ಬುಧವಾರ, ಮೇ 25, 2022
30 °C

ಗಡಿ ಶಾಲೆಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಒತ್ತಾಯಿಸಿದರು.ಭಾನುವಾರ ಸಚಿವರಿಗೆ ಮನವಿ ಸಲ್ಲಿಸಿದ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, `ಖಾಸಗಿ ಶಿಕ್ಷಣ ಸಂಸ್ಥೆಗಳ ದಬ್ಬಾಳಿಕೆಯಿಂದ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಗಡಿಭಾಗದ ಕನ್ನಡ ಶಾಲೆಗಳ ಎಷ್ಟೋ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದೆ. ಕೆಲವು ಶಾಲೆಗಳಿಗೆ ಮೇಲ್ಛಾವಣಿ ಇಲ್ಲ. ಮಳೆಗಾಲದಲ್ಲಿ ಮಕ್ಕಳು ಶಾಲೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯೊಳಗೆ ಮಕ್ಕಳನ್ನು ಕೂರಿಸಿದರೆ, ಯಾವ ಕ್ಷಣದಲ್ಲಿ ಮೇಲ್ಛಾವಣಿ ಕುಸಿದು ಬೀಳುತ್ತದೆ ಎಂಬ ಭೀತಿಯಲ್ಲಿ ಶಿಕ್ಷಕರು ಶಾಲೆಗೆ ರಜೆ ನೀಡುತ್ತಿದ್ದಾರೆ' ಎಂದು ತಿಳಿಸಿದರು.`ಹೀಗಾಗಿ ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಖಾಸಗಿ ಸಂಘ-ಸಂಸ್ಥೆಗಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವಂತೆ ಆದೇಶಿಸಬೇಕು' ಎಂದು ಮನವಿ ಮಾಡಿದರು.`ಕೆಲವು ವರ್ಷಗಳಿಂದ ಗೋವಾ ರಾಜ್ಯದಲ್ಲಿ ನೆಲೆಸಿರುವ ಕನ್ನಡ ಆಸಕ್ತರು ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಹಾಗೂ ಬೈನಾದ ಶ್ರೀ ಶಾರದಾ ಮಂದಿರದಲ್ಲಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ನಡೆಸುವ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗುತ್ತಿದ್ದಾರೆ. ಗೋವಾದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರೂ ಇದುವರೆಗೆ ಕ್ರಮ ಕೈಗೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗೋವಾದಿಂದ ಸುಮಾರು 80 ಕಿ.ಮೀ. ದೂರದ ಕರ್ನಾಟಕದ ಕಾರವಾರ ಸಮೀಪದ ಉಳಗಾಕ್ಕೆ ಬಂದು ಪರೀಕ್ಷೆ ಬರೆಯಬೇಕಾಗುತ್ತಿದೆ. ಹೀಗಾಗಿ ಗೋವಾ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು' ಎಂದು ಕರವೇ ಗೋಕಾಕ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಸಚಿವರನ್ನು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಗಣೇಶ ರೋಕಡೆ, ಸಾದಿಕ್ ಹಳ್ಯಾಳ, ಮಹಾದೇವ ಮಕ್ಕಳಗೇರಿ, ನಿಜಮ್ ನದಾಫ್, ರಾಮಸಿದ್ಧ, ಬಸು ಹುಲಕುಂದ, ನಾಗಪ್ಪ ಗದಾಡಿ, ರೆಹಮಾನ್ ಮೊಕಾಶಿ, ಸುಧಾಕರ ಹುದಲಿ, ಕೃಷ್ಣಾ ಖಾನಪ್ಪನವರ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.