ಸೋಮವಾರ, ಮೇ 16, 2022
28 °C

ಗಾಂಧಿ ಆದರ್ಶ ಅಳವಡಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕೈದಿಗಳು ಮಹಾತ್ಮಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಸುಭಾಷ ಆದಿ ಸಲಹೆ ನೀಡಿದರು.ನಗರದ ಉಪಕಾರಾಗೃಹದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಾತ್ಮಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೈದಿಗಳು ತಮ್ಮ ಮನ ಪರಿವರ್ತನೆ ಮಾಡಿಕೊಂಡು ಉತ್ತಮ ಸಮಾಜ ಸುಧಾರಕರಾಗಬೇಕು.ದ್ವೇಷ, ಅಸೂಯೆ, ಕಾಮ, ಕ್ರೊಧ, ಮದ, ಮೋಹ, ಮತ್ಸರಗಳನ್ನು ಬಿಟ್ಟು ಬಿಡಬೇಕು. ಬಿಡುಗಡೆಯಾದ ಮೇಲೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಸಹಬಾಳ್ವೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಮಾತನಾಡಿ, ಮಹಾತ್ಮ ಗಾಂಧೀಜಿ  ಅವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದಲ್ಲದೆ, ಸ್ವಾವಲಂಬನೆ ಜೀವನ  ನಡೆಸಲು ಮಾರ್ಗದರ್ಶನ ನೀಡಿದ್ದಾರೆ. ಕೈದಿಗಳು ಉತ್ತಮ ನೈತಿಕ ಹಾಗೂ  ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಾಂಧೀಜಿ ಅವರಿಗೆ   ಗೌರವ ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಮಾತನಾಡಿ, ಅಪರಾಧ ಮಾಡಿದ ವ್ಯಕ್ತಿಗೆ ಶಿಕ್ಷೆ ಆಗಲೇಬೇಕು. ಇದರಿಂದ ಇತರರು ತಪ್ಪುಗಳನ್ನು ಮಾಡಲು ಹಿಂಜರಿಯುತ್ತಾರೆ. ಅಪರಾಧ ಮಾಡುವವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಕೆ. ಹೊಳೆಯಣ್ಣವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಕೆ. ರಮೇಶ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಆರ್. ಗುಡೂರ ಇತರರು ಹಾಜರಿದ್ದರು.ಭಾರತಿ ಶೆಲವಡಿ ಹಾಗೂ ವಾಣಿ ಪಾಟೀಲ ಪ್ರಾರ್ಥಿಸಿದರು. ಉಪಕಾರಾಗೃಹದ ಅಧೀಕ್ಷಕ ಎಸ್.ಎನ್. ಟಕ್ಕೇದ ಸ್ವಾಗತಿಸಿದರು. ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಐ.ಎಂ. ದೊಡ್ಡಮನಿ ವಂದಿಸಿದರು.ಮುಂಡರಗಿ ವರದಿ

