ಗುರುವಾರ , ಮೇ 28, 2020
27 °C

ಖಗಮೃಗಗಳ ನಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿಯುವ ಹುಲಿ; ಮರದ ಮೇಲಕ್ಕೆ ಏರುತ್ತಿರುವ ಹೆಬ್ಬಾವು; ನೀರಲ್ಲಿ ಈಜಾಡುತ್ತಾ ಮೈಮರೆತಿರುವ ಮೊಸಳೆ; ಜಿಗಿಜಿಗಿಯುತ್ತಾ ಮರಗಳ ನಡುವೆ ಸುಳಿಯುವ ಚಿಗರೆ...ಕಾಡಿನಲ್ಲಿ ನೆಲೆಸಿರುವಂತೆಯೇ ಸಹಜವಾಗಿ ಓಡಾಡುವ ಈ ಪ್ರಾಣಿಗಳನ್ನು ನಂದನ ಕಾನನದಲ್ಲಿ ನೋಡಬಹುದು. ಅದು ಒರಿಸ್ಸಾ ಸರ್ಕಾರ ನಿರ್ವಹಿಸುತ್ತಿರುವ ‘ನಂದನ ಕಾನನ ರಾಷ್ಟ್ರೀಯ ಉದ್ಯಾನವನ’.ಈ ಉದ್ಯಾನ ಒರಿಸ್ಸಾ ರಾಜ್ಯದ ಪ್ರತಿಷ್ಠೆಯನ್ನು ಹೆಚ್ಚಿಸಿರುವುದಷ್ಟೇ ಅಲ್ಲದೇ ಸಹಜ ಸೌಂದರ್ಯವನ್ನು ಕಾಪಾಡಿಕೊಂಡಿರುವ ಮೃಗಾಲಯ ಎಂದು ಗುರುತಾಗಿದೆ. ಇಲ್ಲಿ ಪ್ರಾಣಿಗಳಿಗೆ ಕಾಡಿನಲ್ಲಿ ಜೀವಿಸಿದಂತೆಯೇ ಇರಲು ಅವಕಾಶ ಮಾಡಿಕೊಡಲಾಗಿದೆ. ಬೇಟೆಗಾರರು ಮತ್ತು ಮಾನವರಿಂದ ಯಾವುದೇ ಕಿರಿಕಿರಿ, ಅಪಾಯ ಎದುರಾಗದಂತೆ ಬಂದೋಬಸ್ತ್ ಮಾಡಲಾಗಿದೆ. ಆದ್ದರಿಂದಲೇ ನಂದನ ಕಾನನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಧುನಿಕವಾಗಿ ಮತ್ತು ಸೂಕ್ತ ರೀತಿಯಲ್ಲಿ ವಿನ್ಯಾಸಗೊಂಡ ಮೃಗಾಲಯ ಎಂಬ ಗೌರವ ಸಿಕ್ಕಿದೆ.ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ 20 ಕಿ.ಮೀ ಅಂತರದಲ್ಲಿ ಇರುವ ಈ ಉದ್ಯಾನವನ ಚಂಡಕ್ ಕಾಡು ಮತ್ತು ಕಂಜಿಯಾ ಸರೋವರದ ಅಂದವನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತದೆ.ವಿಶೇಷವಾಗಿ ಬಿಳಿ ಮತ್ತು ಪಟ್ಟೆ ಹುಲಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಇದು ಕಾರ್ಯನಿರ್ವಹಿಸುತ್ತಿದೆ. ಅವುಗಳಿಗೆ ವಿಶಿಷ್ಟ ನೆಲೆಯನ್ನು ನೀಡಿ ಸಂರಕ್ಷಿಸುತ್ತಿರುವುದಷ್ಟೇ ಅಲ್ಲದೇ ಕಾಡಿನ ಅನನ್ಯತೆಯನ್ನು ಉಳಿಸಿಕೊಳ್ಳಲಾಗಿದೆ.34 ಬಿಳಿ ಹುಲಿಗಳು ಇಲ್ಲಿದ್ದು ಅವುಗಳ ರಕ್ಷಣೆಗೆ ವಿಶೇಷ ರೀತಿಯ ಆಸ್ಥೆ ವಹಿಸಲಾಗಿದೆ. ಕರಿ ಚಿರತೆ ಸಾಕಾಣಿಕೆಯೂ ಯಶಸ್ವಿಯಾಗಿ ನಡೆಯುತ್ತಿದೆ. ಮೀನುಗಳು, ಸರೀಸೃಪಗಳು, ಆಮೆಗಳು, ಮೊಸಳೆ, ಹಾವುಗಳಿಗೆ ಉದ್ಯಾನ ನೆಲೆ ನೀಡಿದೆ. ಅಪರೂಪದ ಗರಿಯಲ್ ಮೊಸಳೆಗಳು, ಭಾರತೀಯ ಸಿಂಹ, ಸಿಂಹ ಬಾಲದ ಕೋತಿ, ನೀಲಗಿರಿ ಲಂಗೂರ, ಭಾರತೀಯ ಪಂಗೋಲಿನ್, ಇಲಿ ಜಿಂಕೆ ಮತ್ತು ಸಾಕಷ್ಟು ಸಂಖ್ಯೆಯ ಪಕ್ಷಿಗಳು, ಸರೀಸೃಪಗಳು, ಮೀನುಗಳು ಇಲ್ಲಿವೆ. 67 ಜಾತಿಯ ಸಸ್ತನಿ, 18 ವಿವಿಧ ಸರೀಸೃಪಗಳು, 81 ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು.ಕಾಡಿನ ಅಂದ, ಅಲ್ಲಿರುವ ಪ್ರಾಣಿ, ಪಕ್ಷಿಗಳ ಸ್ವಚ್ಛಂದ ಆನಂದವನ್ನು ವೀಕ್ಷಿಸಲು ವಿಶಿಷ್ಟವಾಗಿ ರೂಪುಗೊಂಡಿರುವ ಸುರಕ್ಷಿತ ಬಸ್ಸುಗಳ ಮೂಲಕ ಕಾಡಿನೊಳಗೆ ಸಂಚಾರ ಮಾಡಬಹುದು. ಮೃಗಾಲಯದಿಂದ ಸಸ್ಯೋದ್ಯಾನಕ್ಕೆ (ಬೊಟಾನಿಕಲ್ ಗಾರ್ಡನ್) ಹೋಗಲು ಸರೋವರದ ಮೇಲೆ ಸಂಚರಿಸುವ ರೋಪ್‌ವೇ ಕೂಡ ಇಲ್ಲಿದೆ. ಸರೋವರದಲ್ಲಿ ದೋಣಿ ವಿಹಾರಕ್ಕೂ ಅವಕಾಶ ಇದೆ. ಮಕ್ಕಳಿಗಾಗಿ ಸಣ್ಣ ರೈಲು ಕೂಡ ಓಡಾಡುತ್ತದೆ.ಪ್ರವಾಸ ಯೋಗ್ಯ ಎನಿಸಿಕೊಂಡ ಈ ಪ್ರತಿಷ್ಟಿತ ಕಾಡನ್ನು ನೋಡಲು ಬರುವ ಪ್ರವಾಸಿಗರಿಗೆ ಸಾಕಷ್ಟು ಸೌಲಭ್ಯ ಸೌಕರ್ಯಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.