ಶುಕ್ರವಾರ, ಮೇ 14, 2021
32 °C

ಖಗೋಳ ವರ್ಣ ವಿಸ್ಮಯ

ಬಿ ಎಸ್ ಶೈಲಜಾ Updated:

ಅಕ್ಷರ ಗಾತ್ರ : | |

ಇದುವರೆಗೆ ನೀಹಾರಿಕಾ ಲೋಕದಲ್ಲಿ ಪ್ರಕಟವಾದ ಎಲ್ಲ ವರ್ಣಚಿತ್ರಗಳೂ ಕಲಾವಿದನ ಕುಂಚದಿಂದ ಬಿಡಿಸಿದ ವರ್ಣ ಚಿತ್ರಗಳಂತೆ ಕಂಡಿತಲ್ಲವೇ? ಆದರೆ, ಇವೆಲ್ಲ ನೈಜ ದೃಶ್ಯಗಳೆ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಬಣ್ಣದ ಗಾಢತೆಯನ್ನು ತೀವ್ರವಾಗಿ ಹೆಚ್ಚಿಸಲಾಗಿತ್ತು.ಇಂತಹ ಚಿತ್ರಗಳನ್ನು ರಚಿಸುವುದು ಹೇಗೆ ಎಂದು ತಿಳಿಯೋಣ.ಕ್ಯಾಮೆರಾ ಆವಿಷ್ಕಾರವಾದ ಕೆಲವು ವರ್ಷಗಳಲ್ಲಿಯೇ ಅದು ಖಗೋಳ ವಿಜ್ಞಾನಿಗಳನ್ನು ಆಕರ್ಷಿಸಿದ್ದು ಸಹಜ. ಗೆಲಿಲಿಯೊನ ಕಾಲದಿಂದ  ಆರಂಭಗೊಂಡು 1846ರವರೆಗೂ (ಬಹುಶಃ ಇನ್ನೂ ಕೆಲವು ವರ್ಷಗಳ ವರೆಗೂ) ದೂರದರ್ಶಕದಿಂದ ಕಂಡ ದೃಶ್ಯಗಳು ಚಿತ್ರಗಳಾಗಿ ದಾಖಲಾಗುತ್ತಿದ್ದವು.ಅಂದರೆ ಆ ವೀಕ್ಷಕ ತಾನು ಕಂಡಿದ್ದನ್ನು ಪ್ರಾಮಾಣಿಕವಾಗಿ ದಾಖಲಿಸುವುದಲ್ಲದೆ ಅತ್ಯುತ್ತಮ ಕಲಾವಿದನೂ ಆಗಬೇಕಾಗಿತ್ತು. ಇದಕ್ಕಾಗಿ ಅವರುಗಳು ಅಂದು ಶ್ರಮ ವಹಿಸಿದ್ದರಿಂದಲೇ ಅಂದಿನ ಆ ಚಿತ್ರಗಳೂ ಇಂದಿಗೂ ಆಕರ ವಸ್ತುಗಳಾಗಿವೆ.ಗೆಲಿಲಿಯೋ ಗುರುಗ್ರಹದ ಆಸುಪಾಸನ್ನು ಬಹಳ ನಿಖರವಾಗಿ ಗುರುತಿಸುವಾಗ ಪ್ರತಿಯೊಂದು ಚುಕ್ಕೆಯನ್ನೂ ಯಥಾವತ್ತಾಗಿ ಮೂಡಿಸಿದ್ದ. ಆ ಚಿತ್ರಗಳನ್ನು ಈಚೆಗೆ ಮತ್ತೆ ಮತ್ತೆ ಪರಿಶೀಲಿಸಿದಾಗ ಒಂದು ಚುಕ್ಕೆ ನೆಪ್ಚ್ಯೂನ್ ಆಗಿತ್ತು ಎಂದು ತಿಳಿಯಿತು.