ಗುಟ್ಕಾ ನಿಷೇಧ: ಸರ್ಕಾರಗಳಿಗೆ ನೋಟಿಸ್

ಭಾನುವಾರ, ಜೂಲೈ 21, 2019
21 °C

ಗುಟ್ಕಾ ನಿಷೇಧ: ಸರ್ಕಾರಗಳಿಗೆ ನೋಟಿಸ್

Published:
Updated:

ಬೆಂಗಳೂರು: ತಂಬಾಕು ಹಾಗೂ ಅದರ ಉತ್ಪನ್ನಗಳಾದ ಗುಟ್ಕಾ, ಸುಪಾರಿ ಇತ್ಯಾದಿಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಆದೇಶಿಸಲು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ತಂಬಾಕು ನಿಷೇಧ ಕಾಯ್ದೆಯ ಪ್ರಕಾರ ನೆರೆ ರಾಜ್ಯಗಳಲ್ಲಿ ಇವುಗಳನ್ನು ನಿಷೇಧ ಮಾಡಿದ್ದರೂ, ರಾಜ್ಯ ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿರುವುದಾಗಿ ದೂರಿ `ಕ್ಯಾನ್ಸರ್ ರೋಗಿಗಳ ಸಂಘಟನೆ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

`ತಂಬಾಕು ಉತ್ಪನ್ನಗಳಿಂದ ಹಲವು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. ಇದನ್ನು ಮನಗಂಡು ನೆರೆಯ ರಾಜ್ಯಗಳಾದ ಮಧ್ಯಪ್ರದೇಶ, ಕೇರಳ, ಬಿಹಾರ ಅಧಿಸೂಚನೆ ಹೊರಡಿಸಿ ಇವುಗಳ ಬಳಕೆ ನಿಷೇಧಿಸಿವೆ. ಇನ್ನು ಹಲವು ರಾಜ್ಯಗಳು ನಿಷೇಧ ಹೊರಡಿಸಲು ಎಲ್ಲ ರೀತಿಯ ತಯಾರಿ ನಡೆಸಿವೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಯಾವೊಂದು ಹೆಜ್ಜೆಯನ್ನೂ ಇಟ್ಟಿಲ್ಲ~ ಎನ್ನುವುದು ಅರ್ಜಿದಾರರ ದೂರು.

`ಕೋಟೆ ವ್ಯಾಪ್ತಿಯಲ್ಲಿ ಕಟ್ಟಡ ಸಲ್ಲ~

ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರರಾಣಿ ಚೆನ್ನಮ್ಮ ಕೋಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾರ್ಯ ನಡೆಸದಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಇಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಕಾನೂನು ಬಾಹಿರವಾಗಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದಾಗಿ ದೂರಿ ಉದಯಕುಮಾರ್ ದೇಸಾಯಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಈ ಕೋಟೆಯನ್ನು ಐತಿಹಾಸಿಕ ಸ್ಮಾರಕ ಪಟ್ಟಿಗೆ ಸೇರಿಸಲಾಗಿದೆ. ಐತಿಹಾಸಿಕ ಸ್ಮಾರಕ ಕಾಯ್ದೆಗೆ 2010ರಲ್ಲಿ ತಿದ್ದುಪಡಿ ತರಲಾಗಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿಷೇಧ ಹೇರಲಾಗಿದೆ. ಆದರೂ ಇಲ್ಲಿ ನಿರ್ಮಾಣ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಲೋಕಾಯುಕ್ತ ಸೇರಿದಂತೆ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎನ್ನುವುದು ಅರ್ಜಿದಾರರ ದೂರು.ವಿಚಾರಣೆ ಮುಂದೂಡಲಾಗಿದೆ.

ಮುನಿರಾಜು;19ರಂದು ಆದೇಶ: ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ಕಬಳಿಕೆ ನಡೆಸಿರುವುದು ಮತ್ತು ಸುಳ್ಳು ಮಾಹಿತಿ ನೀಡಿ ವಂಚಿಸಿದ ಆರೋಪದ ಮೇಲೆ ನಿರೀಕ್ಷಣಾ ಜಾಮೀನು ಕೋರಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಮುನಿರಾಜು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ 19ರಂದು ಪ್ರಕಟಿಸಲಿದೆ.

2011ರ ಅಕ್ಟೋಬರ್ 31ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ಅಡಿ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ, ಮುನಿರಾಜು ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂಕಬಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು.

ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ಡಿವೈಎಸ್‌ಪಿ ಮಂಜುನಾಥ್ ಅವರು, ಮಾರ್ಚ್ 9ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಮುನಿರಾಜು ಅವರು ಅಕ್ರಮ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದುದರಿಂದ, ಬಂಧನದ ಭೀತಿಯಿಂದಾಗಿ ಅವರು ನಿರೀಕ್ಷಣಾ ಜಾಮೀನು ಕೋರಿದ್ದಾರೆ.

ಪೇಶ್ವೆ ಅವರಿಗೆ ಜಾಮೀನು

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್ ಪೇಶ್ವೆ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ತನಿಖೆಗೆ ಸಹಕರಿಸುವಂತೆ, ಸಂಬಂಧಿತ ಕೋರ್ಟ್ ಅನುಮತಿ ಪಡೆದುಕೊಳ್ಳದೇ ಊರು ಬಿಟ್ಟು ಹೋಗದಂತೆ, ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ ಷರತ್ತು ವಿಧಿಸಲಾಗಿದೆ. ಜೂನ್ 27ರಂದು ಪೇಶ್ವೆ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಶೋಧಕಾರ್ಯ ನಡೆಸಿದ್ದರು. ಪೇಶ್ವೆ ಅವರ ಬಳಿ 2.83 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಬ್ಯಾಂಕ್ ಖಾತೆಗಳಲ್ಲಿ 1.40 ಕೋಟಿ ರೂಪಾಯಿ ಪತ್ತೆಯಾಗಿತ್ತು. ಅಮೆರಿಕ, ಸಿಂಗಪುರ ಮತ್ತು ಶ್ರೀಲಂಕಾ ಕರೆನ್ಸಿ ಕೂಡ ಪತ್ತೆಯಾಗಿತ್ತು. ಈ ಕಾರಣದಿಂದ ಅವರನ್ನು ಬಂಧಿಸಲಾಗಿತ್ತು.

ತಾವು ಬಂಧನಕ್ಕೆ ಒಳಪಡುವಂತಹ ಯಾವುದೇ ಕೃತ್ಯ ಎಸಗಿಲ್ಲ ಎಂದು ಪೇಶ್ವೆ ಹೈಕೋರ್ಟ್‌ನಲ್ಲಿ ತಿಳಿಸಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry