ಮಂಗಳವಾರ, ಮೇ 11, 2021
25 °C

ಖಾಸಗೀಕರಣ ಕೈಬಿಡಲು ಕೇಂದ್ರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕೇಂದ್ರ ರಕ್ಷಣಾ ಸಚಿವಾಲಯವು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಿರುವ ಕ್ರಮವನ್ನು ಕೂಡಲೇ ಕೈಬಿಡಬೇಕು~ ಎಂದು ಬಿಇಎಲ್, ಬಿಎಎಂಎಲ್, ಐಟಿಐ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿ (ಜೆಎಎಫ್) ಸಂಚಾಲಕ ಎಸ್. ಪ್ರಸನ್ನ ಕುಮಾರ್ ಇಲ್ಲಿ ಆಗ್ರಹಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಕ್ಷಣಾ ಇಲಾಖೆಗೆ ಸೇರಿದ ಸಾರ್ವಜನಿಕ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಶೇ 10ರಷ್ಟು ಷೇರುಗಳನ್ನು ಖಾಸಗಿ ಕಂಪೆನಿಗಳಿಗೆ ನೀಡಲು ರಕ್ಷಣಾ ಸಚಿವಾಲಯ ಮುಂದಾಗಿದೆ. ಇದರಿಂದ ಸಂಸ್ಥೆಯನ್ನು ನಿಧಾನವಾಗಿ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ~ ಎಂದು ದೂರಿದರು.ಇದೇ ವೇಳೆ ಮಾತನಾಡಿದ ಭಾರತೀಯ ದೂರವಾಣಿ ಕೈಗಾರಿಕೆ (ಇಂಡಿಯನ್ ಟಿಲಿಫೋನ್ ಇಂಡಸ್ಟ್ರಿ) ನೌಕರರ ಸಂಘದ ಅಧ್ಯಕ್ಷ ಆರ್.ಮಹದೇವ್, `ಭಾರತೀಯ ದೂರವಾಣಿ ಕೈಗಾರಿಕಾ ಸಂಸ್ಥೆಯು ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದೆ. ಕೈಗಾರಿಕೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸುಮಾರು 6,000 ಕೋಟಿ ಯೋಜನೆ ಕೇಂದ್ರದ ಮುಂದಿದೆ. ಯೋಜನೆ ಜಾರಿ ಮಾಡಲು ಸರ್ಕಾರ ವಿಳಂಬ ಮಾಡುತ್ತಿದೆ~ ಎಂದರು.ಪ್ರತಿಭಟನೆ: ಕೇಂದ್ರ ಸರ್ಕಾರ ಈ ಕ್ರಮವನ್ನು ಹಿಂತೆಗೆದುಕೊಳ್ಳದಿದ್ದರೆ ಜಂಟಿ ಕ್ರಿಯಾ ಸಮಿತಿಯು ಇದೇ 26 ರಂದು ನಗರದ ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.ಅಲ್ಲದೆ, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ದೇಶಾದ್ಯಂತ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

ಎಚ್‌ಎಎಲ್ ನೌಕರರ ಸಂಘದ ಅಧ್ಯಕ್ಷ ಮನೋಹರ್, ಬಿಇಎಲ್ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ವಿ.ಕೃಷ್ಣಪ್ಪ ಮತ್ತಿತರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.