ಮಂಗಳವಾರ, ಏಪ್ರಿಲ್ 13, 2021
32 °C

ಗಂಗಾಧರ ಹೆಸರಿನಲ್ಲಿ ಬಂದಿರುವ ಪತ್ರ:ಗೆರಿಲ್ಲಾ ಸೈನ್ಯ- ಶಿಶಿಲ ಭೇಟಿ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಶಿಶಿಲ ಗ್ರಾಮಕ್ಕೆ ತಾವು ಇತ್ತೀಚೆಗೆ ಭೇಟಿ ನೀಡಿದ ಬಗ್ಗೆ ಪೊಲೀಸರು ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಕ್ಸಲರು ಆರೋಪಿಸಿದ್ದಾರೆ.ಸಿ.ಪಿ.ಐ. (ಮಾವೋವಾದಿ) ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಗಂಗಾಧರ ಎಂಬ ಹೆಸರಿನಿಂದ ಬರೆದ ಪತ್ರವೊಂದು `ಪ್ರಜಾವಾಣಿ~ ಕಚೇರಿಗೆ ತಲುಪಿದೆ.

`ನಮ್ಮ ಪಕ್ಷದ ಪಿ.ಎಲ್.ಜಿ.ಎ.ಯ ಒಂದು ದಳವು ಈಚೆಗೆ ಶಿಶಿಲಕ್ಕೆ ಭೇಟಿ ನೀಡಿ ರಾಜಕೀಯ ಚರ್ಚೆ ನಡೆಸಿದೆ. ಜನರ ಹಲವು ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆದಿದೆ. ಊಟಕ್ಕೆ ಅಗತ್ಯಕ್ಕೆ ಸಾಮಾನುಗಳನ್ನು ಕೇಳಿ ಪಡೆದಿದೆ. ಈ ಭೇಟಿಯನ್ನು ತಪ್ಪಾಗಿ ಚಿತ್ರಿಸಲಾಗಿದೆ.ಈ ಕುರಿತ ಪತ್ರಿಕಾ ವರದಿಗಳು ಪೊಲೀಸ್ ಇಲಾಖೆಯ ದುರುದ್ದೇಶ ಪೂರಿತ ಅಪಪ್ರಚಾರದ ಹೇಳಿಕೆಯನ್ನು ಆಧರಿಸಿವೆ. ನಮ್ಮ ದಳದ ಸದಸ್ಯರು ಉದ್ಯೋಗವಿಲ್ಲದೆ ಪಕ್ಷದ `ಜನತಾ ಗೆರಿಲ್ಲಾ ಸೈನ್ಯ~ ಸೇರಿದ್ದು, ಕಾಡಿನಲ್ಲಿ ಅಲೆದಾಡುತ್ತಿದ್ದೇವೆ ಎಂಬಂತೆ ಚಿತ್ರಿಸಲಾಗಿದೆ. ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಇಂಥಹ ತಪ್ಪು ಕಲ್ಪನೆಯನ್ನು ಹರಡುತ್ತಿದೆ~ ಎಂದು ಪತ್ರದಲ್ಲಿ ತಿಳಿಸಲಾಗಿದೆ.ಶಿಶಿಲಕ್ಕೆ ಭೇಟಿ ನೀಡಿದ್ದ ಬಗ್ಗೆ ಪತ್ರದಲ್ಲಿ ಸಮರ್ಥನೆ ನೀಡಿರುವ ನಕ್ಸಲರು, `ಇಲ್ಲಿನ  ಜನತೆ ಪುಷ್ಪಗಿರಿ ಮತ್ತಿತರ ಯೋಜನೆಗಳಿಂದಾಗಿ ಒಕ್ಕಲೆಬ್ಬಿಸುವ ತೂಗುಕತ್ತಿಯಡಿ ಇದ್ದಾರೆ. ಅರಣ್ಯ ಇಲಾಖೆಯ ನಿರಂತರ ಕಿರುಕುಳ ಎದುರಿಸುತ್ತಿದ್ದಾರೆ. ಭೂ ಮಾಲೀಕರುಗಳು, ಎಸ್ಟೇಟ್ ಒಡೆಯರ ಬೃಹತ್ ಉದ್ದಿಮೆಗಳ ನಿರಂತರ ಬರ್ಬರ ಶೋಷಣೆ, ಜಾತಿ ದಮನಕ್ಕೆ ಒಳಗಾಗಿದ್ದಾರೆ~ ಎಂದು ಆರೋಪಿಸಿದ್ದಾರೆ.`ಜನರ ದುಸ್ಥಿತಿಗೆ ನಿರಂತವಾಗಿ ಸರ್ಕಾರಗಳು ಮತ್ತು ಅವುಗಳ ಹಿಂದಿರುವ ದೊಡ್ಡ ಭೂಮಾ ಲೀಕರು, ಜನರನ್ನು ಒಕ್ಕಲೆಬ್ಬಿಸಿ ಸುಲಿಯುತ್ತಿರುವ ಕೈಗಾರಿಕೋದ್ಯಮಿಗಳು ಮತ್ತು ವಿದೇಶಿ ಕಂಪನಿಗಳೇ ಕಾರಣ~ ಎಂದು ಪತ್ರದಲ್ಲಿ ತಿಳಿಸಲಾಗಿದೆ.`ಪಕ್ಷವು ಇದರ ವಿರುದ್ಧ ದೇಶಾದ್ಯಂತ ಜನರನ್ನು ಸಂಘಟಿಸುತ್ತಾ, ಚಳುವಳಿಗೆ ನಾಯಕತ್ವ ಕೊಡುತ್ತಿದೆ. ಈ ಚಳುವಳಿಯನ್ನು, ಜನರನ್ನು ದಮನಿಸಿ ಸೋಲಿಸಲು ಶೋಷಕರಿಗೆ ಅವಕಾಶ ವಾಗದಂತೆ ನಮ್ಮ `ಜನತಾ ಗೆರಿಲ್ಲಾ ಸೈನ್ಯ~ವು ಜನರನ್ನು ಸೈನ್ಯವಾಗಿಯೇ ಸಂಘಟಿಸುತ್ತಿದೆ. ನಮ್ಮ ಪಕ್ಷ ಮತ್ತು ಸೈನ್ಯವು ಇದೇ ಸ್ಪಷ್ಟ ರಾಜಕೀಯ ಉದ್ದೇಶವನ್ನು ಹೊಂದಿದ್ದು, ಶೋಷಕರನ್ನು ಮಟ್ಟಹಾಕಿ ಜನರು ಗೆಲ್ಲುವಂತೆ ಮಾಡಲು ಜನತಾ ಕ್ರಾಂತಿ ಮಾಡುವುದೇ ನಮ್ಮ ಗುರಿ~ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.