ಲೆಕ್ಕಾಚಾರದ ಪ್ರಕಾರ ಅದರ ಸ್ಥಾನವೂ ನಿಖರವಾಗಿತ್ತು. ಗುರುಗ್ರಹದ ಉಪಗ್ರಹಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ್ದರಿಂದ  ಈ ಚುಕ್ಕೆ ಆತನ ಗಮನ ಸೆಳೆಯದೇ ಇದ್ದದ್ದು ಸಹಜವೇ. ಹಾಗೇನಾದರೂ ಆತ ಅದನ್ನು ಅದರ ಸೂಕ್ಷ್ಮ ಚಲನೆಯನ್ನೂ ಗಮನಿಸಿದ್ದಿದ್ದರೆ ನೆಪ್ಚ್ಯೂನ್‌ನ ಆವಿಷ್ಕಾರ ಕೀರ್ತಿ ಅವನಿಗೇ ಸಲ್ಲುತ್ತಿತ್ತು.ಹೀಗೆ ರಚಿತವಾದ ಗ್ರಹಗಳ ಮತ್ತು ಚಂದ್ರನ ಚಿತ್ರಗಳು ಈಗಲೂ ಅಧ್ಯಯನಕ್ಕೆ ಒಳಪಟ್ಟಿವೆ. ಗುಫ್ತಾಫ್ ಸನ್ ಎಂಬಾತ ಚಂದ್ರನ ಮೇಲೆ ಹೊಲ ಗದ್ದೆಗಳಿವೆ.ಮಿಡತೆಗಳು ವಲಸೆ ಹೋಗುತ್ತಿವೆ ಎಂಬ ಸಿದ್ಧಾಂತ ಮಂಡಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದ. ಆತ ರಚಿಸಿದ ಚಿತ್ರಗಳು ಬಹಳ ಕರಾರುವಾಕ್ಕಾಗಿವೆ ಎಂಬ ಸಂಗತಿ ಈಚೆಗೆ ಬೆಳಕಿಗೆ ಬಂದಿದೆ.ಅವನ ವಿಶ್ಲೇಷಣೆ ಮಾತ್ರ ತಪ್ಪಾಗಿತ್ತು. ಮಂಗಳ ಗ್ರಹದ ಮೇಲೆ ಕಾಲುವೆಗಳಿವೆ ಎಂಬ ಸಂಗತಿಯೂ  ಹೀಗೆಯೇ ಅತಿ ನಿಖರವಾದ ಚಿತ್ರಗಳ ಆಧಾರದ ಮೇಲೆ ಪ್ರತಿಪಾದಿತವಾದ ಹಸಿ ಸಿದ್ಧಾಂತವಾಗಿತ್ತು. ಮುಂದೆ ಪ್ಲುಟೋ ಗ್ರಹದ ಹುಡುಕಾಟ ನಡೆಸುವ ಹೊತ್ತಿಗೆ ಕ್ಯಾಮೆರಾ ಎಂಬುದು ವೀಕ್ಷಣಾಲಯಗಳ ಅವಿಭಾಜ್ಯವಾಗಿ ಹೋಗಿತು.ಕ್ಲೈಡ್ ಟಾಂಬೋ ಅನೇಕ ಕ್ಷುದ್ರಗ್ರಹ ಹಾಗೂ ಚಂಚಲ ನಕ್ಷತ್ರಗಳನ್ನು ಕಂಡು ಹಿಡಿಯುವಲ್ಲಿ ಈ ದೊಡ್ಡ ದೊಡ್ಡ ಚಿತ್ರಗಳೇ ಕಾರಣವಾದವು.ಅಷ್ಟು ಹೊತ್ತಿಗಾಗಲೇ ಹಬಲ್ ಮತ್ತು ಹ್ಯುಮಾಸನ್ ದೀರ್ಘ ಅವಧಿಯ ಎಕ್ಸ್‌ಪೋಷರ್ ಕೊಟ್ಟು ನೆಬ್ಯುಲಾಗಳ ಚಿತ್ರಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಅವರುಗಳು ಗೆಲಾಕ್ಸಿ ಎಂಬ ಬೇರೆ ಜಗತ್ತುಗಳನ್ನೇ ಗುರುತಿಸಿದ್ದು ಇತಿಹಾಸ.