ಗುರುವಾರ , ಮೇ 19, 2022
25 °C

ಗುರಿ ತಪ್ಪದ ಶರಣ್

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಗುರಿ ತಪ್ಪದ ಶರಣ್

ಶೂಟಿಂಗ್ ಕ್ರೀಡೆಯಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಯುವುದು ಸುಲಭವಲ್ಲ. ಇಲ್ಲಿ ಸ್ಪರ್ಧಿಯೊಬ್ಬ ಮಾನಸಿಕವಾಗಿ ಸಾಕಷ್ಟು ತಯಾರು ಮಾಡಿಕೊಂಡಿರಬೇಕು. ಅಲ್ಪ ಎಡವಿದರೆ ಮತ್ತು ಏಕಾಗ್ರತೆ ಕಳೆದುಕೊಂಡರೆ ಪದಕದ ಮೇಲಿನ ಆಸೆ ಕೈಬಿಡಬೇಕಾಗುತ್ತದೆ.ಅದರಲ್ಲೂ `ಟ್ರ್ಯಾಪ್ ಶೂಟಿಂಗ್~ ಎಂಬುದು ಸ್ಪರ್ಧಿಗಳಿಗೆ ಇನ್ನಷ್ಟು ಸವಾಲು ಒಡ್ಡುವ ವಿಭಾಗ. ಇಂತಹ ಸವಾಲಿನ ಹಾದಿಯನ್ನು ಆಯ್ಕೆ ಮಾಡಿಕೊಂಡು ಭರವಸೆ ಮೂಡಿಸಿರುವ ಪ್ರತಿಭೆ ಜಿ.ಎಸ್. ಶರಣ್. ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂನಲ್ಲಿ ಕಲಿಯುತ್ತಿರುವ ಈ ಯುವ ಶೂಟರ್ ಅಲ್ಪ ಸಮಯದಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ.ಎಳೆ ಹರೆಯದಲ್ಲೇ ಶೂಟಿಂಗ್‌ನತ್ತ ಒಲವು ತೋರಿದ್ದ ಶರಣ್, 2008 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ      ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಎಲ್ಲ ಚಾಂಪಿಯನ್‌ಷಿಪ್‌ಗಳಲ್ಲೂ ಅಗ್ರ ಮೂವರಲ್ಲಿ ಕಾಣಿಸಿಕೊಂಡಿದ್ದಾರೆ.

