ಶನಿವಾರ, ಜನವರಿ 18, 2020
20 °C

ಗಂಗಾವತಿ: ಗೋವಧೆ ನಿರಾತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನಗರದ 16ನೆ ವಾರ್ಡ್ ಮುರಾರಿಕ್ಯಾಂಪಿನ ಜನ ವಸತಿ ಪ್ರದೇಶದ ಮಧ್ಯೆ ಕಳೆದ ಹಲವು ತಿಂಗಳಿಂದ ಗೋವಧೆ ಮಾಡಿ ಮಾಂಸ ಮಾರುತ್ತಿರುವ ದಂಧೆ ನಿರಾತಂಕವಾಗಿ ನಡೆದಿದೆ. ನಾಗರಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಈಗ ಬಯಲಿಗೆ ಬಂದಿದೆ.ಜನ ವಸತಿ ಪ್ರದೇಶದ ಮಧ್ಯೆಯೇ ಕೆಲ ವ್ಯಕ್ತಿಗಳು ಆಕಳು, ಎಮ್ಮೆ, ಎತ್ತು ಮತ್ತು ಕರುಗಳನ್ನು ಕತ್ತರಿಸಿ ಮನೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಮತ್ತಷ್ಟು ಜನ ಮಾಂಸವನ್ನು ಬಳ್ಳಾರಿ, ಕಂಪ್ಲಿ, ಸಿಂಧನೂರು ಮತ್ತಿತರ ಪಟ್ಟಣಕ್ಕೆ ರವಾನಿಸುತ್ತಾರೆ ಎಂದು ಗೊತ್ತಾಗಿದೆ.ನಾಗರಿಕರಿಗೆ ತೊಂದರೆ: `ಪಶು ಮಾಂಸವನ್ನು ಜನವಸತಿ ಪ್ರದೇಶದ ಮಧ್ಯೆ ಕತ್ತರಿಸುತ್ತಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮಲೀನ ಉಂಟಾಗುತ್ತಿದೆ. ಇದರಿಂದಾಗಿ ಮಹಿಳೆ ಮತ್ತು ಮಕ್ಕಳಲ್ಲಿ ವಿವಿಧ ಕಾಯಿಲೆಗೆ ಕಾರಣವಾಗುತ್ತಿವೆ~ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ದೂರಿದ್ದಾರೆ. `ಕೆಲ ಮನೆಗಳಲ್ಲಿ ನಡೆಯುತ್ತಿರುವ ಗೋಮಾಂಸ ವ್ಯಾಪಾರ ನಗರದ ಹೊರಭಾಗಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ವಾರ್ಡಿನ ನಾಗರಿಕರು ನಗರಸಭೆಗೆ ಸಲ್ಲಿಸಿದ ಅರ್ಜಿಗೆ ಮೂರ‌್ನಾಲ್ಕು ತಿಂಗಳಾದರೂ ಮರ್ಯಾದೆ ಸಿಕ್ಕಿಲ್ಲ~ ಎಂದು ನಾಗರಾಜ ಮತ್ತೆದಾರ ದೂರಿದ್ದಾರೆ.ಸಂಘಟನೆ ವಿರೋಧ: ಗೋವುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ಷೇಪಿಸಿ ಕಳೆದ ನಾಲ್ಕು ತಿಂಗಳ ಹಿಂದೆ ನಗರದ ಹಿಂದು ಪರ ಸಂಘಟನೆಯ ಕೆಲ ಯುವಕರು ಪೊಲೀಸರಿಗೆ ದೂರು ನೀಡಿದ್ದರು.`ಕಾಟಾಚಾರಕ್ಕೆ ಎಂಬಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಯಾವ ಕ್ರಮ ಕೈಗೊಳ್ಳದೇ ಸುಮ್ಮನಾದರು. ಇದರ ಹಿಂದೆ ಚುನಾಯಿತ ಪ್ರತಿನಿಧಿಗಳ ಕೈವಾಡ ಇದೆ~ ಎಂದು ಹಿಂದು ಪರ ಸಂಘಟನೆಯ ಯುವಕರಾದ ವಿಜಯ್, ಶರಣಪ್ಪ ದೂರಿದ್ದಾರೆ. ಕಟ್ಟಡ ನೆಲಸಮ: ಈ ಹಿಂದೆ ಬೈಪಾಸ್ ರಸ್ತೆಯಲ್ಲಿನ ಕಸಾಯಿಖಾನೆಯಲ್ಲಿ ಕೆಲ ವ್ಯಾಪಾರಿಗಳು ಮಾಂಸ ಮಾರಾಟ ಮಾಡಿ ತಮ್ಮ ಜೀವನ ನಡೆಸುತ್ತಿದ್ದರು. ಆದರೆ ಕಟ್ಟಡ ತಮ್ಮ ಖಾಸಗಿ ಸ್ಥಳದಲ್ಲಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಕಟ್ಟೆ ಹತ್ತಿದರು.ಖಾಸಗಿ ಸ್ಥಳ ವಿಚಾರ ಗೊತ್ತಿದ್ದೂ ನಗರಸಭೆ ಸುಮಾರು 20ಲಕ್ಷ ಮೊತ್ತದ ನವೀಕರಣ ಕೈಗೊಂಡಿತ್ತು. ಕಾಮಗಾರಿ ನಿರ್ವಹಿಸಿದ ಎರಡೇ ತಿಂಗಳಲ್ಲಿ ಕಸಾಯಿಖಾನೆ ನೆಲಸಮವಾಗಿದೆ. ಪರ್ಯಾಯ ಸ್ಥಳ ತೋರಿಸುವಲ್ಲಿ ನಗರಸಭೆ ವಿಫಲವಾದ್ದರಿಂದ ವ್ಯಾಪಾರಿಗಳು ನಗರದಲ್ಲಿ ಮಾಂಸ ಮಾರುವಂತಾಗಿದೆ.

ಪ್ರತಿಕ್ರಿಯಿಸಿ (+)