ಸೋಮವಾರ, ಜನವರಿ 27, 2020
28 °C

ಖಾತೆ ಬದಲಾವಣೆಗೆ ಹೊಸ ಹುದ್ದೆ ದಿಢೀರ್ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಭೂಮಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ವಿಳಂಬವಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ `ಕಚೇರಿ ಕಂದಾಯ ನಿರೀಕ್ಷಕ~ (ಆಫೀಸ್ ರೆವಿನ್ಯೂ ಇನ್ಸ್‌ಪೆಕ್ಟರ್) ಎಂಬ ಹೊಸ ಹುದ್ದೆ ಸೃಷ್ಟಿಸಿ, ಪ್ರಾಯೋಗಿಕ ಜಾರಿಗೆ ಶುಕ್ರವಾರ ಆದೇಶ ಹೊರಡಿಸಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಪ್ರಾಯೋಗಿಕವಾಗಿ ಈ ಹುದ್ದೆ ಜಾರಿಗೊಳ್ಳಲಿದೆ.

ಯಾರು ಈ ನಿರೀಕ್ಷಕ?: ಸದ್ಯ ಕಂದಾಯ ಇಲಾಖೆಯ ಅಧಿಕಾರಿಗಳನ್ನೇ ಈ ಹುದ್ದೆಗೆ ನಿಯೋಜಿಸಲಾಗುತ್ತದೆ. ಪ್ರತಿ ತಾಲ್ಲೂಕು ಕಚೇರಿಯಲ್ಲಿ ಈ ಅಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಭೂಮಿ ಮತ್ತು ಕಾವೇರಿ (ಕರ್ನಾಟಕ ಮೌಲ್ಯಮಾಪನ ಮತ್ತು ಇ -ನೋಂದಣಿ) ತಂತ್ರಾಂಶದ ಕಾರ್ಯಗಳನ್ನು ಒಟ್ಟಾಗಿ ಸಂಯೋಜಿಸುವ ಕೆಲಸ ಈ ಅಧಿಕಾರಿಯದ್ದು.

ಯಾಕೆ ಈ ಹುದ್ದೆ?: ಭೂಮಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತಿಂಗಳುಗಟ್ಟಲೆ ವಿಳಂಬವನ್ನು ತಪ್ಪಿಸುವ ಸಲುವಾಗಿ ಈ ಹುದ್ದೆ ಸೃಷ್ಟಿಸಲಾಗಿದೆ. ಭೂಮಿ ತಂತ್ರಾಂಶವು ಭೂಮಿಯ ಸರ್ವೆ ನಂಬರ್ ಮತ್ತು ದಾಖಲೆಗಳನ್ನು ಹೊಂದಿದ್ದರೆ, ಕಾವೇರಿ ತಂತ್ರಾಂಶವು ನೋಂದಣಿ ಸಂಬಂಧಿತ ಕಾರ್ಯ ಮಾಡುತ್ತದೆ. ಭೂಮಿಯನ್ನು ಮಾರಾಟ ಮಾಡಿದಾಗ ಹಳೇ ಖಾತೆಯ ಮಾಹಿತಿ ಪಡೆದು ಹೊಸ ಖಾತೆದಾರನಿಗೆ ವರ್ಗಾಯಿಸಲು ಈ ಅಧಿಕಾರಿ ಸಹಕರಿಸುತ್ತಾನೆ. ಎರಡೂ ತಂತ್ರಾಂಶಗಳ ಸಹಾಯದಿಂದ ದಾಖಲೆ ಪರಿಶೀಲಿಸಿ ಖಾತೆ ಬದಲಾವಣೆ ಮಾಡಲಾಗುತ್ತದೆ. ಖಾತೆ ಬದಲಾದ ಬಗ್ಗೆ `ಭೂಮಿ~ ತಂತ್ರಾಂಶದಲ್ಲಿ ಮಾಹಿತಿ ದೊರೆಯುತ್ತದೆ. ಗ್ರಾಮಕರಣಿಕರು ಸ್ಥಳ ಮಹಜರು ಮಾಡಿ ತಕ್ಷಣವೇ ವರದಿ ನೀಡುತ್ತಾರೆ. ಅದರ ಆಧಾರದ ಮೇಲೆ ಕಾವೇರಿ ತಂತ್ರಾಂಶದ ಮೂಲಕ ಖಾತೆ ಬದಲಾಗಿ ನೋಂದಣಿಯಾಗುತ್ತದೆ. ಇದರಿಂದ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಹಾಗೂ ತಾಲ್ಲೂಕು ಕಚೇರಿಗೆ ಪದೇಪದೇ ಅಲೆದಾಡುವುದು ತಪ್ಪುತ್ತದೆ. ಅಲ್ಲದೇ, ತ್ವರಿತವಾಗಿ ನೋಂದಣಿ ಕಾರ್ಯವೂ ಮುಗಿಯುತ್ತದೆ.

ಎಲ್ಲಿ ಜಾರಿ?: ಸದ್ಯ ರಾಜ್ಯದ 6 ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ಶಿವಮೊಗ್ಗ, ಮೈಸೂರು, ಧಾರವಾಡ, ಉತ್ತರ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ಮುಂದೆ ಇದರ ಸಾಧಕ ಬಾಧಕಗಳನ್ನು ಗಮನಿಸಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಕಂದಾಯ ಇಲಾಖೆಯ (ಭೂಮಿ) ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)