಳ ಬೆಂಬಲದೊಂದಿಗೆ  ಆಡಿದ ಅವರು ಆರಂಭದಲ್ಲಿ ದಿಟ್ಟ ಆಟ ಆಡಿ ಭರವಸೆ ಮೂಡಿಸಿದ್ದರು. ಆದರೆ ಸೈನಾ ಬಳಿಕ ಅಂಗಳದಲ್ಲಿ ಅಕ್ಷರಶಃ ಮಿಂಚು ಹರಿಸಿದರು. ಈ ಋತುವಿನಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸೈನಾ ಸೊಬಗಿನ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ಹಿಂಗೈ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ದರಲ್ಲದೆ 10–3ರ ಮುನ್ನಡೆ ಪಡೆದು ಪಂದ್ಯ ಗೆಲುವಿನ ಆಸೆಗೆ ಬಲ ತುಂಬಿದರು.ವಿರಾಮದ ಬಳಿಕವೂ ಸೈನಾ ಆಟ ರಂಗೇರಿತು. ಭಾರತದ ಆಟಗಾರ್ತಿ ಮೇಲಕ್ಕೆ ಜಿಗಿದು ಷಟಲ್‌ ಅನ್ನು ಸ್ಮ್ಯಾಷ್‌ ಮಾಡುತ್ತಿದ್ದ ರೀತಿ ಮನಮೋಹಕ ವಾಗಿತ್ತು. ಎದುರಾಳಿ ಮೇಲೆ ಪೂರ್ಣ ಪ್ರಭುತ್ವ ಸಾಧಿಸಿ ನಿರಂತರವಾಗಿ ಪಾಯಿಂಟ್‌ ಬೇಟೆಯಾಡಿದ ಸೈನಾ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.ಈ ಗೆಲುವಿನೊಂದಿಗೆ ಸೈನಾ, ಫಿತ್ರಿಯಾನಿ ಎದುರಿನ ಜಯದ ದಾಖಲೆಯನ್ನು 2–0ಗೆ ಹೆಚ್ಚಿಸಿ ಕೊಂಡರು. ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಉಭಯ ಆಟಗಾರ್ತಿಯರು ಎದುರಾಗಿದ್ದಾಗ ಸೈನಾ ಜಯದ ಸಿಹಿ ಸವಿದಿದ್ದರು.ಅಶ್ವಿನಿ–ಜ್ವಾಲಾಗೆ ನಿರಾಸೆ: ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಹೈದರಾ ಬಾದ್‌ನ ಜ್ವಾಲಾ ಗುಟ್ಟಾ ನಿರಾಸೆ ಕಂಡರು. ಭಾರತದ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 9–11, 18–21ರಲ್ಲಿ ಚೀನಾದ ಹುವಾಂಗ್‌ ಯಾಕಿಯಾಂಗ್‌ ಮತ್ತು ತಾಂಗ್‌ ಜಿನ್‌ಹುವಾ ಎದುರು ಶರಣಾಯಿತು.ಮನು–ಸುಮೀತ್‌ಗೆ ಸೋಲು: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ಮನು ಅತ್ರಿ ಮತ್ತು ಬಿ. ಸುಮೀತ್‌ ರೆಡ್ಡಿ ಅವರು ಎರಡನೇ ಸುತ್ತಿನಲ್ಲಿ ಮುಗ್ಗರಿಸಿದರು. ಈಗಾಗಲೇ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಆಟಗಾರರು 18–21, 13–21ರಲ್ಲಿ ಕೊರಿಯಾದ ಕೊ ಸಂಗ್‌ ಹ್ಯೂನ್‌ ಮತ್ತು ಶಿನ್‌ ಬೆಯೆಕ್‌ ಚೆವೊಲ್‌ ಎದುರು ಸೋಲು ಕಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.