ಶನಿವಾರ, ಜನವರಿ 18, 2020
19 °C
ಸರ್ಕಾರಿ ನೌಕರಿಯಲ್ಲಿದ್ದರೂ ಪೋಷಿಸದ ಅಪ್ಪ

ಗದಗ: ನಿರ್ಲಕ್ಷಿತ ಆರು ಮಕ್ಕಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ತಂದೆ-–ತಾಯಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆರು ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ನೆರವಿನಿಂದ ರಕ್ಷಿಸ­ಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ ಶರಣಪ್ಪ ಹೇಳಿದರು.‘ಒಂದೇ ಕುಟುಂಬದ ನಾಲ್ವರು ಬಾಲಕರು, ಒಬ್ಬಳು ಬಾಲಕಿ (15) ಮತ್ತು ಈ ಬಾಲಕಿಯ ಪುತ್ರಿ ಸೇರಿದಂತೆ ಒಟ್ಟು ಆರು ಮಕ್ಕಳನ್ನು ರಕ್ಷಿಸಲಾಗಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ನರಗುಂದದಲ್ಲಿ ನೀರಾವರಿ ಇಲಾಖೆ­ಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮಣ ಬೆಲೀಫ್‌, ಪತ್ನಿ ಹಾಗೂ ಮಕ್ಕಳ ಪಾಲನೆ­ಯಲ್ಲಿ ಕಾಳಜಿ ವಹಿಸದ ಕಾರಣ ಅವರಿಗೆ ಸಾಮಾಜಿಕ ಜ್ಞಾನ ಕೂಡಾ ಬೆಳೆದಿಲ್ಲ.  ಸರ್ಕಾರಿ ನೌಕರಿಯಲ್ಲಿದ್ದರೂ ಮನೆಗೆ ವಿದ್ಯುತ್ ಇಲ್ಲ. ಸರಿಯಾಗಿ ಊಟ, ನಿದ್ದೆ, ಶಿಕ್ಷಣ, ಇಲ್ಲದೇ ಮಕ್ಕಳು ಸಾಮಾಜಿಕವಾಗಿ ಹೊರಗಿದ್ದಾರೆ’ ಎಂದು ಅವರು ಹೇಳಿದರು.‘ಲಕ್ಷ್ಮಣ ಅವರ 15 ವಯಸ್ಸಿನ ಮಗಳು ಇತ್ತೀಚೆಗೆ ಮಗುವೊಂದಕ್ಕೆ ಜನ್ಮ ನೀಡಿದ್ದು, ಆ ಮಗುವಿನ ತಂದೆ ಯಾರೆಂಬುದನ್ನು ಪತ್ತೆ ಹಚ್ಚಲು ಡಿ.ಎನ್‌.ಎ ಪರೀಕ್ಷೆ ನಡೆಸಲಾ­ಗುವುದು. ಇದಲ್ಲದೇ  ಇದೇ ಕುಟುಂಬ­ದಲ್ಲಿ ಒಂದೂವರೆ ವರ್ಷದ ಹಿಂದೆ ಜನಿಸಿದ ಮಗುವನ್ನು ಮಾರಾಟ ಮಾಡಲಾಗಿದೆಯೋ ಅಥವಾ ಅನಾ­ರೋಗ್ಯದಿಂದ ಅದು ಮೃತಪಟ್ಟಿ­ದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಷ್ಟೇ’ ಎಂದು ಎಸ್ಪಿ ಹೇಳಿದರು.‘ಮಾಹಿತಿ ತಿಳಿದು ನಾವು ನರಗುಂದದ­ಲ್ಲಿರುವ ನೀರಾವರಿ ಇಲಾಖೆಯ ವಸತಿಗೃಹ ಬಳಿಯ ಶೆಡ್‌ವೊಂದಕ್ಕೆ ಭೇಟಿ ನೀಡಿದಾಗ ಮಕ್ಕಳು ಅನಾಗರಿಕತೆಯ ವಾತಾ­ವರಣ­ದಲ್ಲಿ ಬದುಕುತ್ತಿದ್ದವು. ಕನಿಷ್ಠ ಸ್ವಚ್ಛತೆ ಬಗ್ಗೆಯೂ ತಂದೆ–ತಾಯಿ ಅರಿವು ನೀಡದಿರುವುದು ಅವರನ್ನು ನೋಡಿದಾಗ ಎದ್ದು ಕಾಣುತ್ತಿತ್ತು.ಈ ಬಗ್ಗೆ ಮಹಿಳೆಯನ್ನು ಕೇಳಿದಾಗ, ಮನೆಯ ಯಜಮಾನ ಲಕ್ಷ್ಮಣ ಮನೆಗೆ ಆಗಾಗ ಬರುತ್ತಾರೆ. ಸರ್ಕಾರಿ ನೌಕರಿಯಲ್ಲಿದ್ದು ರೂ 20,000 ಸಂಬಳ ಪಡೆಯುತ್ತಿದ್ದರೂ ಸಾಕಷ್ಟು ಸಾಲ ಮಾಡಿರುವುದರಿಂದ ಮನೆಗೆ ಏನೂ ಕೊಡುವುದಿಲ್ಲ ಎಂದು ಹೇಳಿದ್ದಾಳೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಈ ಮಕ್ಕಳನ್ನು ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಭಾರತಿ ಶೆಟ್ಟರ್‌ ತಿಳಿಸಿದರು.ನರಗುಂದ ವರದಿ: ಲಕ್ಷ್ಮಣ ಬೆಲೀಫ್‌ ಈ ಮೊದಲು ಇಲ್ಲಿಯ ನೀರಾವರಿ ಇಲಾಖೆಯ ವಸತಿಗೃಹದಲ್ಲಿ ವಾಸ­ವಾಗಿ­ದ್ದರು. ಅವರು ಮತ್ತು ಅವರ ಹೆಂಡತಿ ಪಕ್ಕದ ಮನೆಯವರೊಡನೆ ಪದೇ ಪದೇ ಜಗಳವಾಡುತ್ತಿದ್ದು­ದರಿಂದ ಅವರನ್ನು ಅಲ್ಲಿಂದ ಹೊರಗೆ ಹಾಕಲಾಗಿತ್ತು. ಕೆಲವು ತಿಂಗಳಿಂದ ಅವರು ಅಲ್ಲಿಯೇ ಇದ್ದ ಶೆಡ್‌­ವೊಂದರಲ್ಲಿ ವಾಸ ಮಾಡ ತೊಡಗಿದರು. ಅಲ್ಲಿ ವಿದ್ಯುತ್‌ ಮತ್ತಿತರ ಯಾವುದೇ ಸೌಲಭ್ಯಗಳಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.

ಹಿಂದಿನ ಐದಾರು ತಿಂಗಳಿಂದ ಕಚೇರಿಗೂ ಕೂಡ ಗೈರು ಆಗಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)