ಬುಧವಾರ, ಮೇ 25, 2022
23 °C

ಗುಮ್ಮಟನಗರಿಯಲ್ಲಿ ವಾಲಿಬಾಲ್ ಪ್ರತಿಧ್ವನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಗೋಲಗುಮ್ಮಟ’ನಗರಿಯ ಗಲ್ಲಿಗಲ್ಲಿಗಳಲ್ಲಿ ಈಗ ವಾಲಿಬಾಲ್ ಕುರಿತ ಮಾತುಗಳದ್ದೇ ಪ್ರತಿಧ್ವನಿ. ಸೈಕ್ಲಿಂಗ್ ಕಣಜವೆಂದೇ ಪ್ರಸಿದ್ಧವಾಗಿರುವ ವಿಜಾಪುರದಲ್ಲಿ ಈಗ ‘ವಾಲಿಬಾಲ್’ ಆಟದ ಗುಂಗು!ಗುರುವಾರದಿಂದ ಇಲ್ಲಿಯ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಟೂರ್ನಿಗೆ ಸಿದ್ಧವಾಗಿರುವ ನಗರದಲ್ಲಿ ಎಲ್ಲೆಲ್ಲೂ ವಾಲಿಬಾಲ್ ಆಟಗಾರರೇ ಕಾಣುತ್ತಿದ್ದಾರೆ. 18 ವರ್ಷಗಳ ನಂತರ ಮತ್ತೊಮ್ಮೆ ಆದಿಲ್‌ಶಾಹಿಗಳ ನಗರ ರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ವೇದಿಕೆಯಾಗಲಿದೆ. 1993ರಲ್ಲಿ ಇಲ್ಲಿ ರಾಷ್ಟ್ರೀಯ ಟೂರ್ನಿ ನಡೆದಿತ್ತು. ಸೈಕ್ಲಿಂಗ್ ಕ್ರೀಡೆಯಿಂದಲೇ ದೇಶದಾದ್ಯಂತ ಗುರುತಿಸಿಕೊಂಡರೂ ಇಲ್ಲಿ ವಾಲಿಬಾಲ್ ಆಟಗಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಿಭಜನಾಪೂರ್ವ ವಿಜಾಪುರ ಜಿಲ್ಲೆಯ ಹಲವಾರು ಆಟಗಾರರು ರಾಷ್ಟ್ರ ತಂಡವನ್ನು ಪ್ರತಿನಿಧಿಸಿ ಹೆಸರು ಮಾಡಿದ್ದರು. ಅವರಲ್ಲಿ ಅಮಿತ್ ರಾಯ್ ಚೌಧರಿ, ಪ್ರಕಾಶ ಪಾಟೀಲ, ವಾಲೀಕಾರ, ಸುನೀಲ್ ನಡಕಟ್ಟಿ, ರಮೇಶ ಮಂಡಿಗೇರಿ, ಇಮಾಮ್‌ಸಾಬ್, ಜಿ.ವೈ. ಕಲ್ಯಾಣಶೆಟ್ಟಿ, ಗಣೇಶ ಇಲ್ಲಿಯ ಉತ್ತಮ ವಾಲಿಬಾಲ್‌ಪಟುಗಳು. ಈ ಬಾರಿಯ ಬಾಲಕರ ತಂಡದಲ್ಲಿಯೂ ವಿಜಾಪುರದ ಕ್ಲೆಮೆಂಟಿನ್ ಆಡುತ್ತಿದ್ದಾರೆ. ಫೆಬ್ರುವರಿ 17ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಆಡಲು ಒಟ್ಟು 51 ತಂಡಗಳು ಈಗಾಗಲೇ ಹಾಜರಾಗಿವೆ. ಬಾಲಕರ 26 ಮತ್ತು ಬಾಲಕಿಯರ 25 ತಂಡಗಳು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಸಿದ್ಧವಾಗಿವೆ. ಕಳೆದ ವರ್ಷ ಬಾಲಕರ ವಿಭಾಗದ ಚಾಂಪಿಯನ್ ಆಗಿದ್ದ ಹರಿಯಾಣ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದಿದ್ದ ತಮಿಳುನಾಡು ಈ ಬಾರಿ ಮತ್ತೆ ಅಧಿಪತ್ಯ ಸ್ಥಾಪಿಸಲು ತಯಾರಾಗಿ ಬಂದಿವೆ. ಹೋದ ವರ್ಷ ರನ್ನರ್ಸ್ ಅಪ್ ಆಗಿದ್ದ ಕರ್ನಾಟಕದ ಬಾಲಕಿಯರ ತಂಡ ಈ ಬಾರಿ ವಿಜಯೋತ್ಸವ ಆಚರಿಸಲು ಕಠಿಣ ಅಭ್ಯಾಸ ನಡೆಸಿತ್ತು. ಐದನೇ ಸ್ಥಾನ ಪಡೆದಿದ್ದ ಬಾಲಕರ ತಂಡವೂ ಪ್ರಶಸ್ತಿಯ         ಗೆಲ್ಲುವ ಗುರಿಯೊಂದಿಗೆ ಅಂಕಣಕ್ಕಿಳಿಯಲಿದೆ.     ಆದರೆ ಘಟಾನುಘಟಿ ತಂಡಗಳನ್ನು    ಎದುರಿಸಬೇಕಾದ ಸವಾಲಿದೆ.ಗುರುವಾರ ಸಂಜೆ ಉದ್ಘಾಟನೆಯ ನಂತರ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿವೆ. ವಿಜಾಪುರದ ಚುರುಕು ಬಿಸಿಲಿಗೆ, ವಾಲಿಬಾಲ್ ಮತ್ತಷ್ಟು ಕಾವು ಸೇರಿಸುತ್ತಿದೆ. 

