ಭಾನುವಾರ, ಏಪ್ರಿಲ್ 11, 2021
22 °C

ಕ್ಷುಲ್ಲಕ ಕಾರಣಕ್ಕೆ ಜಗಳ; ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬರ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಪರಪ್ಪನ ಅಗ್ರಹಾರದ ಚನ್ನಕೇಶವನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾರ್ಮೆಂಟ್ಸ್ ಉದ್ಯೋಗಿ ಬಸವರಾಜು (26) ಕೊಲೆಯಾದವರು. ಘಟನೆಯಲ್ಲಿ ಅಶ್ವತ್ಥನಾರಾಯಣ ಮತ್ತು ರಾಜು ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.ಆರೋಪಿ ಬುರುಗಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಕೇಶವನಗರದಲ್ಲಿರುವ ಬಾರ್‌ವೊಂದರ ಒಂದು ಟೇಬಲ್‌ನಲ್ಲಿ ಬಸವರಾಜು, ಅಶ್ವತ್ಥನಾರಾಯಣ ಮತ್ತು ರಾಜು ಕುಳಿತಿದ್ದರು.

 

ಪಕ್ಕದ ಟೇಬಲ್‌ನಲ್ಲಿ ಬುರುಗಪ್ಪ ಮತ್ತು ಆತನ ಸ್ನೇಹಿತರು ಮದ್ಯಪಾನ ಮಾಡುತ್ತಿದ್ದರು. ಕುಡಿದ ಅಮಲಿನಲ್ಲಿ ಎರಡೂ ಗುಂಪಿನವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬಾರ್‌ನ ಬಾಗಿಲು ಮುಚ್ಚಿದ ನಂತರ ಅವರೆಲ್ಲರೂ ಅಲ್ಲಿಂದ ಎದ್ದು ಹೋಗಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ. ಬಾರ್‌ನಿಂದ ಹೊರಗೆ ಬಂದ ಬಸವರಾಜು, ಬುರುಗಪ್ಪನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ.ಈ ವೇಳೆ ಬುರುಗುಪ್ಪ ಮಚ್ಚು ಕಿತ್ತುಕೊಂಡು ಬಸವರಾಜು ಮತ್ತು ಅವರ ಸ್ನೇಹಿತರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಬಸವರಾಜು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ಚಿಕ್ಕನಾಯಕನಹಳ್ಳಿಯ ಬಸವರಾಜು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಚನ್ನಕೇಶವನಗರದಲ್ಲಿ ಅವರು ನೆಲೆಸಿದ್ದರು’ ಎಂದು ಇನ್‌ಸ್ಪೆಕ್ಟರ್ ವಿ.ಕೆ.ವಾಸುದೇವ ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತ ಸಾವು

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಗನನ್ನು ನೋಡಿಕೊಂಡು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಚಿಕ್ಕಬೇಗೂರು ಬಳಿ ಸೋಮವಾರ ರಾತ್ರಿ ನಡೆದಿದೆ. ಸಿಂಗಸಂದ್ರ ನಿವಾಸಿ ಗಿರೀಶ್ (37) ಮೃತಪಟ್ಟವರು. ಅನಾರೋಗ್ಯಪೀಡಿತನಾಗಿದ್ದ ಅವರ ಮಗ ಕಾರ್ತಿಕ್‌ನನ್ನು ‘ಲೀವ್ ಹಂಡ್ರೆಡ್’ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಹೋಗಿದ್ದ ಗಿರೀಶ್ ಅವರು ಮಗನನ್ನು ಮಾತನಾಡಿಸಿಕೊಂಡು ಬೈಕ್‌ನಲ್ಲಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಸರ್ವಿಸ್ ರಸ್ತೆಯಲ್ಲಿ ಬಂದ ಮಿನಿ ಲಾರಿ ಅವರ ಬೈಕ್‌ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದಾಗ ಕೆಳಗೆ ಬಿದ್ದ ಗಿರೀಶ್ ತೀವ್ರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದನ್ನು ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನವನ್ನು ವಶಕ್ಕೆ ತೆಗೆದುಕೊಂಡು ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.