`ಶಿಕ್ಷಕರನ್ನು ಪ್ರಶ್ನಿಸುವ ಪ್ರವೃತ್ತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು~ ಎಂದು ವೀರಣ್ಣ ಮಡಿವಾಳರ ಹೇಳಿದರು.ಇಲ್ಲಿಯ ಎಸ್.ಎಂ.ಭೂಮರಡ್ಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗಾಂಧಿ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಮಹಾತ್ಮಾ ಗಾಂಧೀಜಿ ಅವರ ತತ್ವಾದರ್ಶಗಳು ಸಾರ್ವಕಾಲಿಕ ಸತ್ಯಗಳಾಗಿದ್ದು, ಸ್ವಾತಂತ್ರ್ಯಕ್ಕಾಗಿ ಅವರು ಕೈಗೊಂಡ ಸತ್ಯ, ನ್ಯಾಯ ಮತ್ತು ಅಹಿಂಸಾ ಮಾರ್ಗದ ಹೋರಾಟ ಜಗತ್ತಿನಾದ್ಯಂತ ಹೋರಾಟ ಕೈಗೊಳ್ಳಲು ವಿವಿಧ ದೇಶಗಳಿಗೆ ಪ್ರೇರಣೆ ನೀಡಿತ್ತು.ಆ ಹಿನ್ನೆಲೆಯಲ್ಲಿ ಗಾಂಧೀಜಿಯಂತಹ ಯುಗಪುರುಷನನ್ನು ಪಡೆದಿದ್ದಕ್ಕಾಗಿ ಭಾರತೀಯರು ಹೆಮ್ಮೆಪಡಬೇಕು~ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಎಸ್‌ಡಿಎಂಸಿ ಸದಸ್ಯರಾದ ದುರುಗಪ್ಪ ರಾಮೇನಹಳ್ಳಿ, ಅಶೋಕ ಹಂದ್ರಾಳ, ಶಿಕ್ಷಕಿಯರಾದ ಜಿ.ಎಲ್.ಹೊಸೂರ, ಎಸ್.ಆರ್.ಹಿರೇಮಠ, ಎಸ್.ಕೆ.ತಟ್ಟಿ, ಆರ್.ಎಸ್.ಚವಡಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮಹಾತ್ಮಾ ಗಾಂಧೀಜಿ ಕುರಿತು ಮಾತನಾಡಿದರು. ಶಿಕ್ಷಕಿ ಸುಜಾತಾ ಬೆಟಗೇರಿ ನಿರೂಪಿಸಿದರು.ವಿ.ಜಿ.ಲಿಂಬಿಕಾಯಿ ಶಾಲೆಯ ವರದಿ:  ಇಲ್ಲಿಯ ವಿ.ಜಿ.ಲಿಂಬಿಕಾಯಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಅಂಗಡಿ ಮಹಾತ್ಮಾ ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಕುರಿತು ಮಾತನಾಡಿದರು. ಜೆ.ಎಸ್. ಅಳವುಂಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.      ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಸಿ.ವಿ. ಪಾಟೀಲ ಸ್ವಾಗತಿಸಿದರು. ಎಸ್.ಎಸ್. ಹಡಪದ ನಿರೂಪಿಸಿದರು. ಎಸ್.ಬಿ. ಗದಗ ವಂದಿಸಿದರು.  ಶಿಂಗಟಾಲೂರು ವರದಿ: ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಗಂಗಾಧರ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಮಹೇಶ ಮೇಟಿ, ಯು.ಆರ್. ಸಿರಸಗಿ, ಭೋಜರಾಜ ಲಮಾಣಿ. ಟಿ.ಎಲ್. ಮುಳ್ಳಳ್ಳಿ, ಸುನಂದಾ, ಉಮೆಶ ಬೂದಿಹಾಳ, ಚಿದಾನಂದ ವಡ್ಡರ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.  ಭಾಗ್ಯಲಕ್ಷ್ಮಿ ಇನಾಮತಿ ನಿರೂಪಿಸಿದರು. ಉಮಾದೇವಿ .ಎಸ್. ವಂದಿಸಿದರು.ಗಜೇಂದ್ರಗಡ ವರದಿ

ಸತ್ಯ ಶಾಂತಿ ಮತ್ತು ಅಹಿಂಸಾ ಮೂರ್ತಿಯಾಗಿದ್ದ ಮಹಾತ್ಮ ಗಾಂಧೀಜಿ ಅವರು ಇಡೀ ಭಾರತೀಯರ ಹಿತವೇ ತಮ್ಮ ಹಿತವೆಂದು ಭಾವಿಸಿ ದುಡಿದ ಮಹಾನ್ ಚೇತನವಾಗಿದ್ದರು. ಅವರ ಆದರ್ಶ ಜೀವನವೇ ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದು ಮುಖ್ಯಾಧಿಕಾರಿ ಆರ್.ಎಂ.ಕೊಡಗೆ ತಿಳಿಸಿದರು.ಮಹಾತ್ಮ ಗಾಂಧೀಜಿಯವರ 142ನೇ ಜಯಂತಿ ಅಂಗವಾಗಿ ಭಾನುವಾರ ಪುರಸಭೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದಲಿತರು, ಹಿಂದುಳಿದ ವರ್ಗಗಳ ಜನರ ಏಳಿಗೆಗೆ ಜೀವನಪೂರ್ತಿ ಶ್ರಮಿಸಿದ್ದ ಗಾಂಧೀಜಿಯವರ ಆಶಯದಂತೆ ಅಸ್ಪೃಶ್ಯತೆ ನಿವಾರಣೆಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.ದಲಿತರಿಗಾಗಿಯೇ ಇರುವ ಶೇ.22.75ರ ಅನುದಾನವನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. 22.75ರ ಅನುದಾನದ ಮಾದರಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೂ ಅನುದಾನದಲ್ಲಿ ಶೇ 7.25ರ ಮೀಸಲಿದ್ದು, ಹಿಂದುಳಿದ ವರ್ಗದ ಜನತೆ ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.ಪುರಸಭೆ ಸದಸ್ಯ ಚಂದ್ರು ಚಳಗೇರಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶೇ 22.75ರ ಅನುದಾನದ ಅಡಿಯಲ್ಲಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪುರಸಭೆ ಅಧ್ಯಕ್ಷೆ ಅಕ್ಕಮ್ಮ ರಾಮಜಿ ಅಧ್ಯಕ್ಷತೆ ವಹಿಸಿದ್ದರು.ಪುರಸಭೆ ಸದಸ್ಯ ಭಾಸ್ಕರ ರಾಯಬಾಗಿ, ವೆಂಕಟೇಶ ಮುದಗಲ್ಲ, ರಾಜೇಂದ್ರ ಘೋರ್ಪಡೆ, ಪ್ರಕಾಶ ಜಾಲಿಹಾಳ, ಪುಷ್ಪಾವತಿ ಭಾಂಡಗೆ, ಸಾವಿತ್ರಿಬಾಯಿ ನಿಂಬಾಳ್ಕರ್, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.