2006ರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ ಮಾನವ್‌ಜಿಂತ್ ಸಿಂಗ್ ಸಂಧು ಅವರನ್ನು `ರೋಲ್ ಮಾಡೆಲ್~ ಆಗಿ ನೋಡುವ ಶರಣ್, ಭಾರತದ ಭವಿಷ್ಯದ ಶೂಟಿಂಗ್ ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಸುಶೀಲ್ ಹಾಗೂ ನಂದಾ ದಂಪತಿಯ ಪುತ್ರ ಶರಣ್ ಶೂಟಿಂಗ್‌ನ ಎಲ್ಲ ಕಲೆಗಳನ್ನು ಬಹಳ ಬೇಗನೇ ಕರಗತಮಾಡಿಕೊಳ್ಳುತ್ತಿದ್ದಾರೆ.ಸೆಪ್ಟೆಂಬರ್ 23 ರಿಂದ 25ರ ವರೆಗೆ ನವದೆಹಲಿಯಲ್ಲಿ ನಡೆದ ಮಾಸ್ಟರ್ಸ್ ಟ್ರ್ಯಾಪ್ ಜೂನಿಯರ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಜಯಿಸಿದ್ದು ಇವರ ಇತ್ತೀಚಿನ ಸಾಧನೆ. ಚಿನ್ನದೆಡೆಗೆ ಗುರಿಯಿಡುವ ವೇಳೆ ರಾಷ್ಟ್ರೀಯ ಜೂನಿಯರ್ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. 125 ರಲ್ಲಿ 119 ಪಾಯಿಂಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.2008ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಜಯಿಸಿದ್ದು ಸ್ಮರಣೀಯ ಸಾಧನೆ. `ಏಕೆಂದರೆ ರಾಷ್ಟ್ರಮಟ್ಟದಲ್ಲಿ ದೊರೆತ ಮೊದಲ ಪದಕ ಇದಾಗಿದೆ. ಇದು ಹೆಚ್ಚಿನ ಉತ್ತೇಜನ ನೀಡಿತು. ಆ ಬಳಿಕ ಒಂದೊಂದೇ            ಸಾಧನೆ ಮೂಡಿಬರತೊಡಗಿದವು~ ಎನ್ನುತ್ತಾರೆ ಶರಣ್.ಇವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. 2009ರ ಮೇ ತಿಂಗಳಲ್ಲಿ ಫಿನ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಜೂನಿಯರ್ ಕಪ್‌ನಲ್ಲಿ ತಂಡ ವಿಭಾಗದಲ್ಲಿ ಕಂಚು ಗೆದ್ದ ಸಾಧನೆ ಇವರದ್ದು. ಇದೇ ವರ್ಷದ ಜುಲೈ ತಿಂಗಳಲ್ಲಿ ಫಿನ್ಲೆಂಡ್‌ನಲ್ಲಿ ನಡೆದ ಜೂನಿಯರ್ ವಿಶ್ವಕಪ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದ ಭಾರತ ತಂಡದಲ್ಲಿ ಶರಣ್ ಇದ್ದರು.`ಶರಣ್ ಅವರಂತಹ ಯುವ ಶೂಟರ್‌ನ್ನು ತಂಡದಲ್ಲಿ ಹೊಂದಿರುವುದು ಸಂತಸದ ವಿಚಾರ~ ಎಂದು ರಾಷ್ಟ್ರೀಯ ಜೂನಿಯರ್ ಟ್ರ್ಯಾಪ್ ತಂಡದ ಕೋಚ್ ಮಾರ್ಸೆಲೊ ದ್ರಾಡಿ ಹೇಳಿದ್ದಾರೆ.2009ರ ಆಗಸ್ಟ್‌ನಲ್ಲಿ ಸ್ಲೊವೇನಿಯದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ 15ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದೇ ವರ್ಷ ಕಜಕಸ್ತಾನದ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಗಿಟ್ಟಿಸಿದ್ದರು.ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಶೂಟಿಂಗ್ ರೇಂಜ್‌ನಲ್ಲಿ ಶರಣ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. `ಮುಂದಿನ ಜನವರಿ ತಿಂಗಳಲ್ಲಿ ದೋಹಾದಲ್ಲಿ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್ ನಡೆಯಲಿದೆ. ಅಲ್ಲಿ ಉತ್ತಮ ಪ್ರದರ್ಶನ ನೀಡುವುದು ಗುರಿ. ಅದಕ್ಕಾಗಿ ತಕ್ಕ ಸಿದ್ಧತೆ ನಡೆಸುತ್ತಿದ್ದೇನೆ~ ಎಂದು ಶರಣ್ ನುಡಿದರು.`ಶೂಟಿಂಗ್‌ಗೆ ಹೆಚ್ಚಿನ ಹಣ ಖರ್ಚುಮಾಡಬೇಕಾಗುತ್ತದೆ. ಅಭ್ಯಾಸಕ್ಕೆ ಅಗತ್ಯವಿರುವ ಪರಿಕರಗಳನ್ನು ವಿದೇಶದಿಂದ ತರಿಸಿಕೊಳ್ಳಬೇಕು. ಮಗನ ಸಾಧನೆಯ ಬಗ್ಗೆ ಸಂತಸವಿದೆ~ ಎಂದು ಶರಣ್‌ಗೆ ಎಲ್ಲ ರೀತಿಯ ಬೆಂಬಲ ನೀಡುತ್ತಿರುವ ತಂದೆ ಸುಶೀಲ್ ನುಡಿಯುವರು.ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಜಗದಾಳೆ ಒಳಗೊಂಡಂತೆ ಎಲ್ಲರ ಬೆಂಬಲದಿಂದ ಈ ಎತ್ತರಕ್ಕೇರಿದ್ದೇನೆ ಎಂದು ಶರಣ್ ಹೇಳುತ್ತಾರೆ.ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿರುವ ಈ ಯುವ ಶೂಟರ್ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಶೂಟಿಂಗ್‌ನಲ್ಲಿ ನಿಖರ ಗುರಿ ಸಾಧಿಸಲು ಏಕಾಗ್ರತೆ ಅನಿವಾರ್ಯ. ದೈಹಿಕವಾಗಿ ಸಮರ್ಥನಾಗಿದ್ದರೆ ಮಾತ್ರ ಇದು ಸಾಧ್ಯ.ಫಿಟ್‌ನೆಸ್‌ಗೆ ಹೆಚ್ಚಿನ ಗಮನ ನೀಡಿರುವುದು ಕೂಡ ಇವರ ಯಶಸ್ಸಿನ ಹಿಂದಿನ ಗುಟ್ಟು. ಮುಂದೊಂದು ದಿನ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಬೇಕೆಂಬ ದೊಡ್ಡ ಕನಸು ಅವರದ್ದು. ಅದನ್ನು ಸಾಧಿಸುವ ಛಲ ಈ ಯುವಕನಲ್ಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.