ನಾಲ್ಕು ದಶಕಗಳ ಹಿಂದೆ ವರ್ಣ ಚಿತ್ರಗಳ ಕ್ಯಾಮೆರಾಗಳು ಆವಿಷ್ಕಾರಗೊಂಡವು. ಆದರೆ, ಹಿಂದೆ ಬಳಸುತ್ತಿದ್ದ ಫಿಲ್ಮ್ ಅಥವಾ ಫೋಟೋಗ್ರಫಿಕ್ ಪ್ಲೇಟ್‌ಗಳ ಎಮಲ್ಷನ್‌ಗಳನ್ನು ಅತ್ಯಂತ ನಿಖರತೆಯಿಂದ ತಯಾರಿಸುತ್ತಿದ್ದ ಕೋಡಾಕ್ ಸಂಸ್ಥೆಗೆ ಬಣ್ಣದ ಫಿಲ್ಮ್‌ಗಳಿಗೆ ಬೇಡಿಕೆ ಬರಲಿಲ್ಲ. ಖಗೋಳ ವೀಕ್ಷಕರಿಗೆ ಕಪ್ಪು ಬಿಳುಪು ಚಿತ್ರಗಳು ಒದಗಿಸಿಕೊಡುತ್ತಿದ್ದ ಅಂಕೆ ಸಂಖ್ಯೆಗಳು ಬಣ್ಣದ ಚಿತ್ರಗಳಿಂದ ದೊರಕುತ್ತಿರಲಿಲ್ಲ.ಹೈಡ್ರೋಜನ್ ಆಲ್ಫಾ ಎಂದರೆ 6563 ಆಂಗ್ ಸ್ಟ್ರಂನ ನಿರ್ದಿಷ್ಟ ಬೆಳಕನ್ನು ಮಾತ್ರ ಸೋಸಿಕೊಡುವ ಫಿಲ್ಟರ್ ಗಳನ್ನು ಬಳಸಿ ತೆಗೆಯುತ್ತಿದ್ದ ಚಿತ್ರಗಳು ಬಹಳ ಮಹತ್ವವಾದ ಮಾಹಿತಿಯನ್ನು ಒದಗಿಸುತ್ತಿದ್ದವು. ಎಮಲ್ಷನ್‌ನ ಸಾಂದ್ರತೆ ಗುಣ ಗಾತ್ರ ಇವೆಲ್ಲವನ್ನೂ ನಿಖರವಾಗಿ ಮೊದಲೇ ನಿಶ್ಚಯಿಸಿ ಚಿತ್ರ ತೆಗೆಯಬಹುದಾಗಿತ್ತು. ಆದ್ದರಿಂದ ಬಣ್ಣದ ಫಿಲ್ಮ್‌ಗಳು ಹಿಂದೆಯೇ ಉಳಿದವು.ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಡೇವಿಡ್ ಮಾಲಿನ್ ನಡೆಸಿದ ಪ್ರಯೋಗಗಳು ಖಗೋಳದ ವೈವಿಧ್ಯವನ್ನು ಜನಸಾಮಾನ್ಯರಿಗೂ ಪರಿಚಯಿಸಿದವು. ದೊಡ್ಡ ದೂರದರ್ಶಕಗಳ ಪ್ರೈಮ್ ಫೋಕಸ್ ಎಂಬ ಗೂಡಿನೊಳಗೆ ಕುಳಿತು ಎರಡು ಮೂರು ಗಂಟೆ ಎಕ್ಸ್ ಪೋಷರ್ ಗಳ ಚಿತ್ರಗಳನ್ನು ಬೇರೆ ಬೇರೆ ಬಣ್ಣದ ಫಿಲ್ಟರ್‌ಗಳನ್ನು ಬಳಸಿ ತೆಗೆಯುತ್ತಿದುದು ಮೊದಲ ಹಂತ.