ಕರ್ನಾಟಕ ತಂಡಗಳು: ಬಾಲಕರು: ನಿಖಿಲ್ ಗೌಡ (ನಾಯಕ), ಸುದೀಪ್ ಶೆಟ್ಟಿ (ಉಪನಾಯಕ), ಬಿ.ಭರತ್, ಚಂದನಕುಮಾರ್, ಎಲ್. ವಿನಾಯಕ, ಕೆ. ಸುದೀಪ್, ಕೆ.ಎನ್. ಗೋವಿಂದಸ್ವಾಮಿ, ಚೇತನ್ ಡಿ ತಿಗಡಿ, ಮೊಹಮ್ಮದ್ ಅಕೀಬ್, ಜೋಹಿತ್ ಜೋಯಿಸ್, ಬಿ. ಮನೋಜ್, ಎನ್. ವಿನೋದ್, ಕಾಯ್ದಿಟ್ಟ ಆಟಗಾರರು: ಕ್ಲೆಮೆಂಟಿನ್, ಶಬೀರ್, ಕೆ.ಆರ್. ಭರತ್, ಕಾರ್ತಿಕ್, ಮಾರುತಿರೆಡ್ಡಿ, ಕೋಚ್: ಬಸವರಾಜ ಹೊಸಮಠ, ಸಹಕೋಚ್: ಪರಶುರಾಮ್ ಬಿ ದಾಗಿನ್‌ದಾರ್, ವ್ಯವಸ್ಥಾಪಕ: ಸಂತೋಷ ರಜಪೂತ್.

ಬಾಲಕಿಯರು: ಕೆ.ವಿ. ಮೇಘಾ (ನಾಯಕಿ), ಎಸ್.ಪಿ. ಗಣವಿ, ಟಿ.ಬಿ. ಅಭಿಲಾಶಾ, ಎಸ್. ಕಾವ್ಯಾ, ಎಂ. ಮೇಘನಾ, ಅನಿತಾ ವಿ. ಪಾಟೀಲ (ಉಪನಾಯಕಿ), ಎಂ.ಎಸ್. ವರ್ಷಿತಾ, ಎಚ್.ಆರ್. ಅನುಷಾ, ಆರ್. ನಿವೇದಿತಾ, ಎಂ. ಲತಾ, ಬಿ.ಎ. ಸಿಂಧುಶ್ರೀ, ವೈ.ಜಿ. ಯಶಸ್ವಿನಿ, ಕೋಚ್: ಎಸ್.ಎಂ. ರಮೇಶ, ಸಹ ಕೋಚ್. ಎಸ್.ಕೆ. ಪಾಟೀಲ, ವ್ಯವಸ್ಥಾಪಕರು: ಸುನೀಲ್ ನಡಕಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.