ಗುರುವಾರ , ಮೇ 6, 2021
33 °C

`ಗಣಿ ಅಕ್ರಮ: ಪ್ರತ್ಯೇಕ ತನಿಖೆಯಾಗಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: `ನಾನು ಅಕ್ರಮ ಗಣಿಗಾರಿಕೆ ನಡೆಸಿಲ್ಲ. ಬೇಕಾದರೆ ಮುಖ್ಯಮಂತ್ರಿಯವರು ನನ್ನ ವಿರುದ್ಧ ಪ್ರತ್ಯೇಕ ತನಿಖೆಗೆ ಆದೇಶ ನೀಡಬಹುದು' ಎಂದು ಶಾಸಕ ಅನಿಲ್ ಲಾಡ್ ಆಗ್ರಹಿಸಿದರು.ಸ್ಥಳೀಯ ಆಂದ್ರ ಕಲಾ ಸಂಘವು ನಗರದ ರಾಘವ ಕಲಾ ಮಂದಿರದಲ್ಲಿ  ಶನಿವಾರ ರಾತ್ರಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ಅನಿಲ್ ಲಾಡ್ ಅಕ್ರಮ ಗಣಿಗಾರಿಕೆ ನಡೆಸಿದ್ದಾನೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಅಕ್ರಮ ನಡೆಸಿದ್ದರೆ ನನ್ನ ವಿರುದ್ಧತನಿಖೆ ನಡೆಯುತ್ತಿತ್ತು. ಆದರೆ, ಇದುವರೆಗೆ ಯಾವುದೇ ತನಿಖಾ ಸಂಸ್ಥೆ ನನಗೆ ನೋಟಿಸ್ ನೀಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.ಗಣಿ ವ್ಯವಹಾರದಲ್ಲಿ ಚಿಕ್ಕಪುಟ್ಟ ಲೋಪಗಳು ಆಗಿರಬಹುದು. ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡುವ ವೇಳೆ ಈ ಕುರಿತು ಚಕಾರ ಎತ್ತಿಲ್ಲ. ಆದರೆ, ಶಾಸಕನಾಗಿ ಆಯ್ಕೆಯಾದ ನಂತರ ಅಕ್ರಮ ಗಣಿಗಾರಿಕೆ ಕುರಿತು ಪ್ರಸ್ತಾಪಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ' ಎಂದು ಅವರು ಪ್ರಶ್ನಿಸಿದರು.`ಸರ್ಕಾರಿ ಸ್ವಾಮ್ಯದ ಗಣಿ ಕಂಪನಿಯೂ `ಸಿ'  ವರ್ಗದಲ್ಲಿ ಸೇರಿದ್ದು, ಅಲ್ಲೂ ಲೋಪಗಳಾಗಿವೆ. ಕಳೆದ ಐದಾರು ದಶಕಗಳಿಂದ ಗಣಿಗಾರಿಕೆಯಲ್ಲಿ ತೊಡಗಿರುವ  ನಮ್ಮ ಕುಟುಂಬ ಒಂದು ವೇಳೆ ತಪ್ಪು ಮಾಡಿದ್ದರೆ ಅರಣ್ಯ ಇಲಾಖೆ, ಐಬಿಎಂನಿಂದ ಪರವಾನಗಿ ದೊರೆಯುತ್ತಿರಲಿಲ್ಲ ಎಂದು ಹೇಳಿದರು.ಗಣಿಗಾರಿಕೆ ಇರುವ ಜಿಲ್ಲೆಯಲ್ಲಿನ ಕೈಗಾರಿಕೆಗಳಿಗೆ ಅದಿರನ್ನು ನೀಡುವ ಮೂಲಕ ಮೌಲ್ಯವರ್ಧನೆಗೆ ಕ್ರಮ ಕೈಗೊಂಡು ಉದ್ಯೋಗ ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಅನಿಲ್ ಲಾಡ್ ಅವರಿಗೆ ಕಾರಣಾಂತರಗಳಿಂದ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ,  ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಖಂಡಿತ ದೊರೆಯಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಹೇಳಿದರು.

ಸಂಡೂರು ಅಥವಾ ಹೊಸಪೇಟೆ ಸುತ್ತಮುತ್ತ ಸರ್ಕಾರಿ ಒಡೆತನದ ಉಕ್ಕಿನ ಕೈಗಾರಿಕೆ ಸ್ಥಾಪಿಸುವ ಮೂಲಕ  ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಬೇಕಿದೆ ಂದ ಅವರು ಕೋರಿದರು.ಆಂಧ್ರ ಕಲಾ ಸಂಘದ ಅಧ್ಯಕ್ಷ ಮೂಲಂಗಿ ಚಂದ್ರಶೇಖರ್ ಚೌದರಿ, ರಮಣಪ್ಪ, ರಾಮಾಂಜನೇಯುಲು, ರಮೇಶಗೌಡ ಪಾಟೀಲ, ಕೆ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದು, ಅನಿಲ್ ಲಾಡ್ ಅವರನ್ನು ಸತ್ಕರಿಸಿ ಗೌರವಿಸಿದರು.

ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಜಿಲಾನ್ ಬಾಷಾ ಅವರ ಕಲಾತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.