ಮೂಲ ಕಪ್ಪು ಬಿಳುಪು ಚಿತ್ರಗಳಿಗೆ ಅವುಗಳನ್ನು ತೆಗೆದಾಗ ಬಳಸಿದ ಫಿಲ್ಟರ್‌ಗಳ ಬಣ್ಣವನ್ನೇ ಹಚ್ಚಿ ಎರಡು ಮೂರು ಬಣ್ಣಗಳನ್ನು ಬೆರೆಸಿ ಹೊಸ ಬಣ್ಣದ ಚಿತ್ರ ರಚಿಸುವ ಪ್ರಯೋಗ ಬಹಳ ಆಕರ್ಷಕ ಚಿತ್ರಗಳನ್ನು ಒದಗಿಸಿತು. ಇಂದಿಗೂ ಮ್ಯೋಲಿನ್ ಅವರ ಚಿತ್ರಗಳು ಬಹಳ ಜನಪ್ರಿಯವಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿಯನ್ನುಂಟುಮಾಡಿದ ಡಿಜಿಟಲ್ ಎಂಬ ಹೊಸ ಅಲೆ ಛಾಯಾಚಿತ್ರ ವಿಭಾಗದಲ್ಲೂ ಹೊಸ ಅಲೆಯನ್ನೇ ಎಬ್ಬಿಸಿತು. ಚಾರ್ಜ್ಡ್ ಕಪಲ್ಡ್ ಡಿವೈಸ್ ಎಂಬ ಹೊಸ ಸೃಷ್ಟಿ  ಕಂಪ್ಯೂಟರ್ ಸೇರಿ ಇಂದಿನ ಹೊಸ ಚಿತ್ರಗಳಿಗೆ ಮೂಲವಾಯಿತು.ಈ ತಂತ್ರಜ್ಞಾನವನ್ನು ಇದೀಗ ಫೋಟೋಶಾಪ್ ಮೂಲಕ ಬಹಳ ಸಮರ್ಪಕವಾಗಿ ಬಳಸಬಹುದಾಗಿದೆ. ಹಬಲ್ ಬಾಹ್ಯಾಕಾಶ ದೂರದರ್ಶಕ ತೆಗೆದ ಚಿತ್ರಗಳೂ ಈಗ ಎಲ್ಲರಿಗೂ ಲಭ್ಯವಿವೆ. ಅವು ಕಪ್ಪು ಬಿಳುಪು ಚಿತ್ರಗಳು - ಆದ್ದರಿಂದ ಅವುಗಳಿಗೆ ಬಣ್ಣ ಹಾಕಿ ಸೇರಿಸುವ ಕಾರ್ಯವನ್ನು ಎಲ್ಲರೂ ಕೈಗೆತ್ತಿಕೊಳ್ಳಬಹುದು.ಇಲ್ಲಿ ರಿಂಗ್ ನೆಬ್ಯುಲಾ ಅಥವಾ ಎಂ 57 ಎಂಬ ಚಿತ್ರದ ಉದಾಹರಣೆ ಇದೆ.  ಅದನ್ನು ಕೆಂಪು, ನೀಲಿ ಮತ್ತು ಹಳದಿ ಬಣ್ಣಗಳ ಫಿಲ್ಟರ್ ಹಾಕಿ ತೆಗೆಯಲಾಗಿದೆ. ಅವನ್ನು ಬೆರಸಿದಾಗ ಮೂಡುವ ಚಿತ್ರವೂ ಇದೆ. ಇದು ಖಗೋಳವಿಜ್ಞಾನಿಗೆ ಆಯಾ ಮೂಲಧಾತುವಿನ ಹಂಚಿಕೆಗಳ ಹೋಲಿಕೆಯನ್ನು ಒದಗಿಸುತ್ತದೆ. ಎಲ್ಲರ ಕಣ್ಣಿಗೆ ವರ್ಣಚಿತ್ರಗಳಾಗಿ ಹಬ್ಬ ಉಂಟುಮಾಡುತ್ತದೆ.ಈ ವೆಬ್ ಸೈಟ್‌ನಿಂದ ಚಿತ್ರಗಳನ್ನು ನೀವೂ ಡೌನ್ ಲೋಡ್ ಮಾಡಿಕೊಳ್ಳಬಹುದು. ವರ್ಣ ಚಿತ್ರಗಳನ್ನು ರಚಿಸಬಹುದು. ಪ್ರಯತ್ನಿಸಿ.

