ಗುರುವಾರ , ಫೆಬ್ರವರಿ 25, 2021
29 °C
ಕಾಶ್ಮೀರ ಗಲಭೆ: ಅಂತರರಾಷ್ಟ್ರೀಯ ಸಮುದಾಯ ಕೈಜೋಡಿಸಲು ನವಾಜ್ ಷರೀಫ್ ಮನವಿ

ಗಾಯಾಳುಗಳ ಚಿಕಿತ್ಸೆಗೆ ಪಾಕ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯಾಳುಗಳ ಚಿಕಿತ್ಸೆಗೆ ಪಾಕ್ ಒತ್ತಾಯ

ಇಸ್ಲಾಮಾಬಾದ್‌ (ಪಿಟಿಐ): ಕಾಶ್ಮೀರದ ಗಲಭೆಯಲ್ಲಿ ಗಾಯಗೊಂಡಿರುವವರಿಗೆ ವೈದ್ಯಕೀಯ ನೆರವು ನೀಡುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಜತೆಗೆ ಗಲಭೆ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಂತೆ ಭಾರತದ ಮೇಲೆ ಒತ್ತಡ ಹೇರಿ ಎಂದು ಜಾಗತಿಕ ಸಮುದಾಯವನ್ನು ಅವರು ಕೇಳಿಕೊಂಡಿದ್ದಾರೆ. ಈ ಮೂಲಕ ಕಾಶ್ಮೀರ ಸಮಸ್ಯೆಯ ಬಗ್ಗೆ ಮತ್ತೆ ಜಾಗತಿಕ ಸಮುದಾಯದ ಗಮನ ಸೆಳೆಯಲು ಷರೀಫ್‌ ಮುಂದಾಗಿದ್ದಾರೆ.ಈ ಬಗ್ಗೆ ಷರೀಫ್ ಹೇಳಿಕೆ ಇರುವ ಪತ್ರವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ. ‘ಕಾಶ್ಮೀರದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭಾರತೀಯ ಸೇನೆ ಪೆಲೆಟ್‌ ಗನ್‌ಗಳನ್ನು ಬಳಸುತ್ತಿದೆ. ಇದರಿಂದ ಪ್ರತಿಭಟನಾಕಾರರ ಕಣ್ಣುಗಳಿಗೆ ತೀವ್ರವಾದ ಗಾಯಗಳಾಗುತ್ತಿವೆ.ಅವರಿಗೆ ಚಿಕಿತ್ಸೆ ನೀಡಲು ಅಲ್ಲಿನ ಭದ್ರತಾ ಪಡೆಗಳು ಅವಕಾಶ ನೀಡುತ್ತಿಲ್ಲ. ಭಾರತೀಯ ಸೇನೆ ಅಲ್ಲಿನ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಗಾಯಾಳುಗಳನ್ನು ಸಾಗಿಸುತ್ತಿರುವ ಆಂಬುಲೆನ್ಸ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ’ ಎಂದು ಪತ್ರದಲ್ಲಿ ಷರೀಫ್ ಅವರು ಆರೋಪಿಸಿದ್ದಾರೆ.‘ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು.  ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಬೇಕು. ಜತೆಗೆ ಗಾಯಾಳುಗಳಿಗೆ ಭಾರತವೂ ಚಿಕಿತ್ಸೆ ನೀಡುವಂತೆ ಒತ್ತಡ ಹೇರಿ’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.‘ಈ ಹೋರಾಟವನ್ನು ಮುನ್ನಡೆಸುತ್ತಿರುವುದು ಸ್ವಾತಂತ್ರ್ಯದ ಹಂಬಲವಷ್ಟೆ. ಕಾಶ್ಮೀರದ ಜನತೆ ತಮ್ಮ ‘ಸ್ವ ನಿರ್ಣಯ’ದ ಹಕ್ಕಿಗಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಜಾಗತಿಕ ಸಮುದಾಯ ಅರ್ಥಮಾಡಿಕೊಳ್ಳಬೇಕು. ಕಾಶ್ಮೀರಿ ಜನತೆಯ ಹೋರಾಟಕ್ಕೆ ಪಾಕಿಸ್ತಾನ ನೈತಿಕ, ರಾಜಕೀಯ ಮತ್ತು ರಾಜತಾಂತ್ರಿಕ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದ್ದಾರೆ.ಪಾಕಿಸ್ತಾನ ಪ್ರಧಾನಿ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ‘ಕಾಶ್ಮೀರದ ಗಲಭೆಯಲ್ಲ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಿ’ ಎಂದು ಮೆಡಿಸನ್ಸ್ ಸ್ಯಾನ್ಸ್ ಫ್ರಾಂಟರೀಸ್ (ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್) ಸಂಸ್ಥೆಗೆ ಶುಕ್ರವಾರ ಪತ್ರ ಬರೆದಿದ್ದರು.***

ಮುಗ್ಧ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವವರ ಮೇಲೂ ಭಾರತೀಯ ಸೇನೆ ದಾಳಿ ನಡೆಸುತ್ತಿದೆ. ಇದು ಮಾನವತೆ ಮೇಲಿನ ದಾಳಿ

-ನವಾಜ್ ಷರೀಫ್,ಪಾಕಿಸ್ತಾನ ಪ್ರಧಾನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.