ಮಂಗಳವಾರ, ಮೇ 17, 2022
25 °C

ಖೋಟಾ ನೋಟು ಚಲಾವಣೆ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಮೂರು ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು 22 ಲಕ್ಷ ರೂಪಾಯಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳ ಮೂಲದ ಬಿಸರತ್ ಶೇಖ್ (25), ಸದ್ದಾಂ ಹುಸೇನ್ (20) ಮತ್ತು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವೆಂಕಟೇಶ (37) ಬಂಧಿತರು.`ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂಲದ ವ್ಯಕ್ತಿಗಳು ಖೋಟಾ ನೋಟುಗಳನ್ನು ಮುದ್ರಿಸಿ ಆರೋಪಿಗಳ ಮೂಲಕ ದೇಶದಲ್ಲಿ ಚಲಾವಣೆ ಮಾಡಿಸುತ್ತಿದ್ದರು. ಆರೋಪಿಗಳು ಖೋಟಾ ನೋಟುಗಳನ್ನು ಪಶ್ಚಿಮ ಬಂಗಾಳದ ಮೂಲಕ ದೇಶಕ್ಕೆ ತರುತ್ತಿದ್ದರು~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಆರೋಪಿಗಳು ರೂ 40 ಸಾವಿರ  ಅಸಲಿ ನೋಟುಗಳನ್ನು ಪಡೆದು ಒಂದು ಲಕ್ಷ ರೂಪಾಯಿ ಮೊತ್ತದ ಖೋಟಾ ನೋಟು ನೀಡುತ್ತಿದ್ದರು. ಬಂಧಿತರಿಂದ ಸಾವಿರ ಮತ್ತು ಐನೂರು ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಲಾಗಿದೆ. ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.ಹುಸೇನ್‌ನನ್ನು ನಗರದಲ್ಲಿ ಮೊದಲು ಬಂಧಿಸಿ ವಿಚಾರಣೆ ನಡೆಸಲಾಯಿತು. ಆತ ನೀಡಿದ ಮಾಹಿತಿ ಆಧರಿಸಿ ಇತರೆ ಆರೋಪಿಗಳನ್ನು ದೇಶದ ಗಡಿ ಭಾಗದಲ್ಲಿ ಬಂಧಿಸಲಾಯಿತು. ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಸರತ್ ಶೇಖ್‌ನನ್ನು ಸಿಟಿ ಮಾರುಕಟ್ಟೆ ಪೊಲೀಸರು 2009ರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಖೋಟಾ ನೋಟು ಚಲಾವಣೆಗೆ ಸಂಬಂಧಿಸಿದಂತೆ ಹುಸೇನ್ ವಿರುದ್ಧ ಸಿಟಿ ಮಾರುಕಟ್ಟೆ ಠಾಣೆಯಲ್ಲಿ, ವೆಂಕಟೇಶನ ವಿರುದ್ಧ ಆಂಧ್ರಪ್ರದೇಶ, ಕೆಜಿಎಫ್ ಹಾಗೂ ಫ್ರೇಜರ್‌ಟೌನ್ ಠಾಣೆಯಲ್ಲಿ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ್, ಸಿಸಿಬಿ ಡಿಸಿಪಿ ಡಿ.ಎಂ.ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ ಎಸಿಪಿ ಬಿ.ಎನ್.ನ್ಯಾಮಗೌಡ, ಇನ್‌ಸ್ಪೆಕ್ಟರ್‌ಗಳಾದ ಕೆ.ಸಿ.ಅಶೋಕನ್, ಬಿ.ಎನ್. ಶ್ರೀನಿವಾಸ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎನ್.ಯು.ನಿಸಾರ್ ಅಹಮ್ಮದ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.