ಭಾನುವಾರ, ಜೂನ್ 20, 2021
26 °C

ಗದ್ದುಗೆಗೆ ಕಾಂಗ್ರೆಸ್‌– ಬಿಜೆಪಿ ಜಿದ್ದಾಜಿದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಸ್ಥಳೀಯ ಪುರಸಭೆಯ ಮೊದಲ ಅವಧಿಯ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ವೇಳಾಪಟ್ಟಿ ನಿಗದಿ ಆಗುತ್ತಿದ್ದಂತಿಯೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ.ಅಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ’ಕ್ಕೆ ಮೀಸಲಾಗಿದೆ. ಪುರಸಭೆ ಅಧಿಕಾರವನ್ನು ತೆಕ್ಕೆಗೆ ತೆಗೆದು ಕೊಳ್ಳಬೇಕು ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಆರಂಭವಾಗಿದೆ.ಒಟ್ಟು 27 ಸದಸ್ಯ ಬಲವುಳ್ಳ ಪುರಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷಗಳು ಸ್ಪಷ್ಟ ಬಹುಮತ ಹೊಂದಿಲ್ಲ. ಹೀಗಾಗಿ ಪುರಸಭೆಯಲ್ಲಿ ಅತಂತ್ರದ ಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ 10ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿಹೆಚ್ಚು ಸ್ಥಾನ ಪಡೆದಿದುಕೊಂಡಿದ್ದರೆ, ಕಾಂಗ್ರೆಸ್‌ ಕೇವಲ 7ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನೂ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ 6 ಮಂದಿ ಆಯ್ಕೆಯಾಗಿದ್ದರೆ, ಕೆಜೆಪಿ ಹಾಗೂ ಜೆಡಿಎಸ್‌ ತಲಾ ಒಂದು ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ.ಪಕ್ಷೇತರ ಸದಸ್ಯರಾದ 6ನೇ ವಾರ್ಡ್‌ನ ಡೆಂಕಿ ಅನ್ವರಸಾಬ್‌ ಹಾಗೂ 24ನೇ ವಾರ್ಡ್‌ನ ಡಿ.ಜಾವೂರು ಈಗಾಗಲೇ ಕಾಂಗ್ರೆಸ್‌ ಸಹ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕೆಜೆಪಿ ಬಿಜೆಪಿ ವಿಲೀನವಾದ ಹಿನ್ನೆಲೆಯಲ್ಲಿ ಕೆಜೆಪಿ ಏಕೈಕ ಸದಸ್ಯೆ ರೇಖಾ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಸದಸ್ಯರ ಸಂಖ್ಯೆ 11ಕ್ಕೆ ಏರಿದರೆ, ಕಾಂಗ್ರೆಸ್‌ ಸದಸ್ಯರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.ಬಿಎಸ್ಆರ್‌ ಕಾಂಗ್ರೆಸ್‌ ಸದಸ್ಯರಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಗಾಳ ಹಾಕುವ ಮೂಲಕ ಅಧಿಕಾರ ಹಿಡಿಯಲು ತೆರೆಮರೆಯ ಕಸರತ್ತು ನಡೆಸಿವೆ. ಬಿಎಸ್‌ಆರ್‌ ಕಾಂಗ್ರೆಸ್‌ನ ಆರು ಸದಸ್ಯರ ಪೈಕಿ, ಈಗಾಗಲೇ 4ಮಂದಿ ಕಾಂಗ್ರೆಸ್‌ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಉಳಿದ ಇಬ್ಬರು ಸದಸ್ಯರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಬಿಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಇಬ್ಬರಿಗೆ ಗಾಳ ಹಾಕಿದರೆ, ಬಿಜೆಪಿ ಸಂಖ್ಯೆ 13ಕ್ಕೆ ಏರುತ್ತದೆ.

 

ಕಾಂಗ್ರೆಸ್‌ ಅಧಿಕಾರಕ್ಕಾಗಿ ತೀವ್ರ ಕಸರತ್ತು ನಡೆಸಿದ್ದು, ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಎಸ್‌ಆರ್‌ ಕಾಂಗ್ರೆಸ್‌ಗೆ ಎಂಬ ಒಡಂಬಡಿಕೆಯೂ ನಡೆದಿದೆ ಎನ್ನಲಾಗಿದೆ. ಹೀಗಾಗಿ, ಅಧ್ಯಕ್ಷ ಆಕಾಂಕ್ಷಿಗಳ ಮೂವರು ಸದಸ್ಯರಿದ್ದು, ಅಧಿಕಾರ ಹಂಚಿಕೆ ಸೂತ್ರಕ್ಕೆ ಮೊರೆ ಹೋಗಿದೆ. ಮೊದಲ ಕಂತಿನಲ್ಲಿ ಪ್ರಭಾ ಅಜ್ಜಣ್ಣ ಹಾಗೂ ಎರಡನೇ ಕಂತಿನಲ್ಲಿ ಕವಿತಾ ವಾಗೀಶ್‌ ಅವರಿಗೆ ಹಂಚಿಕೆಯಾಗಿದೆ ಎನ್ನಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಎಸ್‌ಆರ್‌ ಕಾಂಗ್ರೆಸ್‌ನ ನಜೀರ್‌ ಅಹಮದ್‌ ಹೆಸರು ಕೇಳಿಬರುತ್ತಿದೆ.ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಮಾಬಾಯಿ,  ವಿಜಯಲಕ್ಷ್ಮೀ ಹಾಗೂ ಭಂಗಿ ಕೆಂಚಮ್ಮ ನಡುವೆ ತೀವ್ರ ಪೈಪೋಟಿ ನಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬೂದಿ ನವೀನ್‌, ಎಂ. ವೆಂಕಟೇಶ್ ಮಧ್ಯೆ ಬಿರುಸಿನ ಸ್ಪರ್ಧೆ ನಡೆದಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಬಿಎಸ್‌ಆರ್‌ ಕಾಂಗ್ರೆಸ್‌ನ ತಮ್ಮ ಬೆಂಬಲಿಗರನ್ನು  ಪ್ರತ್ಯೇಕವಾಗಿ ಜತೆಗಿಟ್ಟುಕೊಂಡು ಈಗಾಗಲೇ ಅಜ್ಞಾತ ಸ್ಥಳಗಳಿಗೆ ತೆರಳಿದ್ದಾರೆ.ಒಟ್ಟಾರೆ ಕಳೆದ ಅವಧಿಯಲ್ಲಿ ಸ್ಪಷ್ಟ ಬಹುಮತ ಇದ್ದರೂ ‘ಬಿಜೆಪಿಯ ಆಪರೇಷನ್‌ ಕಮಲ’ದಿಂದ

ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್‌ ಈ ಬಾರಿ ಬಿಎಸ್‌ಆರ್‌ ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಿಡಿಯುತ್ತದೆಯಾ ಎಂಬ ಕೂತೂಹಲ ಎಲ್ಲರದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.