ಸೋಮವಾರ, ಸೆಪ್ಟೆಂಬರ್ 20, 2021
22 °C

ಗಲ್‌ಪೇಟೆ ಸರ್ಕಾರಿ ಶಾಲೆಗೆ ನುಗ್ಗಿದ ಮಳೆ ನೀರು:ವಿದ್ಯಾರ್ಥಿ, ಶಿಕ್ಷಕರ ಪರದಾಟ; ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲ್‌ಪೇಟೆ ಸರ್ಕಾರಿ ಶಾಲೆಗೆ ನುಗ್ಗಿದ ಮಳೆ ನೀರು:ವಿದ್ಯಾರ್ಥಿ, ಶಿಕ್ಷಕರ ಪರದಾಟ; ಆಕ್ರೋಶ

ಕೋಲಾರ: ಸೋಮವಾರ ರಾತ್ರಿ ಸುರಿದ ಮಳೆ ನೀರು ನುಗ್ಗಿದ ಪರಿಣಾಮ ಮಂಗಳವಾರ ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡಿದ ಘಟನೆ ನಗರದ ಗಲ್‌ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಟಿಪ್ಪುರಸ್ತೆಯಲ್ಲಿ ರಾಜಕಾಲುವೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಗಲ್‌ಪೇಟೆ ಮುಖ್ಯರಸ್ತೆಯಲ್ಲಿರುವ ಈ ಶಾಲೆಯೊಳಕ್ಕೆ ಹರಿದು ಬರುತ್ತಿದೆ. ಅಷ್ಟೇ ಅಲ್ಲ, ಶಾಲೆಯ ಸುತ್ತ ಚರಂಡಿ ಇದ್ದು ಅದನ್ನು ಸ್ವಚ್ಛಗೊಳಿಸಿಲ್ಲ. ಅದರ ಮೂಲಕ ಮಳೆ ನೀರು ಹರಿಯುವ ವ್ಯವಸ್ಥೆ ಮಾಡಿದರೆ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಯುತ್ತದೆ. ಆದರೆ ಈ ಮನವಿಯನ್ನು ಯಾರೊಬ್ಬರೂ ಆಲಿಸುತ್ತಿಲ್ಲ ಎಂದು ಮುಖ್ಯಶಿಕ್ಷಕಿ ಟಿ.ಎಸ್.ವನಜಾಕ್ಷಿ ವಿಷಾದಿಸಿದರು.ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರೊಡನೆ ಮಾತನಾಡಿದ ಅವರು, ನಗರಸಭೆ ಸದಸ್ಯರಾದ ರೌತ್ ಶಂಕರಪ್ಪ, ಜ್ಯೋತಿ  ಮತ್ತು ನಾಮಕರಣ ಸದಸ್ಯೆ ರತ್ನಮ್ಮನವರಿಗೆ ಶಾಲೆಯ ಈ ಸಮಸ್ಯೆ ಬಗ್ಗೆ ಹಲವು ಬಾರಿಗೆ ಗಮನ ಸೆಳೆದಿದ್ದೇವೆ. ಬೆಳಿಗ್ಗೆ ಕೂಡ ರೌತ್ ಶಂಕರಪ್ಪನವರಿಗೆ ಮಾಹಿತಿ ನೀಡಿದೆವು. ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿದೆವು ಎಂದು ಅವರು ವಿವರಿಸಿದರು.1ರಿಂದ 7ನೇ ತರಗತಿವರೆಗೆ 140 ಮಕ್ಕಳು ಓದುತ್ತಿದ್ದಾರೆ. ಕಳೆದ ಆರು ವರ್ಷದಿಂದ ಮಳೆ ನೀರು ಶಾಲೆಯೊಳಕ್ಕೆ ಹರಿಯುತ್ತಿದೆ. ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಸೋಮವಾರ ರಾತ್ರಿ ನಗರ ಹಾಗೂ ಸುತ್ತಮುತ್ತ ಹೆಚ್ಚು ಮಳೆ ಸುರಿದ ಪರಿಣಾಮವಾಗಿ ಹಳ್ಳಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.ನಗರದ ಎಂಬಿ ರಸ್ತೆಯುದ್ದಕ್ಕೂ ಹಳ್ಳಗಳಲ್ಲಿ ನೀರು ತುಂಬಿತ್ತು. ಕ್ಲಾಕ್‌ಟವರ್ ಸಮೀಪ ರೈಲ್ವೆ ಮೇಲುಸೇತುವೆ ನಿರ್ಮಾಣವಾಗುತ್ತಿರುವ ಸ್ಥಳದ ಪರ್ಯಾಯ ರಸ್ತೆಯಲ್ಲಿ ಮಳೆ ನೀರು ತುಂಬಿರುವ ಪರಿಣಾಮ ಮಂಗಳವಾರ ವಾಹನ ಸವಾರರು ತೊಂದರೆಪಟ್ಟರು. ನಗರದ ಗಲ್‌ಪೇಟೆಮುಖ್ಯ ರಸ್ತೆಯಲ್ಲಿ ಚರಂಡಿಯಲ್ಲಿ ಮಳೆ ನೀರು ಹರಿಯದೆ ರಸ್ತೆಗೆ ಬಂದ ಪರಿಣಾಮ ಇಡೀ ರಸ್ತೆ ಕೆಸರುಮಯವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.