ಶುಕ್ರವಾರ, ಮೇ 27, 2022
23 °C

ಗನ್‌ಮ್ಯಾನ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರ ನಿವಾಸದ ಮೇಲೆ ಸೋಮವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬಂದೂಕು ದೊರೆತ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧೀನಗರ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್  ದಾಖಲಿಸಲಾಗಿದೆ.ಪೊಲೀಸ್ ವಿಚಾರಣೆಯ ನಂತರ ಶಾಸಕ ನಾಗೇಂದ್ರ ಅವರ ನಿವಾಸದಲ್ಲಿ ದೊರೆತ ಬಂದೂಕು, ಅವರ ಭದ್ರತೆಗೆಂದು ಪೊಲೀಸ್ ಇಲಾಖೆಯಿಂದ ನೇಮಕಗೊಂಡಿದ್ದ ಪೊಲೀಸ್ ಕಾನಸ್ಟೇಬಲ್ ಶಾಂತಮೂರ್ತಿ ಅವರದ್ದು ಎಂಬುದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರು ಶಾಂತಮೂರ್ತಿ ಅವರನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರವು ಗನ್‌ಮ್ಯೋನ್ (ಭದ್ರತಾ ಸಿಬ್ಬಂದಿ)ಗೆ ನೀಡಿರುವ ಬಂದೂಕನ್ನು ಸದಾ ಆತ ತನ್ನೊಂದಿಗೆ ಕೊಂಡೊಯ್ಯಬೇಕು. ಕರ್ತವ್ಯದಲ್ಲಿ ಇರದ ಸಂದರ್ಭ, ಅದನ್ನು ಪೊಲೀಸ್ ಇಲಾಖೆಯ ಶಸ್ತ್ರಾಗಾರ ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ಇರಿಸಬೇಕು.ಆದರೆ, ಶಾಂತಮೂರ್ತಿ ಅವರು ಶಾಸಕ ನಾಗೇಂದ್ರ ಅವರೊಂದಿಗೆ ತೆರಳದಿದ್ದರೂ ಅವರ ಮನೆಯಲ್ಲೇ ಬಂದೂಕು ಬಿಟ್ಟು ಹೋಗಿ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಜರುಗಿಸಲಾಗಿದೆ.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಪೇದೆಯಾಗಿರುವ ಶಾಂತಮೂರ್ತಿ ಸೇರಿದಂತೆ ಒಟ್ಟು ನಾಲ್ಕು ಮಂದಿ ನಾಗೇಂದ್ರ ಅವರ ಭದ್ರತೆಗೆ ಸರ್ಕಾರ ನಿಯೋಜಿಸಿತ್ತು.ಬೆಂಗಳೂರಿಗೆ ತೆರಳಿರುವ ನಾಗೇಂದ್ರ ಅವರೊಂದಿಗೆ ಕೇವಲ ಇಬ್ಬರು ಭದ್ರತಾ ಸಿಬ್ಬಂದಿ ಮಾತ್ರ ತೆರಳಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ಕ್ಯಾತನ್  ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

12 ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು: ಗಣಿಗಳಿಂದ ಮತ್ತು ಅದಿರು ಸಾಗಿಸುವ ಲಾರಿಗಳಿಂದ ಹೊರಬರುತ್ತಿದ್ದ ದೂಳು ರಾಜ್ಯದ ಪರಿಸರದ ಮೇಲೆ ದುಷ್ಪರಿಣಾಮ ಬೀರಿದ್ದು ಜನತೆಯ ನೆನಪಿನಲ್ಲಿ ಹಸಿರಾಗಿರುವಂತೆಯೇ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ 12 ಮಂದಿ ಅಧಿಕಾರಿಗಳಿಗೆ ಸೆಪ್ಟೆಂಬರ್ 22ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ಜಾರಿ ಮಾಡಿದ ಅಧಿಕಾರಿಗಳ ವಿವರ ಇಲ್ಲಿದೆ: ತುಮಕೂರು ವಲಯ: ಎಂ. ಲಕ್ಷ್ಮಣ, ಹಿರಿಯ ಪರಿಸರ ಅಧಿಕಾರಿ; ಷಣ್ಮುಗ, ಸಿದ್ಧರಾಮಯ್ಯ, ರಮೇಶ್ ಡಿ. ನಾಯ್ಕ (ಪರಿಸರ ಅಧಿಕಾರಿಗಳು.) ಬಳ್ಳಾರಿ ವಲಯ: ಕೊಟ್ರೇಶ್, ಹಿರಿಯ ಪರಿಸರ ಅಧಿಕಾರಿ; ಎಸ್. ಮಧುಸೂದನ್, ಕೊಟ್ರೇಶ್, ಭೀಮಸಿಂಗ್ ಗೋಗಿ, ಕಿರಣ್ ಕುಮಾರ್, ಕೆ.ಎಂ. ರಾಜು (ಪರಿಸರ ಅಧಿಕಾರಿ) ಕಾರವಾರ ವಲಯ: ಗೋಪಾಲಕೃಷ್ಣ ಸಂತಂಗಿ, ಜಗದೀಶ, ಸೋಮಶೇಖರ ಹಿರೇಗೌಡರ್ (ಪರಿಸರ ಅಧಿಕಾರಿ).

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.