http://hla.stsci.edu/

http://hubblesite.org/gallery/album/ವೀಕ್ಷಣಾಲಯ...

ಇಲ್ಲಿಯವರೆಗೆ `ನೀಹಾರಿಕಾ ಲೋಕ~  ಅಂಕಣದಲ್ಲಿ ಖಗೋಳ ವರ್ಣವಿಸ್ಮಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವೆ. ಎರಡು ವರ್ಷಗಳಿಗೂ ಹೆಚ್ಚು ಪ್ರಕಟವಾದ ಈ ಮಾಲಿಕೆಯ ಚಿತ್ರಗಳು ಇಂಟರ್ ನೆಟ್‌ನಲ್ಲಿ ಲಭ್ಯ. ಕೆಲವನ್ನು ಮಾತ್ರ ನನ್ನ ಸಹೋದ್ಯೋಗಿಗಳಾಗಿದ್ದವರಿಂದ ಎರವಲು ಪಡೆದಿದ್ದೆ. ಈ ಮಾಲಿಕೆ ಅನೇಕರನ್ನು ಆಕರ್ಷಿಸಿತು. ಅನೇಕ ಶಿಕ್ಷಕರು ಇದನ್ನು ಆಕರ ಎಂದೂ ಪರಿಗಣಿಸಿದ್ದಾರೆ.ಕಲಾ ಪ್ರೇಮಿಗಳು ನೋಡಿದ್ದು ಬೇರೆ ಕೋನದಿಂದ. ಒಟ್ಟಿನಲ್ಲಿ ಅನೇಕರು `ಪ್ರಜಾವಾಣಿ~ಯ  ಈ ವಾಣಿಜ್ಯ ಪುರವಣಿಯಲ್ಲಿ ಪ್ರತಿ ವಾರ ಪ್ರಕಟವಾದ ಲೇಖನಗಳನ್ನು   ಕತ್ತರಿಸಿ ಸಂಗ್ರಹಿಸಿ ಇಟ್ಟುಕೊಂಡಿದ್ದನ್ನು ನನಗೆ ತೋರಿಸಿದ್ದಾರೆ. ಓದುಗರಲ್ಲಿ ಅನೇಕರಿಗೆ ಇದು ಹಲವು ಬಗೆಗಳಲ್ಲಿ ಉಪಯೋಗವಾಗಿದೆ ಎಂಬುದು ನನಗೆ ಸಂತೋಷ ತಂದಿದೆ.ಬಹಳ ಕ್ಲಿಷ್ಟ ಮತ್ತು ಕೆಲವರಿಗೆ ಮಾತ್ರ ಇಷ್ಟವಾಗುವ ಸಂಕೀರ್ಣ ವಿಷಯಗಳು ಇದರಲ್ಲಿದ್ದುದು   ಇದರ ಉಪಯುಕ್ತತೆಯ ಬಗ್ಗೆ ನನಗೆ ಸಂದೇಹ ಮೂಡಿಸಿತ್ತು. ಆದರೆ, ಓದುಗರ ಅಂತರಿಕ್ಷ ಜ್ಞಾನದಾಹ ತಣಿಸುವ ನಿಟ್ಟಿನಲ್ಲಿ ಈ ಅಂಕಣ ನೆರವಾಗುತ್ತಿದ್ದ ಕಾರಣಕ್ಕೆ ದೊಡ್ಡ ದೂರದರ್ಶಕಗಳಿಗೆ ಮಾತ್ರ ಮೀಸಲಾದ ನೆಬ್ಯುಲಾಗಳು ಸಹ ಈ ಅಂಕಣದಲ್ಲಿ ಸೇರಿಕೊಂಡವು.ಮುಂಬರುವ ದಿನಗಳಲ್ಲಿ ಈ ಅಂಕಣದಲ್ಲಿ ಖಗೋಳ ವೀಕ್ಷಣಾಲಯಗಳ ಬಗ್ಗೆ ತಿಳಿಸಿಕೊಡುವ ಉದ್ದೇಶವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.