ಸೋಮವಾರ, ಮಾರ್ಚ್ 8, 2021
22 °C

ಗುಡುಗು ಸಹಿತ ಗಾಳಿ– ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡುಗು ಸಹಿತ ಗಾಳಿ– ಮಳೆ

ಕೊಲ್ಹಾರ: ಬುಧವಾರ ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕೊಲ್ಹಾರ ಸುತ್ತಮುತ್ತಲ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಿತು.ಮಧ್ಯಾಹ್ನ ನಾಲ್ಕು ಗಂಟೆಯವರೆಗೂ ಕಡು ಬಿಸಿಲಿನ ಬೇಗೆಯಿತ್ತು. ರಣರಣ ಬಿಸಿಲಿನ ಬೇಗೆ ತಾಳದೇ ರಸ್ತೆಯಲ್ಲಿ ನಡೆದು ಹೋಗುವ ಹಾಗೂ ಇಲ್ಲಿ ನಡೆಯುವ ಬುಧವಾರ ಸಂತೆಯಲ್ಲಿ ಜನ ತೊಂದರೆ ಅನುಭವಿಸುತ್ತಿದ್ದರು. ಆದರೆ ಸಂಜೆ ಸುರಿದ ಮಳೆಯಿಂದಾಗಿ ಎಲ್ಲೆಡೆ ತಂಪಾದ ವಾತಾವರಣ ಉಂಟಾಗಿ ಜನತೆ ಸಂತಸ ಪಟ್ಟರು.ಈ ಬೇಸಿಗೆಯಲ್ಲಿ ಸರಾಸರಿ 32 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನವಿತ್ತು. ಸಂಜೆ ಸುರಿದ ಮಳೆಯಿಂದ ವಾತಾವರಣವೇ ಬದಲಾಗಿ ಮಳೆಗಾಲದ ಛಾಯೆ ಮೂಡಿತ್ತು. ತಂಪಾದ ಗಾಳಿ ಎಲ್ಲೆಡೆ ಬೀಸಿ,ಬಿಸಿಲಿಗೆ ಮುದುಡಿ ಮರೆಯಾಗಿದ್ದ ಉತ್ಸಾಹ ವನ್ನು ಮರಳಿ ತಂದಿತು.ಈಗ ಸುರಿದ ಮಳೆಯಿಂದ ರೈತರಿಗೆ ಸ್ವಲ್ಪ ಖುಷಿ ಯಾದರೂ ಆತಂಕ ಮೂಡಿದೆ. ಕಾರಣ, ಶೇಂಗಾ ಹಾಗೂ ಕಬ್ಬಿನ ಬೆಳೆಗಳಿಗೆ  ಈ ಮಳೆಯಿಂದ ಅನುಕೂಲ ವಾದರೆ, ಈ ಭಾಗದಲ್ಲಿ ರೈತರು ವ್ಯಾಪಕವಾಗಿ ನಾಟಿ ಮಾಡಿರುವ ಪ್ರಸಿದ್ದ ‘ತೆಲಗಿ ಉಳ್ಳಾಗಡ್ಡಿ’ ಬೆಳೆಗೆ ಹಾನಿಯಾಗಲಿದೆ ಎಂಬುದು.ಹೀಗೆ ಜನತೆ ಮೊದಲ ಮಳೆಯ ಫಲಾಫಲಗಳ ಲೆಕ್ಕಾಚಾರದಲ್ಲಿದ್ದರೆ, ಶಾಲೆಯಿಂದ ಅದೇ ತಾನೇ ಮರಳಿ ಮನೆಗೆ ಹೊರಟಿದ್ದ ಚಿಣ್ಣರು ಮಾತ್ರ ಇದಾವುದರ ಪರಿವೆಯಿಲ್ಲದೇ ರಸ್ತೆಯಲ್ಲಿ ಹರಿದ ನೀರಿನಲ್ಲಿ ಕಾಲು ತೊಳೆಯುತ್ತಾ ಮೊದಲ ಮಳೆಯ ಖುಷಿಯಲ್ಲಿ ನೀರಾಟವಾಡುವ ದೃಶ್ಯ ಕಂಡು ಬಂದಿತು.ತಾಳಿಕೋಟೆ ವರದಿ: ಪಟ್ಟಣದಲ್ಲಿ ಸಂಜೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಅಬ್ಬರದ ಗುಡುಗು–ಮಿಂಚು ಕಾಣಿಸಿತು. ಪಟ್ಟಣ ಸೇರಿದಂತೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿದೆ.ರೈತರಿಗೆ ಆತಂಕ: ಜಮೀನುಗಳಲ್ಲಿ ಹೆಚ್ಚಿನ ರೈತರು ಜೋಳದ ರಾಶಿಗಾಗಿ ಜೋಳವನ್ನು ಕೊಯ್ದು ಹಾಕಿದ್ದು ಮಳೆಯಿಂದಾಗಿ ಬಿಳಿ ಜೋಳ ಕಪ್ಪಾಗುವ ಭೀತಿಯಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.